ಮೈಸೂರು

ವಾಲ್ಮೀಕಿ ಯಾರು ಕೃತಿ ವಾಪಸಿಗೆ ಶಾಸಕ ಎಸ್. ಚಿಕ್ಕಮಾದು ಆಗ್ರಹ

Published On :

ಮೈಸೂರು: ಸಂಪೂರ್ಣ ರಾಮಾಯಣ ಕೃತಿ ರಚಿಸಿದ ಮಹರ್ಷಿ ವಾಲ್ಮೀಕಿಯವರ ಜಾತಿ ಕುರಿತಾದ ಮಾಹಿತಿಯುಳ್ಳ ವಾಲ್ಮೀಕಿ ಯಾರು ಎಂಬ ಕೃತಿಯನ್ನು ರಚನೆಕಾರ ಪ್ರೊ.ಕೆ.ಎಸ್. ನಾರಾಯಣಾಚಾರ್ಯರು ಕೂಡಲೇ ವಾಪಸ್ ಪಡೆಯಬೇಕು ಎಂದು ಶಾಸಕ ಎಸ್. ಚಿಕ್ಕಮಾದು ಒತ್ತಾಯಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾರಾಯಣಾಚಾರ್ಯರು ಇತಿಹಾಸ ತಿರುಚುವ ಪ್ರಯತ್ನ ಮಾಡುತ್ತಿದ್ದಾರೆ. ಶೂದ್ರರು ರಾಮಾಯಣ ರಚಿಸಿದರು ಎಂಬ ಒಂದೇ ಒಂದು ಕಾರಣಕ್ಕೆ ಅಸೂಯೆಯಿಂದ ಈ ರೀತಿಯ ತಪ್ಪು ಮಾಹಿತಿ ನೀಡುತ್ತಿದ್ದಾರೆ. ವಾಲ್ಮೀಕಿ ಬೇಡ ಕುಲಕ್ಕೆ ಸೇರಿದವನಲ್ಲ. ಅವನು ಬ್ರಾಹ್ಮಣ ಕುಲದವನು. ಆತ ಮಗುವಾಗಿದ್ದಾಗ ಹದ್ದು ಅಪಹರಿಸಿ ಕಾಡಿನಲ್ಲಿ ಬಿಡುತ್ತದೆ. ಆ ಮಗುವನ್ನು ಬೇಡರು ಸಾಕುತ್ತಾರೆ ಎಂಬ ಮಾಹಿತಿ ಸತ್ಯವಲ್ಲ. ಆದ್ದರಿಂದ ಅವರ ಹೇಳಿಕೆಯನ್ನು ನಾಯಕ ಜನಾಂಗ ಖಂಡಿಸುತ್ತದೆ ಎಂದರು.
ಒಂದು ವೇಳೆ ವಾಲ್ಮೀಕಿ ಬ್ರಾಹ್ಮಣ ಎನ್ನುವುದಾದರೆ, ನಾಯಕ ಜನಾಂಗದವರೆಲ್ಲ ಬ್ರಾಹ್ಮಣರು ಎಂದು ಒಪ್ಪಿಕೊಳ್ಳಲು ಸಿದ್ಧರಿದ್ದೀರಾ ಎಂದ ಅವರು, ನಾರಾಯಣಾಚಾರ್ಯರು ಸಮಾಜ ಒಡೆಯುವ ಕೆಲಸಕ್ಕೆ ಕೈ ಹಾಕಬಾರದು. ಅವರ ಒಂದು ಹೇಳಿಕೆಯಿಂದ ಸಮಾಜದಲ್ಲಿ ಜಾತಿ- ಜಾತಿಗಳ ನಡುವೆ ಸಂಘರ್ಷ ಏರ್ಪಡುತ್ತದೆ. ಆದ್ದರಿಂದ ಲೇಖಕರು, ಪ್ರಕಾಶಕರು ಕೃತಿಯನ್ನು ವಾಪಸ್ ಪಡೆಯಬೇಕು. ಸರ್ಕಾರ ಕೂಡಲೇ ಕೃತಿಯನ್ನು ಮುಟ್ಟುಗೋಲು ಹಾಕಿಕೊಂಡು, ನಾರಾಯಣಾಚಾರ್ಯರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಚುನಾವಣೆ ನೀತಿ ಸಂಹಿತೆ ಮುಗಿದ ಬಳಿಕ ರಾಷ್ಟ್ರಾದ್ಯಂತ ಹೋರಾಟಕ್ಕೆ ಕರೆ ನೀಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ರಾಮನನ್ನು ತಮ್ಮ ದೇವರು ಎಂದು ಪೂಜಿಸುವ ನೀವು, ಅದೇ ರಾಮನನ್ನು ಸೃಷ್ಟಿಸಿದ ವಾಲ್ಮೀಕಿಯ ಭಾವಚಿತ್ರವನ್ನು ಯಾಕೆ ಪೂಜಿಸುವುದಿಲ್ಲ. ನಾವು ಆತನ ಕುಲಕ್ಕೆ ಸೇರಿದವರಾದ್ದರಿಂದ ನಮ್ಮ ಮೊದಲ ನಮಸ್ಕಾರ ವಾಲ್ಮೀಕಿಗೆ ಸಲ್ಲುತ್ತದೆ. ಅವರ ಮೇಲೆ ಅಪಾರ ಭಕ್ತಿ, ಗೌರವವಿದ್ದು ಇದಕ್ಕೆ ಚ್ಯುತಿ ತರಬೇಡಿ. ಸಮಾಜದಲ್ಲಿ ಅಶಾಂತಿ ಹುಟ್ಟುಹಾಕಬೇಡಿ ಎಂದು ಮನವಿ ಅವರು ಮಾಡಿದರು. ಮುಖಂಡರಾದ ಎಂ.ಸಿ. ದೊಡ್ಡನಾಯಕ, ಮಧುವನ ಚಂದ್ರ, ದೇವರಾಜ್ ಟಿ. ಕಾಟೂರು ಇದ್ದರು.
ಅಸಂಬದ್ಧ ಹೇಳಿಕೆಗೆ ಖಂಡನೆ
ಮೈಸೂರು: ಡಾ.ಕೆ.ಎಸ್. ನಾರಾಯಣಾಚಾರ್ಯ ಅವರು ರಚಿಸಿರುವ ವಾಲ್ಮೀಕಿ ಯಾರು ಎಂಬ ಕೃತಿಯಲ್ಲಿ ವಾಲ್ಮೀಕಿ ಹುಟ್ಟಿನ ಬಗ್ಗೆ ಇರುವ ಹೇಳಿಕೆಯನ್ನು ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ನಾಯಕರ ಕ್ಷೇಮಾಭಿವೃದ್ಧಿ ಸಂಘ ತೀವ್ರವಾಗಿ ಖಂಡಿಸಿದೆ. ಮಹರ್ಷಿ ಮಗುವಾಗಿರುವಾಗ ನದಿ ತೀರದಿಂದ ಹದ್ದೊಂದು ಅದನ್ನು ಕೊಂಡೊಯ್ದು ಬೇರೆಡೆ ಬಿಟ್ಟಿದ್ದಾಗ ಬೇಡನೊಬ್ಬನಿಗೆ ಸಿಕ್ಕಿದ ಆ ಮಗುವನ್ನು ಅವನು ಬೆಳೆಸಿದನು ಎಂಬ ಅಪ್ರಬುದ್ಧ ಮತ್ತು ಅಸಮಂಜಸ ಹೇಳಿಕೆಯನ್ನು ಯಾರು ನಂಬುತ್ತಾರೆ ಎಂಬುದನ್ನು ಅವರೇ ಚಿಂತಿಸಬೇಕು. ವಿಶ್ವದ ಶ್ರೇಷ್ಠ ಗ್ರಂಥಗಳಲ್ಲಿ ರಾಮಾಯಣವನ್ನು ರಚಿಸಿದವನು ಬ್ರಾಹ್ಮಣನೇ ಆಗಿರಬೇಕೆಂದು ಪೂರ್ವಗ್ರಹ ಪೀಡಿತರಾಗಿ ಲೇಖಕರು ಸಮಾಜದಲ್ಲಿ ಅಶಾಂತಿ ಉಂಟು ಮಾಡುತ್ತಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿ ಡಿ. ಮಹದೇವಪ್ಪ ಟೀಕಿಸಿದ್ದಾರೆ.
ಬೇಡ ಸಮುದಾಯ ಅವಹೇಳನ
ಬೇಡ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಕೆ.ಎಸ್. ನಾರಾಯಣಚಾರ್ಯರನ್ನು ತಕ್ಷಣ ಬಂಧಿಸುವಂತೆ ಕರ್ನಾಟಕ ರಾಜ್ಯ ವಾಲ್ಮೀಕಿ ನಾಯಕ ಸಂಘಗಳ ಒಕ್ಕೂಟದ ಹಿರಿಯ ಉಪಾಧ್ಯಕ್ಷ ಪಿ. ದೇವರಾಜು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ. ಇತ್ತೀಚೆಗೆ ನಡೆದ ತಮ್ಮ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಬೇಡ ಸಮುದಾಯದ ಬಗ್ಗೆ ಪ್ರಸ್ತಾಪಿಸಿರುವ ಅವರು, ಹದ್ದು ಕಾಗೆಗಳಿಗೆ ಸಮೀಕರಿಸಿ ಮಾತನಾಡಿ, ಸಮುದಾಯದ ಘನತೆ ಗೌರವಕ್ಕೆ ಧಕ್ಕೆ ಉಂಟು ಮಾಡಿದ್ದಾರೆ. ಈ ಅಪ್ರಬುದ್ಧ ವ್ಯಕ್ತಿಯು ಮತಿಭ್ರಮಣೆಯಾದವರಂತೆ ಮಾತನಾಡಿರುವುದು ಬೇಡ ಸಮುದಾಯ ಆಕ್ಷೇಪಿಸುತ್ತದೆ ಎಂದು ಅವರು ಹೇಳಿದ್ದಾರೆ. ಬೇಡ ನಾಯಕರ ಆರಾಧ್ಯ ದೈವ ಭಗವಾನ್ ವಾಲ್ಮೀಕಿ ಅವರನ್ನು ಬ್ರಾಹ್ಮಣ ಎಂದು ಪ್ರತಿಪಾದಿಸುವ ದುಸ್ಸಾಹಸ, ಅಪಹರಣ ಕೃತ್ಯ, ಸಮುದಾಯದವರನ್ನು ಪುಸ್ತಕ ಬಿಡುಗಡೆಯ ಸಮಾರಂಭದಲ್ಲಿ ಬೇಡ ಕುಲದವರನ್ನು ಕಾಗೆ ಹಾಗೂ ಹದ್ದುಗಳಿಗೆ ಹೋಲಿಸಿ ಅವಮಾನಿಸುವುದಲ್ಲದೇ, ವಾಲ್ಮೀಕಿಯನ್ನು ಕಾಗೆಗಳು ಅಪಹರಿಸಿದ್ದಾರೆಂಬ ಹೇಳಿಕೆಯನ್ನು ರಾಜ್ಯ ವಾಲ್ಮೀಕಿ ನಾಯಕ ಸಂಘಗಳ ಒಕ್ಕೂಟ ಖಂಡಿಸಿದೆ. ವಾಲ್ಮೀಕಿ ಯಾರು ಎಂಬ ಕೃತಿಯನ್ನು ಸರ್ಕಾರ ತಕ್ಷಣವೇ ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಒತ್ತಾಯಿಸಿದ್ದು, ಅವರು ಬೇಡರ ಕುರಿತು ನೀಡಿರುವ ಹೇಳಿಕೆಯನ್ನು ಹಿಂಪಡೆಯಬೇಕು. ಹೇಳಿಕೆಗಳು ಮುಂದವರಿದಿದ್ದೇ ಆದಲ್ಲಿ ಒಕ್ಕೂಟವು ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಮಾಡುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.