ಆಹಾರ ಉತ್ಪಾದನೆ ಹೆಚ್ಚಿಸಲು ಕುಲಾಂತರಿ ಅಗತ್ಯ
ಕ.ಪ್ರ.ವಾರ್ತೆ ಮೈಸೂರು ಮಾ. 17
ಭಾರತದಲ್ಲಿ ಮಿತಿ ಮೀರುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಆಹಾರ ಉತ್ಪಾದನೆಯೂ ಹೆಚ್ಚಾಗಬೇಕು. ಇದನ್ನು ಸರಿದೂಗಿಸುವ ಸಲುವಾಗಿ ರೈತರು ಕುಲಾಂತರಿ ಪದ್ಧತಿ ಅಳವಡಿಸಿಕೊಳ್ಳುವುದು ಒಳಿತು ಎಂದು ಕೇಂದ್ರ ಸರ್ಕಾರದ ನಿವೃತ್ತ ಕಾರ್ಯದರ್ಶಿ ವಿ.ವಿ. ಭಟ್ ಹೇಳಿದರು.
ಮೈಸೂರು ವಿವಿ ಸಸ್ಯಾರೋಗ್ಯ ಕೇಂದ್ರ ಸೋಮವಾರ ಏರ್ಪಡಿಸಿದ್ದ ರೈತರೊಂದಿಗೆ ಒಂದು ದಿನ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಭಾರತದ ಜನಸಂಖ್ಯೆ 30 ಕೋಟಿ ಇದ್ದಾಗ ವರ್ಷಕ್ಕೆ 20 ಮಿಲಿಯನ್ ಟನ್ ಆಹಾರ ಉತ್ಪಾದನೆಯಾಗುತ್ತಿತ್ತು. ಈಗ ಜನಸಂಖ್ಯೆ 120 ಕೋಟಿ ಮೀರಿದ್ದು, ವಾರ್ಷಿಕವಾಗಿ ಕೇವಲ 4 ಮಿಲಿಯನ್ ಟನ್ ಆಹಾರ ಉತ್ಪಾದಿಸುತ್ತಿದ್ದೇವೆ. ಇದು ಹೀಗೆ ಮುಂದುವರೆದರೆ ಆಹಾರ ಪದಾರ್ಥದ ಅಭಾವ ಕಾಣಿಸಿಕೊಳ್ಳಲಿದೆ ಎಂದರು.
ಈ ಸಮಸ್ಯೆಯನ್ನು ಬಹಳ ಎಚ್ಚರಿಕೆಯಿಂದ ಸ್ವೀಕರಿಸಿದ ಚೀನಾ ಪರ್ಯಾಯ ಮಾರ್ಗ ಕಂಡುಕೊಂಡಿತು. ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಹೆಚ್ಚು ಇಳುವರಿ ಕೊಡುವ, ನೀರು, ಬೆಳಕನ್ನು ಕಡಿಮೆ ಬಳಸಿಕೊಂಡು ಬೆಳೆಯುವ ಬೆಳೆಗಳನ್ನು ಗುರುತಿಸಿಕೊಂಡು ಅದನ್ನು 4 ಉಪಗ್ರಹಗಳ ಮೂಲಕ ಬಾಹ್ಯಾಕಾಶಕ್ಕೆ ಕಳುಹಿಸಿ ಪೌಷ್ಟಿಕಾಂಶ ಹೆಚ್ಚಿಸಿಕೊಳ್ಳುವ (ಸ್ಪೇಸ್ ಸ್ಪೀಡ್ ಎಕ್ಸ್ಪೆರಿಮೆಂಟ್) ವಿಧಾನವನ್ನು ಕಂಡುಕೊಂಡರು. ಬಾಹ್ಯಾಕಾಶದಿಂದ ತಂದ ಬೀಜಗಳನ್ನು ಪ್ರಯೋಗಾಲಕ್ಕೆ ಒಳಪಡಿಸಿ ಶೇ. 25ರಷ್ಟು ಇಳುವರಿ ಹೆಚ್ಚಿಸಿಕೊಂಡಿತು. ಇದೇ ಮಾದರಿಯನ್ನು ಭಾರತದಲ್ಲೂ ಅನುಸರಿಸಬೇಕಾಗಿದೆ ಎಂದರು.
ಉಪಗ್ರಹ, ವಿಜ್ಞಾನಕ್ಕೆ ಸಂಬಂಧಪಟ್ಟಂತೆ ಸರ್ಕಾರ, ಇಸ್ರೋ ನೋಡಿಕೊಳ್ಳುತ್ತದೆ. ಯಾವ ಬೆಳೆ ಬೆಳೆಯಬೇಕೆಂಬುದರ ಬಗ್ಗೆ ಕೃಷಿ ವಿವಿಗಳು, ತೋಟಗಾರಿಕೆ ತಜ್ಞರು, ಐಸಿಇಆರ್ ತಜ್ಞರು ನಿರ್ಧರಿಸಬೇಕು. ಈ ತಂತ್ರಜ್ಞಾನ ಬಳಸಿಕೊಳ್ಳುವ ಮುನ್ನ ಕೆಲವು ನಿರ್ಣಯಗಳನ್ನು ಕೈಗೊಳ್ಳಬೇಕು. ಯಾವ ಬೆಳೆಯನ್ನು ಪ್ರಯೋಗಕ್ಕೆ ಒಳಪಡಿಸುವುದು, ಆ ಬೆಳೆಯನ್ನು ಆರು ತಲೆಮಾರಿನ ನಂತರ ಪುನರಾವರ್ತಿಸಿ ಮತ್ತೆ ಪ್ರಯೋಗಕ್ಕೆ ಒಳಪಡಿಸುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು ಎಂದರು.
ಸಸ್ಯಾರೋಗ್ಯ ಕೇಂದ್ರದ (ಪ್ಲಾಂಟ್ ಕ್ಲಿನಿಕ್) ಸಂಸ್ಥಾಪಕ ಪ್ರೊ.ಎಸ್. ಶಂಕರ ಭಟ್ ಮಾತನಾಡಿ, ಸಸ್ಯರೋಗಗಳನ್ನು ಪತ್ತೆ ಹಚ್ಚಲು ಪ್ಲಾಂಟ್ ಕ್ಲಿನಿಕ್ ಅನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಈ ಕೇಂದ್ರ ಒಂದೇ ಕಡೆ ಕಾರ್ಯನಿರ್ವಹಿಸುವುದಕ್ಕಿಂತ ಸಂಚಾರಿಯಾದರೆ ರೈತರಿಗೆ ಅನುಕೂಲವಾಗಲಿದೆ. ಕೃಷಿ ವಿವಿಗಳೊಂದಿಗೆ ಸಾಂಪ್ರದಾಯಿಕ ವಿವಿಗಳು ಸಂಚಾರಿ ಸಸ್ಯಾರೋಗ್ಯ ಸಂಚಾರಿ ಕೇಂದ್ರಗಳನ್ನು ರೂಪಿಸುವ ಬಗೆಗೆ ಚಿಂತಿಸಬೇಕು. ಆಗ ದೇಶ ಸಂಪತ್ಭರಿತವಾಗಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಮಾತನಾಡಿ, ಸಾಂಪ್ರದಾಯಿಕ ವಿವಿಗಳ ಪೈಕಿ ರೈತರೊಂದಿಗೆ ಕಾರ್ಯಕ್ರಮ ಹಮ್ಮಿಕೊಂಡ ಮೊದಲ ವಿವಿ ಎಂಬ ಕೀರ್ತಿ ಮೈಸೂರು ವಿವಿಗೆ ಸೇರಿದೆ. ಇಲ್ಲಿ ವ್ಯಕ್ತವಾಗುವ ಅಭಿಪ್ರಾಯ ಸಂಗ್ರಹಿಸಿ ವರದಿ ತಯಾರಿಸಿ ವಿವಿಗೆ ಸಲ್ಲಿಸಿದರೆ ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.ನಂತರ ಗ್ರೀನ್ಲೈಫ್ ಸೈನ್ಸ್ ಟೆಕ್ನಾಲಜಿ ಪ್ರೈ.ಲಿ. ನಿರ್ದೇಶಕ ಡಾ. ವಸಂತಕುಮಾರ್ ತಿಮಕಾಪುರ, ಧಾರವಾಡ ಕೃಷಿ ವಿವಿಯ ಡಾ.ಸಿ.ಆರ್. ಪಾಟೀಲ್, ಬೆಂಗಳೂರು ಗಾಂಧಿ ಕೃಷಿ ವಿವಿಯ ಡಾ.ಎ.ಆರ್.ವಿ. ಕುಮಾರ್ ಸಸ್ಯರೋಗಗಳ ಬಗ್ಗೆ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಸುಮಾರು 250ಕ್ಕೂ ಹೆಚ್ಚು ರೈತರು ಭಾಗವಹಿಸಿ ಮಾಹಿತಿ ಪಡೆದುಕೊಂಡರು. ಸಸ್ಯಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ಜಿ.ಆರ್. ಜನಾರ್ದನ್ ಸ್ವಾಗತಿಸಿದರು. ಪ್ರೊ.ಕೆ.ಎಂ. ಜಯರಾಮಯ್ಯ ಮೊದಲಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

