ಬೇನಾಮಿ ಹೆಸರಿನಲ್ಲಿ ತಡೆಗೋಡೆ ನಿರ್ಮಾಣ ಆರೋಪ ಸತ್ಯಕ್ಕೆ ದೂರ
ಕ.ಪ್ರ.ವಾರ್ತೆ ಕೆ.ಆರ್. ನಗರ ಮೇ 11
ಶಾಸಕ ಸಾ.ರಾ. ಮಹೇಶ್ ಅವರ ಓಲೈಕೆಗಾಗಿ ಎಪಿಎಂಸಿ ಅಧ್ಯಕ್ಷ ಎಂ. ರಮೇಶ್ ಮತ್ತು ನಿರ್ದೇಶಕ ಸಿದ್ದೇಗೌಡ ಅವರು ತಡೆಗೋಡೆ ಕಾಮಗಾರಿಯನ್ನು ಬೇನಾಮಿ ಹೆಸರಿನಲ್ಲಿ ಮಾಡುತ್ತಿದ್ದಾರೆ ಎಂದು ಸಮಿತಿಯ ನಿರ್ದೇಶಕರಾದ ಕುಪ್ಪಹಳ್ಳಿ ಸೋಮು, ಬಂಡಹಳ್ಳಿ ಕುಚೇಲ ಮತ್ತು ಓಬೇಗೌಡ ಆರೋಪಿಸಿರುವುದು ಸತ್ಯಕ್ಕೆ ದೂರವಾದ ಸಂಗತಿ ಎಂದು ಉಪಾಧ್ಯಕ್ಷ ತೋಟಪ್ಪನಾಯಕ ಹೇಳಿದರು.
ತಡೆಗೋಡೆ ಕಾಮಗಾರಿಯನ್ನು ನಿರ್ಮಾಣ ಮಾಡಲು ಆಡಳಿತ ಮಂಡಳಿಯ ಸರ್ವ ಸದಸ್ಯರ ಸಭೆಯಲ್ಲಿ ಎಲ್ಲರ ಒಪ್ಪಿಗೆ ಪಡೆದು ಇ-ಟೆಂಡರ್ ಮೂಲಕ ಗುತ್ತಿಗೆ ನೀಡಲಾಗಿದೆ. ವಾಸ್ತವಾಂಶ ತಿಳಿದಿದ್ದರೂ ಪುಕ್ಕಟೆ ಪ್ರಚಾರಕ್ಕಾಗಿ ನಿರ್ದೇಶಕರೇ ಅಪಪ್ರಚಾರ ಮಾಡುತ್ತಿರುವುದು ಖಂಡನೀಯ ಎಂದು ಅವರು ಭಾನುವಾರ ಸುದ್ಧಿಗೋಷ್ಠಿಯಲ್ಲಿ ತಿಳಿಸಿದರು.
ಎಪಿಎಂಸಿಗೆ ಸೇರಿದ ಜಾಗವನ್ನು ಕೆಲವರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ. ಜತೆಗೆ ಈವರೆಗೆ ಸರ್ವೆ ಆಗದೆ ನಿಗದಿತವಾದ ಸ್ಥಳವೇ ಗೊತ್ತಿಲ್ಲ. ಈ ಸಂಬಂಧ ಅಧ್ಯಕ್ಷರು, ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿ ಹಾಗೂ ನಾವೂ ಸೇರಿದಂತೆ ಇತರ ಅಧಿಕಾರಿಗಳಿಗೆ ಮನವಿ ಮಾಡಿ ಅಕ್ರಮ ಒತ್ತುವರಿ ತೆರವುಗೊಳಿಸಿ ಸರ್ವೇ ಮಾಡಿಕೊಡುವಂತೆ ಮನವಿ ಮಾಡಿದ್ದೇವೆ ಎಂದರು.
ಸರ್ಕಾರದ ಆಸ್ತಿ ಉಳಿಸಲು ಇಲ್ಲದ ಕಾಳಜಿ ಕೇವಲ ರಾಜಕೀಯ ದುರುದ್ದೇಶದಿಂದ ಶಾಸಕರನ್ನು ಕರೆಸಿ ಕಾಮಗಾರಿ ಪರಿಶೀಲಿಸಲು ಇರುವುದು ಏಕೆ? ಕಾಮಗಾರಿ ಪರಿಶೀಲನೆಗೆ ಶಾಸಕರನ್ನು ಕರೆಸಿದಂತೆ ಎಪಿಎಂಸಿ ಆಸ್ತಿ ಉಳಿಸಲು ಬಳಸಿಕೊಳ್ಳಿ. ಈವರೆಗೆ ಶಾಸಕರು ಪಂಚಾಯತ್ರಾಜ್ ಇಲಾಖೆ, ಎಸ್ಸಿಪಿ, ಟಿಎಸ್ಪಿ ಸೇರಿದಂತೆ ತಾಲೂಕಿನಲ್ಲಿ ನಡೆಯುತ್ತಿರುವ ಎಷ್ಟು ಕಾಮಗಾರಿಗಳನ್ನು ಪರಿಶೀಲಿಸಿದ್ದಾರೆ ಎಂಬ ಸತ್ಯವನ್ನು ಜನತೆಗೆ ತಿಳಿಸಲಿ ಎಂದು ಸವಾಲು ಹಾಕಿದರು.
ರೈತರು ತಲೆ ತಗ್ಗಿಸುವಂತಾಗಿದೆ: ಕೆ.ಆರ್. ನಗರ ಮತ್ತು ಸಾಲಿಗ್ರಾಮ ಎಪಿಎಂಸಿ ಆವರಣದಲ್ಲಿ 45 ಲಕ್ಷ ವೆಚ್ಚದ ರಸ್ತೆ, ಚರಂಂಡಿ ಮತ್ತು ಶೌಚಾಲಯ ಕಾಮಗಾರಿಯನ್ನು ಕುಶಾಲನಗರದ ಗುತ್ತಿಗೆದಾರ ಜಗದೀಶ್ ಎಂಬವರ ಹೆಸರಿನಲ್ಲಿ ಬೇನಾಮಿಯಾಗಿ ಪಡೆದಿರುವ ಕರಾರು ಮುಗಿದ ನಂತರವೂ ಈವರೆಗೂ ಕಾಮಗಾರಿ ಮುಗಿಸಿಲ್ಲ. ವಾಸ್ತವಾಂಶ ಅರಿಯದೆ ಸಾಮಾನ್ಯ ಜ್ಞಾನವೂ ಇಲ್ಲದೆ ಸತ್ಯಕ್ಕೆ ದೂರವಾದ ಹೇಳಿಕೆಗಳನ್ನು ನೀಡುತ್ತಿರುವ ನಿರ್ದೇಶಕರು ಕಾಮಗಾರಿಯನ್ನು ಅವರೇ ಪರಿಶೀಲಿಸಿ ಅಧ್ಯಕ್ಷರಿಗೆ ಮತ್ತು ಕಾರ್ಯದರ್ಶಿಗೆ ದೂರು ನೀಡಬಹುದಿತ್ತು. ಅದು ಬಿಟ್ಟು ದುರುದ್ದೇಶದಿಂದ ಎಪಿಎಂಸಿ ವಿರುದ್ದವೇ ಅಪಪ್ರಚಾರದಲ್ಲಿ ತೊಡಗಿರುವುದು ದುರದೃಷ್ಟಕರ. ಇಂತಹವರನ್ನು ಆಯ್ಕೆ ಮಾಡಿದ ರೈತರು ತಲೆ ತಗ್ಗಿಸುವಂತಾಗಿದೆ ಎಂದು ಲೇವಡಿ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

