ಮೈಸೂರು

ಅಗ್ಗದ ಕಾರ್ಯಕ್ರಮಗಳಿಗೆ ಜೋತು ಬೀಳದ ಕಾಂಗ್ರೆಸ್‌ನಿಂದ ಶಾಶ್ವತ ಜನಪರ ಕಾರ್ಯ: ಮಹದೇವಪ್ರಸಾದ್

Published On :

ಕೆ.ಆರ್. ನಗರ: ಕಾಂಗ್ರೆಸ್ ಸರ್ಕಾರ ಕೇವಲ ಅಗ್ಗದ ಕಾರ್ಯಕ್ರಮಗಳಿಗೆ ಜೋತು ಬೀಳದೆ ಶಾಶ್ವತವಾದ ಜನಪರ ಕೆಲಸ ಮಾಡುತ್ತಿದೆ ಎಂದು ಸಹಕಾರ ಸಚಿವ ಎಚ್.ಎಸ್. ಮಹದೇವಪ್ರಸಾದ್ ಹೇಳಿದರು.
ಪಟ್ಟಣದ ಸಂಗೊಳ್ಳಿ ರಾಯಣ್ಣ ಸಮುದಾಯ ಭವನದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ನೀಡಿದ್ದ 160 ಭರವಸೆಗಳ ಪೈಕಿ 9 ತಿಂಗಳ ಅವಧಿಯಲ್ಲಿ 90 ಭರವಸೆಗಳನ್ನು ಈಡೇರಿಸಿದ್ದು, 1.5 ಕೋಟಿ ಬಿಪಿಎಲ್ ಪಡಿತರ ಚೀಟಿಗಳನ್ನು ವಿತರಿಸಿ ಅವರಿಗೆ ಆಹಾರ ಪದಾರ್ಥ ನೀಡಲು ಬಜೆಟ್‌ನಲ್ಲಿ 4,400 ಕೋಟಿ ಮೀಸಲಿಟ್ಟಿದ್ದೇವೆ ಎಂದರು.
ಬಿಜೆಪಿ, ಜೆಡಿಎಸ್‌ನವರಿಗೆ ಕಾಂಗ್ರೆಸ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಾಧನೆಗಳನ್ನು ನೋಡಿ ಸಹಿಸಲು ಸಾಧ್ಯವಿಲ್ಲ. ಆದ್ದರಿಂದ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಜೆಡಿಎಸ್‌ನವರಿಗೆ ಮಂಡ್ಯ ಮತ್ತು ಮೈಸೂರಿನಲ್ಲಿ ಸ್ಪರ್ಧಿಸಲು ಅಭ್ಯರ್ಥಿಗಳೇ ಇಲ್ಲ ಎಂದು ಲೇವಡಿ ಮಾಡಿದರು. ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮಾತನಾಡಿ, ಬಿಜೆಪಿಗೆ ಸಾಮಾಜಿಕ ನ್ಯಾಯದ ಪರಿಕಲ್ಪನೆ ಇಲ್ಲ. ಅವರಿಗೆ ಪ್ರಚೋದನಕಾರಿ ಮತ್ತು ಜಾತಿ ರಾಜಕಾರಣದ ಮೂಲಕ ಅಧಿಕಾರ ಗಳಿಸಿ ಸಮಾಜವನ್ನು ಕೋಮು ಭಾವನೆಗಳಿಂದ ಒಡೆದು ಆಳುವ ನೀತಿ ಮಾತ್ರ ಗೊತ್ತು. ಇಂಥವರಿಂದ ದೇಶದ ಉದ್ಧಾರ ಸಾಧ್ಯವಿಲ್ಲ ಎಂದರು.
ಸಂಸದ ಎಚ್. ವಿಶ್ವನಾಥ್ ಮಾತನಾಡಿ, ಕಾಂಗ್ರೆಸ್‌ಗೆ ಜಾತಿಗಿಂತ ನೀತಿ ದೊಡ್ಡದು. ಆದರೆ ಬಿಜೆಪಿಗೆ ನೀತಿಗಿಂತಜಾತಿಯೇ ದೊಡ್ಡದು. ಇದು ಇವೆರಡು ಪಕ್ಷಗಳಿಗೆ ಇರುವ ವ್ಯತ್ಯಾಸ. ಆದ್ದರಿಂದ ದೇಶದ ಸಮಗ್ರ ಬದಲಾವಣೆಗೆ ಮತದಾರರು ಯೋಚಿಸಿ ಮತ ನೀಡಬೇಕೆಂದು ಹೇಳಿದರು.
ವಿಧಾನಪರಿಷತ್ ಸದಸ್ಯ ಆರ್. ಧರ್ಮಸೇನ ಮಾತನಾಡಿದರು. ತಾಲೂಕು ಕಾಂಗ್ರೆಸ್ ಮುಖಂಡ ದೊಡ್ಡಸ್ವಾಮೇಗೌಡ, ಪುರಸಭಾಧ್ಯಕ್ಷೆ ಪಾರ್ವತಿ ನಾಗರಾಜು, ಉಪಾಧ್ಯಕ್ಷೆ ಕವಿತಾ ವಿಜಯಕುಮಾರ್, ಜಿಪಂ ಸದಸ್ಯರಾದ ರಾಜಯ್ಯ, ಪುಪ್ಪಲತಾ ರಮೇಶ್, ಮಾಜಿ ಸದಸ್ಯರಾದ ಎ.ಎಸ್. ಚನ್ನಬಸಪ್ಪ, ಡಿ. ರವಿಶಂಕರ್, ರಾಮೇಗೌಡ, ಶಿವರಾಂ, ತಾಪಂ ಸದಸ್ಯರಾದ ಕಮಲಮ್ಮ, ಚಿಕ್ಕೇಗೌಡ, ಸಣ್ಣಪ್ಪ, ಪುರಸಭಾ ಸದಸ್ಯರಾದ ಮಹಾಲಕ್ಷ್ಮಿ, ಸರೋಜ ಮಹದೇವ್, ನಟರಾಜ್, ಕೆ.ಜಿ. ಸುಬ್ರಮಣ್ಯ, ಎಂಡಿಎ ಮಾಜಿ ಅಧ್ಯಕ್ಷ ಪಿ. ಗೋವಿಂದರಾಜು, ಎಪಿಎಂಸಿ ಉಪಾಧ್ಯಕ್ಷ ತೋಟಪ್ಪನಾಯಕ, ನಿರ್ದೇಶಕ ಎಸ್. ಸಿದ್ದೇಗೌಡ, ರಾಜೇಗೌಡ, ಮಾಜಿ ನಿರ್ದೇಶಕ ರಾಜಶೇಖರ್, ಕಾಂಗ್ರೆಸ್ ಮುಖಂಡರಾದ ಡಾ. ಮೆಹಬೂಬ್‌ಖಾನ್, ದೇವರಾಜ್, ರಾಜಶೇಖರ್, ಎಸ್.ಪಿ. ಆನಂದ್, ಪ್ರಕಾಶ್, ಜಿ.ಎಂ. ಹೇಮಂತ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.