ಮೈಸೂರು

ಮುಖ್ಯ ಶಿಕ್ಷಕರ ವಿರುದ್ಧ ಆರೋಪ ಸುಳ್ಳು

Published On :

ಕೆ.ಆರ್. ನಗರ: ತಾಲೂಕಿನ ಬಂಡಹಳ್ಳಿ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಎಂ.ಸುರೇಶ್ ವಿರುದ್ಧ ಲೈಂಗಿಕ ಕಿರುಕುಳದ ಸುಳ್ಳು ದೂರು ದಾಖಲಾಗಲು ಎಪಿಎಂಸಿ ನಿರ್ದೇಶಕ ಬಂಡಹಳ್ಳಿ ಕುಚೇಲ ಅವರ ಚಿತಾವಣೆ ಕಾರಣ ಎಂದು ಶಾಲಾ ಎಸ್‌ಡಿಎಂಸಿ ಆಡಳಿತ ಮಂಡಳಿಯವರು ಆರೋಪಿಸಿದರು.
ತಮ್ಮ ವೈಯಕ್ತಿಕ ಕಾರಣಗಳಿಗಾಗಿ ಕಳೆದ ಮೂರು ವರ್ಷಗಳಿಂದ ಶಾಲೆಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಮುಖ್ಯ ಶಿಕ್ಷಕರ ವಿರುದ್ಧ ಕಳೆದ 10 ತಿಂಗಳ ಹಿಂದೆ ಈ ಶಾಲೆಯಲ್ಲಿ ದ್ವಿತೀಯ ದರ್ಜೆ ಸಹಾಯಕಿಯಾಗಿ ಸೇವೆ ಸಲ್ಲಿಸಿ ಈಗ ಪಟ್ಟಣದ ತಾಪಂ ಕಚೇರಿಯಲ್ಲಿ ಅಕ್ಷರ ದಾಸೋಹ ವಿಭಾಗದಲ್ಲಿರುವ ಸಿ.ಎಸ್. ಕಾವ್ಯ ಎಂಬವವರನ್ನು ಬಳಸಿಕೊಂಡು ದೂರು ದಾಖಲಿಸಿದ್ದಾರೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ಎನ್.ಸ್ವಾಮಿ, ಉಪಾಧ್ಯಕ್ಷ ಲೋಕೇಶ್ ಸುದ್ದಿಗೋಷ್ಠಿಯಲ್ಲಿ ದೂರಿದರು.
ಶಾಲೆಯ ವಿರುದ್ಧ ಮತ್ತು ಶಿಕ್ಷಕರ ವಿರುದ್ಧ ಸದಾ ಆರೋಪಗಳನ್ನು ಮಾಡುವ ಕುಚೇಲ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಿಕೊಂಡು ಬಡವರು ಮತ್ತು ಹಿಂದುಳಿದ ವರ್ಗದವರು ಓದುವ ಶಾಲೆಯ ವಿರುದ್ಧ ಮಸಲತ್ತು ನಡೆಸುತ್ತಿದ್ದು, ಇವರ ವರ್ತನೆ ಖಂಡನೀಯ ಎಂದು ಹೇಳಿದರು.
ಮಾ.15ರಂದು ಕುಚೇಲ ಅವರ ಬೆಂಬಲಿಗರಾದ ರುದ್ರೇಗೌಡ, ಮಹೇಂದ್ರ ಮತ್ತು ಅಣ್ಣೇಗೌಡ ಎಂಬುವವರು ಶಾಲೆಗೆ ಅಕ್ರಮ ಪ್ರವೇಶ ಮಾಡಿ ಅಲ್ಲಿದ್ದ ವಿದ್ಯಾರ್ಥಿಗಳಾದ ವಿದ್ಯಾಶ್ರೀ ಮತ್ತು ಶಿಲ್ಪಶ್ರೀ ಅವರು ಮೇಲೆ ದೌರ್ಜನ್ಯ ಮಾಡಿ ಬೀಗದ ಕೀಗಳನ್ನು ಕಿತ್ತುಕೊಂಡು ಬಾಗಿಲು ಹಾಕಿಸಿದ್ದಾರೆ. ಇದರ ವಿರುದ್ಧ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಮುಖ್ಯ ಶಿಕ್ಷಕ ಸುರೇಶ್ ವಿರುದ್ಧ ದಾಖಲಿಸಿರುವ ಸುಳ್ಳು ದೂರನ್ನು ಕೂಡಲೇ ಹಿಂಪಡೆದು ಅವರು ಶಾಲೆಗೆ ಬಂದು ಮಕ್ಕಳಿಗೆ ಮತ್ತೆ ಪಾಠ ಪ್ರವಚನ ಬೋಧಿಸುವಂತೆ ಅನುಕೂಲ ಕಲ್ಪಿಸಬೇಕು ಹಾಗೂ ಪದೇ ಪದೇ ಶಾಲಾ ಮುಖ್ಯ ಶಿಕ್ಷಕರಿಗೆ ತೊಂದರೆ ನೀಡುತ್ತಿರುವ ಎಪಿಎಂಸಿ ನಿರ್ದೇಶಕ ಬಂಡಹಳ್ಳಿ ಕುಚೇಲ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರುಗಳು ಆಗ್ರಹಿಸಿದರು.
ಪ್ರತಿಭಟನೆ: ಶಾಲಾ ಮುಖ್ಯ ಶಿಕ್ಷಕರ ವಿರುದ್ಧ ದಾಖಲಿಸಿರುವ ಸುಳ್ಳು ದೂರನ್ನು ಕೂಡಲೇ ಹಿಂಪಡೆಯುವಂತೆ ಆಗ್ರಹಿಸಿ, ಪಟ್ಟಣದ ಅಂಬೇಡ್ಕರ್ ಭವನದಿಂದ ಮಿನಿ ವಿಧಾನಸೌಧದವರೆಗೆ ಶಾಲಾ ವಿದ್ಯಾರ್ಥಿಗಳು ಮತ್ತು ಪೋಷಕರೊಂದಿಗೆ ಮಾ.19ರಂದು ಮೌನ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಕಾಂಗ್ರೆಸ್ ಮುಖಂಡ ಎನ್. ನಿಂಗರಾಜು ತಿಳಿಸಿದರು. ಕಾಂತರಾಜು, ರಾಮಚಂದ್ರ, ಮಹದೇವ್, ಈರಯ್ಯ, ಸುಜಾತ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.