ವಿಶ್ವನಾಥ್ ಹುಲಿಯಲ್ಲ, ನರಿ: ಗೋ.ಮ.
ಕ.ಪ್ರ.ವಾರ್ತೆ ್ಣ ಮೈಸೂರು ್ಣ ಮಾ. 20
ಹಾಲಿ ಸಂಸದ ಎಚ್. ವಿಶ್ವನಾಥ್, ಹುಲಿಯೂ ಅಲ್ಲ, ಇಲಿಯೂ ಅಲ್ಲ, ನರಿ ಎಂದು ವಿಧಾನ ಪರಿಷತ್ ಸದಸ್ಯ ಗೋ. ಮಧುಸೂದನ್ ಟೀಕಿಸಿದರು.
ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಆವರಣದಲ್ಲಿ ಗುರುವಾರ ನಗರ ಬಿಜೆಪಿ ಆಯೋಜಿಸಿದ್ದ ನಾಮಪತ್ರ ಸಲ್ಲಿಕೆ ಪೂರ್ವದ ಸಭೆಯಲ್ಲಿ ಮಾತನಾಡಿ, ಸಂಸದ ಎಚ್.ವಿಶ್ವನಾಥ್ ತಮ್ಮ ಬುದ್ಧಿವಂತಿಕೆ ಪ್ರದರ್ಶಿಸುತ್ತ ಪ್ರತಾಪ ಸಿಂಹವಾದರೆ ನಾನು ಹುಲಿ ಎಂದಿದ್ದಾರೆ. ಆದರೆ ವಿಶ್ವನಾಥ್ ಹುಲಿ ಅಲ್ಲ, ಇಲಿಯೂ ಅಲ್ಲ ನರಿ. ಅವರ ಜೊತೆ ಅವರ ಪಕ್ಷದವರೇ ಇಲ್ಲ. ಎಲ್ಲರನ್ನೂ ಬೈದು ನಿಷ್ಠುರ ಮಾಡಿಕೊಂಡಿದ್ದಾರೆ ಎಂದರು.
ಚಾಮುಂಡೇಶ್ವರಿಯ ವಾಹನವೇ ಸಿಂಹ. ಅಂಥದ್ದರಲ್ಲಿ ಚಾಮುಂಡೇಶ್ವರಿ ತನ್ನ ವಾಹನವನ್ನು ಸೋಲಿಸುವುದುಂಟೆ. ಆಕೆಯ ಆಶೀರ್ವಾದ ಇದ್ದೇ ಇರುತ್ತದೆ. ಪ್ರತಾಪ್ಗೆ ಯಾವುದೇ ಆಸ್ತಿ ಇಲ್ಲ. ದೇಶಾದ್ಯಂತ ಇರುವ ತನ್ನ ಓದುಗರೆ ಅವರಿಗೆ ಆಸ್ತಿ ಎಂದು ತಿಳಿಸಿದರು.
ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್ಸಿಂಹ ಮಾತನಾಡಿ, ಚೀನಾ ಭಾರತವನ್ನು ಎಲ್ಲ ದಿಕ್ಕಿನಿಂದ ಸುತ್ತುವರಿದಿದೆ. ನೆರೆಯ ಪಾಕಿಸ್ತಾನ ನಮ್ಮ ಇಬ್ಬರು ಸೈನಿಕರ ತಲೆ ಕಡಿದಿದೆ. ನೀವು ಹೋಗಿ ನಾಲ್ವರ ತಲೆ ಕಡಿದು ತನ್ನಿ ಎಂದು ಹೇಳುವ ಧೈರ್ಯವಾಗಲಿ, ತಾಕತ್ತಾಗಲಿ ಪ್ರಧಾನಿ ಮನಮೋಹನ್ಸಿಂಗ್ಗೆ ಇಲ್ಲ. ಒಟ್ಟಾರೆ ದೇಶದ ಆಂತರಿಕ ಭದ್ರತೆಯನ್ನು ಕುಂದಿಸುವ ಮತ್ತು ನಮ್ಮ ಸೈನಿಕರ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸವನ್ನು ಕೇಂದ್ರದ ಯುಪಿಎ ಸರ್ಕಾರ ಮಾಡಿದೆ. ಏ. 1ರಂದು ತಾವು ಯಾವುದೊ ಸಂದೇಶದಿಂದ ಅಥವಾ ಸ್ನೇಹಿತರಿಂದ ಮೂರ್ಖರಾಗಬಹುದು. ಆದರೆ ಏ. 17ರಂದು ನೀವು ಮೂರ್ಖರಾದರೆ ಐದು ವರ್ಷಗಳ ಕಾಲ ಮೂರ್ಖರಾಗುತ್ತಲೇ ಇರಬೇಕಾಗುತ್ತದೆ. ಆದ್ದರಿಂದ ಯೋಚಿಸಿ, ಮತ ಚಲಾಯಿಸಿ ಎಂದರು.
ನರೇಂದ್ರ ಮೋದಿ ಅವರಿಗೆ ದೂರದೃಷ್ಟಿ ಇದೆ. ಭಾರತದಲ್ಲಿಯೆ ಎಲೆಕ್ಟ್ರಾನಿಕ್ ಉತ್ಪಾದನಾ ಘಟಕ ಮತ್ತು ಜಲಾಂತರ್ಗಾಮಿ ನಿರ್ಮಾಣ ಘಟಕ ಸ್ಥಾಪಿಸುವ ಉದ್ದೇಶ ಇದೆ. ಸಾವಿರಾರು ಮಂದಿಗೆ ಉದ್ಯೋಗಾವಕಾಶ ಕಲ್ಪಿಸಬೇಕು ಎಂಬ ಮಹತ್ವಾಕಾಂಕ್ಷೆ ಇದೆ. ನಾನು ನಿಮಿತ್ತ ಮಾತ್ರ. ಮೋದಿ ಪ್ರಧಾನಿಯನ್ನಾಗಿ ಮಾಡುವುದು ನನ್ನ ಗುರಿ. ಅದಕ್ಕೆ ನೀವು ನನ್ನನ್ನು ಪ್ರತಿನಿಧಿಯಾಗಿ ಆಯ್ಕೆ ಮಾಡಬೇಕು. ನಾನು ನಿಮ್ಮ ಮನೆಯ ಮಗನಾಗಿ, ಅಣ್ಣ, ತಮ್ಮನಂತೆ ಕೆಲಸ ಮಾಡುತ್ತೇನೆ. ಮೈಸೂರು- ಕೊಡಗು ಜಿಲ್ಲೆಗಳಿಂದ ಐದು ಮಂದಿಯ ಸಮಿತಿಯನ್ನು ನೀವೇ ರಚಿಸಿ. ನಿಮ್ಮ ಆಕಾಂಕ್ಷೆಗಳನ್ನು ಸಮಿತಿಗೆ ತಿಳಿಸಿ. ಅವರ ಮಾರ್ಗದರ್ಶನದಂತೆ ಕೆಲಸ ಮಾಡುತ್ತೇನೆ. ಪ್ರತಿ ವರ್ಷ ಸಂಸದರ ನಿಧಿಯ ಅನುದಾನ ಯಾವುದಕ್ಕೆ ವ್ಯಯಿಸಲಾಗಿದೆ ಎಂಬ ಲೆಕ್ಕವನ್ನು ನಾನು ನಿಮಗೆ ಕೊಡುತ್ತೇನೆ ಎಂದರು.
ಒಂದು ಅನಿರೀಕ್ಷಿತ ಸನ್ನಿವೇಶದಲ್ಲಿ ನನಗೆ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಘೋಷಿಸಲಾಯಿತು. ನಾನು ಎರಡೂ ಕೈಗಳನ್ನು ಚಾಚಿ ಸ್ವೀಕರಿಸಿದ್ದೇನೆ. ವೀರಪರಂಪರೆ ಮತ್ತು ದೇಶಭಕ್ತಿಗೆ ಹೆಸರಾದ ಕೊಡಗು ಮತ್ತು ಯದುವಂಶದ ಹಿನ್ನೆಲೆ ಹಾಗೂ ಕುವೆಂಪು, ಎಸ್.ಎಲ್. ಭೈರಪ್ಪ ಮತ್ತು ದೇವನೂರ ಮಹಾದೇವ ಅವರನ್ನು ಹೊಂದಿದ ಮೈಸೂರು ನನಗೆ ಬಹಳ ಪ್ರಿಯವಾಯಿತು. ಇಲ್ಲಿನ ಜನತೆಯನ್ನು ಪ್ರತಿನಿಧಿಸುವುದು ಹೆಮ್ಮೆ ಎನಿಸಿದೆ. ನೀವು ತಮ್ಮ ಮನೆಯ ಮಗ, ತಮ್ಮ ಸಹೋದರ ಎಂದು ಬೆಂಬಲಿಸುತ್ತೀರಿ ಎಂಬ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಾಜಿ ಸ್ಪೀಕರ್ ಕೆ.ಜೆ. ಬೋಪಯ್ಯ ಮಾತನಾಡಿ, ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಮಾತ್ರವಲ್ಲದೆ ಹಾಸನ ಲೋಕಸಭಾ ಕ್ಷೇತ್ರದಲ್ಲಿಯೂ ಬಿಜೆಪಿ ಚರಿತ್ರೆ ಬರೆಯಬೇಕು. ಹಳ್ಳಿಯ ಹಕ್ಕಿ (ಎಚ್. ವಿಶ್ವನಾಥ್) ಏನೇನೋ ಹೇಳುತ್ತಿದೆ. ಆದರೆ ಸಿಂಹದ ಮುಂದೆ ಏನೂ ನಡೆಯುವುದಿಲ್ಲ ಎಂದರು.
ಸಿಎಚ್ವಿಯಿಂದ ಅಭಿನಂದನೆ: ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಎಚ್. ವಿಜಯಶಂಕರ್ ಅವರು ಪ್ರತಾಪ್ ಸಿಂಹ ಅವರಿಗೆ ಹಾರ ಹಾಕಿ ಅಭಿನಂದಿಸಿದರು.
ಮಾಜಿ ಸಚಿವರಾದ ಸಿ.ಟಿ. ರವಿ, ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯರಾದ ಸಿದ್ದರಾಜು, ಗೋ. ಮಧುಸೂದನ್, ಶಾಸಕ ರವಿಸುಬ್ರಹ್ಮಣ್ಯ, ಪ್ರತಾಪ್ಸಿಂಹ ಅವರ ಪತ್ನಿ ಅರ್ಪಿತ, ಪುತ್ರಿ ವಿಪಂಚಿ, ಎಂಡಿಎ ಮಾಜಿ ಅಧ್ಯಕ್ಷ ಎಲ್.ನಾಗೇಂದ್ರ, ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ.ಪಿ. ಮಂಜುನಾಥ್, ವಿಧಾನ ಪರಿಷತ್ ಮಾಜಿ ಸದಸ್ಯರಾದ ಸಿ.ರಮೇಶ್, ತೋಂಟದಾರ್ಯ, ಜಿಪಂ ಮಾಜಿ ಉಪಾಧ್ಯಕ್ಷ ಡಾ.ಕೆ. ಶಿವರಾಂ, ನಗರ ಬಿಜೆಪಿ ಅಧ್ಯಕ್ಷ ಮಾರುತಿರಾವ್ ಪವಾರ್, ಪ್ರಧಾನ ಕಾರ್ಯದರ್ಶಿಗಳಾದ ಯಶಸ್ವಿನಿ ಸೋಮಶೇಖರ್, ಮಲ್ಲಪ್ಪಗೌಡ, ಪಾಲಿಕೆ ಸದಸ್ಯರಾದ ಎಂ.ಕೆ. ಶಂಕರ್, ಗಿರೀಶ್ ಪ್ರಸಾದ್, ಶಿವಕುಮಾರ್, ಮ.ವಿ. ರಾಮ್ಪ್ರಸಾದ್, ಸ್ನೇಕ್ ಶ್ಯಾಂ, ಮುಖಂಡರಾದ ಎಚ್.ವಿ. ರಾಜೀವ್, ಯು.ಎಸ್. ಶೇಖರ್, ಸುಜಾ ಕುಶಾಲಪ್ಪ, ರೀನಾ ಪ್ರಕಾಶ್, ನಗರ ಬಿಜೆಪಿ ಮಾಜಿ ಅಧ್ಯಕ್ಷ ಶಿವಕುಮಾರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

