ರಾಯಚೂರು

ಪಕ್ಷಕ್ಕಿಂತ ವೈಯಕ್ತಿಕ, ಜಾತಿ ಪ್ರತಿಷ್ಠೆಗೆ ಬೆಲೆ

Published On :

 ಪ್ರಹ್ಲಾದ ಗುಡಿ
ಕನ್ನಡಪ್ರಭ ವಾರ್ತೆ   ಸಿಂಧನೂರು   ಏ.9
ವಿಧಾನಸಭೆ ಕ್ಷೇತ್ರ ಎಂದಿನಿಂದಲೂ ಜಾತಿ ಪ್ರತಿಷ್ಠೆಯ ಕಣ. ಚುನಾವಣೆ ಕಣವು ಇಲ್ಲಿ ಪ್ರತಿಷ್ಠೆಯಾಗಿ ಮಾರ್ಪಾಟಾಗಿದ್ದಿದೆ. ಸದ್ಯ ಸಾಮಾನ್ಯರಿಗೆ ಮೀಸಲಾಗಿರುವ ಈ ಕ್ಷೇತ್ರದಲ್ಲಿ  ರಾಜಕೀಯ ಪಕ್ಷಗಳಿಗಿಂತ ಜಾತಿ ರಾಜಕಾರಣವೇ ಪ್ರಮುಖ ಪಾತ್ರ ವಹಿಸುತ್ತಿರುವುದು ಮಾತ್ರ ದುರಾದೃಷ್ಟಕರ ಸಂಗತಿ.
ಸಿಂಧನೂರು ಕ್ಷೇತ್ರದಲ್ಲಿ ಲಿಂಗಾಯತರ ಪ್ರಾಬಲ್ಯ 1952ರ ಚುನಾವಣೆಯಿಂದಲೂ ಕಾಣಸಿಗುತ್ತದೆ. ಮೊದಲ ಚುನಾವಣೆಯಲ್ಲಿ ನೆಹರೂ ಕುಟುಂಬಕ್ಕೆ ಹತ್ತಿರವಾಗಿದ್ದ ತಾಲೂಕಿನ ವಲ್ಕಂದಿನ್ನಿಯ ಜನಾರ್ದನ ರಾವ್ ದೇಸಾಯಿ ಎಂಬುವವರು ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದರು. ಆದರೆ ಅವರ ಪ್ರತಿಸ್ಪರ್ಧಿ ಲಿಂಗಾಯತ ಕೋಮಿನ ಗುಡದೂರಿನ ಶಿವಬಸನಗೌಡ ಎಂಬುವವರು ಗೆದ್ದಿದ್ದು, ಜಾತಿ ರಾಜಕಾರಣದ ಮೊದಲ ಹೆಜ್ಜೆ.
ಲಿಂಗಾಯತರ ಪ್ರಾಬಲ್ಯ: 1957ರಲ್ಲಿ ಮತ್ತು 1962ರಲ್ಲಿ ಪೊಲೀಸ್ ಗೌಡರ ಮನೆತನದ ಬಸವಂತರಾಯಗೌಡರು ಕಾಂಗ್ರೆಸ್ ನಿಂದ ಗೆಲ್ಲುವ ಮೂಲಕ ಲಿಂಗಾಯತರ ಪ್ರಾಬಲ್ಯ ಮೆರೆದರು. 1967ರಲ್ಲಿ ಗದ್ರಟಗಿ ಗ್ರಾಮದ ಅಮರೇಗೌಡರನ್ನು ಪಕ್ಷೇತರರಾಗಿ ಕಣಕ್ಕಿಳಿಸಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಗೆಲ್ಲಿಸಲಾಯಿತು.
ಪುನಾ 1972ರಲ್ಲಿ ಬಸವಂತರಾಯಗೌಡರು ಕಾಂಗ್ರೆಸ್‌ನಿಂದ ಮೂಲಕ ಗೆಲ್ಲುವ ಮೂಲಕ ತಮ್ಮ ಅಸ್ತಿತ್ವ ಮೆರೆದರು. 1957ರಿಂದ 1972ರವರೆಗೆ ಕ್ಷೇತ್ರದಲ್ಲಿ ಲಿಂಗಾಯತ ಕೋಮಿನ ಅಭ್ಯರ್ಥಿಗಳು ಪ್ರಾಬಲ್ಯ ಮೆರೆದರು. 1978ರಲ್ಲಿ ಈಡಿಗ ಜನಾಂಗದ ರಾಗಲಪರ್ವಿ ನಾರಾಯಣಪ್ಪ, ಕಾಂಗ್ರೆಸ್ ಮೂಲಕ ಗೆದ್ದು ಲಿಂಗಾಯತರ ಪ್ರಾಬಲ್ಯಕ್ಕೆ ಕೊಂಚ ಮಟ್ಟಿಗೆ ಕಡಿವಾಣ ಹಾಕಿದರು.
ನಂತರ 1983ರಲ್ಲಿ ಮೇರನಾಳ ಮಲ್ಲಪ್ಪ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದಿದ್ದು ಇತಿಹಾಸ. ಮಲ್ಲಪ್ಪರನ್ನು ಸಾಮಾನ್ಯ ಜನ ಸೇರಿ ಹಿಂದುಳಿದ ವರ್ಗಗಳ ಜನ ಬೆಂಬಲಿಸಿದ್ದರು. ಅವರ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಮಲ್ಲಪ್ಪರನ್ನು ಕಾಡಾ ಅಧ್ಯಕ್ಷರಾಗಿ ನೇಮಿಸಿದ್ದರು.
ಆಶಾಕಿರಣ: 1985ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಆರ್. ನಾರಾಯಣಪ್ಪ ಗೆಲವು ಸಾಧಿಸಿದರು. 1989ರಲ್ಲಿ ಬಾದರ್ಲಿ ಹಂಪನಗೌಡ ಜನತಾದಳ ದಿಂದ ಆಯ್ಕೆಯಾಗುವ ಮೂಲಕ ಲಿಂಗಾಯತರ ಪ್ರಾಬಲ್ಯ ಪುನಾ ಮೆರೆದರು. 1994ರಲ್ಲಿ ಕಾಂಗ್ರೆಸ್ ಪಕ್ಷದಿಂದ ಕೆ. ವಿರೂಪಾಕ್ಷಪ್ಪ ಆಯ್ಕೆಗೊಂಡು ಪುನಾ ಹಿಂದುಳಿದ ವರ್ಗದವರಿಗೆ ಆಶಾಕಿರಣವಾದರು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಜನತಾದಳ ಹೋಳಾಗಿ ಹಂಪನಗೌಡ ಬಾದರ್ಲಿ ಅವರು ಜೆಡಿಯು ನಿಂದ ಸ್ಪರ್ಧಿಸಿ ಗೆಲವು ಕಂಡರು.
ಆದರೆ ಮುಂದೆ ಆ ಪಕ್ಷ ರಾಜ್ಯದಲ್ಲಿ ನೆಲೆ ಕಳೆದುಕೊಂಡಾಗ ಕಾಂಗ್ರೆಸ್ ಸೇರಿದ ಹಂಪನಗೌಡರು 2004ರಲ್ಲಿ ಗೆದ್ದು ಮೂರನೇ ಬಾರಿ ಶಾಸಕರಾದರು. 2008ರಲ್ಲಿ ಸಿಂಧನೂರು ವಿಧಾನಸಭಾ ಕ್ಷೇತ್ರ ಪುನಾ ವಿಂಗಡಣೆಯಲ್ಲಿ ಸಾಮಾನ್ಯರಿಗೆ ಮೀಸಲಾಯಿತು. ಆಗ ಕ್ಷೇತ್ರದ ಬಹುತೇಕ ಹಳ್ಳಿಗಳು ನೂತನವಾಗಿ ರಚನೆಯಾದ ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ಸೇರ್ಪಡೆಗೊಂಡವು. 2008ರಲ್ಲಿ ಜೆಡಿಎಸ್‌ನಿಂದ ವೆಂಕಟರಾವ್ ನಾಡಗೌಡ ವಿಜಯಿಯಾದರು.
ಸಚಿವರನ್ನು ಕಾಣದ ಕ್ಷೇತ್ರ: ಸಿಂಧನೂರು ವಿಧಾನಸಭಾ ಕ್ಷೇತ್ರದಿಂದ ಚುನಾಯಿತರಾದ ಶಾಸಕರು ಇದುವರೆಗೂ ಒಮ್ಮೆಯೂ ಸಚಿವರಾಗಿಲ್ಲ ಎಂಬುದು ಸತ್ಯ. ಇಲ್ಲಿ ಆಯ್ಕೆಯಾದ ಶಾಸಕರು ವಿರೋಧ ಪಕ್ಷದಲ್ಲಿ ಕೂಡುವುದು ಖಚಿತ. ರಾಜ್ಯದಲ್ಲಿ ಬಹುಮತ ಪಡೆಯುವ ಪಕ್ಷದ ವಿರುದ್ಧ ಇಲ್ಲಿನ ಮತದಾರ ತನ್ನ ನಿಲುವು ಪ್ರಕಟಿಸುತ್ತಿರುವುದು ಇದಕ್ಕೆ ಕಾರಣ.
ಹೀಗಾಗಿ ನಗರ ಪ್ರದೇಶ ಹೊರತುಪಡಿಸಿ ಅಭಿವೃದ್ಧಿಯಿಂದ ದೂರ. ಸಮಸ್ಯೆಗಳಿಗೆ ತೀರಾ ಹತ್ತಿರದಲ್ಲಿರುವ ಸಿಂಧನೂರು ಕ್ಷೇತ್ರದ ಮತದಾರರು ಮತ್ತೊಂದು ಚುನಾವಣೆಗೆ ಸಜ್ಜಾಗುತ್ತಿದ್ದಾರೆ. ಈ ಬಾರಿಯಾದರೂ ಕ್ಷೇತ್ರದಲ್ಲಿ ಆಯ್ಕೆಯಾದವರು ಸಚಿವರಾಗುತ್ತಾರೋ ಎಂಬುದು ಸದ್ಯದ ಪ್ರಶ್ನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.