ವ್ಯಾಘ್ರ, ಚಿರತೆ ಕಾಟ; ಗ್ರಾಮಸ್ಥರ ಪೀಕಲಾಟ
ಗುಂಡ್ಲುಪೇಟೆ: ತಾಲೂಕು ಕೇಂದ್ರವಾದ ಗುಂಡ್ಲುಪೇಟೆ ಪಟ್ಟಣಕ್ಕೆ ಹೊಂದಿಕೊಂಡಂತಿರುವ ಗ್ರಾಮಗಳಲ್ಲಿ ಹುಲಿ, ಚಿರತೆಗಳು ಆಗಾಗ್ಗೆ ದಾಳಿ ನಡೆಸುತ್ತಿದ್ದು, ಗ್ರಾಮಗಳಲ್ಲಿ ಭೀತಿ ಮೂಡಿಸಿದೆ.
ಮುಂದೊಂದು ದಿನ ಹುಲಿ, ಚಿರತೆ ಪಟ್ಟಣಕ್ಕೆ ದಾಳಿ ಇಡುವ ಸಾಧ್ಯತೆ ಹೆಚ್ಚಿವೆ.ತಾಲೂಕಿನ ಮದ್ದೂರು ಕಾಲೊನಿ ಸಮೀಪದ ಜಮೀನಿನಲ್ಲಿ ಆರಂಭವಾದ ಹುಲಿ ದಾಳಿಗೆ ಕಾಲೋನಿಯ ವೃದ್ಧರೊಬ್ಬರು ಮೃತರಾಗಿದ್ದ ಘಟನೆಯಿಂದ ಆರಂಭವಾಗಿ ಮುಂದುವರೆದು ಸೋಮವಾರ ತಾಲೂಕಿನ ಹಂಗಳ ಗ್ರಾಮದ ಬಳಿ ಹುಲಿ ಕಾಣಿಸಿಕೊಂಡಿದೆ.
ತಾಲೂಕಿನ ಕುಂದಕೆರೆ ಬಳಿಯ ಉಪಕಾರ ಕಾಲೊನಿ ಬಳಿ ಗಿರಿಜನ ಬಾಲಕರ ಮೇಲೆ ಚಿರತೆ ದಾಳಿ ನಡೆಸಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಆದಾದ ನಂತರ ಮುಕ್ತಿ ಕಾಲೋನಿಯ ಬಳಿ ಹುಲಿಯ ಹೆಜ್ಜೆ ಕಾಣಿಸಿಕೊಂಡಿದ್ದನ್ನು ಸ್ಮರಿಸಬಹುದು.
ಸೋಮವಾರ ರಾತ್ರಿ ಮುಂಟೀಪುರದ ಬಳಿ ಮನೆಯೊಳಗೆ ಚಿರತೆ ನುಗ್ಗಿರುವುದು, ಸದ್ಯ ದಾಳಿ ನಡೆದಿಲ್ಲದಿರುವುದು ಸಮಾಧಾನಕರ ಸಂಗತಿಯಾಗಿದೆ. ಪಟ್ಟಣದಿಂದ ಸುಮಾರು 8 ಕಿಮೀ ದೂರದಲ್ಲಿರುವ ಹಂಗಳ ಗ್ರಾಮದಲ್ಲಿ ಮುದಿ ಹುಲಿರಾಯ ಕಾಣಿಸಿಕೊಂಡಿದೆ. ನಂತರ ಹಂಗಳ ಗ್ರಾಮದಿಂದ ಲಕ್ಕೀಪುರ ಹಾಗು ಕನ್ನೇಗಾಲ ಗ್ರಾಮದ ಮೂಲಕ ಪಟ್ಟಣದದಿಂದ 7 ಕಿಮೀ ದೂರದಲ್ಲಿರುವ ಭೀಮನಬೀಡು ಗ್ರಾಮದ ನೀಲಿಗಿರಿ ತೋಪಿನಲ್ಲಿ ಮಂಗಳವಾರ ಹುಲಿ ಹೆಜ್ಜೆ ಕಾಣಿಸಿಕೊಂಡಿದೆ.
ಅಲ್ಲಲ್ಲಿ ಕಾಣಿಸಿಕೊಂಡ ಕಾಡು ಪ್ರಾಣಿಗಳು: ಓಂಕಾರ ಅರಣ್ಯ ವಲಯದಲ್ಲಂತೂ ಚಿರತೆ ದಾಳಿಗೆ ಸುಮಾರು 50 ಕ್ಕೂ ಹೆಚ್ಚು ಕುರಿ, ಹಸು, ಮೇಕೆ ಬಲಿಯಾಗಿವೆ. ಓಂಕಾರ ಅರಣ್ಯದ ಹೊರೆಯಾಲ, ಬೆಳಚಲವಾಡಿ ಗ್ರಾಮದವರೆಗೂ ಚಿರತೆ ದಾಳಿ ನಡೆಸಿವೆ. ತಾಲೂಕಿನ ಬೇಗೂರು ಬಳಿಯ ಕಮರಹಳ್ಳಿ ಗ್ರಾಮದ ಹೊರ ವಲಯದ ಕೋಳಿ ಫಾರಂನಲ್ಲಿ ಚಿರತೆ ಮರಿಗಳು ಕಾಣಿಸಿಕೊಂಡಿದ್ದವು. ಜೊತೆಗೆ ಚಿರತೆಯ ದಾಳಿಯ ಜೊತೆಗೆ ಕಾಡ ಹಂದಿ, ಕರಡಿ ದಾಳಿ ನಡೆಸಿರುವ ಪ್ರಕರಣಗಳೂ ಇವೆ. ಗುಂಡ್ಲುಪೇಟೆ ಸುತ್ತ ಮುತ್ತಲಿನ ಗ್ರಾಮಗಳಲ್ಲಿನ ಸುಮಾರು 7 ರಿಂದ 8 ಕಿಮೀ ದೂರದ ಗ್ರಾಮಗಳಲ್ಲಿ ಹುಲಿ, ಚಿರತೆ ದಾಳಿ ನಡೆಸಿವೆ ಹಾಗು ಜನರ ಕಣ್ಣಿಗೆ ಹುಲಿ ಮತ್ತು ಚಿರತೆ ಕಾಣಿಸಿಕೊಂಡಿವೆ.
ಕಾಡಂಚಿನ ಗ್ರಾಮಗಳಲ್ಲಿ ರೈತರು ಹುಲಿ, ಚಿರತೆಯ ದಾಳಿ ಹಾಗು ಕಾಣಿಸಿಕೊಂಡಿರುವ ಕಾರಣ ರೈತರು ಜಮೀನಿಗೆ ಹೋಗಲು ಹೆದರುವಂತಾಗಿದೆ. ಮುಂಜಾಗೃತ ಕ್ರಮ ಕೈಗೊಂಡಿಲ್ಲ: ಬಂಡೀಪುರ ಅರಣ್ಯ ಇಲಾಖೆ ಗ್ರಾಮಗಳತ್ತ ಬರುವ ಕಾಡು ಪ್ರಾಣಿಗಳ ತಡೆಗೆ ಕ್ರಮ ಕೈಗೊಳ್ಳದಿರುವುದು ಊರಿನತ್ತ ಪ್ರಾಣಿಗಳು ಬರಲು ಪ್ರಮುಖ ಕಾರಣ. ಹುಲಿ, ಚಿರತೆ ತಾಲೂಕಿನಲ್ಲಿ ಆಗಾಗ ಗ್ರಾಮಗಳತ್ತ ಕಾಣಿಸಿಕೊಳ್ಳುತ್ತಿರುವುದು ಗ್ರಾಮದ ಜನರಿಗೆ ಆತಂಕ ಮೂಡಿದೆ.
ಪಟ್ಟಣದತ್ತ ಬಂದರೂ ಆಶ್ಚರ್ಯ ಪಡುವ ಕಾಲ ದೂರವಿಲ್ಲ. ಒಂದು ವೇಳೆ ಗುಂಡ್ಲುಪೇಟೆ ಪಟ್ಟಣಕ್ಕೆ ಬಂದರೆ ಬಂದ ಪ್ರಾಣಿಯನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಯಾವುದೇ ಮುಂಜಾಗೃತ ಕ್ರಮ ಕೈಗೊಂಡಿಲ್ಲ.ಅರಣ್ಯ ಇಲಾಖೆಯಲ್ಲಿ ಹುಲಿ ಅಥವಾ ಚಿರತೆ ಹಿಡಿಯಲು ಅತ್ಯಾಧುನಿಕ ಸಶಸ್ತ್ರಗಳಿಲ್ಲ. ಬಂಡೀಪುರದ ಅರಣ್ಯದಲ್ಲಿ ಅರವಳಿಕೆ ತಜ್ಞರಿಲ್ಲ. ಕಾಡು ಪ್ರಾಣಿಗಳು ಬಂದಿವೆ ಎಂದು ತಿಳಿಸಲು ಸಹಾಯವಾಣಿ ಕೇಂದ್ರವಿಲ್ಲ.
ಮನೆಗೆ ನುಗ್ಗಿ ಸೆರೆಸಿಕ್ಕಚಿರತೆ ಬನ್ನೇರುಘಟ್ಟಕ್ಕೆ
ಗುಂಡ್ಲುಪೇಟೆ: ತಾಲೂಕಿನ ಮುಂಟೀಪುರ ಬಳಿ ಸೋಮವಾರ ರಾತ್ರಿ ಮನೆಯೊಳಗೆ ಸೆರೆ ಸಿಕ್ಕ ಚಿರತೆಯನ್ನು ಬನ್ನೇರು ಘಟ್ಟ ಉದ್ಯಾನ ವನಕ್ಕೆ ಕಳುಹಿಸಲಾಗಿದೆ ಎಂದು ಬಂಡೀಪುರ ಸಂರಕ್ಷಣಾಧಿಕಾರಿ ಕಾಂತರಾಜು ತಿಳಿಸಿದರು. ಸೋಮವಾರ ಮಧ್ಯರಾತ್ರಿ ಸೆರೆ ಹಿಡಿದ ಚಿರತೆಯನ್ನು ಬಂಡೀಪುರಲ್ಲಿ ಇಡಲಾಗಿತ್ತು. ಮೇಲಾಧಿಕಾರಿಗಳ ಗಮನಕ್ಕೆ ತಂದು ಬುಧವಾರ ರಾಷ್ಟ್ರೀಯ ಉದ್ಯಾನವನ ಬನ್ನೇರುಘಟ್ಟಕ್ಕೆ ಕಳುಹಿಲಾಗಿದೆ ಎಂದು 'ಕನ್ನಡಪ್ರಭ'ಕ್ಕೆ
ತಿಳಿಸಿದರು. ಕುಂದಕೆರೆ ಗ್ರಾಮದ ಬಳಿ ಸೆರೆ ಹಿಡಿದ ಚಿರತೆಗೆ ರೇಡಿಯೊ ಕಾಲರ್ ಆಳವಡಿಸಿ ಮೂಲೆಹೊಳೆ ಅರಣ್ಯ ಚಮ್ಮನಹಳ್ಳದ ಅರಣ್ಯಲ್ಲಿ ಬಿಡಲಾಗಿತ್ತು. ಇದೀಗ ಮುಂಟೀಪುರ ಬಳಿ ಕಾಲೋನಿಯಲ್ಲಿ ಸೋಮವಾರ ರಾತ್ರಿ ಸಿಕ್ಕಿರುವ ಕಾರಣ ಬನ್ನೇರು ಘಟ್ಟಕ್ಕೆ ಬಿಡಲಾಗಿದೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

