ಉತ್ತಮ ಆಡಳಿತ, ಅಲ್ಪಸಂಖ್ಯಾತರ ರಕ್ಷಣೆಗೆ ಜೆಡಿಯು ಬದ್ಧ
ರಾಯಚೂರು: ಭ್ರಷ್ಟಾಚಾರ, ಅಕ್ರಮಗಳ ಸರಮಾಲೆಯಿಂದ ಕರ್ನಾಟಕದ ಹೆಸರಿಗೆ ಕಳಂಕ ತಂದಿರುವ ಬಿಜೆಪಿಯನ್ನು ಪ್ರಸಕ್ತ ಚುನಾವಣೆಯಲ್ಲಿ ಸೋಲಿಸಬೇಕು ಎಂದು ಜೆಡಿಯು ನಾಯಕ ಶರದ್ ಯಾದವ್ ಮನವಿ ಮಾಡಿದರು. ಉತ್ತಮ ಆಡಳಿತ, ಅಲ್ಪಸಂಖ್ಯಾತರ ರಕ್ಷಣೆ ಸೇರಿದಂತೆ ರಾಜ್ಯದ ಪ್ರಗತಿಗೆ ಜೆಡಿಯುವನ್ನು ಮತದಾರರು ಬೆಂಬಲಿಸಬೇಕು ಕರೆ ನೀಡಿದರು.
ಅವರು ನಗರದ ಮಹಿಳಾ ಸಮಾಜದಲ್ಲಿ ಭಾನುವಾರ ಸಂಜ ಆಯೋಜಿಸಿದ್ದ ನಗರ ಮತ್ತು ಜಿಲ್ಲಾದ್ಯಂತ ಜೆಡಿಯು ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ರಾಜ್ಯದಲ್ಲಿ ಕಳೆದ ಕೆಲ ವರ್ಷಗಳಿಂದ ಆಡಳಿತ ನಡೆಸಿದ ಎಲ್ಲ ಪ್ರಮುಖ ಪಕ್ಷಗಳ ಸರ್ಕಾರಗಳು ಜನತೆಗೆ ಉತ್ತಮ ಆಡಳಿತ ನೀಡುವಲ್ಲಿ ವಿಫಲವಾಗಿವೆ ಎಂದು ಆರೋಪಿಸಿದರು.
ಒತ್ತಡ: ಕರ್ನಾಟಕ ಸೇರಿದಂತೆ ದೇಶದ ಎಲ್ಲೆಡೆ ಅಲ್ಪಸಂಖ್ಯಾತರ ರಕ್ಷಣೆಗೆ ಜೆಡಿಯು ಬದ್ಧವಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮೇಲೆ ನಿರಂತರವಾಗಿ ಸಾಚಾರ್ ಕಮಿಟಿ ಶಿಫಾರಸು ಜಾರಿಗೆ ಸಂಸದರು ಒತ್ತಡ ಹೇರುತ್ತಿದ್ದಾರೆಂದು ತಿಳಿಸಿದರು.
ಭ್ರಷ್ಟಾಚಾರದ ವಿರುದ್ಧ ಘೋಷಣೆ ಹಾಕುವ ಕೇಂದ್ರದ ಕಾಂಗ್ರೆಸ್ ಸರ್ಕಾರದ ಅನೇಕ ನಾಯಕರು 2ಜಿ ತರಂಗಾಂತರ, ಕಲ್ಲಿದ್ದಲು ಹಂಚಿಕೆ ಸೇರಿದಂತೆ ಹತ್ತಾರು ಹಗರಣಗಳಲ್ಲಿ ಸಿಲುಕಿದ್ದಾರೆ. ಕರ್ನಾಟಕದಲ್ಲಿಯೂ ಅಕ್ರಮ ಗಣಿಗಾರಿಕೆ, ಡಿ-ನೋಟಿಫಿಕೇಶನ್ ಹಗರಣಗಳು ರಾಜ್ಯಕ್ಕೆ ಕಳಂಕ ತರುವ ಕಾರ್ಯ ಮಾಡಿವೆ ಎಂದು ದೂರಿದರು.
ಕಳಂಕಮುಕ್ತ ಕರ್ನಾಟಕ ನಿರ್ಮಾಣ ಜೆಡಿಯು ಆಶಯವಾಗಿದೆ. ಈ ನಿಟ್ಟಿನಲ್ಲಿ ಜೆಡಿಯು ಪಕ್ಷದ ಅಭ್ಯರ್ಥಿಗಳು ಹೋರಾಟಗಾರರಾಗಿದ್ದಾರೆ. ಅಷ್ಟೇ ಅಲ್ಲ ಪ್ರಾಮಾಣಿಕ ಪ್ರಯತ್ನ ಮಾಡಲಿದ್ದಾರೆ. ಜೆಡಿಯು ನಾಯಕರಾದ ರಾಮಕೃಷ್ಣ ಹೆಗಡೆ, ಎಸ್.ಆರ್. ಬೊಮ್ಮಾಯಿ ಮತ್ತಿತರರನ್ನು ಸ್ಮರಿಸಿದ ಅವರು, ಉತ್ತಮ ಆಡಳಿತ ನೀಡಿದಂಥ ಅನೇಕ ನಾಯಕರನ್ನು ನೀಡಿದ ಪಕ್ಷ ಜೆಡಿಯು ಎಂದು ಶ್ಲಾಘಿಸಿದರು.
ರಾಜಕೀಯ ದುರಂತ: ಸದ್ಯ ರಾಜಕೀಯ ವ್ಯವಸ್ಥೆ ಕಲುಷಿತಗೊಂಡಿದೆ. ಹಣ ಬಲ, ತೋಳ್ಬಲಗಳ ಮೇಲೆ ರಾಜಕೀಯ ನಡೆಸಲಾಗುತ್ತಿದೆ. ಹಣ ಗಳಿಕೆಯ ಉದ್ದೇಶದಿಂದ ಅನೇಕರು ರಾಜಕೀಯಕ್ಕೆ ಕಾಲಿಡುತ್ತಿರುವುದು ದುರಂತ. ಇಂಥ ಬೆಳವಣಿಗೆಯಿಂದಲೇ ರಾಜಕೀಯ ಎಂಬುದು ಸಮಾಜ ಸೇವೆಯಾಗಿ ಉಳಿದಿಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಜೆಡಿಯು ಪಕ್ಷದ ಅಭ್ಯರ್ಥಿಗಳಿಗೆ ಪ್ರಸಕ್ತ ಚುನಾವಣೆಯಲ್ಲಿ ಬೆಂಬಲಿಸುವಂತೆ ಅವರು ಮತದಾರರಲ್ಲಿ ಮನವಿ ಮಾಡಿದರು.
ಪರಿಹಾರವಿಲ್ಲ: ಇದಕ್ಕೂ ಮುನ್ನ ಜೆಡಿಯು ನಗರ ಕ್ಷೇತ್ರದ ಅಭ್ಯರ್ಥಿ ನೂರ್ ಮಹಮದ್ ಮಾತನಾಡಿ, ನಗರ ಕ್ಷೇತ್ರದಲ್ಲಿ ಕುಡಿಯುವ ನೀರು ಸೇರಿದಂತೆ ಅನೇಕ ಜ್ವಲಂತ ಸಮಸ್ಯೆಗಳಿದ್ದು ಅವುಗಳನ್ನು ಪರಿಹರಿಸುವಲ್ಲಿ ಇದುವರೆಗೆ ಈ ಕ್ಷೇತ್ರದಲ್ಲಿ ಆಯ್ಕೆಯಾದವರು ಆಸಕ್ತಿ ತೋರಿಲ್ಲ ಎಂದು ಟೀಕಿಸಿದರು.
ನಗರದ ಬಳಿಯೇ ಆರ್‌ಟಿಪಿಎಸ್ ವಿದ್ಯುತ್ ಕೇಂದ್ರವಿದ್ದರೂ ನಗರ ಸೇರಿದಂತೆ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಕಡಿತ ತಪ್ಪಿಲ್ಲ. ಹದಗೆಟ್ಟಿರುವ ರಸ್ತೆಗಳು, ಶೌಚಾಲಯದ ಕೊರತೆ ಸೇರಿದಂತೆ ನಾನಾ ರೀತಿಯ ಸಮಸ್ಯೆಗಳಿಂದಾಗಿ ಜನತೆ ಸಂಕಷ್ಟದಲ್ಲಿ ಬದುಕು ಕಳೆಯುತ್ತಿದ್ದಾರೆಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಕ್ಷೇತ್ರಗಳ ಅಭ್ಯರ್ಥಿಗಳು ಹಾಗೂ ಜೆಡಿಯು ರಾಜ್ಯಾಧ್ಯಕ್ಷ ಎಂ.ಪಿ.ನಾಡಗೌಡ ಸೇರಿದಂತೆ ಅನೇಕ ನಾಯಕರಿದ್ದರು. ವಿವಿಧೆಡೆಯಿಂದ ಆಗಮಿಸಿದ್ದ ಕಾರ್ಯಕರ್ತರು ಹಾಗೂ ಮಹಿಳೆಯರು ಸಭೆಯಲ್ಲಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

