ರಾಯಚೂರು

ಬಾದರ್ಲಿ, ನಾಡಗೌಡರದ್ದು ಒಳಒಪ್ಪಂದದ ರಾಜಕೀಯ

Published On :

ಕನ್ನಡಪ್ರಭ ವಾರ್ತೆ, ಸಿಂಧನೂರು, ಏ.16
ಶಾಸಕ ವೆಂಕಟರಾವ್ ನಾಡಗೌಡ, ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಅವರ ರಾಜಕೀಯ ಒಳಒಪ್ಪಂದದಿಂದಾಗಿ ಸರ್ಕ್ಯೂಟ್ ಹೌಸ್, ಬಸ್ ನಿಲ್ದಾಣದ ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ ಎಂದು ಮಾಜಿ ಸಂಸದ ಹಾಗೂ ಬಿಎಸ್ಸಾರ್ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಕೆ. ವಿರೂಪಾಕ್ಷಪ್ಪ ಆರೋಪಿಸಿದರು.
ನಗರದ ಬಿಎಸ್ಸಾರ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ಮಂಗಳವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಜೆಡಿಎಸ್ ನೇತೃತ್ವದ ನಗರಸಭೆ ಆಡಳಿತದಿಂದ ನಗರದ ಜನತೆ ರೋಸಿ ಹೋಗಿದ್ದಾರೆ. ಶುದ್ಧ ಕುಡಿವ ನೀರು ಒದಗಿಸಲು ಅವರಿಗೆ ಸಾಧ್ಯವಾಗಲಿಲ್ಲ. ವಿಶ್ವಬ್ಯಾಂಕಿನ ಮಹತ್ವದ ಯೋಜನೆಯ ಯುಜಿಡಿ ಸ್ಕೀಂನ ಟೆಂಡರ್ ಮೂರು ಬಾರಿ ರದ್ದಾಗಿರುವುದೇ ಅವರ ಸಾಧನೆಯಾಗಿದೆ ಎಂದರು.
ಸರ್ಕಾರಿ ಜಾಗ, ಆಸ್ತಿ- ಪಾಸ್ತಿ, ಕುಡಿವ ನೀರಿನ ಕೆರೆಗಳನ್ನು ಬಾದರ್ಲಿ ಕಬ್ಜಾ ಮಾಡಿಕೊಂಡರೆ, ಖೊಟ್ಟಿ ಕಾಗದ ಪತ್ರಗಳನ್ನು ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿ ಸಾವಿರಾರು ಎಕರೆ ಜಮೀನನ್ನು ನಾಡಗೌಡರು ವಶಪಡಿಸಿ ಕೊಂಡಿರುವುದು ತಾಲೂಕಿನ ಜನತೆಗೆ ತಿಳಿದಿದೆ ಎಂದು ಆರೋಪಿಸಿದ ಅವರು, ತಾವು ತಮ್ಮ 35 ವರ್ಷದ ರಾಜಕೀಯದಲ್ಲಿ ಸರ್ಕಾರಿ ಯೋಜನೆಗಳನ್ನು, ಸರ್ಕಾರಿ ಆಸ್ತಿಗಳನ್ನು ಕಬ್ಜಾ ಮಾಡಿಕೊಂಡಿದ್ದನ್ನು ಯಾರಾದರೂ ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿಯಾಗುವುದಾಗಿ ಘೋಷಿಸಿದರು.
ಸ್ವಂತಕ್ಕಾಗಿ..: ಮಾಜಿ ಶಾಸಕ ಹಂಪನಗೌಡ ತಿಮ್ಮಾಪುರ ಕೆರೆಯನ್ನು ತಮ್ಮ ಹೊಲದಲ್ಲಿ ಮಾಡಿಸಿಕೊಂಡು ಸಾರ್ವಜನಿಕರಿಗೆ ಹನಿ ನೀರು ಕೊಡದೆ ತಮ್ಮ ಹೊಲಗಳಿಗೆ ಬಳಸಿಕೊಳ್ಳುತ್ತಿದ್ದಾರೆ ಎಂದರು.
ಅಲ್ಪಸಂಖ್ಯಾತರ ಘಟಕ: ಬಿಎಸ್ಸಾರ್ ಕಾಂಗ್ರೆಸ್ನ ಅಲ್ಪಸಂಖ್ಯಾತರ ಘಟಕದ ತಾಲೂಕಾಧ್ಯಕ್ಷರಾಗಿ ಅಬ್ದುಲ್ಗನಿ ಸಾಬ ವಕೀಲರನ್ನು, ಉಪಾಧ್ಯಕ್ಷರಾಗಿ ಜಾಫರ್ ಪಾಷ ಜಾಗೀರದಾರ ಸಾಲಗುಂದಾ ಅವರನ್ನು ನೇಮಕ ಮಾಡಲಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಮೊಹಿನುದ್ದೀನ್ ಎತ್ಮಾರಿ, ಜಾವೇದ್ ಹುಸೇನ್ ದೇಸಾಯಿ, ಬಾಬರಪಾಷ ವಕೀಲ, ಸೈಯದ್ ಮಿಟ್ಟಿಮನಿ ಮತ್ತಿತರರು ಇದ್ದರು. ಇದೇ ವೇಳೆ ನಗರಸಭೆ ಮಾಜಿ ಅಧ್ಯಕ್ಷೆ ಪದ್ದಮ್ಮ ಕರಿಯಪ್ಪ ಅವರ ಪುತ್ರ ವೀರೇಶ ಭೋವಿ ಬಿಎಸ್ಸಾರ್ ಕಾಂಗ್ರೆಸ್ಗೆ ಸೇರ್ಪಡೆಯಾದರು.

ನಾಡಗೌಡಗೆ ಬೈ, ಬಾದರ್ಲಿಗೆ ಹಾಯ್
ಸಿಂಧನೂರು: ಈ ಹಿಂದೆ ಜೆಡಿಎಸ್ನಲ್ಲಿದ್ದ 4ನೇ ವಾರ್ಡ್ನ ಜಾಬೇರ್ಸಾಬ್ ಜಾಗೀರದಾರ ರಾಜುಗೌಡ ಬಾದರ್ಲಿ ನೇತೃತ್ವದಲ್ಲಿ ಕಾಂಗ್ರೆಸ್ಗೆ ಸೇರಿದರು. ಶಾಸಕ ವೆಂಕಟರಾವ್ ನಾಡಗೌಡರಲ್ಲಿ ನಾನು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದೆ, ಆದರೆ ತಮ್ಮ ಕಡೆ ಎಳ್ಳಷ್ಟೂ ಕಾಳಜಿ ವಹಿಸಲಿಲ್ಲ. ಯಾವುದೇ ರೀತಿಯ ಜವಬ್ದಾರಿ ಕೊಡಲಿಲ್ಲ. ಜೊತೆಗೆ ಅವರು ತಮಗೆ ಬೇಕಾದವರಿಗೆ ಮಾತ್ರ ಕರೆದು ಮಾತನಾಡಿಸುತ್ತಿದ್ದರು. ತಮಗೆ ಸಮಸ್ಯೆ ಬಂದಾಗ ಅವರ ಹತ್ತಿರ ಹೋದಲ್ಲಿ ತಕ್ಷಣ ಆ ಸಮಸ್ಯೆ ಬಗೆಹರಿಸುತ್ತಿರಲಿಲ್ಲ. ಒಳ್ಳೆಯ ಹೃದಯವಂತಿಕೆ ಇರುವ ಮಾಜಿ ಶಾಸಕ ಹಂಪನಗೌಡರ ಪ್ರೀತಿಗೆ ತೆಲೆಬಾಗಿ ತಾವು ಕಾಂಗ್ರೆಸ್ ಸೇರಿದ್ದಾಗಿ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.