ರಾಯಚೂರು

14 ಅಭ್ಯರ್ಥಿಗಳನಾಮಪತ್ರ ಹಿಂದಕ್ಕೆ

Published On :

ರಾಯಚೂರು: ಜಿಲ್ಲೆಯಲ್ಲಿ ಮೇ 5ರಂದು ನಡೆಯಲಿರುವ ಚುನಾವಣೆಗೆ ಶನಿವಾರ ಒಟ್ಟು 14 ಜನ ಪಕ್ಷೇತರ ಅಭ್ಯರ್ಥಿಗಳು ತಮ್ಮ ನಾಮಪತ್ರ ಹಿಂಪಡೆದಿದ್ದಾರೆ ಎಂದು ಜಿಲ್ಲಾ ಚುನಾವಣೆ ವಿಭಾಗ ತಿಳಿಸಿದೆ. ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಮೂವರು, ರಾಯಚೂರು ನಗರ ಕ್ಷೇತ್ರದಲ್ಲಿ ಆರು ಜನ, ಮಾನವಿಯಲ್ಲಿ ಒಬ್ಬರು, ಲಿಂಗಸ್ಗೂರಲ್ಲಿ ಮೂವರು, ಮಸ್ಕಿಯಲ್ಲಿ ಒಬ್ಬರು ತಮ್ಮ ನಾಮಪತ್ರ ಹಿಂಪಡೆದಿದ್ದಾರೆಂದು ಚುನಾವಣೆ ವಿಭಾಗ ತಿಳಿಸಿದೆ.
ದಾಖಲೆಗಳಿಲ್ಲದ 13 ಲಕ್ಷ ವಶ
ರಾಯಚೂರು: ಚುನಾವಣೆ ಹಣದ ಅಕ್ರಮ ಸಾಗಣೆ ಎಗ್ಗಿಲ್ಲದೇ ಮುಂದುವರಿದಿದ್ದು, ಶನಿವಾರ ಬೆಳಗ್ಗೆ ತಾಲೂಕಿನ ಕೊತ್ತದೊಡ್ಡಿ ಮತ್ತು ಗಿಲ್ಲೆಸ್ಗೂರು ಗ್ರಾಮಗಳ ಚೆಕ್‌ಪೋಸ್ಟ್ ಬಳಿ ದಾಖಲೆಗಳಿಲ್ಲದೇ ಮೂರು ವಾಹನಗಳಲ್ಲಿ ಸಾಗಿಸುತ್ತಿದ್ದ 13 ಲಕ್ಷ ಜಪ್ತಿ ಮಾಡಲಾಗಿದೆ. ಆಂಧ್ರದ ಕಡೆಯಿಂದ ಜಿಲ್ಲೆಯೊಳಗೆ ಪ್ರವೇಶಿಸಿದ ಮೂರು ಕಾರುಗಳನ್ನು ಚೆಕ್‌ಪೋಸ್ಟ್ ಬಳಿ ಪೊಲೀಸರು ತಪಾಸಣೆಗೆ ಒಳಪಡಿಸಿದಾಗ ಅದರಲ್ಲಿ ಸೂಕ್ತ ದಾಖಲೆಗಳಿಲ್ಲದ ಒಟ್ಟು 13 ಲಕ್ಷ ಹಣ ದೊರೆತಿದೆ. ಕಾರು ಮತ್ತು ಹಣವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಕುರಿತು ಇಡಪನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
5 ನೀತಿ ಸಂಹಿತೆ ಉಲ್ಲಂಘನೆ ಕೇಸ್
ರಾಯಚೂರು: ನೀತಿ ಸಂಹಿತೆ ಜಾರಿಯಲ್ಲಿದ್ದರೂ ಲಿಂಗಸ್ಗೂರು ನಗರದಲ್ಲಿ ಶುಕ್ರವಾರ ಕರ್ನಾಟಕ ಬ್ಯಾಂಕ್ ನೂತನ ಶಾಖೆಯ ಉದ್ಘಾಟನೆಗೆ ಜೆಡಿಎಸ್ ಅಭ್ಯರ್ಥಿ ಮಾನಪ್ಪ ವಜಲ್ ಅವರನ್ನು ಆಹ್ವಾನಿಸಿದ ಬ್ಯಾಂಕಿನ ಅಧಿಕಾರಿಗಳು ಹಾಗೂ ಅಭ್ಯರ್ಥಿ ವಿರುದ್ಧ ಕೇಸ್ ದಾಖಲಾಗಿದೆ. ಪಟ್ಟಣದಲ್ಲಿ ಬ್ಯಾಂಕಿನ ನೂತನ ಶಾಖೆಯ ಉದ್ಘಾಟನೆಗೆ ಜೆಡಿಎಸ್ ಅಭ್ಯರ್ಥಿ ಮಾನಪ್ಪ ವಜ್ಜಲ್ ಅವರನ್ನು ಆಹ್ವಾನಿಸಿದ್ದು ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಅದೇ ರೀತಿ ಬ್ಯಾಂಕಿನ ಅಧಿಕಾರಿಗಳಾದ ರವೀಂದ್ರ, ರುದ್ರಯ್ಯ ಸೇರಿದಂತೆ ಒಟ್ಟು ಐವರ ವಿರುದ್ಧ ಲಿಂಗಸ್ಗೂರು ಪೊಲೀಸ್ ಠಾಣೆಯಲ್ಲಿ ನೀತಿ ಸಂಹಿತೆಯ ಉಲ್ಲಂಘನೆಯ ಕೇಸ್ ದಾಖಲಿಸಲಾಗಿದೆ.
ವೀಕ್ಷಕರ ನೇಮಕ
ರಾಯಚೂರು: ನಗರ ವಿಧಾನಸಭೆ ಕ್ಷೇತ್ರದ ಚುನಾವಣೆ ವೀಕ್ಷಕರನ್ನಾಗಿ ಆಯೋಗವು ದೇವಶಿಶ್ ಬ್ಯಾನರ್ಜಿ ಅವರನ್ನು ನೇಮಿಸಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ರಾಯಚೂರು ಕ್ಷೇತ್ರಕ್ಕೆ ಕೇಂದ್ರ ಚುನಾವಣಾ ಆಯೋಗದ ವೀಕ್ಷಕರಾಗಿ ನೇಮಕಗೊಂಡಿರುವ ಇವರಿಗೆ ದೂರು ಅಥವಾ ಯಾವುದೇ ಅಹವಾಲು ಸಲ್ಲಿಸಬಹುದು. ಮೊ. 94801 02556 ಗೆ ಕರೆ ಮಾಡಿ ಸಂಪರ್ಕಿಸಬಹುದು. ಇವರು ನಗರದ ಮಂತ್ರಾಲಯ ರಸ್ತೆಯಲ್ಲಿರುವ ಪ್ರವಾಸಿ ಮಂದಿರ(ತುಂಗಾ) ದಲ್ಲಿ ಬೆ.10 ರಿಂದ 12ರವರೆಗೆ ಲಭ್ಯರಿರುತ್ತಾರೆಂದು ಜಿಲ್ಲಾಡಳಿತ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.