ರಾಯಚೂರು

ಎಸಿ ಸೂಚನೆಯಂತೆ ಕೆರೆಗೆ ನೀರು ಸಂಗ್ರಹ

Published On :

ಕನ್ನಡಪ್ರಭ ವಾರ್ತೆ, ಸಿಂಧನೂರು, ಏ.12
ತಾಲೂಕಿನ ಬಳಗಾನೂರು ಕುಡಿಯುವ ನೀರಿನ ಕೆರೆಗೆ ತುಂಗಭದ್ರಾ ಎಡದಂಡೆ ನಾಲೆಯ ನೀರು ತುಂಬಿಸುವಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ನೀರು ತುಂಬಿಸಲು ಯಾವುದೇ ಯೋಜನೆ ಹಣ ಬಳಕೆ ಮಾಡಿಕೊಂಡಿಲ್ಲ ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಚ್.ಮಹಾಬಳೇಶ್ವರ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಕುಡಿಯುವ ನೀರಿನ ಕೆರೆ ನಿರ್ಮಾಣ ಯೋಜನೆಯಲ್ಲಿ ಅವ್ಯವಹಾರ ನಡೆದ ಬಗ್ಗೆ ತಮಗೆ ಗೊತ್ತಿಲ್ಲ. ಈ ಯೋಜನೆ ಹಲವು ದಿನಗಳಿಂದ ಪ್ರಗತಿಯಲ್ಲಿದ್ದು, ಅದಕ್ಕೂ ಪ್ರಸ್ತುತ ನೀರು ತುಂಬಿಸುವ ಸಂದರ್ಭಕ್ಕೂ ಯಾವುದೇ ಸಂಬಂಧವಿಲ್ಲ. ಕೆಲವರು ದುರುದ್ದೇಶದಿಂದ ಸುಳ್ಳು ಮಾಹಿತಿ ನೀಡುವ ಮೂಲಕ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಒಂದು ವೇಳೆ ಕುಡಿವ ನೀರಿನ ಕೆರೆ ನಿರ್ಮಾಣ ಯೋಜನೆಯಲ್ಲಿ ಅವ್ಯವಹಾರ ನಡೆದಿದ್ದರೆ ಇಷ್ಟು ದಿನ ವೃಥಾ ಆರೋಪ ಮಾಡುವವರು ಏಕೆ ಸುಮ್ಮನಿದ್ದರು ಎಂದು ಪ್ರಶ್ನಿಸಿದ್ದಾರೆ.
ಡಿಸಿ ಆದೇಶ ಪಾಲನೆ: ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಜಿಪಂ.ನ ಕಿರಿಯ ಅಭಿಯಂತರರು ಕೆರೆಗೆ ನೀರು ತುಂಬಿಸುವಂತೆ ಗ್ರಾಪಂ ಆಡಳಿತ ಮಂಡಳಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ನೀರು ತುಂಬಿಸಲು ಸಹಕರಿಸಲಾಗಿದೆಯೇ ಹೊರತು ಗ್ರಾಪಂ ವತಿಯಿಂದ ಈ ಉದ್ದೇಶಕ್ಕೆ ನಯಾಪೈಸೆ ಹಣ ಬಳಕೆ ಮಾಡಿಲ್ಲ ಎಂದು ಅವರು ತಿಳಿಸಿದ್ದಾರೆ. ತಮ್ಮ ಆಡಳಿತಾವಧಿಯಲ್ಲಿ ಕೆರೆ ಕಾಮಗಾರಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಒಂದು ವೇಳೆ ಈ ಹಿಂದೆ ಅವ್ಯವಹಾರ ನಡೆದಿದ್ದರೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ತನಿಖೆಗೆ ಯಾರಾದರೂ ದೂರು ನೀಡಬಹುದು ಎಂದು ಹೇಳಿದ್ದಾರೆ.
ಗ್ರಾಮದ ಹಿತದೃಷ್ಟಿಯಿಂದ ಕೈಗೊಳ್ಳುವ ಯಾವುದೇ ಕೆಲಸ ಕಾರ್ಯಗಳಿಗೆ ಎಲ್ಲರೂ ಸಹಕರಿಸಬೇಕೇ ಹೊರತು ಮುಖಂಡರಾದವರು ಕುಂಟು ನೆಪವೊಡ್ಡಿ ತಡೆಯೊಡ್ಡಬಾರದು ಹಾಗೂ ಜನರಿಗೆ ತಪ್ಪು ಮಾಹಿತಿ ನೀಡುವ ಕೆಲಸ ಮಾಡಬಾರದು ಎಂದು ವಿರುಪಣ್ಣ ಗುತ್ತೇದಾರ, ಮಹೆಬೂಬ್ ಪಾಷಾ ಅತ್ತಾರ್, ಗ್ರಾಪಂ ಸದಸ್ಯರಾದ ಹನುಮೇಶ ಹೂಗಾರ, ಗಣೇಶ ಡಿಶ್, ಮಾಜಿ ಉಪಾಧ್ಯಕ್ಷ ಅಮರೇಶ ನಾಯಕ ಮನವಿ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.