ರಾಯಚೂರು

ಭ್ರಷ್ಟಾಚಾರದಲ್ಲಿ ಮುಳುಗಿದ ಕೇಂದ್ರ ಸರ್ಕಾರ

Published On :

ಕನ್ನಡಪ್ರಭ ವಾರ್ತೆ, ಸಿಂಧನೂರು, ಏ.21
ಆದರ್ಶ ಹೌಸಿಂಗ್ ಸೊಸೈಟಿ, ಕಾಮನ್‌ವೆಲ್ತ್, ಹೆಲಿಕಾಪ್ಟರ್ ಖರೀದಿ, ಜೆಪಿಸಿ, 2ಜಿ ತರಂಗಾತರ ಹೀಗೆ ಹಗರಣಗಳ ಸರಮಾಲೆಯಲ್ಲಿ ಕೇಂದ್ರ ಸರ್ಕಾರ ಸಿಲುಕಿಕೊಂಡಿದೆ. ಕೇಂದ್ರದ ಯು.ಪಿ.ಎ.ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿ-ಮುಳುಗಿ ಏಳುತ್ತಲಿದೆ ಎಂದು ರಾಜ್ಯಸಭಾ ಸದಸ್ಯ ಹಾಗೂ ಬಿಜೆಪಿ ರಾಷ್ಟ್ರೀಯ ಮುಖಂಡ ವೆಂಕಯ್ಯನಾಯ್ಡು ಆರೋಪಿಸಿದರು.
ಅವರು ಭಾನುವಾರ ಗಂಗಾವತಿ ರಸ್ತೆಯಲ್ಲಿ ವಿಹಾರಿ ಡಾಬಾದ ಬಳಿ ಬಿಜೆಪಿ ಅಭ್ಯರ್ಥಿ ಪರವಾಗಿ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಇತಿಹಾಸ ಇದೆ: ಬಿಜೆಪಿ ತತ್ವ ಸಿದ್ಧಾಂತದ ಪಕ್ಷವಾಗಿದೆ. ಇಲ್ಲಿ ವ್ಯಕ್ತಿಗಿಂತ ಪಕ್ಷವೇ ಮುಖ್ಯ. ದೀನ ದಯಾಳ ಉಪಾಧ್ಯಾಯ, ಚಟರ್ಜಿ ಅವರು ಸ್ಥಾಪಿಸಿರುವ ಈ ಪಕ್ಷಕ್ಕೆ ಇತಿಹಾಸವಿದೆ. ಯಡಿಯೂರಪ್ಪನವರು ಪಕ್ಷದಲ್ಲಿದ್ದಾಗ ಅವರಿಗೆ ಬೆಲೆ ಇತ್ತು. ಕೆಜೆಪಿ ಕಟ್ಟಿರುವ ಅವರಿಗೆ ಭವಿಷ್ಯವಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಯಾರು ಮುಖ್ಯಮಂತ್ರಿಗಳು ಎಂಬ ಗೊಂದಲವಿದೆ. ಮುಖ್ಯಮಂತ್ರಿ ಹುದ್ದೆಗಾಗಿ ಈಗಾಗಲೇ ಹಗ್ಗಜಗ್ಗಾಟ ಆರಂಭವಾಗಿದೆ. ಆದರೆ ಬಿಜೆಪಿ ಈಗಾಗಲೇ ಜಗದೀಶ ಶೆಟ್ಟರ ಅವರ ಹೆಸರನ್ನು ಘೋಷಿಸಿದೆ ಎಂದು ಹೇಳಿದರು.
ಅವಕಾಶವಾದಿ ಪಕ್ಷ: ಜೆಡಿಎಸ್ ಅಪ್ಪ-ಮಕ್ಕಳ ಪಕ್ಷವಾಗಿದೆ. ಇದೊಂದು ಅವಕಾಶವಾದಿ ಪಕ್ಷ. ಹಗರಣಗಳಿಂದ ಬಚಾವಾಗಲು ಜನಾರ್ದನರೆಡ್ಡಿ ಅವರ ಸೂಚನೆ ಅನ್ವಯ ಶ್ರೀರಾಮುಲು ಬಿಎಸ್‌ಆರ್ ಪಕ್ಷವನ್ನು ಕಟ್ಟಿದ್ದಾರೆ. ಇಂತಹ ಪಕ್ಷಗಳಿಂದ ರಾಜ್ಯಕ್ಕೆ ಒಳೆಯದಾಗುವುದಿಲ್ಲ. ಜನರಿಗೂ ಇಂತಹ ಪಕ್ಷಗಳಲ್ಲಿ ನಂಬಿಕೆ ಉಳಿದಿಲ್ಲ ಎಂದರು.
ಜನಪರ ಯೋಜನೆ: ಕೊಪ್ಪಳ ಸಂಸದ ಶಿವರಾಮೇಗೌಡ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅನೇಕ ಜನಪರ ಯೋಜನೆಗಳನ್ನು ನೀಡಿದೆ ಎಂದು ಬಣ್ಣಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಬಸನಗೌಡ ಬ್ಯಾಗವಾಟ, ತಾಲೂಕಾಧ್ಯಕ್ಷ ಅಮರೇಗೌಡ ವಿರೂಪಾಪೂರ, ನ.ಯೋ.ಪ್ರಾ.ಅಧ್ಯಕ್ಷ ಶಿವನಗೌಡ ಗೊರೇಬಾಳ, ಮಸ್ಕಿ ಬಿ.ಜೆ.ಪಿ.ಅಧ್ಯಕ್ಷ ಅಂಕುಶದೊಡ್ಡಿ ಮಲ್ಲಪ್ಪ, ಬಿಜೆಪಿ ಅಭ್ಯರ್ಥಿ ಕೊಲ್ಲಾ ಶೇಷಗಿರಿರಾವ್, ಮಸ್ಕಿ ಬಿಜೆಪಿ ಅಭ್ಯರ್ಥಿ ಶಂಕರ ಮ್ಯಾದರ ಸಭೆಯನ್ನುದ್ದೇಶಿಸಿ ಮಾತನಾಡಿದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.