ರಾಯಚೂರು

ಕೆಜೆಪಿಯಿಂದ ಸ್ಪರ್ಧೆಗೆ ಕಳಸ ನಿರ್ಧಾರ

Published On :

ಕನ್ನಡಪ್ರಭ ವಾರ್ತೆ, ರಾಯಚೂರು, ಏ.16
ಕಳೆದ ಕೆಲ ದಿನಗಳಿಂದ ಜೆಡಿಎಸ್ ಪಕ್ಷದಲ್ಲಿನ ವಿದ್ಯಮಾನಗಳು ಹಾಗೂ ಟಿಕೆಟ್ ನೀಡಿಕೆಯಲ್ಲಿನ ಗೊಂದಲದಿಂದ ಬೇಸತ್ತು ಪಕ್ಷ ತೊರೆಯುತ್ತಿರುವುದಾಗಿ ತಿಳಿಸಿದ ಮುಖಂಡ ಬಸವರಾಜ ಕಳಸ, ರಾಯಚೂರು ನಗರ ಕ್ಷೇತ್ರದಲ್ಲಿ ಕೆಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವುದಾಗಿ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜೆಡಿಎಸ್ ಪಕ್ಷದಲ್ಲಿ ತತ್ವ, ಸಿದ್ಧಾಂತಗಳಿಗೆ ಬೆಲೆಯಿಲ್ಲ. ಕೆಲ ದಿನಗಳ ಹಿಂದೆ ರಾಜಕೀಯದಿಂದ ದೂರವೇ ಉಳಿದಿದ್ದ ಮಾಜಿ ಸಚಿವ ಎಂ.ಎಸ್. ಪಾಟೀಲ್ ಅವರನ್ನು ಕುಮಾರಸ್ವಾಮಿ ಅವರು ಟಿಕೆಟ್ ನೀಡುವುದಾಗಿ ನಂಬಿಸಿ ಪಕ್ಷಕ್ಕೆ ಕರೆತಂದರು. ಅದೇ ರೀತಿ ಇನ್ನಿತರರನ್ನು ಕರೆ ತಂದಿದ್ದರಿಂದ ಸದ್ಯ ಟಿಕೆಟ್ ನೀಡಿಕೆಯಲ್ಲಿ ಗೊಂದಲ ಸೃಷ್ಟಿಯಾಗಿದೆ ಎಂದು ಟೀಕಿಸಿದರು.
ಪಾಟೀಲ್ಗೆ ಟಿಕೆಟ್ ನಿರಾಕರಣೆ: ಹಿರಿಯ ರಾಜಕಾರಣಿ ಎಂ.ಎಸ್. ಪಾಟೀಲ್ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ. ಅದರಿಂದ ಅವರ ಬೆಂಬಲಿಗರಾದ ತಮಗೆ ಬೇಸರವಾಗಿದೆ. ಅದೇ ರೀತಿ ಸೂಕ್ತ ವ್ಯಕ್ತಿಗೆ ಜೆಡಿಎಸ್ ಟಿಕೆಟ್ ದೊರೆಯುವ ಸಾಧ್ಯತೆ ಕಡಿಮೆಯಿದೆ. ಅಷ್ಟೇ ಅಲ್ಲ ಟಿಕೆಟ್ ದೊರೆಯದವರು ಅಧಿಕೃತ ಅಭ್ಯರ್ಥಿಯ ಸೋಲಿಗೆ ಯತ್ನಿಸುವಂಥ ಸ್ಥಿತಿಯಿದೆ ಎಂದು ದೂರಿದರು.
ಈ ಹಿನ್ನೆಲೆಯಲ್ಲಿ ಜೆಡಿಎಸ್ನಿಂದ ಹೊರಬಂದಿರುವ ಸಮಾನ ಮನಸ್ಕರು ಈಚೆಗೆ ಸಭೆ ನಡೆಸಿ ಮಾಜಿ ಸಚಿವ ಎಂ.ಎಸ್. ಪಾಟೀಲ್ ಅವರನ್ನು ಕೆಜೆಪಿಯಿಂದ ಕಣಕ್ಕಿಳಿಸಲು ನಿರ್ಧರಿಸಲಾಯಿತು. ಆದರೆ ಅವರು ಸ್ಪರ್ಧಿಸಲು ನಿರಾಕರಿಸಿ, ತಮ್ಮ ಹೆಸರು ಸೂಚಿಸಿದ್ದಾಗಿ ಹೇಳಿದರು.
ಕೆಜೆಪಿ ಸೇರ್ಪಡೆ: ಬೆಂಬಲಿಗರು ಹಾಗೂ ಸಮಾನ ಮನಸ್ಕರ ಸಲಹೆ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಅವರ ಅಭಿವೃದ್ಧಿಪರ ಚಿಂತನೆಯನ್ನು ಮೆಚ್ಚಿ ಕೆಜೆಪಿ ಸೇರುತ್ತಿರುವುದಾಗಿ ತಿಳಿಸಿದ ಅವರು, ರಾಯಚೂರು ನಗರ ಕ್ಷೇತ್ರದಲ್ಲಿನ ಮೂಲ ಸೌಲಭ್ಯಗಳ ಕೊರತೆಯ ಬಗ್ಗೆ ತಮಗೆ ಅರಿವಿದೆ. ಜನರ ಆಶೋತ್ತರಗಳಿಗೆ ಸ್ಪಂದಿಸುವುದಾಗಿ ಅವರು ಹೇಳಿದರು.
ಇಂದು ಬಿಎಸ್ವೈ ಪ್ರಚಾರ: ಮಾಜಿ ಸಿಎಂ ಹಾಗೂ ಕೆಜೆಪಿ ಅಧ್ಯಕ್ಷ ಯಡಿಯೂರಪ್ಪ ಅವರು ಏ.17ರಂದು ಜಿಲ್ಲೆಯ ವಿವಿಧೆಡೆ ಚುನಾವಣೆ ಪ್ರಚಾರ ಸಭೆಗಳನ್ನು ನಡೆಸಲಿದ್ದಾರೆ. ನಗರದಲ್ಲಿಯ ಸಂಜೆ 6ಕ್ಕೆ ಅವರ ಸಮಾವೇಶ ಆಯೋಜಿಸಲು ಉದ್ದೇಶಿಸಲಾಗಿದೆ ಎಂದ ಅವರು, ತಾವು ಜೆಡಿಎಸ್ ಪ್ರಾಥಮಿಕ ಸದಸ್ಯತ್ವಕ್ಕೆ ಸೋಮವಾರವೇ ರಾಜಿನಾಮೆ ನೀಡಿದ್ದು, ಕೆಜೆಪಿಯಿಂದ ಕಣಕ್ಕಿಳಿಯುತ್ತಿರುವುದಾಗಿ ತಿಳಿಸಿದರು.
ಈ ವೇಳೆ ಮಾತನಾಡಿದ ಬಿಜೆಪಿ ರೈತ ಮೋರ್ಚಾದ ಜಿಲ್ಲಾಧ್ಯಕ್ಷ ರಾಮನಗೌಡ ಜಾಲಿಬೆಂಚಿ, ಕಳೆದ ಕೆಲ ದಿನಗಳಿಂದ ಬಿಜೆಪಿಯಲ್ಲಿನ ವಿದ್ಯಮಾನಗಳಿಂದ ಬೇಸತ್ತು ತಾವು ರಾಜಕೀಯದಿಂದ ದೂರವುಳಿಯಲು ನಿರ್ಧರಿಸಿದ್ದಾಗಿ ತಿಳಿಸಿ, ಸದ್ಯ ಬಸವರಾಜ ಕಳಸ ಅವರು ಕೆಜೆಪಿಯಿಂದ ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ತಾವೂ ಕೆಜೆಪಿಗೆ ಬೆಂಬಲಿಸಲು ನಿರ್ಧರಿಸಿದ್ದಾಗಿ ಹೇಳಿದರು.
ಪಕ್ಷದ ಪ್ರಮುಖರಾದ ಶಶಿರಾಜ್ ಮಸ್ಕಿ, ಶಿವಕುಮಾರ್ ಪೊಲೀಸ್ ಪಾಟೀಲ್ ಸೇರಿದಂತೆ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.