ಕೊಡ್ರಿ ನಮ್ಗೆಲ್ಲ ಇಲೆಕ್ಷನ್ ಡ್ಯೂಟಿ ವಿನಾಯ್ತಿ...
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಏ.19
ಅಸೆಂಬ್ಲಿ ಮತ ಸಮರದ ಅಖಾಡದಲ್ಲಿ ಇತ್ತ ರಾಜಕೀಯ ನಾಯಕರು ಗೆಲ್ಲುವ ಕುದುರೆಯಾಗಲು ಪರಸ್ಪರ ಪೈಪೋಟಿಗೆ ಮುಂದಾದರೆ ಅತ್ತ ಮತದಾನ ಪ್ರಕ್ರಿಯೆಯ ಕರ್ತವ್ಯ ನಿಭಾಯಿಸಲು ಜಿಲ್ಲಾಡಳಿತದಿಂದ ಕರೆ ಸ್ವೀಕರಿಸಿರುವ ಸರ್ಕಾರಿ ನೌಕರರು ಕರ್ತವ್ಯದ ಕರೆಯಿಂದ ವಿನಾಯ್ತಿ ಪಡೆಯಲು ಪೈಪೋಟಿಗೆ ಇಳಿದಿದ್ದಾರೆ.
ಮೇ 5ರ ಮತದಾನದ ಪ್ರಕ್ರಿಯೆಯನ್ನು ಸಮರ್ಥವಾಗಿ ನಿಭಾಯಿಸಲು ಮತಗಟ್ಟೆ ಅಧಿಕಾರಿ, ಸಹಾಯಕ ಮತಗಟ್ಟೆ ಅಧಿಕಾರಿ ಸೇರಿದಂತೆ ವಿವಿಧ ಕರ್ತವ್ಯಗಳಿಗಾಗಿ ಜಿಲ್ಲಾಡಳಿತ ರವಾನಿಸಿರುವಂತಹ ಆದೇಶಗಳು ಈಗಾಗಲೇ ನೌಕರರ ಕೈ ಸೇರಿವೆ. ಏ.22ರಂದು ಮತಗಟ್ಟೆ ಅಧಿಕಾರಿಗಳಿಗೆ ಮೊದಲ ಹಂತದ ತರಬೇತಿಯೂ ನಿಯೋಜಿತವಾಗಿದೆ.
ತರಬೇತಿಗೂ ಪೂರ್ವದಲ್ಲಿ ಹಲವು ಅನಾನುಕೂಲಗಳು ಕಾಡುತ್ತಿರುವ ನೌಕರರು ತಮ್ಮನ್ನು ಚುನಾವಣೆ ಕರ್ತವ್ಯದಿಂದ ಬಿಡುಗಡೆ ಕೋರಿ ಜಿಲ್ಲಾಧಿಕಾರಿಗಳೂ ಆಗಿರುವ ಚುನಾವಣಾಧಿಕಾರಿಗಳಿಗೆ ಮೊರೆ ಹೋಗಿದ್ದಾರೆ.
ನೌಕರರಿಂದ ನೂರಾರು ಅರ್ಜಿಗಳು ಬಂದಿದ್ದರಿಂದ ಜಿಲ್ಲಾಧಿಕಾರಿ ಡಾ. ಜಗದೀಶ ಈಗಾಗಲೇ ಜಿಪಂ ಸಿಇಓ ಪಲ್ಲವಿ ಆಕುರಾತಿ ನೇತೃತ್ವದಲ್ಲಿ ಪ್ರತ್ಯೇಕ ಸಮಿತಿಯನ್ನೇ ರಚಿಸಿದ್ದು, ಈ ಸಮಿತಿ ನೌಕರರ ಮನವಿ ಪರಿಶೀಲಿಸಿ ಅವರ ಕೋರಿಕೆ ನ್ಯಾಯಸಮ್ಮತವೆ ಎಂಬುದರ ಸತ್ಯಾಸತ್ಯತೆ ಪರಿಶೀಲನೆಗೆ ಮುಂದಾಗಿದೆ.
ಏಕೆಂದರೆ ಚುನಾವಣಾ ಕರ್ತವ್ಯ ಎಂದರೆ ಸಾಮಾನ್ಯವಾಗಿ ಸರ್ಕಾರಿ ನೌಕರರು ಮೂಗು ಮುರಿಯುವುದೇ ಹೆಚ್ಚು. ಪಿಳ್ಳೆನೆಪಗಳನ್ನು ಮುಂದಿಟ್ಟುಕೊಂಡು ಕೆಲಸದಿಂದ ದೂರ ಸರಿಯುವ ಪ್ರಯತ್ನಕ್ಕೆ ಮುಂದಾಗುವ ನೌಕರರನ್ನು ಸಡಿಲು ಬಿಡಬಾರದೆಂದು ಈ ಬಾರಿ ಜಿಲ್ಲಾಡಳಿತ ತುಂಬ ಪಾರದರ್ಶಕವಾಗಿ ಹಾಗೂ ಎಲ್ಲರಿಗೂ ಕಾಣುವಂತೆಯೇ ನೌಕರರು ನೀಡಿದ್ದ ಅರ್ಜಿ ಪರಿಶೀಲಿಸಿ, ಅವರ ದೇಹಾರೌಗ್ಯ, ಕೌಟುಂಬಿಕ ಹಿನ್ನೆಲೆ, ಸೇರಿದಂತೆ ಅರ್ಜಿಯಲ್ಲಿ ಹೇಳಲಾಗಿರುವ ಕಾರಣಗಳನ್ನೆಲ್ಲ ಪರಿಶೀಲಿಸಿ ನಿರ್ಣಯ ಕೈಗೊಳ್ಳುವ ಸಂಪ್ರದಾಯ ಶುರು ಮಾಡಿದೆ.
ಹಗಲು-ರಾತ್ರಿ ಪರಿಶೀಲನೆ: ಏ.18ರ ಶುಕ್ರವಾರ ಇಲ್ಲಿನ ಜಿಪಂ ಸಿಇಒ ಚೆಂಬರ್ ಅಂಗಳದಲ್ಲಿ ಇಡೀ ದಿನ(ಹಗಲು-ರಾತ್ರಿ) ಚುನಾವಣೆ ಕರ್ತವ್ಯ ಬೆಡವೆನ್ನುವ ನೌಕರರ ಅರ್ಜಿಗಳನ್ನು ಪರಿಶೀಲನೆಗೆ ಒಳಪಡಿಸಲಾಯ್ತ. ಬಂದ ಅರ್ಜಿಗಳಲ್ಲಿ ಗರ್ಭಿಣಿಯರು, ನವಜಾತ ಶಿಶುಗಳು, ಬಾಣಂತಿಯರು, ಮನೆಯಲ್ಲಿ ಹಿರಿಯರು ಹಾಸಿಗೆ ಹಿಡಿದಂತಹ ಹೆಚ್ಚಿನ ಪ್ರಕರಣಗಳು ಕಂಡವು. ನೌಕರರು ಅರ್ಜಿಯೊಂದಿಗೆ ಪೂರಕವಾಗಿ ದಾಖಲೆಗಳ ಪರಿಶೀಲನೆಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಿವರಾಜ ಸಜ್ಜನ ಶೆಟ್ಟಿ, ಜಿಲ್ಲಾಸ್ಪತ್ರೆ ಸರ್ಜನ್ ಡಾ. ಸುಲೋಚನಾ ಮಿಂಚ್ ಉಪಸ್ಥಿತರಿದ್ದು ಪರಿಶೀಲನೆ ಮಾಡಿದರು.
ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ವಸಂತ ಕುಲ್ಕರ್ಣಿ, ಜಿಲ್ಲಾ ಎನ್ನೈಸಿ ಅಧಿಕಾರಿ ಸುಧೀಂದ್ರ ಅವಧಾನಿ ಸೇರಿದಂತೆ ಹಿರಿಯ ಅಧಿಕಾರಿಗಳ ಸದಸ್ಯರಾಗಿದ್ದ ಸಮಿತಿ 600 ಕ್ಕೂ ಹೆಚ್ಚು ಅರ್ಜಿಗಳನ್ನು ಅಮೂಲಾಗ್ರವಾಗಿ ಪರಿಶೀಲನೆ ನಡೆಸಿತು. ಮನೆಯಲ್ಲಿ ಹಿರಿಯರು ಹಾಸಿಗೆ ಹಿಡಿದು ಉಂಟಾಗಿರುವ ತೊಂದರೆ, ಗರ್ಭಿಣಿಯರು, ಬಾಣಂತಿಯರು, ನವಜಾತ ಶಿಶುಗಳಿರುವ ತಾಯಂದಿರು (ಹಾಲು ಕುಡಿಯುವ ಕೂಸುಗಳಿರುವವರು), ಅಂಗವಿಕಲರು, ಹೃದ್ರೋಗ, ಕ್ಯಾನ್ಸರ್ನಂತಹ ಮಾರಕ ಕಾಯಿಲೆ ಪೀಡಿತರಿಗೆ ಚುನಾವಣೆ ಕರ್ತವ್ಯದಿಂದ ಬಿಡುಗಡೆ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ.
ಅಂಗವಿಕಲರು- ತಾಯಂದಿರ ಹೈರಾಣ:
ಎಲ್ಲಾಕಡೆಯಿಂದ ಜಿಲ್ಲಾಕೇಂದ್ರಕ್ಕೆ ಕೌನ್ಸೆಲಿಂಗ್ಗೆ ಬರಬೇಕಾಗಿದ್ದರಿಂದ ಅಂಗವಿಕಲರಿಗೆ, ತಾಯಂದಿರಿಗೆ ತುಂಬ ತೊಂದರೆಯಾಯ್ತು. ಬೆಳಗ್ಗೆ 9 ರಿಂದ ಶುರುವಾದ ಕೌನ್ಸೆಲಿಂಗ್ ರಾತ್ರಿ 10 ಗಂಟೆಯವರೆಗೂ ಮುಂದುವರಿದಿದ್ದರಿಂದ ಅನೇಕರು ಇಡೀದಿನ ಕಾಯವಂತಾಯ್ತು. ಆದಾಗ್ಯೂ ನ್ಯಾಯಸಮ್ಮತ ಕೋರಿಕೆಗಳಿಗೆ ಪುರಸ್ಕಾರ ದೊರಕುತ್ತಿರುವುದರಿಂದ ಬಂದ ನೌಕರರ ಸಹನೆಯಿಂದ ಕಾಯ್ದು ತಮ್ಮ ಅನಾನುಕೂಲತೆಗಳನ್ನು ಅಧಿಕಾರಿಗಳ ಗಮನಕ್ಕೆ ತರುವ ಮೂಲಕ ಚುನಾವಣೆ ಕರ್ತವ್ಯದ ಆದೇಶದಿಂದ ವಿನಾಯ್ತಿ ಪಡೆಯುವ ತವಕದಲ್ಲಿದ್ದರು.
ಎಚ್ಆರ್ಎಂಎಸ್ ಯಾದಿ ಕೋಡುವಾಗ್ಲೇ ಗೋಲ್ಮಾಲ್: ಜಿಲ್ಲಾಡಳಿತದ ಚುನಾವಣೆ ಕರ್ತವ್ಯಕ್ಕೆ ಸಿಬ್ಬಂದಿ ಪಡೆಯುವಾಗ ಹ್ಯೂಮನ್ ರಿಸೋರ್ಸ್ ಮ್ಯಾನೆಜ್ಮೆಂಟ್ ಸಿಸ್ಟಂ ಬಳಸಿ ಅವರ ಹೆಸರು, ವಿಳಾಸ ಪಡೆದಿರುತ್ತದೆ. ಅದನ್ನೇ ಆಯಾ ಇಲಾಖೆಗಳಿಗೆ ರವಾನಿಸಿ ಅವರಿಂದ ಮಾಹಿತಿಯನ್ನೂ ಪಡೆದಿರುತ್ತದೆ.
ಈ ಯಾದಿಯಲ್ಲಿ ಗರ್ಭಿಣಿಯರು, ಬಾಣಂತಿಯರ ಮಾಹಿತಿ ಇರೋದಿಲ್ಲ. ಆದರೆ ಅಂಗವಿಕಲರ ಮಾಹಿತಿಯಂತೂ ಇದ್ದೇ ಇರುತ್ತದೆ. ಇಲ್ಲದೆ ಹೋದಲ್ಲಿ ಆಯಾ ಇಲಾಖೆಯ ಅಧಿಕಾರಿಗಳಿಗಾದರೂ ಗೊತ್ತಿರುತ್ತದೆ. ಆದಾಗ್ಯೂ ಚುನಾವಣೆ ಕೆಲಸದ ಕರೆ ಅಂಗವಿಕಲರಿಗೆ ಯಾಕೆ ಹೆಚ್ಚಿಗೆ ರವಾನೆಯಾಗುತ್ತಿದೆಯೋ.
ಕೆಲವು ಶಿಕ್ಷಣ ಸಂಸ್ಥೆಗಳವರು, ಸರ್ಕಾರಿ ಕಾಲೇಜುಗಳವರು ತಮ್ಮಿಂದ ಮಾಹಿತಿ ನೀಡುವಾಗಲೇ ಪಕ್ಷಪಾತ ಧೋರಣೆ ಅನುಸರಿಸುತ್ತಿರುವ ಪ್ರಕರಣಗಳು ಜಿಲ್ಲಾಡಳಿತ ಗಮನಕ್ಕೆ ಬಂದಿದ್ದು ಬರುವ ದಿನಗಳಲ್ಲಿ ಅಂತಹ ಸಂಸ್ಥೆಗಳ ಮುಖ್ಯಸ್ಥರ ವಿರುದ್ಧ ಕ್ರಮಕ್ಕೂ ಜಿಲ್ಲಾಡಳಿತ ಚಿಂತನೆ ನಡೆಸುತ್ತಿದೆ.
ಮಹಿಳಾ ಸಿಬ್ಬಂದಿ ಗೋಳಿಗೆ ಜಿಲ್ಲಾಡಳಿತ ಜಾಣ ಕಿವುಡು: ಚುನಾವಣೆ ಕರ್ತವ್ಯ ಎಂದರೆ ತುಸು ಹೆದರಿಕೆ. ಅದಕ್ಕೆ ಮಹಿಳಾ ಸಿಬ್ಬಂದಿ ತಮಗಾಗುವ ಅನಾನುಕೂಲತೆಯಿಂದಾಗಿ ಈ ಕೆಲಸ ಬೇಡವೆಂದು ಹೇಳುತ್ತಾರೆ. ಅದರಲ್ಲೂ ಒಂದೊಂದು ತಂಡದಲ್ಲಿ ಒಬ್ಬರೆ ಮಹಿಳೆಯರನ್ನು ನಿಯೋಜಿಸಲಾಗುತ್ತದೆ. ಇದರಿಂದಲೂ ನಾಲ್ವರು ಪುರುಷರಿರುವ ತಂಡದಲ್ಲಿ ಒಬ್ಬರೆ ಮಹಿಳೆ ಅದೇಗೆ ಕೆಲಸ ಮಾಡುವುದು ಎಂಬ ಮುಜುಗರವೂ ಇಲ್ಲಿರುತ್ತದೆ.
ಜಿಲ್ಲಾಡಳಿತ ಮಹಿಳಾ ಸಿಬ್ಬಂದಿ ಅಗತ್ಯವಿದ್ದಾಗ ಮಾತ್ರ ಚುನಾವಣೆ ಕೆಲಸಕ್ಕೆ ನಿಯೋಜಿಸಿದಲ್ಲಿ ಇಂತಹ ಕೌನ್ಸೆಲಿಂಗ್ ಪ್ರಮೇಯವೇ ಉದ್ಭವವಾಗೋದಿಲ್ಲ ಎಂಬುದು ವಾಸ್ತವ. ಮಹಿಳಾ ಸಿಬ್ಬಂದಿಗೆ ನಿಯೋಜನೆ ಮಾಡುವಾಗ ಪ್ರತಿ ತಂಡದಲ್ಲಿ ಇಬ್ಬಿಬ್ಬರು ಮಹಿಳೆಯರು ಇರುವಂತೆ ನೋಡಿಕೊಂಡಲ್ಲಿ ಪರಸ್ಪರ ಸಹಕಾರಿದಂದ ಮಹಿಳಾ ಸಿಬ್ಬಂದಿ ಕೆಲಸ ಮಾಡಲು ಅನುಕೂಲವಾಗುತ್ತದೆ.
ಇಂತಹ ಯಾವುದೇ ಮಹಿಳಾ ಸಿಬ್ಬಂದಿ ಪರ ನೀತಿಗಳು ಜಿಲ್ಲಾಡಳಿತ ಅನುಸರಿಸುತ್ತಿಲ್ಲ. ಹೀಗಾಗಿ ಚುನಾವಣೆ ಕರ್ತವ್ಯದ ಕರೆಗಳನ್ನು ರದ್ದುಗೊಳಿಸಿಕೊಳ್ಳಬೇಕು ಎಂಬ ಕೋರಿಕೆ ಇಡುವರಲ್ಲಿ ಮಹಿಳಾ ನೌಕರರೇ ಹೆಚ್ಚಾಗಿರುತ್ತಾರೆ.
ನಾಯ್ಯಸಮ್ಮತ ಕಾರಣಗಳಿದ್ದರಷ್ಟೆ ವಿನಾಯ್ತಿ
ಎಲ್ರೂ ಇಲೆಕ್ಷನ್ ಡ್ಯೂಟಿ ಬೇಡ ಅಂದ್ರೆ ಇಲೆಕ್ಷನ್ ಮಾಡೋದು ಹೇಂಗೆ ಅದ್ಕೇ ಈ ಬಾರಿ ನಾವು ಜಿಪಂ ಸಿಇಒ ನೇತೃತ್ವದಲ್ಲಿ ಪರಿಶೀಲನಾ ಸಮಿತಿ ರಚಿಸಿದ್ದೇವೆ. ನೌಕರರ ಕೋರಿಕೆ ಸ್ವೀಕರಿಸಿ ಪರಿಶೀಲಿಸಿ ನಿರ್ಧಾರ ಕೈಗೊಳ್ಳುತ್ತೇವೆ. ಕೆಲವರು ಸುಮ್ಮನೆ ನೆಪ ಹೇಳಿ ಕರ್ತವ್ಯದಿಂದ ದೂರ ಉಳಿದಿರುತ್ತಾರೆ. ನ್ಯಾಯ ಸಮ್ಮತ ಕೋರಿಕೆಯಾಗಿದ್ದಲ್ಲಿ ಅಂತಹ ಸಿಬ್ಬಂದಿಗೆ ಚುನಾವಣೆ ಕರ್ತವ್ಯದಿಂದ ಮುಕ್ತರನ್ನಾಗಿಸುತ್ತೇವೆ. ಅನಾರೋಗ್ಯ, ಪಾಲಕರು ಹಾಸಿಗೆ ಹಿಡಿದಿದ್ದಾರೆಂಬ ಕಾರಣಗಳಿದ್ದರೆ, ಗರ್ಭಿಣಿ, ಬಾಣಂತಿ, ಮಗುವಿದೆ ಎಂಬ ಕಾರಣಗಳಿದ್ದರೆ ಅಂತಹ ಸಂದರ್ಭದಲ್ಲಿ ವೈದ್ಯರಿಂದ ದಾಖಲೆಗಳ ಪರಿಶೀಲನೆ ನಡೆಸಿ ನಿರ್ಣಯಿಸಲಾಗುತ್ತದೆ.
2037 ಮತಗಟ್ಟೆ
ಜಿಲ್ಲೆಯಲ್ಲಿರುವ 9 ಅಸೆಂಬ್ಲಿ ಕ್ಷೇತ್ರಗಳಿಗೆ 2037 ಮಟಗಟ್ಟೆ ಸ್ಥಾಪನೆಗೆ ಚಿಂತಿಸಲಾಗಿದೆ. ಪ್ರತಿ ಮತಗಟ್ಟೆಗೆ ನಾಲ್ವರು ಸಿಬ್ಬಂದಿಯಂತೆ 8 ಸಾವಿರಕ್ಕೂ ಅಧಿಕ ಸಿಬ್ಬಂದಿ ಚುನಾವಣಾ ಕರ್ತವ್ಯಕ್ಕೆ ಜಿಲ್ಲಾಡಳಿತ ನಿಯೋಜಿಸಲು ಮುಂದಾಗಿದೆ. ಇದಲ್ಲದೆ ವಿವಿಧ ತಂಡಗಳು ರಚನೆಯಾಗಿದ್ದು, ಅದಕ್ಕೆಲ್ಲವೂ ಇಲಾಖೆ ಮುಖ್ಯಾಧಿಕಾರಿಗಳನ್ನು ಬಳಸಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

