ಮೈಸೂರು

ಸರ್ವರನ್ನೂ ಸಮಾನರಾಗಿ ಕಂಡ ಮತದಾರ

Published On :

ಮೈಸೂರು: ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಮತದಾರರು ಯಾವುದೇ ಒಂದು ಜಾತಿಗೆ ಸೀಮಿತವಾಗಿಲ್ಲ. ಎಲ್ಲಾ ಜಾತಿ, ಜನಾಂಗದವರನ್ನು ಗೆಲ್ಲಿಸಿಕೊಂಡು ಬರುತ್ತಿದ್ದಾರೆ.
ಮೈಸೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 16,77,428  ಮತದಾರರಿದ್ದಾರೆ. ಇವರಲ್ಲಿ 8,44,767 ಪುರುಷರು, 8,32,661 ಮಹಿಳೆಯರು. ಯಾವ್ಯಾವ ಜಾತಿಯವರು ಎಷ್ಟೆಷ್ಟು ಇದ್ದಾರೆ ಎಂಬುದನ್ನು ಯಾರೂ ನಿಖರವಾಗಿ ಹೇಳಲಾಗುವುದಿಲ್ಲ. ಆದರೂ ಒಂದು ಅಂದಾಜಿನ ಪ್ರಕಾರ ಒಕ್ಕಲಿಗರು- 3.80 ಲಕ್ಷ, ಮುಸ್ಲಿಮರು- 2.40 ಲಕ್ಷ, ಪ.ಜಾತಿ- 2.20 ಲಕ್ಷ, ಕುರುಬರು- 1.60 ಲಕ್ಷ, ಇತರೆ ಹಿಂದುಳಿದ ವರ್ಗ- 1.30 ಲಕ್ಷ, ಪ.ವರ್ಗ- 1.32ಲಕ್ಷ, ವೀರಶೈವರು- 1.10 ಲಕ್ಷ, ಕೊಡವರು- 1 ಲಕ್ಷ, ಬ್ರಾಹ್ಮಣರು- 80,000, ಕ್ರಿಶ್ಚಿಯನ್ನರು- 50,000 ಇದ್ದಾರೆ ಎಂದು ಹೇಳಲಾಗುತ್ತಿದೆ.
1952 ರಲ್ಲಿ ಮೈಸೂರು ದ್ವಿಸದಸ್ಯ ಕ್ಷೇತ್ರವಾಗಿತ್ತು. ಆಗ ವೀರಶೈವರಾದ ಎಂ.ಎಸ್. ಗುರುಪಾದಸ್ವಾಮಿ, ದಲಿತರಾದ ಎನ್. ರಾಚಯ್ಯ ಆಯ್ಕೆಯಾಗಿದ್ದರು. 1957 ರಲ್ಲಿ ಹಿಂದುಳಿದ ನೇಕಾರ ಜನಾಂಗಕ್ಕೆ ಸೇರಿದ ಎಂ. ಶಂಕರಯ್ಯ ಹಾಗೂ ದಲಿತರಾದ ಎಸ್.ಎಂ. ಸಿದ್ದಯ್ಯ ಆಯ್ಕೆಯಾಗಿದ್ದರು. 1962 ರಲ್ಲಿ ಮತ್ತೆ ನೇಕಾರ ಜನಾಂಗದ ಎಂ.ಶಂಕರಯ್ಯ ಆಯ್ಕೆಯಾದರು. 1967, 1971 ಹಾಗೂ 1977ರಲ್ಲಿ ಒಕ್ಕಲಿಗ ಜನಾಂಗದ ಎಚ್.ಡಿ. ತುಳಸೀದಾಸ್ ಆಯ್ಕೆಯಾದರು. 1980 ರಲ್ಲಿ ವೀರಶೈವ ಜನಾಂಗದ ಎಂ. ರಾಜಶೇಖರಮೂರ್ತಿ ಚುನಾಯಿತರಾದರು.
1984, 1989, 1996, 1999 ರಲ್ಲಿ ಅರಸು ಜನಾಂಗದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, 1991 ರಲ್ಲಿ ಅರಸು ಜನಾಂಗದ ಚಂದ್ರಪ್ರಭಾ ಅರಸು ಆಯ್ಕೆಯಾಗಿದ್ದರು. 1998, 2004 ರಲ್ಲಿ ಕುರುಬ ಜನಾಂಗದ ಸಿ.ಎಚ್. ವಿಜಯಶಂಕರ್, 2009 ರಲ್ಲಿ ಕುರುಬ ಜನಾಂಗದ ಎಚ್. ವಿಶ್ವನಾಥ್  ಆಯ್ಕೆಯಾಗಿದ್ದರು. 1977ರ ನಂತರ ಒಕ್ಕಲಿಗರು, 1980ರ ನಂತರ ವೀರಶೈವರು ಈ ಕ್ಷೇತ್ರದಲ್ಲಿ ಆಯ್ಕೆಯಾಗಲು ಸಾಧ್ಯವಾಗಿಲ್ಲ. ಈ ಜನಾಂಗಗಳಿಗೆ ಸೇರಿದ ಕೆ.ಪಿ. ಶಾಂತಮೂರ್ತಿ, ಡಿ.ಮಾದೇಗೌಡ, ಪ.ಮಲ್ಲೇಶ್, ಜಿ.ಟಿ. ದೇವೇಗೌಡ, ಬಿ.ಎಸ್. ಮರಿಲಿಂಗಯ್ಯ, ಎ.ಎಸ್. ಗುರುಸ್ವಾಮಿ, ಬಿ.ಎ. ಜೀವಿಜಯ ಸ್ಪರ್ಧಿಸಿ ಸೋತಿದ್ದಾರೆ. ಬಿಜೆಪಿಯಿಂದ ತೋಂಟದಾರ್ಯ ಸ್ಪರ್ಧಿಸಿ, ಸೋತಿದ್ದಾರೆ. ಕಾಂಗ್ರೆಸ್‌ನಿಂದ ನಾಯಕ ಜನಾಂಗದ ಎಸ್. ಚಿಕ್ಕಮಾದು, ಅರಸು ಜನಾಂಗದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕೂಡ ಸೋತಿದ್ದಾರೆ.
ನಡೆಯದ ಜನತಾ ಆಟ: ಬಿಜೆಪಿಯು ಕುರುಬ ಜನಾಂಗದ ಸಿ.ಎಚ್. ವಿಜಯಶಂಕರ್ ಅವರನ್ನು ಅಭ್ಯರ್ಥಿಯಾಗಿಸಿ, ಹೊಸ ಪ್ರಯೋಗ ಮಾಡಿ, ಅಯೋಧ್ಯೆಯ ರಾಮಮಂದಿರದ ವಿವಾದದ ಹಿನ್ನೆಲೆಯಲ್ಲಿ ದೇಶಾದ್ಯಂತ ಇದ್ದ ಬಿಜೆಪಿ ಅಲೆಯಲ್ಲಿ ಎರಡು ಬಾರಿ ಗೆದ್ದಿದೆ. ಆದರೆ ಜನತಾದಳದ ಪರವಾಗಿ 1996, 2004 ರಲ್ಲಿ ಅಲೆ ಇದ್ದರೂ ಮೈಸೂರಿನಲ್ಲಿ ಜನತಾ ಪರಿವಾರ ಗೆಲ್ಲಲಾಗಿಲ್ಲ. ಸಿದ್ದರಾಮಯ್ಯ, ವಿ. ಶ್ರೀನಿವಾಸಪ್ರಸಾದ್, ರಾಜಶೇಖರಮೂರ್ತಿ ಆವರಂಥ ಘಟಾನುಘಟಿ ನಾಯಕರು ಇದ್ದಾಗಲೂ ಜನತಾ ಪರಿವಾರದ ಆಟ ನಡೆದಿಲ್ಲ.
ಮೈಸೂರು ದ್ವಿಸದಸ್ಯ ಕ್ಷೇತ್ರವಾಗಿದ್ದಾಗ ಚಾಮರಾಜನಗರ ಕೂಡ ಸೇರಿತ್ತು. 1962 ರಲ್ಲಿ ಏಕಸದಸ್ಯವಾದಾಗ ಚಾಮರಾಜನಗರ ಪ್ರತ್ಯೇಕ ಮೀಸಲು ಕ್ಷೇತ್ರವಾಯಿತು. ಮೈಸೂರು ಸಾಮಾನ್ಯ ಕ್ಷೇತ್ರವಾಯಿತು. 2009 ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ನಂತರ ಮೈಸೂರಿಗೆ ಜಿಲ್ಲೆಯ ಆರು ಹಾಗೂ ಕೊಡಗು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳು ಸೇರಿವೆ.


-ಅಂಶಿ ಪ್ರಸನ್ನಕುಮಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.