ಲೈಂಗಿಕ ದೌರ್ಜನ್ಯ: ಆರೋಪಿ ಬಂಧನಕ್ಕೆ ಒತ್ತಾಯ
ಯಾದಗಿರಿ: ತಾಲೂಕಿನ ಆಶನಾಳ ಗ್ರಾಮದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಲಾಯಿತು. ಆಲ್ ಇಂಡಿಯಾ ಮಹಿಳಾ ಸಾಂಸ್ಕೃತಿಕ ಸಂಘಟನೆ( ಎಐಎಂಎಸ್ಎಸ್) ಹಾಗೂ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಶನ್ (ಎಐಡಿವೈಒ) ನೇತೃತ್ವದಲ್ಲಿ ಆಶನಾಳ ಗ್ರಾಮಸ್ಥರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಆಶನಾಳ ಗ್ರಾಮದ ದೇವಮ್ಮ ಗಂಡ ಹುಸೇನಿ ಹೊಸಮನಿ ಎಂಬ ಮಹಿಳೆ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಘಟನೆಯನ್ನು ಸಮಿತಿಗಳು ಉಗ್ರವಾಗಿ ಖಂಡಿಸಿದವು. ದೇವಮ್ಮ ಹೊಸಮನಿ ಸೇರಿದಂತೆ ಮೂವರು ಮಹಿಳೆಯರು ಉರುವಲು ಕಟ್ಟಿಗೆ ತರಲು ಕಳೆದ ಬುಧುವಾರ ಗ್ರಾಮದ ಹತ್ತಿರದ ಗುಡ್ಡಕ್ಕೆ ತೆರಳಿದ ಸಮಯದಲ್ಲಿ ಈ ಘಟನೆ ನಡೆದಿದೆ. ಈ ಬಗ್ಗೆ ಮಹಿಳೆಯರು ಮತ್ತು ಅವರ ಸಂಬಂಧಿಕರು ಕಳೆದ ಗುರುವಾರವೇ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಕ್ರಮ ಕೈಗೊಳ್ಳಿ: ಈ ಕುರಿತು ದೂರನ್ನು ದಾಖಲಿಸಿಕೊಂಡಿರುವ ಪೊಲೀಸ್ ಇಲಾಖೆಯು ಘಟನೆ ನಡೆದು ಒಂದು ವಾರ ಗತಿಸಿದರೂ ಅಪರಾಧಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸದಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಘಟನೆಯಲ್ಲಿ ಭಾಗಿಯಾದ ಅಪರಾಧಿಗಳ ಮೇಲೆ ತುರ್ತಾಗಿ ಕ್ರಮ ಕೈಗೊಳ್ಳುವುದಕ್ಕೆ ಸಂಬಂಧಿಸಿದ ಇಲಾಖೆಯಿಂದ ಆಗುತ್ತಿರುವ ವಿಳಂಬವೂ ಕೂಡ ಇಂತಹ ಘಟನೆಗಳು ಹೆಚ್ಚಲು ಪ್ರಮುಖ ಕಾರಣವಾಗುತ್ತಿವೆ. ಆದ್ದರಿಂದ ಈ ಕೂಡಲೆ ಅಪರಾಧಿಗಳನ್ನು ಬಂಧಿಸಿ ಸೂಕ್ತ ವಿಚಾರಣೆಯನ್ನು ನಡೆಸಬೇಕು. ತಪ್ಪಿತಸ್ತರನ್ನು ಶಿಕ್ಷೆಗೆ ಗುರಿಪಡಿಸಲು ಸೂಕ್ತ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಭರವಸೆ: ಗ್ರಾಮಸ್ಥರ ಬೃಹತ್ ನಿಯೋಗದಿಂದ ಸಲ್ಲಿಸಲಾದ ಮನವಿ ಪತ್ರ ಸ್ವೀಕರಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಜಹೀರಾ ನಸೀಮ್, ಅಗತ್ಯ ಕ್ರಮಕ್ಕಾಗಿ ಈ ಕೂಡಲೆ ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸುವುದಾಗಿಯೂ ಮತ್ತು ಜಿಲ್ಲಾಧಿಕಾರಿಗಳ ಗಮನಕ್ಕೆ ತರುವುದಾಗಿಯೂ ಭರವಸೆ ನೀಡಿದರು.
ಸಂಘಟನೆ ಪ್ರಮುಖರಾದ ಶರಣಗೌಡ ಗೂಗಲ್, ಬಸಮ್ಮ, ಗೌರಮ್ಮ, ವಿಜಯಕುಮಾರ್ ನಾಯಕ, ರಾಮು, ದೇವಿಂದ್ರಪ್ಪ, ಗ್ರಾಮಸ್ಥರಾದ ಸಿದ್ದಮ್ಮ, ಕಮಲಮ್ಮ, ಪಾರ್ವತಿ, ಯಮನಮ್ಮ, ತಿಮ್ಮಮ್ಮ, ದೇವರಾಯ, ಬುಗ್ಗಪ್ಪ, ಹಣಮಂತ, ಬಸಪ್ಪ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

