ನಗರದಲ್ಲಿ ಮಳೆಯೋ ಮಳೆ...
ಕ.ಪ್ರ.ವಾರ್ತೆ ಮೈಸೂರು ಮೇ 8
ಮೈಸೂರು ನಗರದಲ್ಲಿ ಧಾರಾಕಾರವಾಗಿ ಮೂರು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದ ಗುರುವಾರ ಜನಜೀವನ ಅಸ್ತವ್ಯಸ್ತಗೊಂಡಿದ್ದು ಕಂಡುಬಂತು.
ಗುಡುಗು ಹಾಗೂ ಸಿಡಿಲಿನ ಯಾವುದೇ ಅಬ್ಬರವಿಲ್ಲದೆ ಬೆಳಗ್ಗೆ 10ರ ಸುಮಾರಿಗೆ ತುಂತುರು ಹನಿಯಿಂದ ಆರಂಭಗೊಂಡ ಮಳೆಯೂ, ಕ್ರಮೇಣ 11 ಗಂಟೆಯ ನಂತರ ದಪ್ಪ ದಪ್ಪ ಹನಿಗಳೊಂದಿಗೆ ಜೋರಾಯಿತು. ಇದರಿಂದಾಗಿ ಕೆ.ಆರ್ ವೃತ್ತ, ಸಯ್ಯಾಜಿ ರಾವ್ ರಸ್ತೆ, ಸಂತೇಪೇಟೆ, ಶಿವರಾಂಪೇಟೆ, ಚಾಮರಾಜ ಜೋಡಿ ರಸ್ತೆ, ಹಾರ್ಡಿಂಜ್ ವೃತ್ತ, ಅಗ್ರಹಾರ ವೃತ್ತ ಈ ಮುಂತಾದ ಪ್ರದೇಶಗಳಲ್ಲಿ ಮಳೆ ನೀರಿನ ಹರಿವು ಹೆಚ್ಚಾಗಿದ್ದರಿಂದ ಹಾಗೂ ಅಲ್ಲಿನ ಹಳ್ಳಕೊಳ್ಳಗಳಲ್ಲಿ ನೀರು ನಿಂತಿದ್ದ ಕಾರಣ ವಾಹನಗಳ ಚಾಲನೆಗೆ ಸವಾರರು ಸಾಹಸ ಪಡಬೇಕಾಯಿತು.
ರಸ್ತೆ ಬದಿಯಲ್ಲಿ ಹಣ್ಣು ಹಾಗೂ ಮತ್ತಿತರ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ವ್ಯಾಪಾರಸ್ಥರು ಅಲ್ಲಿಂದ ಪದಾರ್ಥಗಳನ್ನು ಎತ್ತಿಕೊಂಡು ರಕ್ಷಣೆಗೆ ಹತ್ತಿರದ ಕಟ್ಟಗಳತ್ತ ಧಾವಿಸಿದರೆ, ಸರಕು ಸಾಮಗ್ರಿಗಳನ್ನು ಸಾಗಾಟ ಮಾಡುತ್ತಿದ್ದವರು, ಅದನ್ನು ಪ್ಲಾಸ್ಟಿಕ್ನಿಂದ ಮುಚ್ಚುವಲ್ಲಿ ಪ್ರಯಾಸ ಪಡುತ್ತಿದ್ದರು. ಈ ಮಧ್ಯೆ ಕೆಲವು ತಗ್ಗು ಪ್ರದೇಶದಲ್ಲಿನ ಅಂಗಡಿಗಳತ್ತ ನೀರು ನುಗ್ಗಿದ್ದರಿಂದ ಮಾರಾಟ ವಸ್ತುಗಳ ರಕ್ಷಣೆಗೆ ವರ್ತಕರು ಪರಿತಪಿಸಬೇಕಾಯಿತು.
ಹೊಟ್ಟೆಪಾಡಿನ ಬವಣೆ: ಮಳೆಯ ಕಾರಣ ಗ್ರಾಹಕರಿಲ್ಲದೆ ಅಂಗಡಿ ಮುಂಗಟ್ಟುಗಳು ಖಾಲಿ ಹೊಡೆಯಬೇಕಾಯಿತು. ಕೂಲಿ ಕಾರ್ಮಿಕರು ಕೆಲಸವಿಲ್ಲದೆ ಹೊಟ್ಟೆ ಪಾಡಿಗೆ ಬವಣೆ ಪಡಬೇಕಾಯಿತು. ಇಡೀ ದಿನ ಸೂರ್ಯನಿಲ್ಲದೆ ಹಾಗೂ ಮಳೆಯ ಚಳಿಯಿಂದ ಜನಜೀವನ ಅಸ್ತವ್ಯಸ್ತಗೊಂಡಿತು. ಕಚೇರಿ ಕೆಲಸ ಕಾರ್ಯಗಳಿಗೂ ಹಾಗೂ ಮದುವೆ ಮತ್ತಿತರ ಸಮಾರಂಭಕ್ಕೂ ಇದು ಅಡ್ಡಿಯಾಯಿತು.
ಚಂಡಮಾರುತದ ಪ್ರಭಾವದ ಹಿನ್ನೆಲೆಯಲ್ಲಿ ಸಂಜೆಯವರೆಗೂ ಮಳೆಯ ತುಂತುರು ಹಾಗೂ ಮೋಡ ಕವಿದ ವಾತಾವರಣ ಮರೆಯಾಗಲಿಲ್ಲ. ರಾತ್ರಿಯಂತೂ ಮತ್ತೆ ಮಳೆ ಜೋರಾಗಿ ಬಂತು. ಬೇಸಿಗೆ ಹಿನ್ನೆಲೆಯಲ್ಲಿ ಮೂಲೆ ಸೇರಿದ್ದ ಜರ್ಕಿನ್ ಹಾಗೂ ಸ್ವೆಟರ್ಗಳನ್ನು ಧರಿಸಿ ಓಡಾಡುವಂತಾಯಿತು.
ಸಾವು: ಅರಮನೆಯ ಕೋಟೆ ಮಾರಮ್ಮ ದೇವಸ್ಥಾನದ ಬಳಿ ಇರುವ ವಿದ್ಯುತ್ ಕಂಬದಿಂದ ಪ್ರವಯಿಸಿದ ವಿದ್ಯುತ್ಗೆ ಎರಡು ಎಮ್ಮೆಗಳು ಬಲಿಯಾಗಿವೆ. ಮಳೆಯ ಕಾರಣ ವಿದ್ಯುತ್ ತಂತಿಯೂ ಕಬ್ಬಿಣದ ಕಂಬಕ್ಕೆ ತಾಕಿರುವ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದ್ದು, ಈ ಬಗ್ಗೆ ದೇವರಾಜ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

