ಲಿಂಗಸ್ಗೂರು: ಭಿನ್ನಮತದ ಬಿಸಿಗೆ ಅಭಿವೃದ್ಧಿ ಗೌಣ
ಲಿಂಗಸ್ಗೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದ ಗಮನಸೆಳೆದ ಕ್ಷೇತ್ರವಿದು. ಸರ್ಕಾರದ ರಾಜಕೀಯ ಮೇಲಾಟದಲ್ಲಿ ಬಿಜೆಪಿಯಿಂದ ಆಯ್ಕೆಯಾಗಿದ್ದರೂ ಜೆಡಿಎಸ್ನತ್ತಲೇ ಒಲವು ತೋರಿದ ಶಾಸಕರಿಂದಾಗಿ ಅನುದಾನ ದೊರೆಯದೇ ಅಭಿವೃದ್ಧಿ ಗೌಣವಾಗಿದೆ. ಕ್ಷೇತ್ರದ ಮತದಾರರು ಯಾರಿಗೆ ಮತ ಹಾಕಬೇಕೆಂಬ ಗೊಂದಲದ ಮಧ್ಯಯೇ ಕಣ ಸಜ್ಜಾಗಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮಧೆಯೇ ಹಣಾಹಣಿ.
ತಮ್ಮ ಅವಧಿಯ ಕಡೆಗೆ ಜೆಡಿಎಸ್ ಪರ ಪೂರ್ಣ ಒಲವು ತೋರಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಮತ್ತೆ ಜೆಡಿಎಸ್ನಿಂದಲೇ ಸದ್ಯ ಕಣದಲ್ಲಿದ್ದಾರೆ. ಲಿಂಗಸ್ಗೂರು ಕ್ಷೇತ್ರದಲ್ಲಿ 2,95,369 ಜನಸಂಖ್ಯೆಯಿದೆ. 1,96,990 ಮತದಾರರಿದ್ದಾರೆ. ಕ್ಷೇತ್ರದ ವಿವಿಧ ರಾಜಕೀಯ ಪಕ್ಷಗಳ ಬೇರೆ ಬೇರೆ ಜಿಲ್ಲೆಗಳ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಶಾಸಕ, ಸಚಿವ, ಸಂಸದರನ್ನು ನೀಡಿದ ಹೆಮ್ಮೆಯ ಕ್ಷೇತ್ರವೆನಿಸಿದೆ.
ಕ್ಷೇತ್ರವು 1952ರಿಂದ 2004 ರವರೆಗೆ ಲಿಂಗಾಯತರು ಮತ್ತು ನಾಯಕರು ತಮ್ಮ ಪ್ರಾಬಲ್ಯ ಮೆರೆದ ತಾಣ. ಶಾಸಕ, ಸಚಿವರಾಗಿಯೂ ಇಲ್ಲಿ ಆರಿಸಿ ಬಂದವರು ಅಧಿಕಾರ ಸವಿಯುಂಡಿದ್ದಾರೆ. ಕಳೆದ 2008ರ ವಿಧಾಸಭೆ ಚುನಾವಣೆಯಿಂದ ಎಸ್ಸಿಗೆ ಮೀಸಲಾದ ಕ್ಷೇತ್ರದಲ್ಲಿ ಮೊದಲ ಚುನಾವಣೆಯಲ್ಲಿಯೇ ಹಾಲಿ ಜೆಡಿಎಸ್ ಅಭ್ಯರ್ಥಿ ಮಾನಪ್ಪ ವಜ್ಜಲ್ ಬಿಜೆಪಿಯಿಂದ ಗೆದ್ದು ಬಂದಿದ್ದು.
ಪರಿಶಿಷ್ಟ ಜಾತಿ ಪ್ರಾಬಲ್ಯ: ಲಿಂಗಸ್ಗೂರು ಕ್ಷೇತ್ರದಲ್ಲಿ ಲಿಂಗಾಯತ, ನಾಯಕ ಸೇರಿ ಪರಿಶಿಷ್ಟ ಜಾತಿಯ ಮತಗಳು ಹೆಚ್ಚಾಗಿದ್ದು, ಕಳೆದ 2008 ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಅನುಕಂಪದ ಅಲೆಯಲ್ಲಿ ಶಾಸಕ ಮಾನಪ್ಪ ವಜ್ಜಲ್ ಆರಿಸಿ ಬಂದ ನಂತರದಲ್ಲಿ ಬಿಜೆಪಿಯಿಂದಲೇ ದೂರವುಳಿದಿದ್ದು ಮತದಾರರ ಪಾಲಿಗೆ ಮುಳುವಾಯಿತು.
ಆಡಳಿತ ಪಕ್ಷದಲ್ಲಿದ್ದರೂ ಬಂಡಾಯದ ಬಾವುಟ ಹಾರಿಸಿದ ಗುಂಪಿನಲ್ಲಿ ಗುರುತಿಸಿಕೊಂಡು ರಾಜ್ಯದ ಗಮನ ಸೆಳೆದಿದ್ದೇ ಸಾಧನೆ. ನೀರಾವರಿ ಯೋಜನೆಗಳಿಗೆ ಸಾಕಷ್ಟು ಒತ್ತು ಕೊಟ್ಟಿದ್ದು, ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ಹೆಚ್ಚು ಮುತವರ್ಜಿ ವಹಿಸಿಲ್ಲವೆಂಬ ಆರೋಪಗಳಿವೆ.
ಪ್ರಚಾರ: ಲಿಂಗಸ್ಗೂರು ಕ್ಷೇತ್ರ ವ್ಯಾಪ್ತಿಯಲ್ಲಿ ಗೆಲುವಿಗೆ ಒಂದೇ ಜಾತಿ ನಿರ್ಣಾಯಕ ಎಂಬುದು ಸ್ಪಷ್ಟವಾಗಿಲ್ಲ. ಪ್ರಸಕ್ತ ಚುನಾವಣೆಯಲ್ಲಿ ಅಭ್ಯರ್ಥಿಗಳಾಗಿರುವವರಲ್ಲಿ ಬಹುತೇಕರು ಗುತ್ತಿಗೆದಾರರು, ಉದ್ಯಮಿಗಳೇ ಆಗಿರುವುದು ವಿಶೇಷ. ಕಾಂಗ್ರೆಸ್ ನಿಂದ ಡಿ.ಎಸ್.ಹುಲಗೇರಿ, ಬಿಜೆಪಿಯ ಟಿ.ಆರ್. ನಾಯಕ, ಕೆಜೆಪಿಯಿಂದ ಎಚ್.ಬಿ. ಮುರಾರಿ, ಬಿಎಸ್ಸಾರ್ ಕಾಂಗ್ರೆಸ್ನಿಂದ ಸಿದ್ದುಬಂಡಿ ಕಣದಲ್ಲಿರುವ ಪ್ರಮುಖರು. ಬಹುತೇಕ ಅಭ್ಯರ್ಥಿಗಳು ಶ್ರೀಮಂತರಾಗಿದ್ದು, ಕ್ಷೇತ್ರದಾದ್ಯಂತ ತಮ್ಮದೇ ಆದ ವಿಶಿಷ್ಟ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಹಣ, ಹೆಂಡ ಹಂಚಿಕೆ ಯಥೇಚ್ಚವಾಗಿದೆ.
ಸಮಸ್ಯೆಗಳ ಸರಮಾಲೆ: ತಾಲೂಕಿನ ಹತ್ತಾರು ಹಳ್ಳಿಗಳಲ್ಲಿ ಫ್ಲೋರೈಡ್, ಆರ್ಸೆನಿಕ್ ನಂಥ ರಸಾಯನಿಕ ಅಂಶವುಳ್ಳ ನೀರು ದೊರೆಯುತ್ತಿದೆ. ಯಲ ಗಟ್ಟಾ ಸೇರಿ 13 ಹಳ್ಳಿಗಳಲ್ಲಿ ಜಾರಿಗೊಳಿಸಿದ ಶುದ್ಧ ಕುಡಿಯುವ ನೀರು ಯೋಜನೆ ಜಾರಿಯಾಗಿಲ್ಲ. ರಾಜೀವಗಾಂಧಿ ಗ್ರಾಮೀಣ ಶುದ್ಧ ಕುಡಿಯುವ ನೀರು ಸರಬರಾಜು ಯೋಜನೆಯಿಂದ ನಿರೀಕ್ಷಿತ ಮಟ್ಟದಲ್ಲಿ ನೀರು ಪೂರೈಕೆಯಾಗುತ್ತಿಲ್ಲ. ಇದರಿಂದ ಹೊನ್ನಳ್ಳಿ, ಗುಡದನಾಳ, ಸರ್ಜಾಪೂರ, ಕುಪ್ಪಿಗುಡ್ಡ, ಚಿಕ್ಕಹೆಸರೂರ ಸೇರಿ ಅನೇಕ ಕಡೆ ಕುಡಿಯುವ ನೀರಿನ ಬವಣೆ ನೀಗಿಲ್ಲ. ನೆರೆ ಸಂತ್ರಸ್ಥರಿಗೆ ಸೂರು ಕಲ್ಪಿಸಲು ಆಸರೆ ಮನೆಗಳ ನಿರ್ಮಾಣ ಕಾಮಗಾರಿ ವಿಳಂಬವಾಗಿದೆ. ಲಿಂಗಸ್ಗೂರು ಪಟ್ಟಣದ ಅತಿಕ್ರಮಣ ತೆರವು ಕಾರ್ಯ ಮತ್ತು ರಸ್ತೆ ಅಗಲೀಕರಣ ಕಾಮಗಾರಿ ಆಮೆವೇಗದಲ್ಲಿದ್ದು, ಸಂಚಾರಕ್ಕೆ ಕಿರಿಕಿರಿ ನಿರಂತರ. ವಿವಿಧ ಯೋಜನೆಯಡಿ ಕೈಗೆತ್ತಿಗೊಂಡಿರುವ ರಸ್ತೆ ನಿರ್ಮಾಣ ಕಾಮಗಾರಿಗೆ ವೇಗದ ಸ್ಪರ್ಶ ಅವಶ್ಯಕ. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಜಾರಿಗೊಳ್ಳದೆ ಹಳ್ಳಿಗಳ ಜನತೆ ಗುಳೆ ಹೋಗುವುದು ಕಾಯಂ. ಬಿಜೆಪಿಯಲ್ಲಿ ಶಾಸಕರಾಗಿ ಕಾರ್ಯನಿರ್ವಹಿಸಿದ ಮಾನಪ್ಪ ವಜ್ಜಲ್ ಅವರ ಕಾರ್ಯವೈಖರಿಯೇ ಸದ್ಯದ ಪ್ರಚಾರ ವಸ್ತು. ಎಲ್ಲ ಪಕ್ಷಗಳ ಅಭ್ಯರ್ಥಿಗಳು ಭರ್ಜರಿ ಪ್ರಚಾರ ನಡೆಸಿದ್ದಾರೆ. ಜೆಡಿಎಸ್ ಪಕ್ಷವನ್ನು ಸೋಲಿಸಲು ಕಾಂಗ್ರೆಸ್, ಬಿಜೆಪಿ, ಕೆಜೆಪಿ ಮಧ್ಯೆಯೇ ಪೈಪೋಟಿಯಿದೆ. ಮತದಾರರ ಲೆಕ್ಕಾಚಾರ ಆರಂಭಗೊಂಡಿದೆ.
ಅಮರೇಶಯ್ಯಸ್ವಾಮಿ ಬಲ್ಲಟಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

