ಹೊಸಮುಖ ಪ್ರೋತ್ಸಾಹಿಸುವುದು ಬಿಜೆಪಿ ಪರಂಪರೆ
ಮೈಸೂರು: ಯುವಕರು ಹಾಗೂ ಹೊಸಮುಖವನ್ನು ಪ್ರೋತ್ಸಾಹಿಸುವುದು ಬಿಜೆಪಿ ಪರಂಪರೆ ಎಂದು ಮೈಸೂರು - ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ ಸಿಂಹ ಹೇಳಿದರು.
ನಮೋ ಬ್ರಿಗೇಡ್ ಮೈಸೂರು ಘಟಕ ವತಿಯಿಂದ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ಭಾನುವಾರ ಏರ್ಪಡಿಸಿದ್ದ ಚುನಾವಣಾ ಪ್ರಚಾರದ ಬೈಕ್ ರ್ಯಾಲಿಯಲ್ಲಿ ಭಾಗವಹಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತಾಡಿದರು.
ಬಿಜೆಪಿಯಲ್ಲಿ ಎಲ್.ಕೆ. ಆಡ್ವಾಣಿ ಸೇರಿದಂತೆ ಅನೇಕ ಹಿರಿಯ ನಾಯಕರು ಇದ್ದಾರೆ. ಆದರೂ 63 ವರ್ಷ ವಯಸ್ಸಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡಲು ಎಲ್ಲಾ ನಾಯಕರು ಮುಂದಾಗಿದ್ದಾರೆ. ಅಂತೆಯೇ ಹೊಸಮುಖ ಹಾಗೂ ಯುವಕನಾಗಿರುವ ನನಗೆ ಇಲ್ಲಿನ ಎಲ್ಲಾ ನಾಯಕರು ಬೆಂಬಲಿಸುತ್ತಿದ್ದಾರೆ. ಹೊಸಮುಖ ಬೆಂಬಲಿಸುವುದು ಬಿಜೆಪಿ ಪರಂಪರೆ ಎಂದರು.
ಗೊಂದಲವಿಲ್ಲ: ಮೈಸೂರು ಕೊಡಗು ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಟಿಕೆಟ್ ವಿಚಾರದಲ್ಲಿ ಯಾವುದೇ ಗೊಂದಲ ಹಾಗೂ ಭಿನ್ನಾಭಿಪ್ರಾಯವಿಲ್ಲ. ಪಕ್ಷದ ಅಭ್ಯರ್ಥಿಯಾಗಿರುವ ನಾನು ಅಧಿಕೃತವಾಗಿ ಇಂದಿನಿಂದ ಪ್ರಚಾರ ಕಾರ್ಯ ಆರಂಭಿಸಿದ್ದೇನೆ. ಯಾವುದೇ ಕಾರಣಕ್ಕೂ ಹಾಸನಕ್ಕೆ ಬದಲಾವಣೆ ಇಲ್ಲ. ಈಗಾಗಲೇ ಹಿರಿಯರಾದ ಸಿ.ಎಚ್. ವಿಜಯಶಂಕರ್ ಅವರ ಆಶೀರ್ವಾದ ಪಡೆದಿದ್ದೇನೆ ಎಂದರು.
ಮೈಸೂರು ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್ ಭದ್ರಕೋಟೆ ಎಂದು ನಾನು ಭಾವಿಸಿಲ್ಲ. ಈ ಹಿಂದೆ 2 ಬಾರಿ ಬಿಜೆಪಿ ಜಯಗಳಿಸಿದೆ. ಬೇರೆ ಪಕ್ಷದಿಂದ ಸ್ಪರ್ಧಿಸಿರುವವರನ್ನು ನನ್ನ ಎದುರಾಳಿ ಅಥವಾ ವೈರಿಯೆಂಬ ದೃಷ್ಟಿಯಲ್ಲಿ ನೋಡುವುದಿಲ್ಲ. ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡುವಲ್ಲಿ ಮೈಸೂರು ಭಾಗದಿಂದ ಒಂದು ಕ್ಷೇತ್ರ ಗೆಲ್ಲಿಸುವುದಷ್ಟೆ ಮುಖ್ಯ. ನರೇಂದ್ರ ಮೋದಿ ಅವರನ್ನು ಪ್ರಧಾನಿಯಾಗಿ ನೋಡಲು ಜನರು ಸಂಕಲ್ಪ ತೊಟ್ಟಿದ್ದಾರೆ. ಈ ದಿಸೆಯಲ್ಲಿ ಭಾರತವನ್ನು ಗೆಲ್ಲಿಸುವುದು ಹಾಗೂ ಆ ಮೂಲಕ ದೇಶಕ್ಕೆ ಒಳಿತು ಮಾಡುವುದು ನಮ್ಮ ಧ್ಯೇಯ ಎಂದು ಅವರು ತಿಳಿಸಿದರು.
ಮೈಸೂರು ಒಡನಾಟ: ನಾನು ಮೂಲತಃ ಹಾಸನ ಜಿಲ್ಲೆಯವನಾದರೂ, ಮೈಸೂರಿನೊಂದಿಗೆ ಮೊದಲಿನಿಂದಲೂ ಒಡನಾಟವಿದೆ. ನನ್ನ ತಂದೆ ಇಲ್ಲಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಓದಿದವರು. ನಾನು ಇನ್ನು ಮುಂದೆ ಮೈಸೂರಿನಲ್ಲಿಯೇ ನೆಲೆಸುತ್ತೇನೆ. ಜನರ ಸೇವೆ ಮಾಡುತ್ತೇನೆ ಎಂದರು.
ನಮೋ ಬಿಗ್ರೇಡ್ ಕಾರ್ಯಕರ್ತರಿಂದ ಬೈಕ್ ರ್ಯಾಲಿ
ಮೈಸೂರು: ನಮೋ ಬ್ರಿಗೇಡ್ ವತಿಯಿಂದ ಏರ್ಪಡಿಸಿದ್ದ ಬೈಕ್ ರ್ಯಾಲಿಗೆ ಮೈಸೂರು - ಕೊಡಗು ಬಿಜೆಪಿ ಅಭ್ಯರ್ಥಿ ಪ್ರತಾಪ ಸಿಂಹ ಭಾನುವಾರ ಚಾಲನೆ ನೀಡಿದರು.
ಅರಮನೆ ಮುಂಭಾಗ ಇರುವ ವಿನಾಯಕ ಹಾಗೂ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಕಾರ್ಯಕರ್ತರೊಂದಿಗೆ ತೆರಳಿ ಪೂಜೆ ಸಲ್ಲಿಸಿದ ನಂತರ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದರು. ವಿಧಾನ ಪರಿಷತ್ ಸದಸ್ಯ ಗೋ.ಮಧುಸೂದನ್, ಮಾಜಿ ಸದಸ್ಯ ತೋಂಟದಾರ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಹೇಮಂತ್ ಕುಮಾರ್ಗೌಡ, ನಗರಾಧ್ಯಕ್ಷ ಇ. ಮಾರುತಿರಾವ್ ಪವಾರ್, ಉಪಾಧ್ಯಕ್ಷರಾದ ಆಶಾ ನಾಗಭೂಷಣ್, ಕಾಶಿ ವಿಶ್ವನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಯಶಸ್ವಿನಿ ಸೋಮಶೇಖರ್, ಸಂಘಟನಾ ಕಾರ್ಯದರ್ಶಿ ಶ್ರೀವತ್ಸ, ನಗರ ಪಾಲಿಕೆ ಸದಸ್ಯರಾದ ಸ್ನೇಕ್ ಶ್ಯಾಮ್, ಬಿ.ವಿ. ಮಂಜುನಾಥ್, ಶಿವಕುಮಾರ್, ಮಾಜಿ ಸದಸ್ಯರಾದ ಜಯಶಂಕರಸ್ವಾಮಿ, ಮಹೇಶ್, ಎಂಡಿಎ ಮಾಜಿ ಅಧ್ಯಕ್ಷ ಎಲ್. ನಾಗೇಂದ್ರ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ.ಪಿ. ಮಂಜುನಾಥ್, ಮೈಲಾಕ್ ಮಾಜಿ ಅಧ್ಯಕ್ಷ ಮೈ.ವಿ. ರವಿಶಂಕರ್, ಚಾಮರಾಜ ಕ್ಷೇತ್ರಾಧ್ಯಕ್ಷ ಸೋಮಶೇಖರ್, ಕೆ.ಆರ್. ಕ್ಷೇತ್ರಾಧ್ಯಕ್ಷ ರಾಮಪ್ರಸಾದ್, ಎನ್.ಆರ್. ಕ್ಷೇತ್ರಾಧ್ಯಕ್ಷ ಆನಂದ್, ನಮೋ ಬ್ರಿಗೇಡ್ನ ಶ್ಯಾಮ್ ಭಟ್, ಮೇದಪ್ಪ, ಡಾ.ಮಂಜುನಾಥ್, ನಿತ್ಯಾನಂದ ವಿವೇಕವಂಶಿ, ಕೆ. ಗೋಕುಲ್, ಸತೀಶ್, ಮುಖಂಡರಾದ ಎಲ್.ಜಗದೀಶ್, ಟೆನ್ನಿಸ್ ಗೋಪಿ, ನಟರಾಜ್, ದೇವರಾಜ್, ಎಚ್. ವಿ. ಭಾಸ್ಕರ್, ಶರತ್ ಮತ್ತಿತರ ಮುಖಂಡರು ಇದ್ದರು.
ನಂತರ ಅರಮನೆ ಮುಂಭಾಗದಿಂದ ಹೊರಟ ರ್ಯಾಲಿಯು, ಕೇಂದ್ರ ಬಸ್ ನಿಲ್ದಾಣ, ಎಫ್ಟಿಎಸ್ ವೃತ್ತ, ಅಶೋಕರಸ್ತೆ, ಇರ್ವಿನ್ ರಸ್ತೆ, ಜೆಎಲ್ಬಿ ರಸ್ತೆ, ಅಗ್ರಹಾರ, ಚಾಮುಂಡಿಪುರಂ ವೃತ್ತ, ವಿದ್ಯಾರಣ್ಯಪುರಂ ರಸ್ತೆ, ಕುರಬಾರಹಳ್ಳಿ ವೃತ್ತದ ಮೂಲಕ ಸಾಗಿ ಚಾಮುಂಡಿಬೆಟ್ಟಕ್ಕೆ ತಲುಪಿತು. ಮುಖಂಡರು ಚಾಮುಂಡೇಶ್ವರಿದೇವಿಗೆ ಪೂಜೆ ಸಲ್ಲಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

