ರಾಯಚೂರು

ಇಂದಿನಿಂದ ನಾಮಪತ್ರ ಸಲ್ಲಿಕೆ: ರಾಜಕೀಯ ಚುರುಕು

Published On :

 ವಿಶೇಷ ವರದಿ
ಕನ್ನಡಪ್ರಭ ವಾರ್ತೆ   ರಾಯಚೂರು   ಏ.9
ಜಿಲ್ಲೆಯಲ್ಲಿ ವಿಧಾನಸಭೆಯ 7 ಕ್ಷೇತ್ರಗಳಿಗೆ ಮೇ 5ರಂದು ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಕೆ ಕಾರ್ಯ ಏ.10ರಿಂದ ಆರಂಭಗೊಳ್ಳಲಿದೆ. ರಾಜಕೀಯ ಚಟುವಟಿಕೆ ಚುರುಕುಗೊಳ್ಳಲಿದೆ. ಈಗಾಗಲೇ ಟಿಕೆಟ್ ಪಡೆದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಗೂ ಮುನ್ನವೇ ಪ್ರಚಾರಕ್ಕೆ ಮುಂದಾಗಿದ್ದು, ಚುನಾವಣೆಯ ಭರಾಟೆಯನ್ನು ಸ್ಪಷಪಡಿಸಿದೆ.
ಚುನಾವಣೆ ಆಯೋಗವು ಅಧಿಕೃತವಾಗಿ ಏ.10ರಂದು ಚುನಾವಣೆಯ ಅಧಿಸೂಚನೆ ಹೊರಡಿಸುವ ಮೂಲಕ ನಾಮಪತ್ರಗಳ ಸಲ್ಲಿಕೆ ಪ್ರಕ್ರಿಯೆಗೆ ಚಾಲನೆ ನೀಡಲಿದೆ. ಏ.17ರವರೆಗೆ ನಾಮಪತ್ರಗಳ ಸಲ್ಲಿಕೆಯ ಕಾರ್ಯ ನಡೆಯಲಿದ್ದು, ಏ.18 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಏ.20 ನಾಮಪತ್ರಗಳ ಹಿಂಪಡೆಯಲು ಕಡೆಯ ದಿನವಾಗಿದೆ.
ಮೀಸಲು: ಜಿಲ್ಲೆಯ ರಾಯಚೂರು ನಗರ ಮತ್ತು ಸಿಂಧನೂರು ವಿಧಾನಸಭೆ ಕ್ಷೇತ್ರಗಳು ಸಾಮಾನ್ಯರಿಗೆ ಮೀಸಲಾಗಿದೆ.ದೇವದುರ್ಗ, ಮಸ್ಕಿ ಮತ್ತು ಮಾನವಿ ವಿಧಾನಸಭೆ ಕ್ಷೇತ್ರಗಳು ಎಸ್ಟಿಗೆ ಮೀಸಲಾಗಿವೆ. ಅದೇ ರೀತಿ ಲಿಂಗಸ್ಗೂರು ಕ್ಷೇತ್ರವು ಎಸ್ಸಿ ಯವರಿಗೆ ಮೀಸಲಾಗಿದ್ದು, ಈಗಾಗಲೇ ಟಿಕೆಟ್ ಪಡೆದ ಅಭ್ಯರ್ಥಿಗಳು ರಾಜಕೀಯ ತಂತ್ರಗಾರಿಕೆಯ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
ರಾಯಚೂರು ನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸೈಯದ್ ಯಾಸೀನ್, ಬಿಜೆಪಿಯಿಂದ ತ್ರಿವಿಕ್ರಮ್ ಜೋಷಿ, ಬಿಎಸ್ಪಿಯಿಂದ ಹಾರೇಸ್ ಸಿದ್ದಿಖಿ ಹಾಗೂ ಬಿಎಸ್ಸಾರ್ ಕಾಂಗ್ರೆಸ್‌ನಿಂದ ನಟಿ ಪೂಜಾಗಾಂಧಿ ಸ್ಪರ್ಧಿಸುವುದು ಖಚಿತವಾಗಿದೆ.
ವಿವಿಧ ಅಭ್ಯರ್ಥಿಗಳು: ಜೆಡಿಎಸ್ ಪಾಳೆಯದಲ್ಲಿ ಟಿಕೆಟ್ ಪೈಪೋಟಿ ಹೆಚ್ಚಿದ್ದು, ಅದರಿಂದಾಗಿ ಟಿಕೆಟ್ ಇದುವರೆಗೆ ಘೋಷಣೆಯಾಗಿಲ್ಲ. ಇನ್ನು ಕೆಜೆಪಿ ಸಹ ಕಾದು ನೋಡುವ ತಂತ್ರಕ್ಕೆ ಶರಣಾಗಿದೆ. ಇನ್ನು ದೇವದುರ್ಗದಲ್ಲಿ ಕಾಂಗ್ರೆಸ್‌ನಿಂದ ಮಾಜಿ ಸಂಸದ ವೆಂಕಟೇಶ್ ನಾಯಕ, ಬಿಜೆಪಿಯಿಂದ ಶಾಸಕ ಶಿವನಗೌಡ ನಾಯಕ, ಕೆಜೆಪಿಯಿಂದ ಶಾಂತನಗೌಡ ಸ್ಪರ್ಧೆಗಿಳಿಯುವುದು ಖಚಿತವಾಗಿದೆ. ಆದರೆ ಜೆಡಿಎಸ್ ಮತ್ತು ಬಿಎಸ್ಸಾರ್ ಕಾಂಗ್ರೆಸ್ ಅಭ್ಯರ್ಥಿ ಪ್ರಕಟಿಸಿಲ್ಲ.
ಮಾನವಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಹಾಲಿ ಶಾಸಕ ಹಂಪಯ್ಯ ನಾಯಕ ಸ್ಪರ್ಧಿಸಲಿದ್ದಾರೆಂದು ಹೇಳಲಾಗಿದೆ. ಆದರೆ ಅದು ಇನ್ನೂ ಪ್ರಕಟಗೊಂಡಿಲ್ಲ. ಬಿಜೆಪಿಯೂ ತನ್ನ ಅಭ್ಯರ್ಥಿಯ ಹೆಸರು ಪ್ರಕಟಿಸಬೇಕಿದೆ. ಕೆಜೆಪಿಯಿಂದ ಗಂಗಾಧರ ನಾಯಕ, ಜೆಡಿಎಸ್‌ನಿಂದ ರಾಜಾ ವೆಂಕಟಪ್ಪ ನಾಯಕ, ಬಿಎಸ್ಸಾರ್ ಕಾಂಗ್ರೆಸ್‌ನಿಂದ ದದ್ದಲ ಬಸನಗೌಡ ಕಣಕ್ಕಿಳಿಯಲಿದ್ದಾರೆ.
ವಿವಿಧ ಪಕ್ಷಗಳು: ಸಿಂಧನೂರು ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಹಾಲಿ ಶಾಸಕ ವೆಂಕಟರಾವ್ ನಾಡಗೌಡ, ಕಾಂಗ್ರೆಸ್‌ನಿಂದ ಹಂಪನಗೌಡ ಬಾದರ್ಲಿ, ಬಿಜೆಪಿಯಿಂದ ಕೊಲ್ಲಿ ಶೇಷಗಿರಿರಾವ್, ಬಿಎಸ್ಸಾರ್‌ನಿಂದ ಕೆ. ಕರಿಯಪ್ಪ ಹಾಗೂ ಕೆಜೆಪಿಯಿಂದ ರಾಜಶೇಖರ್ ಪಾಟೀಲ್ ಸ್ಪರ್ಧೆಗಿಳಿಯಲಿದ್ದಾರೆ.
ಮಸ್ಕಿಯಲ್ಲಿ ಕಾಂಗ್ರೆಸ್ ನಿಂದ ಪ್ರತಾಪಗೌಡ ಪಾಟೀಲ್, ಜೆಡಿಎಸ್‌ನಿಂದ ಅಮರೇಶ ಬಲ್ಲಟಗಿ, ಕೆಜೆಪಿಯಿಂದ ಮಹಾದೇವಪ್ಪಗೌಡ ಕಣಕ್ಕಿಳಿಯಲಿದ್ದರೆ, ಬಿಎಸ್ಸಾರ್ ಮತ್ತು ಬಿಜೆಪಿ ಅಭ್ಯರ್ಥಿಗಳನ್ನು ಘೋಷಿಸಿಲ್ಲ. ಲಿಂಗಸ್ಗೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಪಾಮಯ್ಯ ಮುರಾರಿ, ಜೆಡಿಎಸ್ ನಿಂದ ಮಾನಪ್ಪ ವಜ್ಜಲ್, ಬಿಎಸ್ಸಾರ್‌ನಿಂದ ಸಿದ್ದುಬಂಡಿ, ಕೆಜೆಪಿಯಿಂದ ಎಚ್.ಬಿ. ಮುರಾರಿ ಸ್ಪರ್ಧೆಗಿಳಿಯಲಿದ್ದಾರೆ. ಇಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಪ್ರಕಟಿಸಿಲ್ಲ. ಜಿಲ್ಲೆಯಲ್ಲಿ ಕಳೆದ ಚುನಾವಣೆಯಲ್ಲಿ ದೇವದುರ್ಗ, ಲಿಂಗಸ್ಗೂರು ಹಾಗೂ ಮಸ್ಕಿಯಲ್ಲಿ ಬಿಜೆಪಿ ಗೆದ್ದಿದ್ದರೆ, ರಾಯಚೂರು ನಗರ, ಗ್ರಾಮೀಣ ಹಾಗೂ ಮಾನವಿಯಲ್ಲಿ ಕಾಂಗ್ರೆಸ್ ಗೆದ್ದಿತ್ತು. ಜೆಡಿಎಸ್ ಒಂದು ಸ್ಥಾನ ಗಳಿಸಿತ್ತು.
ಗುಂಪುಗಾರಿಕೆ: ಈಗ ಮತ್ತೆ ವಿಧಾನಸಭೆಗೆ ಚುನಾವಣೆ ಬಂದಿದೆ. ಈ ಬಾರಿ ಎಲ್ಲ ಪಕ್ಷಗಳಲ್ಲಿ ಟಿಕೆಟ್ ಹಂಚಿಕೆಯು ಅಸಮಾಧಾನದ ಅಲೆಯನ್ನೇ ಸೃಷ್ಟಿಸಿದೆ. ಕಳೆದ ಐದು ವರ್ಷಗಳಲ್ಲಿ ಎಲ್ಲ ರಾಜಕೀಯ ಪಕ್ಷಗಳಲ್ಲಿ ಗುಂಪುಗಾರಿಕೆ ಹೆಚ್ಚಿದೆ. ಕಳೆದ ಚುನಾವಣೆಯ ನಂತರದಲ್ಲಿ ಬಿಜೆಪಿ ವರ್ಚಸ್ಸು ಮಂಕಾಗಿದೆ. ಬಿಜೆಪಿ ಗೆ ಭಿನ್ನಮತದ ಬಿಸಿ ತಟ್ಟಲಿದೆ. ಕಾಂಗ್ರೆಸ್‌ಗೆ ಗುಂಪುಗಾರಿಕೆ ಹಾಗೂ ಜೆಡಿಎಸ್‌ನಲ್ಲಿನ ಟಿಕೆಟ್ ಹಂಚಿಕೆಯಲ್ಲಿನ ಅಸಮಾಧಾನ ಸಮಸ್ಯೆಯಾಗಿ ಕಾಡುವುದರಲ್ಲಿ ಸಂದೇಹವಿಲ್ಲ. ಎಲ್ಲ ರಾಜಕೀಯ ಪಕ್ಷಗಳು ಗೊಂದಲದ ಗೂಡಾಗಿವೆ. ಗೊಂದಲಗಳ ಮಧ್ಯೆಯೇ ಏ. 10ರಿಂದ ನಾಮಪತ್ರ ಸಲ್ಲಿಕೆ ಕಾರ್ಯ ಆರಂಭಗೊಳ್ಳಲಿದ್ದು, ರಾಜಕೀಯ ಜಿಲ್ಲೆಯಲ್ಲಿ ಚುರುಕುಗೊಳ್ಳಲಿದೆ. ರಾಜಕೀಯದ ಮೇಲಾಟಕ್ಕೆ ಜಿಲ್ಲೆ ಸಾಕ್ಷಿಯಾಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.