ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರ ಸುತ್ತ ನಿಷೇಧಾಜ್ಞೆ ಜಾರಿ
ಮೈಸೂರು: ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಗರದ 54 ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯು ಮಾ.28 ರಿಂದ ಏ.9 ರವರೆಗೆ ನಡೆಯಲಿದ್ದು, ಈ ಎಲ್ಲ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ತಿಳಿಸಿದ್ದಾರೆ. ಬೆಳಗ್ಗೆ 6 ರಿಂದ ಸಂಜೆ 5 ರವರೆಗೆ ಪರೀಕ್ಷಾ ಕೇಂದ್ರಗಳ ಬಳಿ 200 ಮೀಟರ್ ವ್ಯಾಪ್ತಿ ಪ್ರದೇಶದ ಸುತ್ತಲೂ ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಬಳಿಯಿರುವ ಜೆರಾಕ್ಸ್ ಹಾಗೂ ಲೇಖನ ಸಾಮಗ್ರಿ ಅಂಗಡಿಗಳನ್ನು ಸಹ ಮುಚ್ಚಲು ಆದೇಶಿಸಿದ್ದಾರೆ. ಈ ಪ್ರದೇಶಗಳಲ್ಲಿ ಪರೀಕ್ಷಾರ್ಥಿಗಳು ಮತ್ತು ಪರೀಕ್ಷಾ ಸಿಬ್ಬಂದಿ ಹೊರತುಪಡಿಸಿ ಅನಧಿಕೃತ ವ್ಯಕ್ತಿಗಳು ಸಂಚರಿಸಬಾರದು ಹಾಗೂ ಯಾರೂ ಆಕ್ಷೇಪಾರ್ಹ ವಸ್ತುಗಳನ್ನು ಒಯ್ಯಬಾರದು ಎಂದು ಸೂಚಿಸಿದ್ದಾರೆ.
ಸರ್ಕಾರಿ ಆಸ್ತಿ ಕಬಳಿಸಲು ಬಿಡಲ್ಲ: ಮಲ್ಲೇಶ್
ಮೈಸೂರು: ಮಹಾರಾಣಿ ಮಾದರಿ ಕನ್ನಡ ಶಾಲೆಯನ್ನು ಉಳಿಸುವ ಮೂಲಕ ಕನ್ನಡ ಶಾಲೆಗಳನ್ನು ಮುಚ್ಚಲು ಬಿಡುವುದಿಲ್ಲ. ಹಾಗೆಯೇ ಸರ್ಕಾರಿ ಆಸ್ತಿಯನ್ನು ಪಟ್ಟಭದ್ರ ಹಿತಾಸಕ್ತಿಗಳು ಕಬಳಿಸಲು ಬಿಡುವುದಿಲ್ಲ ಎಂದು ಕನ್ನಡ ಕ್ರಿಯಾಸಮಿತಿ ಅಧ್ಯಕ್ಷ ಪ.ಮಲ್ಲೇಶ್ ಹೇಳಿದರು. ನಗರದ ಎನ್ಟಿಎಂ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಮಹಾರಾಣಿ ಮಾದರಿ ಕನ್ನಡ ಶಾಲೆಗೆ 130 ವರ್ಷಗಳ ಇತಿಹಾಸವಿದೆ. ಅದನ್ನು ಮುಚ್ಚಲು ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಈ ಶಾಲೆಗೆ ಹೆಚ್ಚೆಚ್ಚು ಪೋಷಕರು ತಮ್ಮ ಮಕ್ಕಳನ್ನು ಸೇರಿಸಿದರೆ ಯಾರಿಂದಲೂ ಶಾಲೆ ಮುಚ್ಚಲಾಗುವುದಿಲ್ಲ ಎಂದರು. ಪತ್ರಿಕೋದ್ಯಮಿ ರಾಜಶೇಖರ ಕೋಟಿ ಮಾತನಾಡಿ, ಈ ಐತಿಹಾಸಿಕ ಮಹತ್ವದ ಶಾಲೆಯನ್ನು ಉಳಿಸಿಕೊಳ್ಳುವ ಅಗತ್ಯದ ಬಗ್ಗೆ ಮನವರಿಕೆ ಮಾಡಿಕೊಟ್ಟು ಇನ್ನು ಮುಂದೆ ಪ್ರತಿ ವರ್ಷ ಶಾಲೆಯ ಎಲ್ಲ ಮಕ್ಕಳಿಗೂ ಆಂದೋಲನ ಪತ್ರಿಕೆಯಿಂದ ವಿದ್ಯಾರ್ಥಿ ವೇತನ ನೀಡುವುದಾಗಿ ತಿಳಿಸಿದರು.
ಸಮಸ್ಯೆ ಪರಿಹಾರಕ್ಕೆ ಕುರುಬರ ಆಗ್ರಹ
ಮೈಸೂರು: ಪರಿಶಿಷ್ಟ ವರ್ಗಕ್ಕೆ ಸೇರಿರುವ ಕುರುಬ ಸಮಾಜದ ಉಪಪಂಗಡಗಳ ಜನರು ಪಡೆದುಕೊಂಡಿರುವ ಜಾತಿ ಪ್ರಮಾಣ ಪತ್ರದ ಕುರಿತು ರಾಜ್ಯ ಸರ್ಕಾರದ ಎಲ್ಲ ಇಲಾಖೆ ಕೈಗೊಂಡಿರುವ ತನಿಖೆ ಕೈಬಿಡಬೇಕೆಂದು ರಾಜ್ಯ ಕಾಡು ಕುರುಬರ ಮತ್ತು ಜೇನು ಕುರುಬರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂ. ಶಿವಮಲ್ಲ ಸರ್ಕಾರವನ್ನು ಆಗ್ರಹಿಸಿದ್ದಾರೆ.ಕಾಂಗ್ರೆಸ್ ಸರ್ಕಾರದಿಂದ ಕುರುಬ ಸಮಾಜದ ಜನರಿಗೆ ದ್ರೋಹವಾಗಿದೆ. ಲೋಕಸಭಾ ಚುನಾವಣೆಗೆ ಮೊದಲು, ಅಂದರೆ ಮಾ.25 ರೊಳಗೆ ನಮ್ಮ ಸಮಸ್ಯೆ ಬಗೆಹರಿಸದಿದ್ದರೆ ಈ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ವಿರೋಧಿಸಲಿದ್ದೇವೆ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು. ಕುರುಬ ಸಮಾಜದ ಉಪಪಂಗಡಗಳಾದ ಕಾಡು ಕುರುಬ, ಜೇನು ಕುರುಬು, ಗೊಂಡ, ರಾಜಗೊಂಡ ಜನಾಂಗದವರಿಗೆ ನೀಡಿರುವ ಜಾತಿ ಪ್ರಮಾಣ ಪತ್ರದ ಸಾಚಾತನವನ್ನು ತನಿಖೆ ಮಾಡಲು ನಾಗರಿಕ ಹಕ್ಕು ಘಟಕ (ಸಿಆರ್ಇ ಸೆಲ್)ಗೆ ವಹಿಸಲಾಗಿದೆ. ಎಸ್ಸಿ, ಎಸ್ಟಿ ವರ್ಗದವರಿಗೆ ಆಗುತ್ತಿರುವ ದೌರ್ಜನ್ಯ ತಡೆಗಟ್ಟಲು ಇರುವ ಸಿಆರ್ಇ ಸೆಲ್ಗೆ ಈ ಕೆಲಸ ವಹಿಸಿರುವುದು ಸರಿಯಲ್ಲ. ಇವರು ಪೊಲೀಸರಂತೆ ವರ್ತಿಸುತ್ತಿದ್ದು, ಕುರುಬ ಸಮಾಜದ ಉಪಪಂಗಡದವರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿದರು.
ಭಾವಗೀತೆಗೆ ಬಹುಮಾನ...
ಮೈಸೂರಿನ ಮಲ್ಲಮ್ಮ ಮರಿಮಲ್ಲಪ್ಪ ಕಾಲೇಜಿನಲ್ಲಿ ನಡೆದ ಅಂತರಕಾಲೇಜು ಭಾವಗೀತೆ ಸ್ಪರ್ಧೆಯಲ್ಲಿ ಮೈಸೂರು ಮಕ್ಕಳ ಕೂಟ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಮಹಾವಿದ್ಯಾಲಯದ ಪ್ರಥಮ ಬಿ.ಕಾಂ ವಿದ್ಯಾರ್ಥಿನಿ ಕೆ.ಶ್ರೇಯಾ , ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿ ರಶ್ಮಿ ವಿ. ರಾವ್ ಭಾಗವಹಿಸಿ ಪ್ರಥಮ, 3ನೇ ಬಹುಮಾನ ಪಡೆದು, ಪರ್ಯಾಯ ಪಾರಿತೋಷಕ ಗೆದ್ದಿದ್ದಾರೆ. ಲಕ್ಷ್ಮೀಶಾಸ್ತ್ರಿ, ಪ್ರಾಂಶುಪಾಲ ಪ್ರೊ.ಕೆ.ವಿ. ದಾಮೋದರಗೌಡ, ಆರ್. ಅನುಪಮಾ ಇದ್ದಾರೆ.
ಮಹಿಳೆ ಮುಖ್ಯವಾಹಿನಿಗೆ ತರಲು ಮಾಧ್ಯಮ ಸಹಕಾರ ಅಗತ್ಯ
ಮೈಸೂರು: ಮಹಿಳೆಯರನ್ನು ಮುಖ್ಯವಾಹಿನಿಗೆ ತರಲು ಮಾಧ್ಯಮಗಳು ಸಹಕರಿಸಬೇಕು ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿದರು. ಕೀರ್ತಿ ಯುವತಿ ಮಹಿಳಾ ಸಂಸ್ಥೆಯು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಶನಿವಾರ ನಗರದ ರೋಟರಿ ಕೇಂದ್ರದಲ್ಲಿ ಏರ್ಪಡಿಸಿದ್ದ ಕವಿಗೋಷ್ಠಿ ಹಾಗೂ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಚಿಕ್ಕ ಚಿಕ್ಕ ವಿಷಯಗಳನ್ನು ದೊಡ್ಡದಾಗಿ ಬಿಂಬಿಸುವ ಮಾಧ್ಯಮಗಳು ಮಹಿಳೆಯರ ಸಾಧನೆಯ ಬಗ್ಗೆ ಗಮನ ಹರಿಸುತ್ತಿಲ್ಲ ಎಂದರು. 12ನೇ ಶತಮಾನದಲ್ಲಿ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಅಕ್ಕಮಹಾದೇವಿಗೆ ಪ್ರವೇಶ ನೀಡಿ ಮಹಿಳೆಯರಿಗೆ ಶಕ್ತಿ ನೀಡಿದ್ದರು. ನಂತರ ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ ಹೋರಾಟ ಮಹಿಳೆಯರಲ್ಲಿ ಕಿಚ್ಚು ತುಂಬಿತು ಎಂದು ಸ್ಮರಿಸಿದರು. ಇದೇ ವೇಳೆ ಸಮಾಜ ಸೇವಕರಾದ ಡಾ.ಎಂ. ದೇಜಮ್ಮ, ಶಾಮಲಾಮೂರ್ತಿ, ದಾಕ್ಷಾಯಿಣಿ ಉಮೇಶ್ ಅವರನ್ನು ಅಭಿನಂದಿಸಲಾಯಿತು.
ನಗರದಲ್ಲಿ ಚುನಾವಣೆ ಅಧಿಕಾರಿಗಳಿಗೆ ತರಬೇತಿ
ಮೈಸೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿಗಳಿಗೆ ನಗರದ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಚುನಾವಣಾ ತರಬೇತಿ ನೀಡಲಾಯಿತು. ಮೈಸೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಕೃಷ್ಣರಾಜ, ಚಾಮರಾಜ ಮತ್ತು ನರಸಿಂಹರಾಜ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಚುನಾವಣಾ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೊಳಿಸುವ ಸಲುವಾಗಿ ನಗರಪಾಲಿಕೆ ವತಿಯಿಂದ ಈ ತರಬೇತಿ ಹಮ್ಮಿಕೊಳ್ಳಲಾಗಿತ್ತು. ಮತಯಂತ್ರ ಕಾರ್ಯನಿರ್ವಹಣೆ, ಮತಗಟ್ಟೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ ಮತ್ತು ಸಿಬ್ಬಂದಿ ಪಾಲಿಸಬೇಕಾದ ಹಾಗೂ ಮಾಡಬೇಕಾದ ಕೆಲಸ ಕಾರ್ಯ ಸೇರಿದಂತೆ ಚುನಾವಣಾ ಹಾಗೂ ಮತದಾನ ಪ್ರಕ್ರಿಯೆ ಕುರಿತು ವಿಡಿಯೋ ಮತ್ತು ಪ್ರಾತ್ಯಕ್ಷಿಕೆ ಮೂಲಕ ವಿವರಿಸಲಾಯಿತು.
ಸತ್ಯನಾರಾಯಣರಾವ್ ಕಟ್ಟಡ ಉದ್ಘಾಟನೆ
ಮೈಸೂರು: ಮಾನಂದವಾಡಿ ರಸ್ತೆಯಲ್ಲಿರುವ ಎನ್ಐಇ ಕಾಲೇಜಿನಲ್ಲಿ ನಿರ್ಮಿಸಿರುವ ಪ್ರೊ.ಎಂ. ಸತ್ಯನಾರಾಯಣರಾವ್ ಕಟ್ಟಡವನ್ನು ಉದ್ಘಾಟಿಸಲಾಯಿತು. ಸುಮಾರು 1.4 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಕಟ್ಟಡವನ್ನು ಸ್ವತಃ ಸತ್ಯನಾರಾಯಣರಾವ್ ಅವರೇ ಉದ್ಘಾಟಿಸಿದರು. ಈ ಹಣದಲ್ಲಿ ಬೋಧಕ ವರ್ಗದವರು 75 ಲಕ್ಷ ದೇಣಿಗೆ ನೀಡಿದ್ದರು. ಎನ್ಐಇ ಅಧ್ಯಕ್ಷ ಎಂ. ಶ್ರೀಪಾದರಾವ್ ಜಾಗವನ್ನು ಉಚಿತವಾಗಿ ನೀಡಿದ್ದರು. ಪ್ರೊ.ಸತ್ಯನಾರಾಯಣರಾವ್ ಅವರು ಈ ಹಿಂದೆ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಒಂದು ಬಾರಿಗೆ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು. ನಗರದ ಪ್ರತಿಷ್ಠಿತ ಗೀತಾ ಬುಕ್ ಪ್ರಕಾಶನ ನಡೆಸುತ್ತಿದ್ದಾರೆ. ಎಂ.ಎ. ಸಂಪತ್ ಅಯ್ಯಂಗಾರ್, ಎಸ್.ಎಲ್. ರಾಮಚಂದ್ರ, ಎಸ್.ಕೆ. ಲಕ್ಷ್ಮೀನಾರಾಯಣ ಇದ್ದರು.
ವಿದ್ಯಾರ್ಥಿಗಳಿಗೆ ಮತದಾನದ ಅರಿವು
ನಂಜನಗೂಡು: ಮತದಾನ ನಮ್ಮ ಆದ್ಯ ಕರ್ತವ್ಯ ಹಾಗೂ ಹಕ್ಕು. ಆದ್ದರಿಂದ ಪ್ರತಿಯೊಬ್ಬರು ಅರ್ಹ ವ್ಯಕ್ತಿಗೆ ಮತ ಹಾಕುವಂತೆ ರಾಜ್ಯಶಾಸ್ತ್ರ ಉಪನ್ಯಾಸಕ ಬಿ.ಆರ್. ರವಿಕುಮಾರ್ ಕರೆ ನೀಡಿದರು. ಪಟ್ಟಣದಲ್ಲಿರುವ ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಸ್ವೀಪ್ ಯೋಜನೆಯಡಿ ಏರ್ಪಡಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೂರಕ್ಕೆ ನೂರರಷ್ಟು ಮತದಾನ ನಡೆಯುವಂತೆ ಜನರಲ್ಲಿ ಜಾಗೃತಿ ಮೂಡಿಸುವ ಹೊಣೆಗಾರಿಕೆ ಯುವಜನರ ಮೇಲಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಕೆ.ರಾಮಮೂರ್ತಿರಾವ್ ಮಾತನಾಡಿ, ಈ ಚುನಾವಣೆಗೆ 81.45 ಕೋಟಿಯಷ್ಟು ಮತದಾರರಿದ್ದು ಆ ಪೈಕಿ ಸುಮಾರು 9 ಕೋಟಿ ಹೊಸ ಮತದಾರರಿದ್ದಾರೆ. ಎಲ್ಲರೂ ಮತ ನೀಡುವುದರಿಂದ ಪ್ರಜಾಪ್ರಭುತ್ವ ಖಂಡಿತವಾಗಿ ಸದೃಢವಾಗುತ್ತದೆ ಎಂದು ತಿಳಿಸಿದರು.
ಜಾತಿಯ ಸಂಕೋಲೆ ಶ್ರೇಯಸಲ್ಲ: ನಾರಾಯಣಾಚಾರ್ಯ
ಮೈಸೂರು: ಮಹರ್ಷಿಯಾದ ಮೇಲೆ ಒಬ್ಬನಿಗೆ ಜಾತಿಯ ಸಂಕೋಲೆಯಲ್ಲಿ ಬಿಗಿಯುವುದು ಸಮಾಜಕ್ಕೂ ಹಾಗೂ ಸಮುದಾಯಕ್ಕೂ ಶ್ರೇಯಸ್ಕರವಲ್ಲ ಎಂದು ಧಾರ್ಮಿಕ ಚಿಂತಕ ಹಾಗೂ ಲೇಖಕ ಡಾ.ಕೆ. ನಾರಾಯಣಾಚಾರ್ಯ ಪ್ರತಿಕ್ರಿಯಿಸಿದ್ದಾರೆ. ನಾನು ಬರೆದ ವಾಲ್ಮೀಕಿ ಯಾರು ಎಂಬ ಪುಸ್ತಕವನ್ನು ಓದದೆ, ಪ್ರಮಾಣಗಳನ್ನು ಧಿಕ್ಕರಿಸಿ ಮೊಂಡತನದಿಂದ ಏನನ್ನೋ ಹೇಳುವುದು ಹಾಗೂ ಚಳವಳಿಗೆ ಗ್ರಾಸವಾದರೆ ಅದನ್ನು ಸಾಹಿತ್ಯೇತರ ಹಿತಾಸಕ್ತರ ಕೃತ್ಯ ಎನ್ನಬೇಕಾಗುತ್ತದೆ. ಯಾರಾದರೂ ನನ್ನ ಪುಸ್ತಕದ ಪ್ರಮಾಣಗಳನ್ನು ಇಲ್ಲವೆಂದು ತೋರಿಸಿದರೆ, ಬೇರೆ ಪುಸ್ತಕದಲ್ಲಿ ನಾನು ಸಮರ್ಥನೆ ಕೊಡಲು ಸಿದ್ಧ ಎಂದಿದ್ದಾರೆ. ಬೀದಿಗಿಳಿದು ಹೋರಾಟ ಮಾಡುವ ಪ್ರವೃತ್ತಿಗೆ, ಅದರ ದುಷ್ಪರಿಣಾಮಗಳಿಗೆ ಯಾರು ಹೊಣೆಯೋ ಅವರು ವಿಚಾರವಂತರಾಗಿ ವಿವೇಕ ಪಡೆಯುವುದು ಸೂಕ್ತ. ಶ್ರೀರಾಮಾಯಣವನ್ನು ವಾಲ್ಮೀಕಿ ಮಹರ್ಷಿ ಬರೆದ. ಇದರಲ್ಲಿ ತಪ್ಪೇನು? ವಾಲ್ಮೀಕಿ, ಶ್ರೀರಾಮ ಹಾಗೂ ಶ್ರೀರಾಮಾಯಣವನ್ನು ಬೇರ್ಪಡಿಸುವ ಶೋಚನೀಯ ಯತ್ನಕ್ಕೆ ತೆರೆಬಿದ್ದ ದಿನ ನಮ್ಮ ಸಮಾಜ ಹಾಗೂ ಸಂಸ್ಕೃತಿ ಉದ್ಧಾರ ಸಾಧ್ಯ ಎಂದಿದ್ದಾರೆ.
ಮರಡಿಹುಂಡಿಯಲ್ಲಿ ದಾಳಕೇಶ್ವರ ಅದ್ಧೂರಿ ಜಾತ್ರೆ
ಸುತ್ತೂರು: ನಂಜನಗೂಡು ತಾಲೂಕು ಮರಡಿಹುಂಡಿ ಗ್ರಾಮದಲ್ಲಿ ದಾಳಕೇಶ್ವರಸ್ವಾಮಿ ಹಾಗೂ ಕಾಳಮ್ಮನವರ ದೇವಸ್ಥಾನಗಳ ಜೀರ್ಣೋದ್ಧಾರದ ಉದ್ಘಾಟನಾ ಸಮಾರಂಭ ಅಂಗವಾಗಿ ಕಾಳಮ್ಮನವರ ಕೋಲು ತರುವ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಹೋದರ ಸಿದ್ದೇಗೌಡ ಮಾತನಾಡಿ, ಗ್ರಾಮಗಳಲ್ಲಿ ಜನರ ಶಾಂತಿ ನೆಲೆಸಲು ಹಾಗೂ ಎಲ್ಲರೂ ಸಂತೋಷದಿಂದ ಬಾಳಲು ಹಬ್ಬ ಹರಿದಿನಗಳನ್ನು ನಡೆಸುವಂತೆ ಕಿವಿಮಾತು ಹೇಳಿದರು. ಮುಖಂಡರಾದ ಶಿವಣ್ಣ, ಬುಲೆಟ್ ಮಹದೇವು, ಗ್ರಾಪಂ ಮಾಜಿ ಅಧ್ಯಕ್ಷ ನಾಗೇಂದ್ರ, ಮಸಣೇಗೌಡ, ರಾಮಣ್ಣ, ಚಿನ್ನಸ್ವಾಮಿ, ಪುಟ್ಟಸಣ್ಣಗೌಡ, ಎಂ.ಎಸ್. ಕುಮಾರ್ ಇದ್ದರು. ಮೆರವಣಿಗೆಯು ಅಕ್ಕಪಕ್ಕದ ಗ್ರಾಮಗಳಾದ ಸಿದ್ದರಾಮನಹುಂಡಿ, ವರಕೋಡು, ಕಡಕೊಳ ಇನ್ನಿತರ ಕಡೆ ಸಂಚರಿಸಿತು.
ಬೀದಿ ನಾಟಕ ತರಬೇತಿ
ಮೈಸೂರು: ವಿಶ್ವ ಜಲ ದಿನಾಚರಣೆ ಅಂಗವಾಗಿ ಪರಿಸರ ಸಂರಕ್ಷಣೆ ಕುರಿತಂತೆ ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಯ ಯುವಕ- ಯುವತಿಯರಿಗೆ ಬೀದಿ ನಾಟಕ ತರಬೇತಿ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಆರ್ಎಲ್ಎಚ್ಪಿ ಸಂಸ್ಥೆ ನಡೆಸುತ್ತಿರುವ ಟಿ.ನರಸೀಪುರ ತಾಲೂಕಿನ ಇನಾಂ ಉತ್ತನಹಳ್ಳಿಯ ಆಶಾಕಿರಣ ಗಂಡು ಮಕ್ಕಳ ಕೇಂದ್ರದಲ್ಲಿ ರಂಗಾಯಣ ನಿರ್ದೇಶಕ ಎಚ್. ಜನಾರ್ದನ್ ಶಿಬಿರಕ್ಕೆ ಚಾಲನೆ ನೀಡಿದರು. ಕಲಾವಿದರಾದ ಮೈಮ್ ರಮೇಶ್ ಕೃಷ್ಣಪ್ರಸಾದ್ ತರಬೇತಿ ನೀಡುವರು. ಗ್ರಾಮದ ಯುವಜನ ಮಾಹಿತಿ ವಿನಿಮಯ ಗುಂಪಿನ 20 ಯುವಕ- ಯುವತಿಯರು ಶಿಬಿರದಲ್ಲಿ ಪಾಲ್ಗೊಂಡಿದ್ದರು. ಸಹ ನಿರ್ದೇಶಕಿ ಲಿಲ್ಲಿ, ಟಿಡಿಎಚ್ ಅಧಿಕಾರಿ ವಿದ್ಯಾ ಸೆಲ್ವಿಮಣಿ ಭಾಗವಹಿಸಿದ್ದರು.
ಹುಣಸೂರಿಗೆ ಸಿಎಂ ಸಿದ್ದು ಭೇಟಿ ಇಂದು
ಹುಣಸೂರು: ಲೋಕಸಭಾ ಚುನಾವಣೆ ಅಂಗವಾಗಿ ಪಟ್ಟಣದ ಮುನೇಶ್ವರ ಕಾವಲ್ ಮೈದಾನದಲ್ಲಿ ಮಾ.23ರಂದು ಬಹಿರಂಗ ಸಭೆ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶರ್ ಭಾಗವಹಿಸಿ ಚುನಾವಣಾ ಪ್ರಚಾರ ಮಾಡುವರು ಎಂದು ಶಾಸಕ ಎಚ್.ಪಿ. ಮಂಜುನಾಥ್ ಹೇಳಿದರು. ಕಳೆದ ಎಂಟು ತಿಂಗಳ ಅವಧಿಯಲ್ಲಿ ತಾಲೂಕಿಗೆ 400 ಕೋಟಿಗೂ ಹೆಚ್ಚು ಅಭಿವೃದ್ಧಿ ಕಾಮಗಾರಿ ಮಂಜೂರು ಮಾಡಿರುವ ಮುಖ್ಯಮಂತ್ರಿಗಳನ್ನು ಇದೇ ವೇಳೆ ಅಭಿನಂದಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್, ಸಚಿವರಾದ ಎಚ್.ಎಚ್. ಮಹದೇವಪ್ರಸಾದ್, ಡಾ.ಎಚ್.ಸಿ. ಮಹದೇವಪ್ಪ. ಡಿ.ಕೆ.ಶಿವಕುಮಾರ್, ಕೆ.ಜೆ.ಜಾರ್ಜ್, ಮಾಜಿ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂ, ಸಂಸದ ಎಚ್. ವಿಶ್ವನಾಥ್, ಕೆಪಿಸಿಸಿ ಸದಸ್ಯರಾದ ಪ್ರೇಮಕುಮಾರ್, ಬಿಳಿಕೆರೆ ಮಂಜು, ಕೆ.ವೆಂಕಟೇಶ್, ಜಿಲ್ಲಾಧ್ಯಕ್ಷ ಆರ್.ಧರ್ಮಸೇನ ಭಾಗವಹಿಸುವರು ಎಂದು ಹೇಳಿದರು. ತಾಲೂಕು ಕಾಂಗ್ರೆಸ್ ಅಧ್ಯಕ್ಷ ಬಿಳಿಕೆರೆ ಬಸವರಾಜು, ಕಾರ್ಯದರ್ಶಿ ಖಾಲಿದ್, ತಾಪಂ ಮಾಜಿ ಸದಸ್ಯ ದೇವರಾಜ್, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಪ್ರೋಜ್ಅಹಮದ್, ರಮೇಶ್ ಇದ್ದರು.
ಲಂಚ ಪಡೆದ ಸೆಸ್ಕ್ ಸಹಾಯಕನಿಗೆ 1 ವರ್ಷ ಜೈಲು
ಮೈಸೂರು: ವಿದ್ಯುತ್ ಬಿಲ್ ನಕಲು ನೀಡಲು ಲಂಚ ಸ್ವೀಕರಿಸಿದ್ದ ಸೆಸ್ಕ್ ಸಹಾಯಕನಿಗೆ ನ್ಯಾಯಾಲಯವು 1 ವರ್ಷ ಜೈಲು ಶಿಕ್ಷೆ ವಿಧಿಸಿ ಶನಿವಾರ ತೀರ್ಪು ನೀಡಿದೆ. ಸೆಸ್ಕ್ ವರುಣ ವಿಭಾಗೀಯ ಕಚೇರಿಯ ಸಹಾಯಕ ಎಂ. ಸಿದ್ದರಾಜು ಶಿಕ್ಷೆಗೆ ಗುರಿಯಾದವನು. ಇವರ ವಿರುದ್ಧ ಮೈಸೂರು ತಾಲೂಕು ಮೂಡಲಹುಂಡಿ ಗ್ರಾಮದಲ್ಲಿ ಹಲ್ಲರ್ ಫ್ಲೋರ್ ಮಿಲ್ ಇರಿಸಿಕೊಂಡಿರುವ ಎಂ.ರಾಜು ಎಂಬವರು ದೂರು ನೀಡಿದ್ದರು. ಜಿಲ್ಲಾ ಕೈಗಾರಿಕಾ ಕೇಂದ್ರದವರು 3,500 ರಿಯಾಯಿತಿಗೆ 2 ವರ್ಷಗಳಿಂದ ಹಲ್ಲರ್ ಫ್ಲೋರ್ ಮಿಲ್ ನಡೆಸುತ್ತಿರುವ ಬಗ್ಗೆ ವಿದ್ಯುತ್ ಬಿಲ್ ಹಾಜರುಪಡಿಸಲು ತಿಳಿಸಿದ್ದರು. ಹೀಗಾಗಿ 2006-07 ಮತ್ತು 2007- 08ನೇ ಸಾಲಿನ ಬಿಲ್ಗಳು ಕಳೆದು ಹೋಗಿದ್ದರಿಂದ ಡೂಪ್ಲಿಕೇಟ್ ರಸೀದಿಗಾಗಿ ಸಿದ್ದರಾಜು ಅವರಿಗೆ ರಾಜು ಅರ್ಜಿ ಸಲ್ಲಿಸಿದ್ದರು. ನಕಲು ಪ್ರತಿ ನೀಡಲು ಶುಲ್ಕ 50 ಮತ್ತು ತನಗೆ 450 ಸೇರಿ ಒಟ್ಟು 500 ನೀಡದರೇ ರಸೀದಿ ಕೊಡುವುದಾಗಿ ಸಿದ್ದರಾಜು ತಿಳಿಸಿದ್ದರು. ಈ ಸಂಬಂಧ 2008ರ ಜೂ.16 ರಂದು ರಾಜು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಆಗಿನ ಇನ್ಸ್ಪೆಕ್ಟರ್ ಡಿ. ಜಯರಾಮ ಅವರು ಮೊಕದ್ದಮೆ ದಾಖಲಿಸಿಕೊಂಡು, ಹಣದ ಸಮೇತ ಟ್ರ್ಯಾಪ್ ಮಾಡಿ, ತನಿಖೆ ಪೂರೈಸಿದ್ದರು.
ಸಿಐಐ ಕಾರ್ಯಚಟುವಟಿಕೆಗಳಿಗೆ ಸ್ಯಾಮ್ ಪಿತ್ರೋಡ ಬೆಂಬಲ
ಮೈಸೂರು: ಭಾರತೀಯ ಕೈಗಾರಿಕಾ ಒಕ್ಕೂಟವು ಕೈಗೆತ್ತಿಕೊಂಡಿರುವ ಮಾಹಿತಿ ತಂತ್ರಜ್ಞಾನ, ಆರೋಗ್ಯ ರಕ್ಷಣೆ ಹಾಗೂ ಎಲೆಕ್ಟ್ರಾನಿಕ್ಸ್ ಉತ್ಪಾದನಾ ವಲಯದ ಅಭಿವೃದ್ಧಿಗೆ ಜ್ಞಾನ ಆಯೋಗದ ಮಾಜಿ ಅಧ್ಯಕ್ಷ ಸ್ಯಾಮ್ ಪಿತ್ರೋಡ ಬೆಂಬಲ ಸೂಚಿಸಿದ್ದಾರೆ. ಸಿಐಐ ಮೈಸೂರು ಶಾಖೆಯ ಶನಿವಾರ ಏರ್ಪಡಿಸಿದ್ದ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೈಸೂರು ನಗರವು ದೇಶದ ಜ್ಞಾನ ನಗರವಾಗುವುದರಲ್ಲಿ ಸಂಶಯವಿಲ್ಲ. ಇಲ್ಲಿ ಐಟಿ, ಎಲೆಕ್ಟ್ರಾನಿಕ್ಸ್, ಟೆಲಿಕಮ್ಯೂನಿಕೇಷನ್ ಸೇರಿದಂತೆ ಇನ್ನಿತರ ವಲಯಗಳ ಬೆಳವಣಿಗೆಗೆ ಪೂರಕ ವಾತಾವರಣವಿದೆ ಎಂದರು. ನಾವು 80 ಬಿಲಿಯನ್ ಡಾಲರ್ ಮೌಲ್ಯದಷ್ಟು ಎಲೆಕ್ಟ್ರಾನಿಕ್ಸ್ ಹಾರ್ಡ್ವೇರ್ ಅನ್ನು ಆಮದು ಮಾಡಿಕೊಳ್ಳುತ್ತಿದ್ದು, 100 ಮಿಲಿಯನ್ ಡಾಲರ್ ಮೌಲ್ಯದಷ್ಟು ಸಾಫ್ಟ್ವೇರ್ ಅನ್ನು ರಫ್ತು ಮಾಡಲು ಶಕ್ತರಾಗಿದ್ದೇವೆ. ಮುಂದಿನ 5 ರಿಂದ 10 ವರ್ಷಗಳಲ್ಲಿ ಗುಣಮಟ್ಟದ ಬಿಡಿ ಭಾಗಗಳು, ಕುಡಿಯುವ ನೀರು, ಸಮರ್ಪಕ ವಿದ್ಯುತ್ ಸಂಪರ್ಕ ಹೊಂದಲಿದ್ದೇವೆ ಎಂದರು.
ಪಟ್ಲದಮ್ಮ ದೇವಿಯ ವಾರ್ಷಿಕೋತ್ಸವ
ಹುಣಸೂರು: ಪಟ್ಟಣದ ಚಿಕ್ಕ ಹುಣಸೂರಿನ ಶ್ರೀ ಪಟ್ಲದಮ್ಮ ದೇವಿಯ 13ನೇ ವಾರ್ಷಿಕೋತ್ಸವದ ಅಂಗವಾಗಿ ಕಳೆದ ಮೂರು ದಿನಗಳಿಂದ ಗ್ರಾಮದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿತು. ಚಿಕ್ಕಹುಣಸೂರಿಗೆ ಸಮೀಪದ ಹಳೆಯೂರಿನ ಗದ್ದೆ ಬಯಲಿನಲ್ಲಿರುವ ಪಟ್ಲದಮ್ಮ ದೇವಾಲಯದಲ್ಲಿ ಶುಕ್ರವಾರ ನಡೆದ ವಿಶೇಷ ಪೂಜಾ ಕೈಂಕರ್ಯದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ನೂರಾರು ಮಂದಿ ಹರಕೆ ಸಲ್ಲಿಸಿದರು. ವಾರ್ಷಿಕೋತ್ಸವದ ಅಂಗವಾಗಿ ಸೋಮವಾರ ಚಿಕ್ಕಹುಣಸೂರಿನಲ್ಲಿ ಕೋಟೇಶ್ವರಸ್ವಾಮಿಯ ಮೆರವಣಿಗೆ ನಡೆಸಿದರು. ಹಳೆ ಚಿಕ್ಕ ಹುಣಸೂರಿನಿಂದ ಹೊರಟ ಒಕುಳಿ ಮೆರವಣಿಗೆಯಲ್ಲಿ ಚಿಕ್ಕಹುಣಸೂರಿನ ಪ್ರತಿ ಬೀದಿಗಳಲ್ಲಿ ನಡೆಸಿದರು. ನಂತರ ಗ್ರಾಮದಲ್ಲಿ ಶ್ರೀಕನ್ನಂಬಾಡಿ ದೇವಿಗೆ ತಂಬಿಟ್ಟು ಆರತಿಯನ್ನು ತಲೆ ಮೇಲೆ ಹೊತ್ತು ತಂದು ಅರ್ಪಿಸಿದರು. ಶುಕ್ರವಾರದಂದು ದೇವಾಲಯ ಆವರಣದಲ್ಲಿ ನಡೆದ ಪೂಜಾ ಕೈಂಕರ್ಯದಲ್ಲಿ ಶಾಸಕರಾದ ಎಚ್.ಪಿ. ಮಂಜುನಾಥ್, ಎಸ್. ಚಿಕ್ಕಮಾದು, ಮಾಜಿ ಶಾಸಕ ಪಾಪಣ್ಣ, ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ, ಪುರಸಭಾ ಸದಸ್ಯೆ ಸುನಿತಾ ಜಯರಾಮೇಗೌಡ ಭಾಗವಹಿಸಿದ್ದರು.
ಪಟ್ಟಣ ಪಂಚಾಯ್ತಿ ಸದಸ್ಯ ರಾಜಿನಾಮೆ
ಪಿರಿಯಾಪಟ್ಟಣ: ಪಟ್ಟಣ ಪಂಚಾಯ್ತಿ ವಾರ್ಡ್ ನಂ.3ರ ಕಾಂಗ್ರೆಸ್ ಪಕ್ಷದ ಪಪಂ ಸದಸ್ಯ ಸಣ್ಣಪ್ಪನಾಯಕ ತಮ್ಮ ವೈಯಕ್ತಿಕ ಕಾರಣ ಹಾಗೂ ಪಕ್ಷದ ಮುಖಂಡರ ಧೋರಣೆಯಿಂದ ಬೇಸತ್ತು ಪಪಂ ಸದಸ್ಯತ್ವಕ್ಕೆ ರಾಜಿನಾಮೆ ನೀಡಿರುವುದಾಗಿ ಹೇಳಿದ್ದಾರೆ. ತಾವು ಮೂಲ ಕಾಂಗ್ರೆಸ್ಸಿಗರಾಗಿದ್ದು, ಹಿಂದಿನಿಂದಲೂ ಉತ್ತಮ ಸ್ಥಾನಮಾನದಿಂದ ವಂಚಿತರಾಗುತ್ತಲೇ ಬಂದಿದ್ದೇನೆ. ಪಪಂ ಸದಸ್ಯನಾಗಿ ಆಯ್ಕೆಯಾದ ನಂತರ ತಾವು ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದರೂ ಮೂಲ ಕಾಂಗ್ರೆಸ್ಸಿಗನಾದ ನನ್ನನ್ನು ಬಿಟ್ಟು, ಮತ್ತೊಬ್ಬರಿಗೆ ಪಕ್ಷದ ಮುಖಂಡರು ಉಪಾಧ್ಯಕ್ಷ ಸ್ಥಾನ ನೀಡಿದ್ದು, ನೋವುಂಟು ಮಾಡಿದೆ. ಹೀಗಾಗಿ ತಾವು ತಮ್ಮ ಸದಸ್ಯತ್ವಕ್ಕೆ ರಾಜಿನಾಮೆ ನೀಡಿರುವುದಾಗಿ ಕನ್ನಡಪ್ರಭಕ್ಕೆ ತಿಳಿಸಿದರು. ಪ್ರಸ್ತುತ ತಾವು ರಾಜಿನಾಮೆ ನೀಡಿದ್ದರೂ ಕಾಂಗ್ರೆಸ್ಸಿನಲ್ಲಿಯೇ ಇದ್ದೇನೆ. ಮುಂದಿನ ದಿನಗಳಲ್ಲಿ ತಮ್ಮ ಬೆಂಬಲಿಗರ ಹಾಗೂ ವಾರ್ಡ್ನ ಮತದಾರರ ತೀರ್ಮಾನದಂತೆ ರಾಜಕೀಯವಾಗಿ ಮುಂದಿನ ಹೆಜ್ಜೆ ಇಡುವುದಾಗಿ ತಿಳಿಸಿದರು.
ಖಾಸಗಿ ದಂಧೆಗೆ ಅವಕಾಶ ನೀಡಬೇಡಿ: ದೇವನೂರ
ಮೈಸೂರು: ಕನಿಷ್ಠ ಪ್ರಾಥಮಿಕ ಶಿಕ್ಷಣದಲ್ಲಿಯಾದರೂ ಖಾಸಗಿ ದಂಧೆಗೆ ಸರ್ಕಾರ ಅವಕಾಶ ನೀಡಬಾರದು ಎಂದು ಸಾಹಿತಿ ದೇವನೂರ ಮಹಾದೇವ ಹೇಳಿದರು. ಮೈಸೂರು ವಿವಿಯ ಕಾಫರ್ಡ್ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ವಿವಿಯ 94ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಸ್ವೀಕರಿಸಿದ ಅವರು ಮಾತನಾಡಿದರು. ಇಂದು ಶಿಕ್ಷಣ ಕ್ಷೇತ್ರವು ಲಾಭರಹಿತ ಅನುತ್ಪಾದಕ ವಲಯವಾಗಿ ಕಾಣುತ್ತಿದೆ. ಇದಕ್ಕನುಗುಣವಾಗಿ ನಮ್ಮ ಸರ್ಕಾರಗಳು ಶಿಕ್ಷಣ ಕ್ಷೇತ್ರವನ್ನೂ ಖಾಸಗಿಯ ಬಾಯಿಗೆ ಹಾಕುತ್ತಾ, ದುಡ್ಡು ಮಾಡುವ ದಂಧೆಯನ್ನಾಗಿಸಿ ಬಿಟ್ಟಿದೆ. ಇದು ಉದ್ಧಾರವೇ ಅಥವಾ ಅಧಃಪತನವೇ ಎಂದು ವಿದ್ಯಾವಂತ ಸಮುದಾಯ ಉತ್ತರಿಸಬೇಕು ಎಂದರು. ನಮ್ಮ ಸರ್ಕಾರಗಳು ಕಷ್ಟವಾದರೂ ಧೈರ್ಯಮಾಡಿ ಕನಿಷ್ಠ 8ನೇ ತರಗತಿಯವರೆಗಾದರೂ ಖಾಸಗಿ ದಂಧೆಗೆ ಅವಕಾಶ ನೀಡಬಾರದು. ಸಾರ್ವಜನಿಕ ಸಮೀಪ ಸಮಾನ ಶಾಲೆ ಶಿಕ್ಷಣ ಪದ್ಧತಿಯ ಮೂಲಕ ನಾಳಿನ ಭಾರತದ ಪ್ರಜೆಗಳನ್ನು ರೂಪಿಸಬೇಕು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

