ಕಕ್ಷಿದಾರರಿಗೆ ನ್ಯಾಯ, ಪರಿಸರ ಸಂರಕ್ಷಣೆಗೆ ಗಮನ ಅಗತ್ಯ
ಕನ್ನಡಪ್ರಭ ವಾರ್ತೆ,ಲಿಂಗಸ್ಗೂರು,ಏ.7
ನ್ಯಾಯವಾದಿಗಳ ಬಳಿ ಹಲವಾರು ಸಮಸ್ಯೆಗಳ ಪರಿಹಾರಕ್ಕೆ ಆಗಮಿಸುವ ಕಕ್ಷಿದಾರರಿಗೆ ಸರಿಯಾದ ರೀತಿಯಲ್ಲಿ ಸ್ಪಂದಿಸಿ ಅವರಿಗೆ ನ್ಯಾಯ ದೊರಕಿಸಿ ಕೊಡಬೇಕು. ಗಿಡ- ಮರಗಳನ್ನು ಬೆಳೆಸಿ ಪರಿಸರ ಸಂರಕ್ಷಣೆ ಮಾಡುವತ್ತ ಗಮನ ಹರಿಸಬೇಕೆಂದು ಕರ್ನಾಟಕ ಉಚ್ಚ ನ್ಯಾಯಾಲಯ ಮತ್ತು ರಾಯಚೂರು ಜಿಲ್ಲೆಯ ಆಡಳಿತಾತ್ಮಕ ನ್ಯಾಯಾಧೀಶರಾದ ಬಿ.ಶ್ರೀನಿವಾಸಗೌಡ ಸಲಹೆ ನೀಡಿದರು.
ಸ್ಥಳೀಯ ಹಿರಿಯ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯದ ನೂತನ ಕಟ್ಟಡ ಹಾಗೂ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಅಮಾಯಕ ಮತ್ತು ಅನಕ್ಷರಸ್ಥ ಕಕ್ಷಿದಾರರ ಬಗ್ಗೆ ವಕೀಲರು ಗೌರವಭಾವನೆ ಹೊಂದಬೇಕು. ಕಿರಿಯ ವಕೀಲರು ತಮ್ಮ ಜವಬ್ದಾರಿಯುತ ವೃತ್ತಿ ಅರಿತು ನ್ಯಾಯಾಂಗ ಕ್ಷೇತ್ರದಲ್ಲಿ ವೃತ್ತಿ ಪ್ರಾವೀಣ್ಯತೆ ಹೊಂದಿದ ಹಿರಿಯ ವಕೀಲರ ಮಾರ್ಗದರ್ಶನ ಪಡೆದು ಸಮಾಜದಲ್ಲಿ ಮಾದರಿ ವಕೀಲರಾಗಬೇಕೆಂದು ನುಡಿದರು.
ಸಿವಿಲ್ ಮೊಕದ್ದಮೆಗೆ ಆಸಕ್ತಿ ತೋರಿ: ಇಂದಿನ ದಿನಮಾನಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಮುಂದುವರಿದಿದ್ದು, ನ್ಯಾಯಾಂಗ ಇಲಾಖೆ ನ್ಯಾಯಾಲಯಗಳಿಗೆ ಅನೇಕ ಸವಲತ್ತು ಒದಗಿಸಿದೆ. ಹಳೆಯ ಪ್ರಕರಣಗಳನ್ನು ವಿಳಂಬ ಮಾಡದೆ ಶೀಘ್ರ ಪರಿಹರಿಸಬೇಕು. ಕಿರಿಯ ವಕೀಲರು ಸಮಯ ಪ್ರಜ್ಞೆ ಅರಿತು ನಿರಂತರ ಅಧ್ಯಯನ ನಡೆಸುವ ಜೊತೆಗೆ ಸಿವಿಲ್ ಮೊಕದ್ದಮೆಗೆ ಹೆಚ್ಚಿನ ಆಸಕ್ತಿ ತೋರಿದರೆ ವೃತ್ತಿಯಲ್ಲಿ ಗಟ್ಟಿಯಾಗಿ ನಿಲ್ಲಲು ಸಾಧ್ಯವಾಗಲಿದೆ ಎಂದರು.
ಕೋರ್ಟ್ ಸಮಯ ಬದಲಾವಣೆಗೆ ಕ್ರಮ: ರಾಯಚೂರು ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿರುವುದರಿಂದ ನ್ಯಾಯಾಲಯದ ಸಮಯ ಬದಲಾವಣೆಗೆ ಕ್ರಮ ಕೈಗೊಳ್ಳಲಾಗುವುದು. ಲಿಂಗಸ್ಗೂರು ಸಿವಿಲ್ ನ್ಯಾಯಾಲಯಕ್ಕೆ ದೇವದುರ್ಗ ನ್ಯಾಯಾಲಯ ಮತ್ತು ಸಿಂಧನೂರು ನ್ಯಾಯಾಲಯಕ್ಕೆ ಮಾನವಿ ನ್ಯಾಯಾಲಯ ಒಳಪಡಿಸಲು ಪ್ರಸ್ತಾವನೆ ಸಲ್ಲಿಸುವುದಾಗಿ ತಿಳಿಸಿದರು.
ಸಮಾರಂಭದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಿಟ್ಟಲಕೋಡ, ಹಿರಿಯ ಶ್ರೇಣಿ ನ್ಯಾಯಾಧೀಶರಾದ ಶಶಿಧರ್, ಕಿರಿಯ ಶ್ರೇಣಿ ನ್ಯಾಯಾಧೀಶರಾದ ದಿನೇಶ, ಲೋಕೋಪಯೋಗಿ ಇಲಾಖೆ ಎಇಇ ಮಹಾಂತಪ್ಪ ಕಣ್ಣೂರ, ವಕೀಲರ ಸಂಘದ ಅಧ್ಯಕ್ಷ ಮುದುಕಪ್ಪ ನೀರಲಕೇರಿ, ಕಾರ್ಯದರ್ಶಿ ಜಂಬಣ್ಣ ಮಂಚಾಲಿ ಉಪಸ್ಥಿತರಿದ್ದರು.
ಸನ್ಮಾನ: ಇದೇ ವೇಳೆ ವಕೀಲ ವೃತ್ತಿಯಲ್ಲಿ 50 ವರ್ಷ ಸೇವೆ ಸಲ್ಲಿಸಿದ ಹಿರಿಯ ವಕೀಲರಾದ ಸಂಕರಗೌಡ ಪಾಟೀಲರನ್ನು ಸನ್ಮಾನಿಸಲಾಯಿತು. ಸೈಯದ್ ಶಂಶುದ್ದೀನ್ ವಕೀಲರು ಸ್ವಾಗತಿಸಿದರು. ಮಹೇಶ ಹಿರೇಮಠ ವಕೀಲರು ಕಾರ್ಯಕ್ರಮ ನಿರೂಪಿಸಿದರು. ಕುಪ್ಪಣ್ಣ ಮಾಣಿಕ್ ವಕೀಲರು ಹಾಗೂ ಸೂರ್ಯಚಂದ್ರ ವಕೀಲರು ಅತಿಥಿಗಳ ಪರಿಚಯ ಮಾಡಿಕೊಟ್ಟರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

