ಪಕ್ಷಾಂತರಿಗಳಿಗೆ ಟಿಕೆಟ್ ಬೇಡ
ಕನ್ನಡಪ್ರಭ ವಾರ್ತೆ,ರಾಯಚೂರು,ಏ.7
ಲಿಂಗಸ್ಗೂರು ವಿಧಾನಸಭೆ ಕ್ಷೇತ್ರದ ಬಿಜೆಪಿ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿರುವ ತಮಗೆ ಪಕ್ಷದ ವರಿಷ್ಠರು ಟಿಕೆಟ್ ನೀಡುವುರೆಂಬ ಆಶಾಭಾವನೆ ಹೊಂದಿರುವುದಾಗಿ ಹೇಳಿದ ಪಕ್ಷದ ಎಸ್ಸಿ ಘಟಕದ ಮುಖಂಡ ಜಗನ್ನಾಥ ಸುಂಕಾರಿ ಅವರು, ಪಕ್ಷಾಂತರಿಗಳಿಗೆ ಮಣೆ ಹಾಕದಂತೆ ವರಿಷ್ಠರಿಗೆ ಮನವಿ ಮಾಡಿದ್ದಾರೆ.
ಈ ಕುರಿತು ನಗರದಲ್ಲಿ ಭಾನುವಾರ ಅವರು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ 6 ವರ್ಷದಿಂದ ಬಿಜೆಪಿಯಲ್ಲಿದ್ದು, ಲಿಂಗಸ್ಗೂರು ವಿಧಾನಸಭೆ ಕ್ಷೇತ್ರದೊಂದಿಗೆ ನಿರಂತರ ಸಂಪರ್ಕವಿರಿಸಿಕೊಂಡಿದ್ದು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ತಾವು ಪಕ್ಷದ ವರಿಷ್ಠರಿಗೆ ಟಿಕೆಟ್ ನೀಡುವಂತೆ ಕೋರಿದರೂ ಕಡೆಯ ಹಂತದಲ್ಲಿ ಕಾಂಗ್ರೆಸ್ನಿಂದ ಪಕ್ಷ ಸೇರಿದ ಮಾನಪ್ಪ ವಜ್ಜಲ್ ಅವರಿಗೆ ಟಿಕೆಟ್ ನೀಡಲಾಗಿತ್ತು. ಆದರೆ ಅವರೂ ಸದ್ಯ ಪಕ್ಷ ತೊರೆದಿದ್ದಾರೆಂದು ಟೀಕಿಸಿದರು.
ಪಕ್ಷಾಂತರಿಗಳಿಗೆ ಟಿಕೆಟ್ ಬೇಡ: ಪ್ರಸಕ್ತ ಚುನಾವಣೆಯಲ್ಲಿ ಇದುವರೆಗೆ ಲಿಂಗಸ್ಗೂರು ಎಸ್ಸಿ ಮೀಸಲು ಕ್ಷೇತ್ರದಿಂದ ಸ್ಪರ್ಧಿಸುವ ನಿಟ್ಟಿನಲ್ಲಿ ತಮ್ಮ ಹೆಸರು ವರಿಷ್ಠರಿಗೆ ಕಳಿಸಲಾಗಿದೆ. ಜಿಲ್ಲೆಯ ಎಲ್ಲ ನಾಯಕರು ತಮ್ಮನ್ನು ಬೆಂಬಲಿಸಿದ್ದು, ಕಳೆದ ಎರಡು ದಿನಗಳಿಂದ ತಮ್ಮ ಬದಲಿಗೆ ಕಾಂಗ್ರೆಸ್ ಟಿಕೆಟ್ ವಂಚಿತ ಡಿ.ಎಸ್. ಹೂಲಿಗೇರಿ ಮತ್ತು ಟಿ.ಆರ್. ನಾಯಕ ಅವರಿಗೆ ಟಿಕೆಟ್ ದೊರೆಯುವುದೆಂಬ ಮಾಹಿತಿ ದೊರೆತಿದ್ದು ಅದಕ್ಕೆ ತಮ್ಮ ಆಕ್ಷೇಪವಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ ಆರು ವರ್ಷಗಳಿಂದ ಲಿಂಗಸ್ಗೂರು ಕ್ಷೇತ್ರದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸುವಲ್ಲಿ ಹಾಗೂ ಕಾರ್ಯಕರ್ತರನ್ನು ಸಜ್ಜುಗೊಳಿಸುವಲ್ಲಿ ತಾವು ಶ್ರಮಿಸಿದ್ದು, ತಮ್ಮನ್ನು ಬದಿಗಿರಿಸಿ ಇತ್ತೀಚೆಗೆ ಪಕ್ಷಕ್ಕೆ ಸೇರಲು ಸಜ್ಜಾಗಿರುವವರಿಗೆ ಟಿಕೆಟ್ ನೀಡುವುದು ನ್ಯಾಯಸಮ್ಮತವಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ನನಗೆ ಅನ್ಯಾಯ ಮಾಡಬೇಡಿ: ಈಗಾಗಲೇ ಈ ಇಬ್ಬರು ನಾಯಕರು ದೆಹಲಿಯಿಂದ ರಾಜ್ಯ ಸಮಿತಿ ಮೇಲೆ ಪ್ರಭಾವ ಬೀರುವ ಕಾರ್ಯ ಮಾಡಿದ್ದಾರೆಂದು ಗೊತ್ತಾಗಿದ್ದು, ಪಕ್ಷವು ಇಂಥ ಪಕ್ಷಾಂತರಿಗಳಿಗೆ ಮಣೆ ಹಾಕದಂತೆ ಮನವಿ ಮಾಡಿದ ಅವರು, ಕಳೆದ ಬಾರಿ ಚುನಾವಣೆಯ ವೇಳೆ ಕೊನೆಯವರೆಗೂ ಬಿಜೆಪಿಯಲ್ಲಿಯೇ ಉಳಿಯುವುದಾಗಿ ಹೇಳಿ ಸೇರಿದ್ದ ಮಾನಪ್ಪ ವಜ್ಜಲ್ ಈಗ ಪಕ್ಷ ತೊರೆದಿದ್ದನ್ನು ವರಿಷ್ಠರು ಗಮನದಲ್ಲಿರಿಸಿಕೊಂಡು ಟಿಕೆಟ್ ಹಂಚಿಕೆಯಲ್ಲಿ ತಮಗೆ ಅನ್ಯಾಯ ಮಾಡದಂತೆ ಮನವಿ ಮಾಡಿದರು.
ಹಾಗೊಂದು ವೇಳೆ ಪಕ್ಷದ ವರಿಷ್ಠರು ಬೇರೆಯವರಿಗೆ ಟಿಕೆಟ್ ನೀಡಿ ತಮಗೆ ವಂಚಿಸಿದಲ್ಲಿ ತಾವು ತಮ್ಮ ಬೆಂಬಲಿಗರೊಂದಿಗೆ ಚರ್ಚಿಸಿ ತಮ್ಮ ಮುಂದಿನ ರಾಜಕೀಯ ಭವಿಷ್ಯದ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿಯೂ ಅವರು ಪಕ್ಷದ ವರಿಷ್ಠರಿಗೆ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಮಹಾಲಿಂಗ ಸೇರಿದಂತೆ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

