ಅಪ್ಪ ಸೋಲು, ಪುತ್ರ ಗೆಲವು! ಮಗ ಹಿನ್ನಡೆ, ಅಪ್ಪ ಮುನ್ನಡೆ
ಮೈಸೂರು: ಮೈಸೂರು ಸಾಮಾನ್ಯ ಲೋಕಸಭಾ ಕ್ಷೇತ್ರದಲ್ಲಿ ಎಚ್.ಸಿ. ದಾಸಪ್ಪ ಅವರು ಸೋತರೆ, ಅವರ ಪುತ್ರ ಎಚ್.ಡಿ. ತುಳಸೀದಾಸ್ ಸತತ ಮೂರು ಬಾರಿ ಗೆದ್ದರು. ಆದರೆ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಬಿ.ರಾಚಯ್ಯ ಅವರು ಒಮ್ಮೆ ಗೆದ್ದರೆ ಅವರ ಪುತ್ರ ಎ.ಆರ್. ಕೃಷ್ಣಮೂರ್ತಿ ಒಮ್ಮೆ ಸೋತಿದ್ದಾರೆ. ಈ ಬಾರಿಯೂ ಅವರೇ ಬಿಜೆಪಿ ಅಭ್ಯರ್ಥಿ.
1952 ರಲ್ಲಿ ಎಚ್.ಸಿ. ದಾಸಪ್ಪ ಅವರು ಕಾಂಗ್ರೆಸ್ ಅಭ್ಯರ್ಥಿ. ಆ ಕಾಲಕ್ಕೆ ಕಾಂಗ್ರೆಸ್ನ ಘಟಾನುಘಟಿ ನಾಯಕ. ಆದರೆ ಅವರು ಕಿಸಾನ್ ಮಜ್ದೂರ್ ಪ್ರಜಾಪಾರ್ಟಿಯ ಎಂ.ಎಸ್. ಗುರುಪಾದಸ್ವಾಮಿ ಅವರ ಎದುರು ಸೋತರು. ನಂತರ ದಾಸಪ್ಪ ಅವರು ಬೆಂಗಳೂರಿಗೆ ಸ್ಥಳಾಂತರವಾಗಿ ಅಲ್ಲಿಂದ 1957, 1962 ರಲ್ಲಿ ಲೋಕಸಭೆಗೆ ಆಯ್ಕೆಯಾಗಿದ್ದರು.
ಆದರೆ ದಾಸಪ್ಪ ಅವರ ಪುತ್ರ ಎಚ್.ಡಿ. ತುಳಸೀದಾಸ್ ಅವರು 1967, 1972 ಹಾಗೂ 1977 ರಲ್ಲಿ ಸತತ ಮೂರು ಬಾರಿ ಕಾಂಗ್ರೆಸ್ ಟಿಕೆಟ್ ಮೇಲೆ ಆಯ್ಕೆಯಾಗಿದ್ದರು. 1980ರಲ್ಲಿ ಅವರು ಎಂ. ರಾಜಶೇಖರಮೂರ್ತಿ ಅವರ ಎದುರು ಸೋತರು. ರಾಜಶೇಖರಮೂರ್ತಿ ಅವರು ಇಂದಿರಾ ಕಾಂಗ್ರೆಸ್ ಹಾಗೂ ತುಳಸೀದಾಸ್ ಅವರು ಸಂಯುಕ್ತ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಇದಾದ ನಂತರ ತುಳಸೀದಾಸ್ ಅವರು ಸಕ್ರಿಯ ರಾಜಕಾರಣದಿಂದ ದೂರ ಉಳಿದರು. ಬಿ. ರಾಚಯ್ಯ ಅವರು ಮೊದಲ ಸಾರ್ವತ್ರಿಕ ಚುನಾವಣೆಯಿಂದಲೂ ಕಣದಲ್ಲಿದ್ದವರು. ಸಂತೇಮರಹಳ್ಳಿ ಬಳಿಯ ಆಲೂರಿನವರಾದ ಬಿ.ರಾಚಯ್ಯ ಪ.ಜಾತಿಯ ಬಲಗೈನವರು. 1952 ರಲ್ಲಿ ಯಳಂದೂರು ದ್ವಿಸದಸ್ಯ ಕ್ಷೇತ್ರದಿಂದ ಕಿಸಾನ್ ಮಜ್ದೂರ್ ಪ್ರಜಾಪಾರ್ಟಿ. ಟಿಕೆಟ್ ಮೇಲೆ ಪಕ್ಷೇತರರಾದ ಎಂ. ರಾಜಶೇಖರಮೂರ್ತಿ ಅವರೊಂದಿಗೆ ವಿಧಾನಸಭೆ ಪ್ರವೇಶಿಸಿದರು. 1957ರಲ್ಲಿ ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರಜಾ ಸೋಷಲಿಸ್ಟ್ ಪಾರ್ಟಿಯ ಯು.ಎಂ. ಮಾದಪ್ಪ ಅವರೊಂದಿಗೆ ಎರಡನೇ ಬಾರಿ ಆಯ್ಕೆಯಾದರು.
ಮೀಸಲು ಕ್ಷೇತ್ರ ರಚನೆ: 1962ರ ವೇಳೆಗೆ ಸಂತೇಮರಹಳ್ಳಿ ಪ.ಜಾತಿ ಮೀಸಲು ಕ್ಷೇತ್ರ ರಚನೆಯಾಯಿತು. ಆ ಚುನಾವಣೆ ಹಾಗೂ 1967ರ ಚುನಾವಣೆಯಲ್ಲಿ ರಾಚಯ್ಯ ಮೂರು ಮತ್ತು ನಾಲ್ಕನೇ ಬಾರಿಗೆ ಆಯ್ಕೆಯಾದರು. 1972ರ ಚುನಾವಣೆಯಲ್ಲಿ ಅವರು ಅನಿವಾರ್ಯ ಕಾರಣಗಳಿಂದ ಸ್ಪರ್ಧಿಸಲಿಲ್ಲ. 1977 ರಲ್ಲಿ ಚಾಮರಾಜನಗರದಿಂದ ಲೋಕಸಭೆಗೆ ಆಯ್ಕೆಯಾಗಿ, ಚರಣ್ಸಿಂಗ್ ಅವರ ಸಂಪುಟದಲ್ಲಿ ಸಚಿವರಾಗಿದ್ದರು. 1980ರ ಲೋಕಸಭಾ ಚುನಾವಣೆಯಲ್ಲಿ ವಿ.ಶ್ರೀನಿವಾಸಪ್ರಸಾದ್ ಎದುರು ಸೋತರು.
ರಾಚಯ್ಯ 1983, 1985 ರಲ್ಲಿ ಮತ್ತೆ ವಿಧಾನಸಭೆಗೆ ಆಯ್ಕೆಯಾದರು. ರಾಮಕೃಷ್ಣ ಹೆಗಡೆ, ಎಸ್.ಆರ್. ಬೊಮ್ಮಾಯಿ ಸಂಪುಟದಲ್ಲಿ ಗೃಹ ಸೇರಿದಂತೆ ಹಲವು ಪ್ರಮುಖ ಖಾತೆಗಳನ್ನು ನಿರ್ವಹಿಸಿ, ನಂ.2 ಸ್ಥಾನದಲ್ಲಿದ್ದರು. ಪ್ರದೇಶ ಜನತಾದಳ ಅಧ್ಯಕ್ಷರೂ ಆಗಿದ್ದರು. ಮುಖ್ಯಮಂತ್ರಿ ಗಾದಿ ಮಾತ್ರ ಸಿಗಲಿಲ್ಲ.
1989 ರಲ್ಲಿ ಕೇಂದ್ರದಲ್ಲಿ ವಿ.ಪಿ. ಸಿಂಗ್ ನೇತೃತ್ವದ ಸರ್ಕಾರ ಇದ್ದಾಗ ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿ ರಾಚಯ್ಯ ಅವರನ್ನು ನೇಮಿಸಿತು. ನಂತರ ಕೇರಳ ರಾಜ್ಯಪಾಲರಾಗಿ ವರ್ಗವಾಗಿ ನಿವೃತ್ತರಾದರು.
ರಾಚಯ್ಯ ಅವರ ಪುತ್ರ ಎ.ಆರ್. ಕೃಷ್ಣಮೂರ್ತಿ 1994, 1999 ರಲ್ಲಿ ಸಂತೇಮರಹಳ್ಳಿ ಕ್ಷೇತ್ರದಿಂದ ಆಯ್ಕೆಯಾಗಿದ್ದರು. 1989, 2004 ರಲ್ಲಿ ಅದೇ ಕ್ಷೇತ್ರದಲ್ಲಿ, 2008 ರಲ್ಲಿ ಕೊಳ್ಳೇಗಾಲ ವಿಧಾನಸಭೆ, 2009 ರಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಸೋತಿದ್ದಾರೆ. ಬಿಜೆಪಿ ರಾಜ್ಯ ಎಸ್ಸಿ ಮೋರ್ಚಾ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದರು. 2004ರ ವಿಧಾನಸಭಾ ಚುನಾವಣೆಯಲ್ಲಿ ಕೃಷ್ಣಮೂರ್ತಿ ಅವರು ಧ್ರುವನಾರಾಯಣ ಅವರ ಎದುರು ಕೇವಲ ಒಂದೇ ಒಂದು ಮತದಿಂದ ಸೋತಿದ್ದು ಇತಿಹಾಸ. ಇದಾದ ನಂತರ ಧ್ರುವನಾರಾಯಣ ಗೆಲ್ಲುತ್ತಾ ಹೋದರೆ ಕೃಷ್ಣಮೂರ್ತಿ ಸತತವಾಗಿ ಸೋಲುತ್ತಿದ್ದಾರೆ. ಈ ಬಾರಿ ಮತ್ತೆ ಚಾಮರಾಜನಗರದಲ್ಲಿ ಧ್ರುವನಾರಾಯಣ- ಎ.ಆರ್. ಕೃಷ್ಣಮೂರ್ತಿ ಅವರು ಮುಖಾಮುಖಿಯಾಗುತ್ತಿದ್ದಾರೆ. ಕೃಷ್ಣಮೂರ್ತಿ ಗೆದ್ದರೆ ಇತಿಹಾಸ ಬದಲಾಗುತ್ತದೆ.
-ಅಂಶಿ ಪ್ರಸನ್ನಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

