ರಾಯಚೂರು

ಉರಿ ಬಿಸಿಲಲ್ಲಿ ಹುರಿಯಾಳುಗಳ ಅಬ್ಬರದ ಪ್ರಚಾರ

Published On :

-ಪಂಪಯ್ಯ ಮಠ
ಕನ್ನಡಪ್ರಭ ವಾರ್ತೆ, ಮುದಗಲ್, ಏ.23
ಉರಿ ಬಿಸಿಲನ್ನು ಲೆಕ್ಕಿಸದೆ ಚುನಾವಣೆಯಲ್ಲಿ ಗೆಲ್ಲಬೇಕು ಎನ್ನುವ ಹುಮ್ಮಸ್ಸಿನಲ್ಲಿರುವ ಅಭ್ಯರ್ಥಿಗಳು ಗ್ರಾಮೀಣ ಪ್ರದೇಶಗಳಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ.
ಲಿಂಗಸ್ಗೂರು ವಿಧಾನಸಭೆ ಕ್ಷೇತ್ರದಲ್ಲಿ ಒಟ್ಟು 14 ಜನ ಹುರಿಯಾಳುಗಳು ಕಣದಲ್ಲಿ ಉಳಿದಿದ್ದರೆ. ಕಾಂಗ್ರೆಸ್, ಜೆಡಿಎಸ್, ಬಿಎಸ್‌ಆರ್ ಕಾಂಗ್ರೆಸ್, ಬಿಜೆಪಿ, ಕೆಜೆಪಿ ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ನಡೆದಿದೆ. ಕೆಲ ಅಭ್ಯರ್ಥಿಗಳು ಜಾತಿ ಲೆಕ್ಕಾಚಾರದಲ್ಲಿ ಲಿಂಗಾಯತ, ಕುರುಬ, ನಾಯಕ, ಮುಸ್ಲಿಂ ಮತಗಳ ಮೇಲೆ ಕಣ್ಣು ಇಟ್ಟಿದ್ದು ಆಯಾ ಜಾತಿಯ ಮುಖಂಡರನ್ನು ಸೆಳೆಯುವಲ್ಲಿ ನಿರತರಾಗಿದ್ದಾರೆ. ಕಳೆದ ಬಾರಿ ಶಾಸಕರಾಗಿದ್ದ ಮಾನಪ್ಪ ವಜ್ಜಲ್ ಪುನರಾಯ್ಕೆ ಬಯಸಿ ಬಿಜೆಪಿ ತೊರೆದು ಜೆಡಿಎಸ್‌ನಿಂದ ಸ್ಪರ್ಧಿಸಿದ್ದಾರೆ.
ಬೆಂಬಲ: ಕಾಂಗ್ರೆಸ್ ಅಭ್ಯರ್ಥಿ ಡಿ.ಎಸ್. ಹೂಲಗೇರಿ ಗ್ರಾ.ಪಂ, ತಾ.ಪಂ. ಜಿ.ಪಂ., ಪಟ್ಟಣ ಪಂಚಾಯಿತಿ, ಪುರಸಭೆ ಚುನಾವಣೆಯಲ್ಲಿ ಸದಸ್ಯರ ಗೆಲುವಿಗೆ ಶ್ರಮಿಸಿದ್ದರಿಂದ ಅಧಿಕಾರದಲ್ಲಿರುವ ಸದಸ್ಯರು ಅವರ ಬೆಂಬಲಕ್ಕೆ ನಿಂತಿದ್ದಾರೆ. ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರರ ಬೆಂಬಲಿಗರು ಸಹ ಹೂಲಗೇರಿಯವರನ್ನು ಬೆಂಬಲಿಸುತ್ತಿದ್ದಾರೆ. ಇತ್ತ ನಿವೃತ್ತ ಡಿಐಜಿ  ಟಿ.ಆರ್. ನಾಯಕ ಬೆಂಬಲಿಗರ ಅಭಿಪ್ರಾಯದ ಮೇರೆಗೆ ಬಿಜೆಪಿ ಸೇರಿ ಕಣಕ್ಕೆ ಇಳಿದಿದ್ದಾರೆ.
ಕುತೂಹಲ: ಕೆಜೆಪಿ ಅಭ್ಯರ್ಥಿ ಎಚ್.ಬಿ. ಮುರಾರಿ ತಾಪಂ ಅಧ್ಯಕ್ಷರಾಗಿ, ಜಿಪಂ ಹಾಲಿ ಸದಸ್ಯರಾಗಿ ಬಿಜೆಪಿ ತೊರೆದು ಅವರ ರಾಜಕೀಯ ಗುರು ಕೇಂದ್ರದ ಮಾಜಿ ಸಚಿವ ಬಸವರಾಜ ಪಾಟೀಲ್ ಸೂಚನೆಯಂತೆ ಕೆಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.  ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿ ಸಿದ್ದು ಬಂಡಿಗೆ ಚುನಾವಣೆ ಘೋಷಣೆಗೆ ಮೊದಲೇ ಟಿಕೆಟ್ ಖಚಿತ ಎಂದಿದ್ದರಿಂದ ಪ್ರಚಾರಕ್ಕೆ ಹೆಚ್ಚು ಸಮಯ ಸಿಕ್ಕಿದೆ. ಮತದಾರರು ಇವರನ್ನು ಯಾವ ರೀತಿ ಸ್ವೀಕಾರ ಮಾಡುವರೋ ತಿಳಿಯದರು.
ಇನ್ನು ಬಿಎಸ್ಪಿ, ಸಿಪಿಎಂ(ಎಲ್), ಪಕ್ಷೇತರರಾಗಿ ಇನ್ನುಳಿದವರು ಕಣದಲ್ಲಿದ್ದು ಅವರ ಪ್ರಚಾರ ಹೇಳಿಕೊಳ್ಳುವಷ್ಟು ಕಂಡು ಬರುತ್ತಿಲ್ಲ, ಕಾಂಗ್ರೆಸ್, ಜೆಡಿಎಸ್, ಬಿಎಸ್.ಆರ್, ಬಿಜೆಪಿ ಅಭ್ಯರ್ಥಿಗಳು  ಕೋಟ್ಯಾಧಿಪತಿಗಳಾಗಿದ್ದು, ಈ ಚುನಾವಣೆಯಲ್ಲಿ ಹಣ ಬಲ ಮೇಲಾಗುವುದೋ, ಜನ ಬಲ ಮೇಲಾಗುವುದೋ ಕಾದು ನೋಡಬೇಕಾಗಿದೆ. ಕ್ಷೇತ್ರದ ಮತದಾರರು ಮಾತ್ರ ತಮ್ಮ ಗುಟ್ಟು ಬಿಟ್ಟುಕೊಟ್ಟಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.