ಮೈಸೂರು

ಅರಮನೆ ನಗರಕ್ಕೆ ಬಂದಿದ್ರು ಮೋದಿ

Published On :

ಮೈಸೂರು: ದೇಶದ ಪ್ರಧಾನಿಯಾಗಿ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ ನರೇಂದ್ರ ಮೋದಿ ಅವರು ಈ ಬಾರಿಯ ಲೋಕಸಭಾ ಚುನಾವಣಾ ಪ್ರಚಾರ ಸಮಯದಲ್ಲಿ ಮಾತ್ರವಲ್ಲದೇ ಅದಕ್ಕಿಂತ ಮುಂಚಿತವಾಗಿಯೂ ಮೈಸೂರು ಹಾಗೂ ಸುತ್ತೂರಿಗೆ ಭೇಟಿ ನೀಡಿದ್ದರು.
ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಹಾಗೂ ಶೋಭಾ ಕರಂದ್ಲಾಜೆ ಅವರು ಜಿಲ್ಲಾ ಉಸ್ತುವಾರಿ ಸಚಿವೆಯಾಗಿದ್ದಾಗ ಅಂದರೆ 2009ರ ದಸರಾ ಮಹೋತ್ಸವದ ಪಂಜಿನ ಕವಾಯತಿನಲ್ಲಿ (ಸೆ.28) ಅವರು ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದರು. ಆ ಕಾರ್ಯಕ್ರಮದಲ್ಲಿ ರಾಜ್ಯಪಾಲ ಎಚ್.ಆರ್. ಭಾರದ್ವಾಜ್, ಪ್ರಫುಲ್ಲತಾ ಭಾರಧ್ವಾಜ್, ಬಿ.ಎಸ್. ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಮೊದಲಾದವರು ಭಾಗವಹಿಸಿದ್ದರು.
ಯಡಿಯೂರಪ್ಪ ಅವರ ಆಹ್ವಾನದ ಮೇರೆಗೆ ಪಂಜಿನ ಕವಾಯತು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನರೇಂದ್ರ ಮೋದಿ ಅವರ ಹೆಸರು ಹೇಳುತ್ತಿದ್ದಂತೆಯೇ ಸಿಳ್ಳೆ, ಕೇಕೆಗಳು ಮೊಳಗಿದ್ದವು. ಗುಜರಾತ್‌ನ ಗಾಂಧಿನಗರದಿಂದ ವಿಶೇಷ ವಿಮಾನದಲ್ಲಿ ಆಗಮಿಸಿ, ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಿದ್ದ ಅವರು, ಪಂಚಿನ ಕವಾಯತು ಕಾರ್ಯಕ್ರಮಕ್ಕೆ ಯಡಿಯೂರಪ್ಪ ಮತ್ತು ಅವರ ಸಂಪುಟದ ಸಹೋದ್ಯೋಗಿಗಳ ಜೊತೆ ಐರಾವತ ಬಸ್‌ನಲ್ಲಿ ತೆರಳಿದ್ದು ವಿಶೇಷ.
ಅದೇ ವರ್ಷದ ಸೆ.29 ರಂದು ಸುತ್ತೂರಿನಲ್ಲಿ ಬಿಜೆಪಿ ಏರ್ಪಡಿಸಿದ್ದ ಸಹ ಚಿಂತನಾ ಶಿಬಿರದಲ್ಲೂ ನರೇಂದ್ರ ಮೋದಿ ಅವರು ಭಾಗವಹಿಸಿ,  ಶಿಬಿರವನ್ನು ಉದ್ಘಾಟಿಸಿ,  ಸಚಿವರಿಗೆ ಉತ್ತಮ ಆಡಳಿತ ಕುರಿತು ಖಡಕ್ ಪಾಠ ಮಾಡಿದ್ದರು. ದಿನವಿಡೀ ರಿಬ್ಬನ್ ಕಟ್ ಮಾಡುತ್ತಾ ಕುಳಿತುಕೊಳ್ಳಬೇಡಿ. ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಾ ಕಾಲ ಕಳೆಯಬೇಡಿ. ಪಿಎಗೆ ಮೊಬೈಲ್ ಕೊಡಿ, ಜನರ ಜೊತೆ ನೀವು ಬೆರೆಯಿರಿ ಎಂದು ಸಲಹೆ ಮಾಡಿದ್ದರು. ನಂತರ ಸುತ್ತೂರಿನಲ್ಲಿಯೇ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯನ್ನು ಭೇಟಿ ಮಾಡಿದ್ದರು.
ಗಂಗಾ ದೀಪ: ನರೇಂದ್ರ ಮೋದಿ ಅವರು ಪ್ರಧಾನಿ ಪಟ್ಟಕ್ಕೆ ಏರುವುದು ಖಚಿತವಾಗುತ್ತಿದ್ದಂತೆ ತಮ್ಮನ್ನು ಆಯ್ಕೆ ಮಾಡಿದ ವಾರಣಸಿಗೆ ತೆರಳಿ, ಗಂಗಾ ಪೂಜೆ ನೆರವೇರಿಸಿದ್ದರು. ಅದೇ ರೀತಿ ಸುತ್ತೂರಿನಲ್ಲಿ ಯಡಿಯೂರಪ್ಪ ಅವರ ಸಂಪುಟದ ಸದಸ್ಯರಿಗೆ ಸಹ ಚಿಂತನಾ ಶಿಬಿರ ಏರ್ಪಡಿಸಿದ್ದಾಗಲೂ ಕಪಿಲಾ ನದಿಯಲ್ಲಿ ಗಂಗಾ ಪೂಜೆ ಮಾಡಿ, ಗಂಗಾ ದೀಪ ಬಿಡಿಸಲಾಗಿತ್ತು. ಪಾಪಗಳು ಕಳೆದು, ಪುಣ್ಯ ದೊರೆಯಲಿ, ಮಂತ್ರಿಗಳು ಸರಿಯಾಗಿ ಸಮಾಜದ ಕೆಲಸ ಮಾಡಲಿ ಎಂಬುದು ಇದರ ಉದ್ದೇಶವಾಗಿತ್ತು.
ದಸರೆ ನೆನಪಿಸಿಕೊಂಡಿದ್ದರು
ಮೋದಿ ಅವರು ಮೈಸೂರಿಗೆ ಮತ್ತೆ ಬಂದಿದ್ದು ಈ ವರ್ಷದ ಏ.8 ರಂದು. ವಿಶೇಷ ವಿಮಾನದಲ್ಲಿ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಅಲ್ಲಿಂದ ಮಹಾರಾಜ ಕಾಲೇಜು ಮೈದಾನಕ್ಕೆ ಹೆಲಿಕಾಪ್ಟರ್‌ನಲ್ಲಿ ಆಗಮಿಸಿದ್ದರು. ಅದೇ ರೀತಿ ವಾಪಸ್ ಆಗಿದ್ದರು.  ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಪರ ಪ್ರಚಾರಕ್ಕೆ ಆಗಮಿಸಿದ್ದ ಅವರು, ತಾವು ಈ ಹಿಂದೆ ಮೈಸೂರಿಗೆ ಭೇಟಿ ನೀಡಿದ್ದು, ದಸರೆಯಲ್ಲಿ ಭಾಗವಹಿಸಿದ್ದನ್ನು ನೆನಪಿಸಿಕೊಂಡಿದ್ದರು. ಪ್ರತಾಪ್ ಸಿಂಹ ಅವರನ್ನು ಗೆಲ್ಲಿಸಿ, ಕಳುಹಿಸಿ. ನನಗೆ 300 ಕಮಲಗಳನ್ನು ನೀಡಿ, ಮೈಸೂರನ್ನು ಪ್ಯಾರೀಸ್ ಮಾದರಿಯಲ್ಲಿ ಅಭಿವೃದ್ಧಿಪಡಿಸುತ್ತೇನೆ ಎಂದು ಪ್ರವಾಸೋದ್ಯಮಕ್ಕೆ ಪೂರಕವಾದ ಮಾತುಗಳನ್ನು ಹೇಳಿದ್ದರು. ಇದೀಗ ನರೇಂದ್ರ ಮೋದಿ ಅವರು ಬಹುಮತ ಪಡೆದು, ಪ್ರಧಾನಿಯಾಗಿದ್ದಾರೆ. ಮೈಸೂರಿನಲ್ಲಿಯೂ ಪ್ರತಾಪ್ ಸಿಂಹ ಗೆದ್ದಿದ್ದಾರೆ. ಮೋದಿ ಅವರು ನುಡಿದಂತೆ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮ ರೂಪಿಸಬೇಕಿದೆ.

 ಅಂಶಿ ಪ್ರಸನ್ನಕುಮಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.