ಮೂರು ಕಾಸಿನ ಒಪ್ಪಂದ ಪಾಕ್ ಆಕ್ರಮಿತ ಕಾಶ್ಮೀರ 'ಕೈ' ಬಿಟ್ಟಿತು
ಪಿರಿಯಾಪಟ್ಟಣ: ಇಂದಿರಾಗಾಂಧಿ ಅವರು ಪ್ರಧಾನಿಯಾಗಿದ್ದಾಗ ಭಾರತದ ಸೈನಿಕರು ಸೆರೆಹಿಡಿದಿದ್ದ 90 ಸಾವಿರ ಪಾಕಿಸ್ತಾನಿ ಸೈನಿಕರನ್ನು ಬಿಡುಗಡೆ ಮಾಡದೆ, ಅಂದಿನ ಪಾಕಿಸ್ತಾನದ ಪ್ರಧಾನಿಗೆ ಆಕ್ರಮಿತ ಕಾಶ್ಮೀರ ಪ್ರದೇಶದಿಂದ ಹಿಂದೆ ಹೋದಲ್ಲಿ ಮಾತ್ರ ಸೈನಿಕರನ್ನು ಬಿಡುಗಡೆ ಮಾಡುವ ಪ್ರಸ್ತಾವನೆ ಇಟ್ಟಿದ್ದರೆ, ಆಕ್ರಮಿತ ಕಾಶ್ಮೀರ ಉಳಿಯುತ್ತಿತ್ತು ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಏರ್ಪಡಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಅಂದು ಮೂರು ಕಾಸಿನ ಒಪ್ಪಂದ ಮಾಡಿಕೊಂಡು ಸುಮ್ಮನಾದರು ಎಂದು ಕಾಂಗ್ರೆಸ್ ಆಡಳಿತದ ಇತಿಹಾಸದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ 7 ತಿಂಗಳಲ್ಲಿ 17 ನೌಕಾ ಅವಘಡಗಳು ಸಂಭವಿಸಿವೆ. ನೌಕಾ ಪಡೆಗಳು ಹಿಂದಿನಿಂದಲೂ ಸುಧಾರಿತ ಶಸ್ತ್ರಗಳನ್ನು ಯಂತ್ರೋಪಕರಣಗಳನ್ನು ಒದಗಿಸುವಂತೆ ಕೇಳುತ್ತಿವೆ. ಅದನ್ನು ಪೂರೈಸುವುದನ್ನು ಬಿಟ್ಟು, ಕಾಂಗ್ರೆಸ್ ನೇತೃತ್ವದ ಸರ್ಕಾರ ನೌಕಾಪಡೆಯ ಮುಖ್ಯಸ್ಥರ ಮೇಲೆಯೇ ಕ್ರಮ ಕೈಗೊಳ್ಳುತ್ತಿರುವುದು ಸರಿಯೇ ಎಂದು ಪ್ರಶ್ನಿಸಿದರು.
ದೇಶದಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅಲೆ ಎದ್ದಿದ್ದು, ಸುನಾಮಿಯಾಗಿ ರೂಪುಗೊಂಡಿದೆ. ನಮ್ಮದು ಸಂಸದೀಯ ವ್ಯವಸ್ಥೆಯಾಗಿದ್ದು, ನೇರವಾಗಿ ಪ್ರಧಾನಿಯನ್ನು ಆಯ್ಕೆ ಮಾಡಲು ಅಸಾಧ್ಯ. ಆದರೂ ಮುಂದಿನ ಪ್ರಧಾನಿ ನರೇಂದ್ರ ಮೋದಿ ಎಂದು ದೇಶವೇ ಕೂಗಿ ಹೇಳುತ್ತಿದೆ. ಮೋದಿ ಅವರಿಗೆ ಮಾತ್ರ ದೇಶವನ್ನು ಮುಂದಕ್ಕೆ ಕೊಂಡೊಯ್ಯುವ ಸಾಮರ್ಥ್ಯವಿದೆ ಎಂದು ಸಮರ್ಥಿಸಿಕೊಂಡರು.
ಬರವಣಿಗೆ ಮುಂದುವರಿಸುವೆ: ನಾನು ಕೇವಲ ಬಿಜೆಪಿ ಅಭ್ಯರ್ಥಿ ಹಾಗೂ ನಾನು ಚುನಾವಣೆಗೆ ನಿಂತಿರುವುದು ಕ್ಷೇತ್ರದ ಜನರ ಸೇವೆ ಹಾಗೂ ದೇಶವನ್ನು ಮುನ್ನಡೆಸುವಂತಹ ಮೋದಿ ಅವರಿಗೆ ಬೆಂಬಲ ಸೂಚಿಸುವ ಸಲುವಾಗಿ. ಹೀಗಾಗಿ ನಾನು ಯಾವುದೇ ಪಕ್ಷದ ಅಭ್ಯರ್ಥಿಗಳನ್ನು ಟೀಕಿಸಲು, ದ್ವೇಷ ರಾಜಕಾರಣ ಮಾಡಲು ಸ್ಪರ್ಧೆಗೆ ನಿಂತಿಲ್ಲ. ನಾನು ಪತ್ರಕರ್ತನಾಗಿ ಅಂಕಣಕಾರರಾಗಿದ್ದು, ಚುನಾವಣೆಯ ನಂತರ ಬರವಣಿಗೆಯನ್ನು ಮುಂದುವರಿಸುತ್ತೇನೆ ತಿಳಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಮೇದಪ್ಪ ಮಾತನಾಡಿ, ಸಂಸದ ಎಚ್. ವಿಶ್ವನಾಥ್ ಒಬ್ಬ ಅಪ್ರಯೋಜಕನಾಗಿದ್ದು, ಅವರ ಬಗ್ಗೆ ಮಾತನಾಡಲು ಇಚ್ಛಿಸುವುದಿಲ್ಲ. ಪ್ರಸ್ತುತ ಬಿಜೆಪಿ ಉತ್ತಮ ಅಭ್ಯರ್ಥಿಯನ್ನು ನೀಡಿರುವ ಬಗ್ಗೆ ಸಾರ್ವಜನಿಕರಲ್ಲಿ ಮೆಚ್ಚುಗೆ ಕೇಳಿ ಬರುತ್ತಿದ್ದು, ಪಕ್ಷದ ಕಾರ್ಯಕರ್ತರು ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವಂತೆ ಮನವಿ ಮಾಡಿದರು.
ಪಕ್ಷದ ಜಿಲ್ಲಾಧ್ಯಕ್ಷ ಹೇಮಂತ್ಕುಮಾರ್ಗೌಡ, ತಾಲೂಕು ಅಧ್ಯಕ್ಷ ಆರ್.ಟಿ. ಸತೀಶ್ ಮಾತನಾಡಿದರು.
ಕಾರ್ಯಕ್ರಮದ ನಂತರ ಪಕ್ಷದ ರಾಜ್ಯ ಕಾರ್ಯಕಾರಿಣಿ ಸದಸ್ಯ ಪಿ.ವಿ. ಬಸವರಾಜಪ್ಪ ಹಾಗೂ ಈ ಹಿಂದೆ ಪಕ್ಷದಲ್ಲಿದ್ದು ಕಾಂಗ್ರೆಸ್ಗೆ ಸೇರ್ಪಡೆಗೊಂಡಿದ್ದ ನಿರಂಜನಮೂರ್ತಿ, ತಟಸ್ಥವಾಗಿ ಉಳಿದಿದ್ದ ನಾರಾಯಣರಾವ್ ಸೇರಿದಂತೆ ಮತ್ತಿತರರ ಮನೆಗಳಿಗೆ ಭೇಟಿ ನೀಡಿ ಪಕ್ಷಕ್ಕೆ ಮರಳುವಂತೆ ಹಾಗೂ ಬೆಂಬಲ ನೀಡುವಂತೆ ಮನವಿಮಾಡಿದರು.
ಪಕ್ಷದ ಪದಾಧಿಕಾರಿಗಳಾದ ಪಿ.ವಿ. ಬಸವರಾಜಪ್ಪ, ಎಂ.ಎಂ. ರಾಜೇಗೌಡ, ಅಣ್ಣಯ್ಯನಾಯಕ, ಪುಟ್ಟಸ್ವಾಮಿ, ಪ್ರಸನ್ನಕೇಶವ, ಲೋಕಪಾಲಯ್ಯ, ಕೆ.ಕೆ. ಶಶಿ, ವಿಕ್ರಂರಾಜ್, ಕೃಷ್ಣ, ಎಸ್.ಟಿ. ಕೃಷ್ಣಪ್ರಸಾದ್, ಸೋಹನ್ಕುಮಾರ್, ಶಿವರಾಂ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

