ಸಮ್ಮಿಶ್ರ ಸರ್ಕಾರದಿಂದ ಬೇಸತ್ತ ಜನತೆ: ಸಿದ್ದರಾಮಯ್ಯ
ಕನ್ನಡಪ್ರಭ ವಾರ್ತೆ ಸಿಂಧನೂರು ಏ.19
ಕರ್ನಾಟಕದ ಜನತೆ ಸಮ್ಮಿಶ್ರ ಸರ್ಕಾರದಿಂದ ಬೇಸತ್ತಿದ್ದಾರೆ. ಯಡಿಯೂರಪ್ಪ, ಕುಮಾರಸ್ವಾಮಿಯವರ ಟ್ವಂಟಿ-ಟ್ವಂಟಿ ಮ್ಯಾಚ್ನಿಂದ ಅಭಿವೃದ್ಧಿ ಕೆಲಸಗಳು ನೆಲಕಚ್ಚಿದವು. ಬಿಜೆಪಿ ಸರ್ಕಾರದ ಐದು ವರ್ಷದ ದುರಾಡಳಿತದಿಂದಾಗಿ ರಾಜ್ಯ ಹತ್ತು ವರ್ಷ ಹಿಂದಕ್ಕೆ ಹೋಗಿದೆ. ರಾಜ್ಯದ ಖಜಾನೆ ಖಾಲಿಯಾಗಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.
ದುರಾಡಳಿತ: ಅವರು ಶುಕ್ರವಾರ ಆರ್ಜಿಎಂ ಮೈದಾನದಲ್ಲಿ ಚುನಾವಣಾ ಪ್ರಚಾರಾರ್ಥ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದರು. ಮೇ 5ರಂದು ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈಗಾಗಲೇ ಚುನಾವಣೆಯ ಕಾವು ಏರುತ್ತಲಿದೆ. ಇದೊಂದು ಗಂಭೀರವಾದ ಹಾಗೂ ಮಹತ್ವದ ಚುನಾವಣೆಯಾಗಿದೆ. ರಾಜ್ಯದಲ್ಲಿ ಈ ಭಾರಿ ಕಾಂಗ್ರೆಸ್ ಗಾಳಿ ಬಲವಾಗಿ ಬೀಸುತ್ತಲಿದೆ. ಜನತೆ ಐದು ವರ್ಷಗಳ ಬಿಜೆಪಿ ಹಗರಣಗಳ ದುರಾಡಳಿತದಿಂದ ಬೇಸತ್ತಿದ್ದಾರೆ. ದೇವೆಗೌಡ, ಕುಮಾರಸ್ವಾಮಿ ಮೋಸ ಮಾಡಿದರು. ಕೊಟ್ಟ ಮಾತಿನಂತೆ ನಡೆದುಕೊಳ್ಳಲಿಲ್ಲ. ಬಿಜೆಪಿ ಐದು ವರ್ಷದಲ್ಲಿ ಮೂವರು ಮುಖ್ಯಮಂತ್ರಿಗಳನ್ನು ತನ್ನ ಒಳಜಗಳದಿಂದಾಗಿ ಬದಲಾಯಿಸಿತು. ರಾಜ್ಯದ ಇತಿಹಾಸದಲ್ಲೇ ಜೈಲಿಗೆ ಹೋದ ಮುಖ್ಯಮಂತ್ರಿ ಎಂಬ ಅಪಕೀರ್ತಿ ಯಡಿಯೂರಪ್ಪ ಪಡೆದುಕೊಂಡಿದ್ದಾರೆ. 12 ಜನ ಮಂತ್ರಿಗಳು ವಿವಿಧ ಹಗರಣಗಳಲ್ಲಿ ಸಿಲುಕಿಕೊಂಡು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಇವರಲ್ಲಿ ಹಲವರು ಜೈಲಿಗೆ ಹೋಗಿ ಬಂದಿದ್ದಾರೆ ಎಂದು ಲೇವಡಿ ಮಾಡಿದರು.
ಅಧಿಕಾರಕ್ಕೆ ಅಂಟಿಕೊಂಡಿದ್ದರು: 24 ಗಂಟೆಗಳ ಕಾಲ ರೈತರಿಗೆ ಉಚಿತ ವಿದ್ಯುತ್ ಕೊಡುವುದಾಗಿ, ಹಳ್ಳಿಗಳಿಗೆ ನಿರಂತರ ವಿದ್ಯುತ್ ನೀಡುವುದಾಗಿ ಭರವಸೆ ನೀಡಿದ್ದ ಯಡಿಯೂರಪ್ಪ ಅಧಿಕಾರ ಪಡೆದ ಒಂದೇ ವಾರದಲ್ಲಿ ಬೀಜ ಗೊಬ್ಬರಗಳನ್ನು ಕೇಳಿದ್ದ ರೈತರ ಮೇಲೆ ಗೋಲಿಬಾರ್ ಮಾಡಿಸಿ ಇಬ್ಬರ ಸಾವಿಗೆ ಕಾರಣರಾದರು. 24 ದಿನಗಳ ಕಾಲ ಜೈಲಿಗೆ ಹೋದರು ಅಧಿಕಾರವೆಂಬ ಖುರ್ಚಿಗೆ ಅಂಟಿಕೊಂಡಿದ್ದು ರಾಜ್ಯದ ಜನತೆ ಎಂದಿಗೂ ಮರೆಯುದಿಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದರು.
ತೂಗುಗತ್ತಿ: ಆಪರೇಷನ್ ಕಮಲದ ಮೂಲಕ ಭ್ರಷ್ಟ, ಅನೈತಿಕ ರಾಜಕಾರಣ ನಡೆಸಿದ ಬಿಜೆಪಿ ಬಳ್ಳಾರಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಸುವ ಮೂಲಕ ಇಡಿ ರಾಜ್ಯವನ್ನೇ ಲೂಟಿ ಮಾಡಿತು. ರತ್ನಖಚಿತ ಸಿಂಹಾಸನದಲ್ಲಿ ಕೃಷ್ಣದೇವರಾಯನಂತೆ ಕುಳಿತುಕೊಂಡಿದ್ದ ಜನಾರ್ದನ ರೆಡ್ಡಿ ಎರಡು ವರ್ಷಗಳಿಂದ ಜೈಲಿನಲ್ಲೇ ಕೊಳೆಯುತ್ತಿದ್ದಾರೆ. ಅಕ್ರಮ ಗಣಿಗಾರಿಕೆಯ ತೂಗುಗತ್ತಿ ಶ್ರೀರಾಮುಲುರವರ ಮಂತ್ರಿ ಪದವಿಯನ್ನು ಕಸಿದುಕೊಂಡಿತು. ಈಗ ಬಡವರ, ಶ್ರಮಿಕರ, ರೈತರ ಹೆಸರಿನಲ್ಲಿ ಬಿಎಸ್ಆರ್ ಪಕ್ಷವನ್ನು ಕಟ್ಟಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ವ್ಯಂಗ್ಯವಾಡಿದರು.
ಕಾಂಗ್ರಸ್ ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ಬರುವುದು ನಿಶ್ಚಿತ. ಪ್ರತಿ ಕಾರ್ಡ್ದಾರರಿಗೆ ರು. 2 ದರದಲ್ಲಿ 30 ಕೆಜಿ ಅಕ್ಕಿ, 12 ಗಂಟೆಗೆಗಳ 3ಫೇಸ್ ವಿದ್ಯುತ್, ಕೃಷ್ಣಕೊಳ್ಳದ ಕಣಿವೆ ಸೇರಿದಂತೆ ರಾಜ್ಯದ ಎಲ್ಲಾ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದರು.
ದಶಕಗಳ ಬೇಡಿಕೆಯಾಗಿದ್ದ ಕಲಂ 371ರ ಜಾರಿಗೆ ಕಾಂಗ್ರೆಸ್ ಪ್ರಾಮಾಣಿಕ ಪ್ರಯತ್ನ ಪಟ್ಟು ಜಾರಿಗೆ ತಂದಿದೆ. ಇದರಿಂದ ಹೈ.ಕ. ಭಾಗದ ವಿದ್ಯಾರ್ಥಿಗಳಿಗೆ, ಯುವಕರಿಗೆ ಸಂಜೀವಿನಿಯಾಗಲಿದೆ. ನೇಮಕಾತಿ, ಕೈಗಾರಿಕೆ, ಉದ್ಯೋಗ ಎಲ್ಲಾ ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರಗತಿಯಾಗಲಿದೆ ಎಂದು ಸಿದ್ದರಾಮಯ್ಯ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

