ಕೆಜೆಪಿ, ಬಿಜೆಪಿ ಮಧ್ಯೆ ಮಾರಾಮಾರಿ; ಲಾಠಿ ರುಚಿ
ದೇವದುರ್ಗ: ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ನಡೆಯುತ್ತಿದ್ದ ಅಂಚೆ ಮತದಾನದ ವೇಳೆ ಬಿಜೆಪಿ ಅಭ್ಯರ್ಥಿ ಕೆ.ಶಿವನಗೌಡ ನಾಯಕರ ಆಪ್ತರೆಂದು ಹೇಳಲಾದ ವ್ಯಕ್ತಿಯೊಬ್ಬರು ಬಿಜೆಪಿಗೆ ಮತ ಹಾಕುವಂತೆ ಒತ್ತಾಯಿಸಿದ್ದಾರೆಂದು ಆರೋಪಿಸಿ ಕೆಜೆಪಿ ಕಾರ್ಯಕರ್ತರು ಹಾಗೂ ವ್ಯಕ್ತಿಯ ಮಧ್ಯೆ ಮಾರಾಮಾರಿ ನಡೆದು ಪೊಲೀಸರು ಲಾಠಿ ರುಚಿ ತೋರಿಸಿ ಪರಿಸ್ಥಿತಿ ನಿಯಂತ್ರಿಸಿದ ಘಟನೆ ಭಾನುವಾರ ಜರುಗಿದೆ.
ಪ್ರಭಾವ ಬೀರಲು ಯತ್ನ: ಶಿವನಗೌಡ ನಾಯಕ ಅವರ ಖಾಸಗಿ ಆಪ್ತ ಸಹಾಯಕ ಬೆಂಗಳೂರ ಮೂಲದ ಮಹೇಂದ್ರ ಎಂಬಾತ ಕಳೆದ ನಾಲ್ಕೈದು ದಿನಗಳಿಂದ ಪಟ್ಟಣದಲ್ಲಿ ವಾಸವಾಗಿದ್ದು, ಚುನಾವಣೆಗೆ ನಿಯೋಜಿತ ನೌಕರರಿಗೆ ಅಂಚೆ ಮತದಾನ ನಡೆಯುವ ವೇಳೆ ಪ್ರಭಾವ ಬೀರಲು ಯತ್ನಿಸಿದ್ದಾರೆಂದು ಆರೋಪಿಸಿ ಕೆಜೆಪಿ ಕಾರ್ಯಕರ್ತರು ಆ ವ್ಯಕ್ತಿ ತಂದಿದ್ದ ಕಾರು ತಡೆದಿದ್ದಾರೆ.
ಅಂಚೆ ಮತದಾನಕ್ಕೆ ಆಗಮಿಸಿದ ನೌಕರರಿಗೆ, ಗೃಹ ರಕ್ಷಕ ದಳದವರಿಗೆ, ಬೆದರಿಸಿ ಬಹಿರಂಗವಾಗಿ ಬಿಜೆಪಿಗೆ ಮತ ಹಾಕುವಂತೆ ಹೇಳುತ್ತಿದ್ದನೆಂದು ದೂರಲಾಗಿದ್ದು, ಇದರಿಂದ ಆಕ್ರೋಶಗೊಂಡ ಕೆಜೆಪಿ ಕಾರ್ಯಕರ್ತರು ಮಿನಿ ವಿಧಾನಸೌಧ ಬಳಿ ಜಮಾಯಿಸಿದರು.
ವ್ಯಕ್ತಿ ಮಹೇಂದ್ರ ತಂದಿದ್ದ ಕಾರಿಗೆ ಘೇರಾವ್ ಹಾಕಿ ಪೊಲೀಸ್ ಠಾಣೆಗೆ ಕರೆದೊಯ್ಯಲು ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಈ ವೇಳೆ ಕೆಜೆಪಿ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ಮಾರಾಮಾರಿ ನಡೆಯಿತು. ಉದ್ರಿಕ್ತರನ್ನು ಚದುರಿಸಲು ಪೊಲೀಸರು ಲಾಠಿಯ ರುಚಿ ತೋರಿಸಿದರು.
ಜಿಲ್ಲಾಧಿಕಾರಿಗೆ ದೂರು: ಈ ವೇಳೆ ಸುದ್ದಿ ತಿಳಿದು ಪಟ್ಟಣಕ್ಕೆ ಧಾವಿಸಿದ ಜಿಲ್ಲಾಧಿಕಾರಿ ಉಜ್ವಲ್ ಕುಮಾರ್ ಘೋಷ್ ಅವರನ್ನು ಭೇಟಿ ಮಾಡಿದ ಕೆಜೆಪಿ ಅಭ್ಯರ್ಥಿ ಶಾಂತಗೌಡ ಭೇಟಿ ಮಾಡಿ, ಬಿಜೆಪಿ ಕಾರ್ಯಕರ್ತರು ಕ್ಷೇತ್ರದಲ್ಲಿ ಗೂಂಡಾಗಿರಿ ನಡೆಸುತ್ತಿದ್ದು, ಬಹಿರಂಗವಾಗಿ ಹಣ, ಮದ್ಯ ಹಂಚುತ್ತಿದ್ದಾರೆಂದು ಆರೋಪಿಸಿದರು.
ತಾಲೂಕು ಆಡಳಿತದ ಕೆಲ ಅಧಿಕಾರಿಗಳು ಅಕ್ರಮಗಳಿಗೆ ಬೆಂಬಲ ನೀಡುತ್ತಿದ್ದಾರೆ. ಕೆಜೆಪಿ ಕಾರ್ಯಕರ್ತರು ಪ್ರಶ್ನಿಸಿದಲ್ಲಿ ಅಂಥವರ ಮೇಲೆ ಹಲ್ಲೆ ಮಾಡುತ್ತಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲು ಮುಂದಾದರೆ ಪೊಲೀಸರು ಬಿಜೆಪಿ ಕಾರ್ಯಕರ್ತರ ಪರ ನಿಲುವು ತಳೆಯುತ್ತಿದ್ದಾರೆಂದು ದೂರಿದರು.
ಈ ವೇಳೆ ಬಿಜೆಪಿ ತಾಲೂಕು ಅಧ್ಯಕ್ಷ ಸಿ.ಎಸ್.ಪಾಟೀಲ್ ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿ ಅನಗತ್ಯ ಗೊಂದಲ ಸೃಷ್ಟಿಸಲಾಗುತ್ತಿದೆ. ಬಿಜೆಪಿ ಕಾರ್ಯಕರ್ತರು ಅಕ್ರಮ ಎಸಗುತ್ತಿಲ್ಲ ಎಂದು ಹೇಳಿದರು.
ಜಿಲ್ಲಾಧಿಕಾರಿ ಉಜ್ವಲ್‌ಕುಮಾರ್ ಘೋಷ್ ಮಾತನಾಡಿ, ಸದ್ಯ ನಡೆದ ಮಾರಾಮಾರಿ ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿ ಸೂಕ್ತ ತನಿಖೆ ನಡೆಸುವಂತೆ ಪಿಎಸ್‌ಐ ವಿ. ನಾರಾಯಣಗೆ ಸೂಚಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

