ಮತದಾರರ ಜಾಗೃತಿಗಾಗಿ ಅಧಿಕಾರಿಗಳಿಗೆ ಆದೇಶ
ಕನ್ನಡಪ್ರಭ ವಾರ್ತೆ, ರಾಯಚೂರು, ಏ.1
ಜಿಲ್ಲೆಯಲ್ಲಿ ಮತದಾರರ ನೋಂದಣಿ ಹಾಗೂ ಮತದಾನದ ಪ್ರತಿಶತ ಪ್ರಮಾಣ ಹೆಚ್ಚಳಕ್ಕೆ ರೂಪಿಸಿರುವ ಸ್ವೀಪ್ ಅಭಿಯಾನದ ಯಶಸ್ವಿಗೆ ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಅಧಿಕಾರಿಗಳು ಮಾಡುವಂತೆ ಜಿಲ್ಲಾಧಿಕಾರಿ ಉಜ್ವಲ್ ಕುಮಾರ್ ಘೋಷ್ ಸೂಚಿಸಿದರು.
ಅವರು ನಗರದಲ್ಲಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರೆದಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ನಿರ್ಭೀತಿಯಿಂದ ಮತದಾರರು ತಮ್ಮ ಹಕ್ಕು ಚಲಾಯಿಸುವಂತೆ ಮತದಾರರಿಗೆ ಮಾಹಿತಿ ನೀಡುವುದು ಸ್ವೀಪ್ (ಸಿಸ್ಟೆಮ್ಯಾಟಿಕ್ ವೋಟರ್ಸ್ ಎಜುಕೇಷನ್ ಆಂಡ್ ಎಲೆಕ್ಟ್ರಾಲ್ ಪಾರ್ಟಿಸಿಪೇಷನ್ ಪ್ಲಾನ್) ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ಮನವಿ: ಮತದಾರರು ಸಮೀಪದ ತಹಸೀಲ್ ಕಾರ್ಯಾಲಯಗಳಿಗೆ ಭೇಟಿ ನೀಡಿ ತಮ್ಮ ಹೆಸರನ್ನು ಪರಿಶೀಲಿಸಬೇಕು. ಮತದಾರರ ಯಾದಿಯಲ್ಲಿ ಸೇರಿರದಿದ್ದಲ್ಲಿ ಹೆಸರನ್ನು ಸೇರಿಸಬೇಕು. ಅಲ್ಲದೇ ಹೆಸರು ಬದಲಾವಣೆ, ಮತಗಟ್ಟೆ ಬದಲಾವಣೆ ಈ ಎಲ್ಲ ಕಾರ್ಯಗಳನ್ನು ಏ. 7ರೊಳಗೆ ಸೇರ್ಪಡೆಗೊಳಿಸುವಂತೆ ಮತದಾರರಲ್ಲಿ ಮನವಿ ಮಾಡಿದರು.
ಜಾಗೃತಿ ಕಾರ್ಯಕ್ರಮ: ಭಾರತ ಚುನಾವಣಾ ಆಯೋಗವು ಮತದಾರರಿಗೆ ಅರಿವು ಮೂಡಿಸಲು ಹೊರತಂದಿರುವ ಜಾಹೀರಾತುಗಳನ್ನು ಎಲ್ಲ ಚಲನಚಿತ್ರ ಮಂದಿರಗಳು, ಕೇಬಲ್ ಟಿವಿಗಳು ಪ್ರಸಾರ ಮಾಡಬೇಕು. ಮೊಬೈಲ್ ಸೇವೆ ನೀಡುವ ಕಂಪನಿಗಳು ಮತದಾನದ ಕುರಿತು ಎಸ್ಎಂಎಸ್ಗಳನ್ನು ಕಳುಹಿಸಬೇಕು. ಬಿಎಸ್ಸೆನ್ನೆಲ್ನವರು ಮತದಾನದ ಮಾಹಿತಿಯನ್ನು ಡಯಲ್ ಟೋನಿನಲ್ಲಿ ಅಳವಡಿಸಬೇಕು. ಪದವಿ ಕಾಲೇಜುಗಳಲ್ಲಿ ಮತದಾನದ ಕುರಿತು ಜಾಥಾ, ಮ್ಯಾರಾಥಾನ್, ಸೈಕಲ್ ರೇಸ್ಗಳಂತಹ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಸೂಚಿಸಿದರು.
ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿ. ಜ್ಞಾನಪ್ರಕಾಶ, ಜಿಲ್ಲಾ ಎಸ್ಪಿ ಎಸ್.ಬಿ. ಬಿಸನಳ್ಳಿ, ಅಪರ ಜಿಲ್ಲಾಧಿಕಾರಿ ಎಂ.ತಿಮ್ಮಪ್ಪ, ಸಹಾಯಕ ಆಯುಕ್ತೆ ಮಂಜುಶ್ರೀ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತಿತರರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

