ಸಣ್ಣಪುಟ್ಟ ಪ್ರಕರಣಗಳನ್ನು ಲೋಕ ಅದಾಲತ್ ಮೂಲಕ ಬಗೆಹರಿಸಿ
ಕ.ಪ್ರ.ವಾರ್ತೆ ್ಣ ಮೈಸೂರು ್ಣ ಮಾ. 20
ರಾಜಿಯಾಗಬಹುದಾದ ಸಣ್ಣಪುಟ್ಟ ಪ್ರಕರಣಗಳನ್ನು ಲೋಕ ಅದಾಲತ್ ಮೂಲಕ ಬಗೆಹರಿಸಿಕೊಳ್ಳಲು ತಮ್ಮ ಕಕ್ಷಿದಾರರಿಗೆ ವಕೀಲರು ಮನವರಿಕೆ ಮಾಡಿಕೊಡಬೇಕು ಎಂದು ಮೈಸೂರು ಪ್ರಧಾನ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಧೀಶೆ ಕೆ.ಎಸ್.ಮುದಗಲ್ ಸಲಹೆ ನೀಡಿದರು.
ಮೈಸೂರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ವತಿಯಿಂದ ಮೈಸೂರು ವಕೀಲರ ಸಂಘ ಆವರಣದಲ್ಲಿ ವಕೀಲ ಕೆ.ಎಂ. ದೊರೆಸ್ವಾಮಿ ನಿರ್ದೇಶನದ ಲೋಕ ಅದಾಲತ್ ಎಂಬ ಜಾಹೀರಾತು ಕಿರುಚಿತ್ರವನ್ನು ಗುರುವಾರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ನ್ಯಾಯಾಲಯಕ್ಕೆ ಬರುವ ಎಲ್ಲ ಪ್ರಕರಣಗಳೂ ಗಂಭೀರವಾಗಿರುವುದಿಲ್ಲ. ಚಿಕ್ಕ ಸಮಸ್ಯೆಗಳನ್ನೂ ನ್ಯಾಯಾಲಯಕ್ಕೆ ತರಲಾಗುತ್ತದೆ. ಇದರಿಂದ ಕುಟುಂಬಗಳಲ್ಲಿ ನೆಮ್ಮದಿ ಹಾಳಾಗುತ್ತದೆ. ವೃತ್ತಿ ಜೀವನದ ಕಡೆಗೂ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಇಂಥ ಪ್ರಕರಣಗಳನ್ನು ಸಂಧಾನದ ಮೂಲಕವೇ ಇತ್ಯರ್ಥಗೊಳಿಸುವುದು ಸೂಕ್ತ ಎಂದರು.
ಏ.12ರವರೆಗೆ ನಡೆಯುವ ಲೋಕ ಅದಾಲತ್ಗಾಗಿ ಈ ಕಿರುಚಿತ್ರ ಸಿದ್ಧಪಡಿಸಲಾಗಿದೆ. ಆಡಳಿತಾತ್ಮಕ ಅನುಮೋದನೆ ಪಡೆದು ಬಿಡುಗಡೆ ಮಾಡಲು ಸ್ವಲ್ಪ ವಿಳಂಬ ಆಗಿದೆ. ಈಗಾಗಲೇ ಶಿರಸಿ ಜಾತ್ರೆ ಸೇರಿದಂತೆ ರಾಜ್ಯದ ವಿವಿಧೆಡೆ ಈ ಜಾಹೀರಾತು ಪ್ರದರ್ಶಿಸಲಾಗಿದೆ ಎಂದರು.
5020 ಪ್ರಕರಣಗಳು ಇತ್ಯರ್ಥ: ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಜೆರಾಲ್ಡ್ ರುಡೋಲ್ಪ್ ಮೆಂಡೋನ್ಸಾ ಮಾತನಾಡಿ, ಜ. 6ರಿಂದ ಮಾ.19ರವರೆಗೆ ನಡೆದ ಲೋಕ ಅದಾಲತ್ನಲ್ಲಿ ಜಿಲ್ಲೆಯ 581 ಸಿವಿಲ್, 4,199 ಕ್ರಿಮಿನಲ್ ಪ್ರಕರಣ ಸೇರಿದಂತೆ ಒಟ್ಟು 5,020 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ ಎಂದರು. ನಗರ ಪೊಲೀಸ್ ಆಯುಕ್ತರ ವ್ಯಾಪ್ತಿಗೆ ಬರುವ ಪ್ರಕರಣಗಳ ಇತ್ಯರ್ಥಕ್ಕೆ ಮಾ.24, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವ್ಯಾಪ್ತಿಗೆ ಬರುವ ಪ್ರಕರಣಗಳ ಇತ್ಯರ್ಥಕ್ಕೆ ಮಾ.27ರಂದು ವಿಶೇಷ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ. ಚೆಕ್ಬೌನ್ಸ್ ಪ್ರಕರಣಗಳನ್ನು ಬಗೆಹರಿಸಲು ನಾಲ್ಕು ಪೀಠಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು.
ವಕೀಲರ ಸಂಘದ ಅಧ್ಯಕ್ಷ ಸಿ. ಬಸವರಾಜು ಅಧ್ಯಕ್ಷತೆ ವಹಿಸಿದ್ದರು. ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಸುರೇಶ್ ಎಸ್. ಕೋಗಿಲಗೇರಿ, ವಕೀಲರ ಸಂಘದ ಕಾರ್ಯದರ್ಶಿ ಎಂ. ಮಹದೇವಸ್ವಾಮಿ, ಉಪಾಧ್ಯಕ್ಷ ಆರ್. ವಿಶ್ವನಾಥ್, ರಾಜ್ಯ ವಕೀಲರ ಪರಿಷತ್ನ ಸದಸ್ಯರಾದ ಸಿ.ಎಂ. ಜಗದೀಶ್, ಸಿ. ಅಪ್ಪಾಜಿಗೌಡ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

