ಮೈಸೂರು

ಜ್ಞಾನ ದಾಸೋಹದ ಮನೆ ಗಾವಡಗೆರೆ ಮಠ

Published On :

ಕ.ಪ್ರ.ವಾರ್ತೆ  ಹುಣಸೂರು  ಮೇ 1
ತಾಲೂಕಿನ ಗಾವಡಗೆರೆ ಶ್ರೀ ಓಂ ಗುರು ಲಿಂಗ ಜಂಗಮ ದೇವರ ಮಠವು ಹಸಿದು ಬರುವವರಿಗೆ ದಾಸೋಹ, ಕಲಿಯುವವನಿಗೆ ವಿದ್ಯೆ, ಮೂಢನಂಬಿಕೆ ಮತ್ತು ಮೌಢ್ಯತೆ ತೊಲಗಿಸಲು ತಿಂಗಳ ಬೆಳಕು ಕಾರ್ಯಕ್ರಮ ಹಾಗೂ ಸರ್ವ ಜಾತಿ, ಧರ್ಮಗಳ ಅನಾಥರ ಪಾಲಿಗೆ ಜ್ಞಾನ ಭಂಡಾರದ ಶ್ರೀ ಕ್ಷೇತ್ರವಾಗಿದೆ.
ಪ್ರಸ್ತುತ ಸಮಾಜದಲ್ಲಿ ಪ್ರತಿಯೊಬ್ಬರು ಹಣ, ಆಸ್ತಿ, ಅಧಿಕಾರ ಮತ್ತು ಸ್ವಾರ್ಥಕ್ಕಾಗಿ ಸಮಾಜವನ್ನೇ ಬಲಿ ಕೊಡುವ ಸ್ಥಿತಿಗತಿ ಬದಲಾಯಿಸಲು ಮಠ ಪಣ ತೊಟ್ಟಿದೆ.
ಅನಾಗರಿಕತೆ, ಮೂಢನಂಬಿಕೆ, ಮೌಢ್ಯತೆ ಹಾಗೂ ಜಾತಿ- ವರ್ಗಗಳ ನಡುವಿನ ಸಂಘರ್ಷ, ಬೇಧ-ಭಾವ ತೊಲಗಿಸಿ ಎಲ್ಲರನ್ನು ಸಮಾನತೆ ಕಾಣುವ ಪೂರ್ಣ ದೃಷ್ಟಿ ಮಠದ್ದಾಗಿದೆ.
ಬೆಳೆದು ಬಂದ ಹಾದಿ: ಸುಮಾರು 150 ವರ್ಷಗಳ ಪರಂಪರೆ ಇರುವ ಶ್ರೀಮಠವು ಹುಣಸೂರು- ಕೆ.ಆರ್. ನಗರ ನಡುವೆಯ ಗಾವಡಗೆರೆ ಗ್ರಾಮದ ಹೊರ ವಲಯದಲ್ಲಿದೆ. ಶ್ರೀ ನಂಜುಂಡ ಶಿವಯೋಗಿಗಳು ಮಠದ ಮೂಲ ಪುರುಷರು.
ಇವರು ಮನುಕುಲದ ಉದ್ಧಾರಕ್ಕೆ ಬಂದ ವಿಭೂತಿ ಪುರುಷರು. ಗುರುಲಿಂಗ ಜಂಗಮ ಪ್ರಿಯರು. ಬಸವತತ್ವ ಪ್ರೇಮಿಗಳಾಗಿದ್ದ ಪೂಜ್ಯರು ಶರಣ ಧರ್ಮ ಪಾಲಿಸಿಕೊಂಡು ಜಾತಿ- ಬೇಧ ಮೀರಿ ಸಮಾನತೆ ಕಲ್ಪಿಸಿದವರು. ಅವರ ಸ್ಮರಣೆಗಾಗಿ ಪ್ರತಿ ವರ್ಷ ಸಂಸ್ಮರಣೆ ಕಾರ್ಯಕ್ರಮ ಏರ್ಪಡಿಸಲಾಗುತ್ತದೆ.
ಕಳೆದ 25 ವರ್ಷಗಳ ಹಿಂದೆ ಮಠದ ಜವಾಬ್ದಾರಿ ಹೊತ್ತ ಈಗಿನ ಶ್ರೀ ನಟರಾಜ ಸ್ವಾಮೀಜಿ ಕೇವಲ 24 ಗುಂಟೆ ಜಮೀನು ಹಾಗೂ ಸಣ್ಣ ಹೆಂಚಿನ ಮನೆ ಇದ್ದುದ್ದನ್ನು ವಿಸ್ತರಿಸಿದ್ದಾರೆ. ದಾನಿಗಳ ನೆರವಿನಿಂದ 3 ಎಕರೆ ಭೂಮಿ ಖರೀದಿಸಿ ಬೃಹದಾಕಾರವಾದ ವಸತಿ ಶಾಲೆ, ದಾಸೋಹ ಭವನ, ಫ್ರೌಢಶಾಲೆ, ಐಟಿಐ ಕಾಲೇಜು ಸಾಪಿಸಿದ್ದಾರೆ.
ರಾಜ್ಯದ ಮೈಸೂರು, ಬಿಜಾಪುರ, ಬಾಗಲಕೋಟೆ, ಧಾರವಾಡ ಜಿಲ್ಲೆ ಸೇರಿದಂತೆ ಮೂಲೆ ಮೂಲೆಗಳಿಂದ ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮಗಳ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದ್ದಾರೆ.
ಮೂನ್ನೂರ ಐವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶ್ರೀ ಮಠದಲ್ಲಿ ನರ್ಸರಿಯಿಂದ ಹಿಡಿದು ಫ್ರೌಢ ಮತ್ತು ವೃತ್ತಿಪರ ಐಟಿಐ ತರಬೇತಿ ಶಿಕ್ಷಣವನ್ನು ಉಚಿತವಾಗಿ ನೀಡಲಾಗುತ್ತಿದೆ.

ತಿಂಗಳ ಬೆಳಕು
ಸಮಾಜದಲ್ಲಿನ ಮೌಢ್ಯತೆ- ಮೂಢನಂಬಿಕೆ ಹಾಗೂ ದುಶ್ಚಟಗಳ ನಿವಾರಣೆಗೆ ತಿಂಗಳ ಬೆಳಕು ಎಂಬ ವಿಶಿಷ್ಟ ಕಾರ್ಯಕ್ರಮ ನಡೆಸಲಾಗುತ್ತದೆ. ಪ್ರತಿ ತಿಂಗಳ ಎರಡನೇ ಶನಿವಾರದಂದು ಶ್ರೀ ಮಠದಲ್ಲಿ ತಿಂಗಳ ಬೆಳಕು ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ.
ಗ್ರಾಮದ ಶ್ರೀ ಗುರುಲಿಂಗ ಜಂಗಮ ದೇವರ ಮಠದ ಆಶ್ರಯದಲ್ಲಿ ಮೇ 2 ರಂದು ಬಸವ ಜಯಂತಿ ಆಚರಿಸಲಿದ್ದು, ಬೆಳಗ್ಗೆ 9ಕ್ಕೆ ಜಗಜ್ಯೋತಿ ಬಸವವೇಶ್ವರರ ಭಾವಚಿತ್ರ ಅನಾವರಣ, ಕೆರೆಯೂರು ಪವಾಡ ಬಸವವೇಶ್ವರ ಮೆರವಣಿಗೆ ಮತ್ತು 20 ಜೋಡಿಗಳ ಸಾಮೂಹಿಕ ವಿವಾಹ ಮಹೋತ್ಸವ ಜರುಗಲಿದೆ. ಕನಕಪುರದ ದೇಗುಲ ಮಠದ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ, ಚಿಕ್ಕಮಗಳೂರಿನ ಕರಡಿಗ ಮಠದ ಶ್ರೀ ಶಂಕರಾನಂದ ಸ್ವಾಮೀಜಿ, ಕೂಡ್ಲಿಪೇಟೆಯ ಕಲ್ಲುಮಠದ ಶ್ರೀ ಮಹಾಂತ ಸ್ವಾಮೀಜಿ, ವಿರಾಜಪೇಟೆಯ ಅರಮೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಮೈಸೂರಿನ ಕಾಗಿನೆಲೆ ಶಾಖಾ ಮಠದ ಶ್ರೀ ಶಿವಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶಾಸಕ ಎಚ್.ಪಿ. ಮಂಜುನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ.

ಧರ್ಮಾಪುರ ನಾರಾಯಣ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.