ರಾಯಚೂರು

ನಗರ ಕ್ಷೇತ್ರದಲ್ಲಿ ಟಿಕೆಟ್‌ಗೆ ಭಾರಿ ಪೈಪೋಟಿ

Published On :

ಕನ್ನಡಪ್ರಭ ವಾರ್ತೆ ರಾಯಚೂರು ಏ.1
ರಾಜ್ಯ ವಿಧಾನಸಭೆಯ ಚುನಾವಣೆಗೆ ಟಿಕೆಟ್ ಗಿಟ್ಟಿಸಿಕೊಳ್ಳಲು ಈಗ ಭಾರೀ ಪೈಪೋಟಿ. ಎಲ್ಲ ಪಕ್ಷಗಳಲ್ಲಿಯೂ ಟಿಕೆಟ್‌ಗೆ ಸ್ಪರ್ಧೆ ಏರ್ಪಟ್ಟಿದೆ. ಪರಿಣಾಮ ರಾಜಕೀಯ ಪಕ್ಷಗಳಲ್ಲಿ ಭಿನ್ನಮತಕ್ಕೂ ಇದು ಕಾರಣವಾಗಲಿದೆ ಎಂಬುದರಲ್ಲಿ ಸಂಶಯವಿಲ್ಲ. ನಾಮಪತ್ರ ಸಲ್ಲಿಕೆಗೆ ದಿನ ಸಮೀಪಿಸುತ್ತಿದ್ದು ಎಲ್ಲ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆ ಬಿರುಸುಗೊಂಡಿದೆ.
ಪೈಪೋಟಿಗೆ ದಾರಿ: ಜಿಲ್ಲೆಯ ಒಟ್ಟು 7 ವಿಧಾನಸಭೆ ಕ್ಷೇತ್ರಗಳಲ್ಲಿ ನಾಲ್ಕು ಕ್ಷೇತ್ರಗಳು ಎಸ್ಟಿಗೆ, ಒಂದು ಎಸ್ಸಿಗೆ ಹಾಗೂ ಎರಡು ಸಾಮಾನ್ಯರಿಗೆ ಮೀಸಲಾಗಿವೆ. ಹೀಗಾಗಿ ಸಾಮಾನ್ಯ ಕ್ಷೇತ್ರಗಳಲ್ಲಿ ಸಿಂಧನೂರು ಮತ್ತು ರಾಯಚೂರು ವಿಧಾನಸಭೆ ಕ್ಷೇತ್ರಗಳ ಮೇಲೆಯೇ ಎಲ್ಲ ನಾಯಕರ ಕಣ್ಣು ಬಿದ್ದಿದ್ದು ಪೈಪೋಟಿಗೆ ದಾರಿ ಮಾಡಿದೆ.
ಈಗಾಗಲೇ ಸಿಂಧನೂರು ಸಾಮಾನ್ಯ ಕ್ಷೇತ್ರದ ಟಿಕೆಟ್ ನೀಡಿಕೆ ಬಹುತೇಕ ಅಂತ್ಯಗೊಂಡಿದೆ. ಜೆಡಿಎಸ್‌ನಿಂದ ಹಾಲಿ ಶಾಸಕ ವೆಂಕಟರಾವ ನಾಡಗೌಡರ ಸ್ಪರ್ಧೆ ಖಚಿತವಾಗಿದೆ. ಅದೇ ರೀತಿ ಕಾಂಗ್ರೆಸ್‌ನಿಂದ ಬಾದರ್ಲಿ ಹಂಪನಗೌಡರು ಕಣಕ್ಕಿಳಿಯುವುದು ನಿಶ್ಚಿತ. ಇನ್ನುಳಿದಂತೆ ಬಿಎಸ್ಸಾರ್ ಕಾಂಗ್ರೆಸ್ ಮತ್ತು ಕೆಜೆಪಿ ಪಕ್ಷಗಳೂ ಸಹ ತಮ್ಮ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಿವೆ. ಬಿಜೆಪಿ ಸಿಂಧನೂರಿನಲ್ಲಿ ಅಭ್ಯರ್ಥಿಗೆ ಕಾಯುತ್ತಿದೆ.
ಆದರೆ ಜಿಲ್ಲೆಯ ಇನ್ನೊಂದು ಸಾಮಾನ್ಯರ ಕ್ಷೇತ್ರ ರಾಯಚೂರು ನಗರ ಕ್ಷೇತ್ರದಲ್ಲಿ ಈ ಬಾರಿ ಟಿಕೆಟ್ ಗಾಗಿಯೇ ಭಾರೀ ಪೈಪೋಟಿ ಏರ್ಪಟ್ಟಿದೆ. ಕಳೆದ ಚುನಾವಣೆಯ ನಂತರದಲ್ಲಿ ಅನೇಕರು ನಗರ ಕ್ಷೇತ್ರದಲ್ಲಿ ಸ್ಪರ್ಧಿಸುವವರು ತಾವಿದ್ದ ಪಕ್ಷಗಳನ್ನು ತೊರೆದು ಜೆಡಿಎಸ್‌ಗೆ ಸೇರಿದ್ದಾರೆ. ಹಾಗೆ ಜೆಡಿಎಸ್ ಸೇರಿದವರ ಮಧ್ಯೆಯೇ ಈಗ ಟಿಕೆಟ್‌ಗಾಗಿ ಕಿತ್ತಾಟ ಆರಂಭಗೊಂಡಿದೆ.
ಟಿಕೆಟ್ ಯಾರಿಗೆ: ಜಿಲ್ಲಾ ಜೆಡಿಎಸ್ ನಾಯಕರು ಹಾಗೂ ರಾಜ್ಯ ನಾಯಕರು ಜೆಡಿಎಸ್‌ನಲ್ಲಿನ ಪರಿಸ್ಥಿತಿಯಿಂದ ಕಂಗೆಟ್ಟಿದ್ದಾರೆ. ಪಕ್ಷದ ಜಿಲ್ಲಾಧ್ಯಕ್ಷ ಮಹಾಂತೇಶ್ ಪಾಟೀಲ್ ಅತ್ತನೂರು, ಎಂ.ಎಸ್.ಪಾಟೀಲ್, ಡಾ.ಶಿವರಾಜ್ ಪಾಟೀಲ್, ಕುಂಟ್ನಾಳ ವೆಂಕಟೇಶ್, ಇ.ಆಂಜನೇಯ್ಯ ಅವರ ಮಧ್ಯೆ ಟಿಕೆಟ್ ಯಾರಿಗೆ ನೀಡಬೇಕೆಂಬ ಗೊಂದಲದಲ್ಲಿ ವರಿಷ್ಠರಿದ್ದಾರೆ.
ಈ ಐವರು ನಾಯಕರ ಮಧ್ಯೆ ಸಾಮರಸ್ಯ ಮೂಡಿಸಿ ಒಬ್ಬರನ್ನು ಕಣಕ್ಕಿಳಿಸುವುದು ಪಕ್ಷಕ್ಕೆ ತಲೆನೋವು ತಂದಿದೆ. ಈಗಾಗಲೇ ಬೆಂಗಳೂರಿನಲ್ಲಿ ಬೀಡು ಬಿಟ್ಟಿರುವ ಈ ನಾಯಕರುಗಳು ತಮಗೆ ಟಿಕೆಟ್ ನೀಡಬೇಕೆಂದು ಪಟ್ಟುಹಿಡಿದಿದ್ದು ಸಮಸ್ಯೆಗೆ ಕಾರಣವಾಗಿದೆ. ಹೀಗಾಗಿ ಕೊನೆ ಕ್ಷಣದಲ್ಲಿ ಟಿಕೆಟ್ ಪಡೆಯುವವರ ವಿರುದ್ಧವೇ ಬಂಡಾಯದ ಬಿಸಿಯೂ ಕಂಡುಬರುವುದರಲ್ಲಿ ಸಂದೇಹವಿಲ್ಲ.
ತೆರೆಮರೆಯಲ್ಲಿ ವಿರೋಧಿಗಳು: ಇನ್ನು ಕಾಂಗ್ರೆಸ್ ಪಕ್ಷದಲ್ಲಿ ಮೇಲ್ನೋಟಕ್ಕೆ ಅಷ್ಟಾಗಿ ಹಾಲಿ ಶಾಸಕ ಸೈಯದ್ ಯಾಸೀನ್ ಅವರಿಗೆ ಪೈಪೋಟಿಯಿಲ್ಲ ಎಂದು ಕಂಡುಬಂದರೂ ಅವರಿಗೆ ಟಿಕೆಟ್ ದೊರೆಯದಂತೆ ತೆರೆಮರೆಯಲ್ಲಿ ಅವರ ವಿರೋಧಿಗಳು ಕಸರತ್ತು ನಡೆಸಿದ್ದಾರೆಂದು ಹೇಳಲಾಗಿದ್ದು, ಜಿಲ್ಲಾ ಕಾಂಗ್ರೆಸ್ ಪಕ್ಷಕ್ಕೆ ಇದು ಇದು ಹೊಸದೇನಲ್ಲ.
ಇನ್ನು ಬಿಜೆಪಿಯಲ್ಲಿಯೂ ಈಗಾಗಲೇ ನಗರ ಕ್ಷೇತ್ರದಲ್ಲಿ ಸ್ಪರ್ಧೆಗೆ ತೀವ್ರ ಪೈಪೋಟಿ ಕಂಡುಬಂದಿದ್ದು, ಮಾಜಿ ಶಾಸಕ ಪಾಪಾರೆಡ್ಡಿ, ತ್ರಿವಿಕ್ರಮ್ ಜೋಷಿ ಮಧ್ಯೆಯೇ ಟಿಕೆಟ್‌ಗಾಗಿ ನೇರ ಸ್ಪರ್ಧೆಯಿದೆ. ಮಾಜಿ ಶಾಸಕ ಪಾಪಾರೆಡ್ಡಿ ಅವರಿಗೆ ಟಿಕೆಟ್ ಕೈ ತಪ್ಪಿಸಲು ಬಿಜೆಪಿಯ ಪ್ರಮುಖರ ಬಣವೇ ಸಜ್ಜಾಗಿ ನಿಂತಿದೆ ಎಂದು ಗೊತ್ತಾಗಿದೆ.
ಇದೇ ವೇಳೆ ಮುಖಂಡ ತ್ರಿವಿಕ್ರಮ್ ಜೋಷಿ ಅವರು ಪಕ್ಷದ ರಾಷ್ಟ್ರೀಯ ನಾಯಕರೊಬ್ಬರ ಆಪ್ತವಲಯದಲ್ಲಿ ಗುರುತಿಸಿ ಕೊಂಡಿರುವುದು ಅವರಿಗೆ ಟಿಕೆಟ್ ಪಡೆಯಲು ಅನುಕೂಲವಾಗಲಿದೆ ಎಂದು ಹೇಳಲಾಗಿದ್ದು, ಪಾಪಾರೆಡ್ಡಿ ಅವರ ಟಿಕೆಟ್ ತಪ್ಪಿಸಲು ಅವರು ಅದೇ ದಾರಿಯಲ್ಲಿ ಸಾಗುತ್ತಿದ್ದಾರೆ.
ರಾಯಚೂರು ನಗರ ಕ್ಷೇತ್ರದಲ್ಲಿ ಸಣ್ಣಪುಟ್ಟ ಪಕ್ಷಗಳನ್ನು ಹೊರತುಪಡಿಸಿ ಎಲ್ಲ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಟಿಕೆಟ್‌ಗೆ ಬೇಡಿಕೆ ಹೆಚ್ಚಿದ್ದು, ಟಿಕೆಟ್ ಯಾರದೇ ಪಾಲಾದರೂ ಉಳಿದವರು ಕಣಕ್ಕಿಳಿಯುವವರಿಗೆ ಬೆಂಬಲಿಸುವುದು ಅನುಮಾನ ಎಂಬಂಥ ಸ್ಥಿತಿಯಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.