ಕಾರ್ಯಕರ್ತರ ಒತ್ತಡಕ್ಕೆ ಮಣಿದು ಜೆಡಿಎಸ್‌ಗೆ: ವಜ್ಜಲ್
ಮುದಗಲ್: ಕ್ಷೇತ್ರದ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಬಿಜೆಪಿ ಬಿಟ್ಟು ಜೆಡಿಎಸ್ ಪಕ್ಷ ಸೇರ್ಪಡೆಗೊಳ್ಳಬೇಕಾದ ಅನಿವಾರ್ಯತೆ ನನಗೆ ಬಂದಿತು. ಈಗ ಜೆಡಿಎಸ್ ಅಭ್ಯರ್ಥಿಯಾಗಿ ವಿಧಾನಸಭಾ ಚುನಾವಣಾ ಕಣಕ್ಕಿಳಿದಿದ್ದು ಕ್ಷೇತ್ರದ ಜನತೆ ನನಗೆ ಸಂಪೂರ್ಣವಾಗಿ ಆಶೀರ್ವದಿಸಲಿದ್ದು ಎರಡನೇ ಬಾರಿಗೆ ಶಾಸಕನಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಲಿಂಗಸ್ಗೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಾನಪ್ಪ ಡಿ. ವಜ್ಜಲ್ ಹೇಳಿದರು.
2ನೇ ಅವಧಿಗೆ ಆಶಾ ಭಾವನೆ: ಪಟ್ಟಣದಲ್ಲಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮತಯಾಚನೆ ಮಾಡಿದ ನಂತರ ಪತ್ರಕರ್ತರೊಂದಿಗೆ ಮಾತನಾಡುತ್ತ ನಾನು ಹಿಂದೆ ಬಿಜೆಪಿ ಶಾಸಕನಾಗಿದ್ದರೂ ಆ ಪಕ್ಷವೇ ರಾಜ್ಯದ ಆಡಳಿತ ಮಾಡಿದ್ದರೂ ಅಲ್ಲಿಯ ಆಂತರಿಕ ಕಚ್ಚಾಟ, ದ್ವಂದ್ವ ನೀತಿಗೆ ಬೇಸತ್ತು ಕಾರ್ಯಕರ್ತರ ಒತ್ತಾಸೆಯ ಮೇರೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಕಣದಲ್ಲಿ ಇದ್ದೇನೆ. ಕ್ಷೇತ್ರದ ಜನತೆ ನನಗೆ ಸಂಪೂರ್ಣ ಬೆಂಬಲಿಸಿ ಎರಡನೇ ಅವಧಿಗೆ ಶಾಸಕನನ್ನಾಗಿ ಮಾಡಲಿದ್ದಾರೆ ಎನ್ನುವ ಆಶಾ ಭಾವನೆಯನ್ನು ವ್ಯಕ್ತಪಡಿಸಿದರು.
ನೀತಿ ಸಂಹಿತೆ ಪೂಜೆಗೆ ಅಡ್ಡಿ: ನಂದವಾಡಗಿ ಏತ ನೀರಾವರಿ ಯೋಜನೆಯನ್ನು ಮಂಜೂರು ಗೊಳಿಸಿ ರಾಜ್ಯ ಬಜೆಟ್‌ನಲ್ಲಿ ಹಣವನ್ನು ಮೀಸಲಿಡಿಸಲಾಗಿದೆ. ಚುನಾವಣೆಯೊಳಗೆ ಯೋಜನೆಯ ಕಾಮಗಾರಿ ಪ್ರಾರಂಭಕ್ಕೆ ಪೂಜೆ ಸಲ್ಲಿಸಬೇಕಾಗಿತ್ತು. ಕ್ರಿಯಾ ಯೋಜನೆಯನ್ನು ತಯಾರಿಸುವುದು ಎರಡು ಬಾರಿಯಾಗಿದ್ದರಿಂದ ವಿಳಂಬವಾಯಿತು. ಕ್ರಿಯಾ ಯೋಜನೆ ತಯಾರಾಗುವಷ್ಟರಲ್ಲಿ ಚುನಾವಣಾ ನೀತಿ ಸಂಹಿತೆ ಪೂಜೆಗೆ ಅಡ್ಡಿಯಾಯಿತು ಎಂದು ಹೇಳಿದರು.
ರಾಜ್ಯದಲ್ಲಿ ಜೆಡಿಎಸ್ ಪರ ಅಲೆಯಿದ್ದು, ಜೆಡಿಎಸ್ ಪಕ್ಷ ಬಹುಮತ ಪಡೆಯಲಿದೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲಿದ್ದು, ಜನಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಹೈದ್ರಾಬಾದ್ ಕರ್ನಾಟಕ ಪ್ರದೇಶದ ಹಾಗೂ ರಾಜ್ಯದ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡಲು ಪಕ್ಷದ ಪ್ರಾಣಾಳಿಕೆಯಲ್ಲಿ ಭರವಸೆ ನೀಡಲಾಗಿದೆ. ಅಲ್ಲದೇ ಕೃಷ್ಣಾ ಮೇಲ್ದಂಡೆ ಯೋಜನೆಯ ಅಭಿವೃದ್ಧಿಗೂ ಕೂಡ ಆದ್ಯತೆ ನೀಡಲಾಗಿದೆ. ದೊಡ್ಡ ದೊಡ್ಡ ಯೋಜನೆಗಳನ್ನು, ಕೈಗಾರಿಕೆಗಳನ್ನು ಆರಂಭಿಸುವುದೇ ನಮ್ಮ ಗುರಿಯಾಗಿದೆ. ಗುಳೆ ಹೋಗುವ ಕಾರ್ಮಿಕರನ್ನು ತಡೆದು ಅವರಿಗೆ ಉದ್ಯೋಗ ಸೃಷ್ಟಿಸುವ ಗುರಿಯನ್ನು ಕೂಡ ಹೊಂದಿದ್ದೇವೆ ಎಂದರು.
ಚುನಾವಣೆಯಲ್ಲಿ ಕ್ಷೇತ್ರದ ಜನತೆ ಹಣದ ಆಮಿಷಕ್ಕೆ ಮತ ಚಲಾಯಿಸಲಾರರು. ನನ್ನ ಅವಧಿಯಲ್ಲಿಯ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಿ ಮತ ನನ್ನ ಪರ ಚಲಾಯಿಸಲಿದ್ದಾರೆ ಎಂದರು. ಈ ಸಮಯದಲ್ಲಿ ಅಮೀರ ಬೇಗ್ ಉಸ್ತಾದ, ಎಪಿಎಂಸಿ ಉಪಾಧ್ಯಕ್ಷ ಎಸ್.ಆರ್. ರಸೂಲ್, ಹಿರಿಯ ಮುಖಂಡ ಎಂ.ಡಿ. ರಜಾಕ್, ಗಿರಿಮಲ್ಲನಗೌಡ ಇದ್ದರು.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

