ರಾಯಚೂರು

ಕಡ್ಡಾಯ ಮತದಾನ: ಪ್ರತಿಜ್ಞೆ ಸ್ವೀಕಾರ

Published On :

ರಾಯಚೂರು: ನಗರದಲ್ಲಿ ಭಾನುವಾರ ಸಂಜೆ ಆರ್ಯವೈಶ್ಯ ಸಮಾಜದಿಂದ ಕಡ್ಡಾಯ ಮತದಾನ ಕುರಿತು ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಮಾಜದ ಅಧ್ಯಕ್ಷ ಕೊಂಡಾ ಕೃಷ್ಣಮೂರ್ತಿ ಅವರು ಸಮಾಜದ ಜನತೆಗೆ ಕಡ್ಡಾಯ ಮತದಾನ ಮಾಡುವ ನಿಟ್ಟಿನಲ್ಲಿ ಪ್ರತಿಜ್ಞಾ ವಿಧಿ ಬೋಧಿಸಿದರು.
ಈ ವೇಳೆ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಾದ ಸೈಯದ್ ಯಾಸೀನ್, ತ್ರಿವಿಕ್ರಮ್ ಜೋಷಿ, ಪೂಜಾಗಾಂಧಿ, ಡಾ.ಶಿವರಾಜ್ ಪಾಟೀಲ್, ಬಸವರಾಜ ಕಳಸ ಮತ್ತಿತರರು ಪಾಲ್ಗೊಂಡು ತಮ್ಮ ಮುಂದಿನ ಧ್ಯೇಯೋದ್ದೇಶ ವಿವರಿಸಿದರು. ಸಮಾರಂಭದಲ್ಲಿ ಆರ್ಯವೈಶ್ಯ ಸಮಾಜದ ಕಾರ್ಯದರ್ಶಿ ಸಾವಿತ್ರಿ ಪುರುಷೋತ್ತಮ್, ಕೋಶಾಧ್ಯಕ್ಷ ಮಾರಂ ತಿಪ್ಪಣ್ಣ, ಮತ್ತಿತರರು ಉಪಸ್ಥಿತರಿದ್ದರು.

ಇಂದು ನಗರಕ್ಕೆ ವೆಂಕಯ್ಯ ನಾಯ್ಡು
ಸಿಂಧನೂರು:
ಬಿಜೆಪಿ ರಾಷ್ಟ್ರೀಯ ಮಾಜಿ ಅಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ವೆಂಕಯ್ಯ ನಾಯ್ಡು ಹಾಗೂ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ತಾಲೂಕಿನ ವಿವಿಧೆಡೆ ಏ. 30ರಂದು ರೋಡ್ ಶೋ ನಡೆಸಲಿದ್ದಾರೆ.  ಬಿಜೆಪಿ ಅಭ್ಯರ್ಥಿ ಕೊಲ್ಲಾ ಶೇಷಗಿರಿರಾವ್ ಪರ ಪ್ರಚಾರ ನಡೆಸಲಿದ್ದಾರೆ ಎಂದು ತಾಲೂಕು ಪ್ರಧಾನ ಕಾರ್ಯದರ್ಶಿ ಮಧ್ವರಾಜ್ ಆಚಾರ್ ತಿಳಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು ತಾಲೂಕಿನ ದಡೇಸ್ಗೂರದಿಂದ ಗಾಂಧಿನಗರದವರೆಗೆ ವೆಂಕಯ್ಯ ನಾಯ್ದು ರೋಡ್ ಶೋ ನಡೆಸಿದರೆ, ಕೆ.ಎಸ್. ಈಶ್ವರಪ್ಪ ಸಿಂಧನೂರು ನಗರದಿಂದ ಜವಳಗೇರಿವರೆಗೆ ರೋಡ್ ಶೋ ಮೂಲಕ ಮತ ಯಾಚಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಸಿಂಧನೂರಿಗೆ ಇಂದು ಎಚ್‌ಡಿಕೆ
ಸಿಂಧನೂರು:
ಸಿಂಧನೂರು ವಿಧಾನಸಭಾ ಕ್ಷೇತ್ರದ ಜೆ.ಡಿ.ಎಸ್. ಅಭ್ಯರ್ಥಿ ವೆಂಕಟರಾವ್ ನಾಡಗೌಡ ಅವರ ಪರ ಪ್ರಚಾರಾರ್ಥ ಏ. 30ರಂದು ನಗರಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ಜೆ.ಡಿ.ಎಸ್. ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆಗಮಿಸಲಿದ್ದಾರೆ ಎಂದು ಜೆಡಿಎಸ್ ವಕ್ತಾರ ಬಸವರಾಜ ನಾಡಗೌಡ ತಿಳಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು ಮಧ್ಯಾಹ್ನ 3ಗಂಟೆಗೆ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡುವರು ಎಂದು ಹೇಳಿದ್ದಾರೆ.

ಸಿಬ್ಬಂದಿಗೆ ಹೆಚ್ಚುವರಿ ಬಸ್ ಸೌಕರ್ಯ
ರಾಯಚೂರು:
ಜಿಲ್ಲೆಯಲ್ಲಿ ಮೇ 5ರಂದು ನಡೆಯುವ ಚುನಾವಣೆಯ ಕಾರ್ಯಕ್ಕೆ ನೇಮಕಗೊಂಡ ಸಿಬ್ಬಂದಿಗಳು ಜಿಲ್ಲೆಯ ವಿವಿಧ ತಾಲೂಕುಗಳಿಗೆ ತೆರಳಲು ಏ.30ರಂದು ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಚುನಾವಣೆ ತರಬೇತಿಗೆ ವಿವಿಧ ತಾಲೂಕುಗಳಿಗೆ ತೆರಳಲು ಅನುಕೂಲವಾಗುವಂತೆ ಏ.30ರಂದು ಬೆಳಗ್ಗೆ 7ಕ್ಕೆ ಜಿಲ್ಲೆಯ ಪ್ರತಿ ತಾಲೂಕು ಕೇಂದ್ರಗಳ ಬಸ್ ನಿಲ್ದಾಣದಿಂದ ಪ್ರತಿ ತಾಲೂಕು ಕೇಂದ್ರಗಳಿಗೆ ತಲಾ ಐದು ವಿಶೇಷ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಚುನಾವಣಾ ಕಾರ್ಯಕ್ಕೆ ನಿಯೋಜಿತ ಸಿಬ್ಬಂದಿ ಹಾಗೂ ಅಧಿಕಾರಿಗಳು ಟಿಕೆಟ್ ಪಡೆದು ಪ್ರಯಾಣಿಸಲು ಹಾಗೂ ನಿಗದಿತ ಸಮಯಕ್ಕೆ ಸರಿಯಾಗಿ ನಿಯೋಜಿತ ತಾಲೂಕು ಕೇಂದ್ರಗಳಿಗೆ ತಲುಪಿ ತರಬೇತಿ ಕಾರ್ಯಕ್ರಮಕ್ಕೆ ಹಾಜರಾಗಲು ಸಹಾಯಕ ಆಯುಕ್ತರ ಕಚೇರಿ ತಿಳಿಸಿದೆ.

ಮತದಾನಕ್ಕೆ ಸ. ಆಯುಕ್ತರ ಕರೆ
ರಾಯಚೂರು: ಜಿಲ್ಲೆಯಲ್ಲಿ
ಮೇ 5ರಂದು ನಡೆಯುವ ಚುನಾವಣೆಯಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕಡ್ಡಾಯವಾಗಿ ಮತದಾನ ಮಾಡುವಂತೆ ಸಹಾಯಕ ಆಯುಕ್ತೆ ಮಂಜುಶ್ರೀ ಕರೆ ನೀಡಿದರು. ಅವರು ನಗರದ ಕೃಷಿ ವಿವಿ ಸಭಾಂಗಣದಲ್ಲಿ ಆಯೋಜಿಸಿದ್ದ ಮತದಾನ ಜಾಗೃತಿ ಕುರಿತ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಮಾತನಾಡಿ, ಹಣ, ಉಡುಗೊರೆ ಸೇರಿ ವಿವಿಧ ಆಮಿಷಗಳಿಗೆ ಮತದಾರರು ಬಲಿಯಾಗದೇ ಬೆದರಿಕೆಗೆ ಮಣಿಯದೇ ಮತದಾನ ಚಲಾಯಿಸುವಂತೆ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಸೈನ್ಸ್ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ಪ್ರೊ.ಸಿ.ಡಿ.ಪಾಟೀಲ್, ರಾಘವೇಂದ್ರ ಭಟ್ ಮತ್ತಿತರರು ಪಾಲ್ಗೊಂಡಿದ್ದರು. ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಜೆಡಿಎಸ್ ಬೆಂಬಲಿಸಿ: ಡ್ಯಾನಿಸ್ ಅಲಿ
ಮುದಗಲ್:
ಕೇಂದ್ರದಲ್ಲಿ ಕಾಂಗ್ರೆಸ್, ರಾಜ್ಯದಲ್ಲಿ ಬಿಜೆಪಿ ಭ್ರಷ್ಟಾಚಾರದ ಮೂಲಕ ಹಗಲು ದರೋಡೆಗೆ ನಿಂತಿವೆ. ಮೇ 5ರಂದು ನಡೆಯಲಿರುವ ವಿಧಾನಸಭಾ ಚುನಾವಣೆ ಮತದಾನದಲ್ಲಿ ಕಾಂಗ್ರೆಸ್, ಬಿಜೆಪಿಯನ್ನು ತಿರಸ್ಕರಿಸಿ ಜೆಡಿಎಸ್ ಅಭ್ಯರ್ಥಿ ಮಾನಪ್ಪ ವಜ್ಜಲ್ ಅವರಿಗೆ ಮತ ಚಲಾಯಿಸಿ ಬೆಂಬಲಿಸಬೇಕೆಂದು ಅಲ್ಪಸಂಖ್ಯಾತ ಘಟಕದ ರಾಷ್ಟ್ರೀಯ ಮುಖಂಡ ಡ್ಯಾನಿಸ್ ಅಲಿ ಕೋರಿದರು. ಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿ ಮಾನಪ್ಪ ಡಿ ವಜ್ಜಲ್ ಪರವಾಗಿ ಬಹಿರಂಗ ಸಭೆಯಲ್ಲಿ ಮಾತನಾಡಿ,  ಈ ಕ್ಷೇತ್ರದಲ್ಲಿ ವಜ್ಜಲ್ ಶಾಸಕರಾದರೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುತ್ತಾರೆ ಎಂದರು. ಕ್ಷೇತ್ರದಲ್ಲಿ, ರಾಜ್ಯದಲ್ಲಿ ಜೆಡಿಎಸ್ ಪರ ಅಲೆ ಇದೆ. ಕಾಂಗ್ರೆಸ್ ಮತ್ತು ಬಿಜೆಪಿ ಅಲ್ಪ ಸಂಖ್ಯಾತರನ್ನು ಮತಕ್ಕಾಗಿ ಮಾತ್ರ ಬಳಸಿಕೊಳ್ಳಲಾಗುತ್ತಿದೆ. ನಮ್ಮ ನಮ್ಮಲ್ಲೇ ಜಗಳ ಹಚ್ಚಿ ಮೋಜು ನೋಡುತ್ತಿದ್ದಾರೆ.  ಡಾ. ನಜೀರ ಅಬ್ಬಾಸ್ ವಿದ್ಯಾರ್ಥಿ ಘಟಕ ರಾಷ್ಟ್ರೀಯ ಮುಖಂಡರು ಮಾತನಾಡಿದರು. ವೇದಿಕೆ ಮೇಲೆ ಜೆಡಿಎಸ್ ಅಭ್ಯರ್ಥಿ ಮಾನಪ್ಪ ಡಿ. ವಜ್ಜಲ, ಎಪಿಎಂಸಿ ಉಪಾಧ್ಯಕ್ಷ ಎಸ್.ಆರ್. ರಸೂಲ್ ಮಾತನಾಡಿದರು.

144 ಸೀರೆ ಜಪ್ತಿ
ರಾಯಚೂರು:
ಆಂಧ್ರದ ಗದ್ವಾಲ್ ನಿಂದ ನಗರಕ್ಕೆ ವಾಹನದಲ್ಲಿ ಸಾಗಿಸುತ್ತಿದ್ದ 144 ಸೀರೆಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಸೂಕ್ತ ದಾಖಲೆಗಳಿಲ್ಲದೇ ಟ್ರಾವೆರಾ ಕಾರಿನಲ್ಲಿ 144 ಸೀರೆಗಳನ್ನು ರಾಜಕುಮಾರ್, ರಘು, ಲಕ್ಷ್ಮಿನಾರಾಯಣ ಎಂಬುವವರು ಸಾಗಿಸುತ್ತಿದ್ದ ವೇಳೆ ಕಾರು ತಡೆದ ಪೊಲೀಸರು ತಪಾಸಣೆ ನಡೆಸಿದ ವೇಳೆ ಸೀರೆಗಳು ಪತ್ತೆಯಾಗಿದ್ದು ವಾಹನ, ಸೀರೆ ಜಪ್ತಿ ಮಾಡಲಾಗಿದೆ.

ಶಂಷುದ್ದೀನ್ ಖಾದ್ರಿ ಊರುಸ್
ಸಿಂಧನೂರು:
ತಾಲೂಕಿನ ಗೋಮರ್ಸಿ ಗ್ರಾಮದ ಶಂಷುದ್ದೀನ್ ಖಾದ್ರಿಯವರ 9ನೇ ಉರುಸು ವಿಜೃಂಭಣೆಯಿಂದ ಜರುಗಿತು. ತಾತನವರ ವಂಶಸ್ಥರರಿಂದ ಗಂಧ ಹಾಗೂ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಹಿಂದೆ ಸಂತ ಶಂಷುದ್ದೀನ್ ಖಾದ್ರಿಯವರು ತಾಲೂಕಿನ 8 ಕಿಮೀ ದೂರದಲ್ಲಿರುವ ಗೋಮರ್ಸಿ ಗ್ರಾಮಕ್ಕೆ ಬಂದು ಹಳೆ ಮನೆಯೊಂದರಲ್ಲಿ ವಾಸವಾಗಿದ್ದರು.
ಅವರು ಗ್ರಾಮಸ್ಥರ ಯೋಗಕ್ಷೇವುದ ಬಗ್ಗೆ ತಮ್ಮ ಜ್ಞಾನದಿಂದ ಪವಾಡಗಳನ್ನು ಮಾಡುತ್ತಿದ್ದರು. ಒಂದು ವರುಷ ಮಳೆ ಬಾರದೆ ಊರೆಲ್ಲಾ ಬರಗಾಲದಿಂದ ನರಳುತ್ತಿತ್ತು. ಗ್ರಾಮಸ್ಥರು ಇವರ ಬಳಿ ಹೋದಾಗ ಬರಗಾಲಕ್ಕೆ ಹೆದರಬೇಡಿ, ನಾವೆಲ್ಲಾ ಸಾಮಾನ್ಯ ಮನುಷ್ಯರು ಮಾತ್ರ. ಮೇಲೊಬ್ಬ ಎಲ್ಲರನ್ನು ನೋಡಿಕೊಳ್ಳುವವನು ಇದ್ದಾನೆ. ಹೋಗಿ ಒಂದು ದೋಣಿಯನ್ನು ತೆಗೆದುಕೊಂಡು ಬನ್ನಿ. ಅದನ್ನೆತ್ತಿಕೊಂಡು ಊರೆಲ್ಲಾ ಸುತ್ತಾಡಿಸಿಕೊಂಡು ಬನ್ನಿ ಎಂದರು. ನಂತರ ಮಳೆ ಬಂದು, ಆ ವರ್ಷ ರೈತಾಪಿ ವರ್ಗ ನಿರೀಕ್ಷೆಗಿಂತ ಹೆಚ್ಚಿನ ಬೆಳೆ ಬೆಳೆದರು. ತಮ್ಮಲ್ಲಿಗೆ ರೋಗ-ರುಜಿನುಗಳೆಂದು ಬಂದರೆ ತಮ್ಮ ದಿವ್ಯಶಕ್ತಿಯಿಂದ ಗುಣಪಡಿಸುತ್ತಿದ್ದರು ಎನ್ನುತ್ತಾರೆ. ಗ್ರಾಮಸ್ಥರು ಇಂದಿಗೂ ಅವರ ಸಮಾಧಿ ಬಳಿ ಸೋಮವಾರ ಹಾಗೂ ಗುರುವಾರದಂದು ತೆರಳಿ, ಏನಾದರೂ ಬೇಡಿಕೆ ಇಟ್ಟರೆ ಅದು ಈಡೇರುತ್ತದೆ ಎನ್ನುತ್ತಾರೆ. ಉರುಸಿನ ಪ್ರಯುಕ್ತವಾಗಿ ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ 7 ಮಣದ ಕಲ್ಲನ್ನು ಊರಿನ ಯುವಕ ಮಹಿಬೂಬ್ ಗುನ್ನಿ ಎತ್ತಿ ವಿಜೇತರಾದರು. ಈ ಸಂದರ್ಭದಲ್ಲಿ ಕಟ್ಟೆಯ ಮುಜಾವರ್ ಬುಡ್ಡಾ ಸಾಬ್, ಮುಖಂಡರಾದ ಸಜ್ಜದ್, ಧಣಿ, ನನ್ನುಸಾಬ್,  ಜಿಲಾನಿ, ಶಮ್ಮು, ಭಾಷಾ ಸೇರಿದಂತೆ ಅನೇಕ ಭಕ್ತರು ಪಾಲ್ಗೊಂಡಿದ್ದರು.

ಸಿದ್ದು ಮುಂದಿನ ಮುಖ್ಯಮಂತ್ರಿ: ಬಯ್ಯಾಪುರ
ಲಿಂಗಸ್ಗೂರು:
ರಾಜ್ಯದಲ್ಲಿ ಕಾಂಗ್ರೆಸ್‌ಗೆ ಉತ್ತಮವಾದ ವಾತಾವರಣ ನಿರ್ಮಾಣಗೊಂಡಿದೆ. ಪ್ರಸ್ತುತ ಚುನಾವಣೆಯಲ್ಲಿ ಪಕ್ಷಕ್ಕೆ ಬಹುಮತ ದೊರಕಲಿದ್ದು, ರಾಜ್ಯದ ಮುಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಆಗಲಿದ್ದಾರೆಂದು ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪುರ ಭವಿಷ್ಯ ನುಡಿದರು. ತಾಲೂಕಿನ ಆನೆಹೊಸೂರು ಗ್ರಾಮದಲ್ಲಿ ಭಾನುವಾರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರ ಮತಯಾಚನೆ ನಡೆಸಿ ನಂತರ ಬಹಿರಂಗ ಸಭೆಯಲ್ಲಿ ಮಾತನಾಡಿದರು. ಪಕ್ಷದ ಮುಖಂಡ ಬಸವಂತರಾಯ ಕುರಿ ಮಾತನಾಡಿ, ಹೈದ್ರಾಬಾದ್ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಲು 371 ನೇ ಕಲಂ ತಿದ್ದುಪಡಿಗೆ ಕಾಂಗ್ರೆಸ್ ಪಕ್ಷದ ಕೊಡುಗೆ ಅಪಾರ ಎಂದರು.

ಅಕ್ರಮ ಮದ್ಯ; ಮೂವರ ಬಂಧನ
ರಾಯಚೂರು:
ಮಾನವಿ ತಾಲೂಕಿನ ವಕ್ರಾಣಿ ಕ್ರಾಸ್ ಬಳಿ ಅಕ್ರಮ ಮದ್ಯ  ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಬಂಧಿತನನ್ನು ಸಂತೋಷ ಎಂದು ಗುರುತಿಸಲಾಗಿದೆ. ಈತ ವಕ್ರಾಣಿ ಕ್ರಾಸ್ ಬಳಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವೇಳೆ ದಾಳಿ ಮಾಡಿದ ಪೊಲೀಸರು ಆರೋಪಿಯನ್ನು ಬಂಧಿಸಿ ಅವನಿಂದ ಒಟ್ಟು 6554 ಬೆಲೆ ವಿವಿಧ ಕಂಪನಿಗಳ ಮದ್ಯ ಜಪ್ತಿ ಮಾಡಿದ್ದಾರೆ. ಸಿರವಾರ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಮಾನವಿ ತಾಲೂಕಿನ ಹಿರೇದಿನ್ನಿ ಕ್ಯಾಂಪಿನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಒಬ್ಬನನ್ನು ಬಂಧಿಸಲಾಗಿದೆ. ಂಧಿತನನ್ನು ತಿಮ್ಮಯ್ಯ ಎಂದು ಗುರುತಿಸಲಾಗಿದೆ. ಈತ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವೇಳೆ ದಾಳಿ ಮಾಡಿದ ಪೊಲೀಸರು ಆರೋಪಿಯನ್ನು ಬಂಧಿಸಿ ಅವನಿಂದ 10560 ರು. ಬೆಲೆಯ ಮದ್ಯ ಹಾಗೂ 330 ರು. ನಗದು ಜಪ್ತಿ ಮಾಡಿದ್ದಾರೆ. ಕವಿತಾಳ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ರಾಯಚೂರು ತಾಲೂಕಿನ ನಾಗನದೊಡ್ಡಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಬಂಧಿತನನ್ನು ಈರೇಶ ಎಂದು ಗುರುತಿಸಲಾವಾಗಿದೆ. ಈತ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವೇಳೆ ದಾಳಿ ಮಾಡಿದ ಪೊಲೀಸರು ಆರೋಪಿಯನ್ನು ಬಂಧಿಸಿ ಅವನಿಂದ2042 ಬೆಲೆ ಮದ್ಯ ಜಪ್ತಿ ಮಾಡಿದ್ದಾರೆ.ಈ ಕುರಿತು ಅಬಕಾರಿ ಪೊಲೀಸರು ಕೇಸ್ ದಾಖಲಿಸಿದ್ದಾರೆ.

ಹೊಟ್ಟೆನೋವು: ವಕ್ತಿ ಆತ್ಮಹತ್ಯೆ
ರಾಯಚೂರು:
ಲಿಂಗಸ್ಗೂರು ತಾಲೂಕಿನ ಕಡದರಾಳ ಗ್ರಾಮದಲ್ಲಿ ಹೊಟ್ಟೆನೋವಿನಿಂದ ಬೇಸತ್ತ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನನ್ನು ಯಶುರಾಜ ಎಂದು ಗುರುತಿಸಲಾಗಿದೆ. ಈತ ಕಳೆದ ಮೂರು ತಿಂಗಳಿನಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದು ಅದರಿಂದ ಬೇಸತ್ತು ತನ್ನ ಹೊಲದಲ್ಲಿನ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದು ಇದನ್ನು ಕಂಡ ಆತನ ಸಂಬಂಧಿಗಳು ಈತನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವಿಗೀಡಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಮುದಗಲ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಇಂದು ಪುಸ್ತಕ ಬಿಡುಗಡೆ ಸಮಾರಂಭ
ರಾಯಚೂರು:
ರಾಂಪುರ ಗ್ರಾಮದ ಚೈತನ್ಯ ಕಲಾ ಯುವಕ ಮಂಡಳಿ ಹಾಗೂ ಸೇವಾ ಸಮಾಜಕಾರ್ಯ ಮಹಾವಿದ್ಯಾಲಯದ ಆಶ್ರಯದಲ್ಲಿ ಏ.30ರಂದು ನಗರದಲ್ಲಿ ಪುಸ್ತಕ ಬಿಡುಗಡೆ ಸಮಾರಂಭ ಆಯೋಜಿಸಲಾಗಿದೆ. ನಗರದ ಜಿಲ್ಲಾ ಸರ್ಕಾರಿ ನೌಕರರ ಸಂಘದ ಭವನದಲ್ಲಿ ಅಂದು ಬೆಳಗ್ಗೆ 10.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಅಯ್ಯಪ್ಪ ತುಕ್ಕಾಯಿ ಮಲ್ಲೇಶ್ ಬೈರವ್ ಅವರು ರಚಿಸಿದ ವಚನ ಶುಭವೇಣಿ ಪುಸ್ತಕ ಬಿಡುಗಡೆಗೊಳಿಸಲಿದ್ದಾರೆ. ಅಧ್ಯಕ್ಷತೆಯನ್ನು ನಗರಸಭೆಯ ಮಾಜಿ ಸದಸ್ಯ ತಿಮ್ಮಪ್ಪ ಫಿರಂಗಿ ವಹಿಸುವರು. ರಾಮಸ್ವಾಮಿ ನುಲಿ ಪುಸ್ತಕದ ಪರಿಚಯ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಗರಸಭೆ ಸದಸ್ಯ ಮಹಾಲಿಂಗ ರಾಂಪುರ, ಶರಣಬಸವ ಪಾಟೀಲ್, ತಾಯರಾಜ್ ಮರ್ಚೆಟ್ಹಾಳ್ ಸೇರಿದಂತೆ ಅನೇಕರು ಪಾಲ್ಗೊಳ್ಳಲಿದ್ದಾರೆಂದು ಪ್ರಕಟಣೆ ತಿಳಿಸಿದೆ.

ಮಾನವಿ; ಇಂದು ವಿಚಾರ ಸಂಕಿರಣ
ರಾಯಚೂರು:
ಮಾನವಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದಿಂದ ಮತದಾನದ ಮಹತ್ವ ಹಾಗೂ ಉತ್ತಮ ಆರೋಗ್ಯ ಹವ್ಯಾಸ ಕುರಿತು ಏ. 30ರಂದು ವಿಚಾರ ಸಂಕಿರಣ ಆಯೋಜಿಸಲಾಗಿದೆ. ಅಂದು ಮಾನವಿ ಪಟ್ಟಣದ ಕಲ್ಮಠ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ಬೆಳಗ್ಗೆ 10ಕ್ಕೆ ನಡೆಯುವ ವಿಚಾರ ಸಂಕಿರಣವನ್ನು ತಹಸೀಲ್ದಾರ್ ಪುಟ್ಟನರಸಯ್ಯ ಉದ್ಘಾಟಿಸಲಿದ್ದಾರೆ. ಸಾನ್ನಿಧ್ಯವನ್ನು ಕಲ್ಮಠ ಶ್ರೀ ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಡಾ.ರಾಜಶೇಖರ್ ವಹಿಸಲಿದ್ದಾರೆ. ಪ್ರತಿಷ್ಠಾನದ ಅಧ್ಯಕ್ಷ ರಾಮಚಂದ್ರಪ್ಪ ಪಾಲ್ಗೊಳ್ಳಲಿದ್ದಾರೆ. ಪತ್ರಕರ್ತ ಡಿ.ಎಚ್.ಕಂಬಳಿ ಮತದಾನದ ಮಹತ್ವ ಕುರಿತು ಹಾಗೂ ಉತ್ತಮ ಆರೋಗ್ಯ ಮತ್ತು ಹವ್ಯಾಸ ಕುರಿತು ಡಾ.ಎಂ.ಎಲ್. ಪಾಟೀಲ್ ಮಾತನಾಡಲಿದ್ದಾರೆಂದು ಪ್ರಕಟಣೆ ತಿಳಿಸಿದೆ.

ಹೂಲಗೇರಿ ಮತಯಾಚನೆ
ಲಿಂಗಸ್ಗೂರು:
ಪಟ್ಟಣದಲ್ಲಿ ಲಿಂಗಸ್ಗೂರು ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಿ.ಎಸ್.ಹೂಲಗೇರಿ ಅವರು ಸೋಮವಾರ ಪಾದಯಾತ್ರೆ ಮೂಲಕ ತೆರಳಿ ಮತಯಾಚನೆ ನಡೆಸಿದರು. ಪಕ್ಷದ ಮುಖಂಡರಾದ ಮಲ್ಲಣ್ಣ ವಾರದ, ಲಾಲಅಹ್ಮದಸಾಬ, ಖಾದರ್‌ಪಾಶಾ, ಅನೀಸ್ ಪಾಶಾ, ಎಂ.ಡಿ.ರಫಿ, ಪರಸಪ್ಪ ಹುನಕುಂಟಿ, ನಾಗರಾಜ ನರಕಲದಿನ್ನಿ, ಪರಶುರಾಮ ನಗನೂರ ಸೇರಿದಂತೆ ಮಹಿಳೆಯರು ಸೇರಿದಂತೆ ನೂರಾರು ಜನ ಕಾರ್ಯಕರ್ತರು ಭಾಗವಹಿಸಿದ್ದರು.

ಕ್ಷೇತ್ರ ಪ್ರಗತಿಗೆ ಬಿಜೆಪಿಗೆ ಮತನೀಡಿ: ನರಿಬೋಳ
ಜೇವರ್ಗಿ:
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಪ್ರಬಲ ಅಸ್ತ್ರವಾಗಿದೆ. ಅದನ್ನು ಅಭಿವೃದ್ಧಿಯ ಕನಸುಳ್ಳವರಿಗೆ ನೀಡಿದರೆ ನಿಮ್ಮ ಮತದಾನಕೊಂದು ಅರ್ಥ ಬರುತ್ತದೆ ಮತ್ತು ಕ್ಷೇತ್ರ ಪ್ರಗತಿ ಕಾಣುತ್ತದೆ ಎಂದು ಬಿಜೆಪಿ ಅಭ್ಯರ್ಥಿ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಹೇಳಿದರು.
ಪಟ್ಟಣದ ಹರವಾಳ ದಾಲ್‌ಮಿಲ್‌ನಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿ, ಈಗಾಗಲೇ ಒಂದು ಬಾರಿ ನನ್ನನ್ನು ಆಶೀರ್ವದಿಸಿ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಿದ್ದಿರಿ, ನಾನು ಶಾಸಕ ನಾಗುವ ಮೊದಲು ಅಧಿಕಾರದಲ್ಲಿದ್ದವರು ಏನು ಕೆಲಸ ಮಾಡಿದ್ದಾರೆ, ನನ್ನ ಅಧಿಕಾರ ಅವಧಿಯಲ್ಲಿ ನಾನೇನು ಅಭಿವೃದ್ಧಿ ಕೆಲಸ ಮಾಡಿದ್ದೇನೆ ಎಂಬುವುದು ನಿಮ್ಮ ಮುಂದಿದೆ. ಅವುಗಳನ್ನು ಅಳೆದು ನೋಡಿ ಮತನೀಡಿ ಎಂದರು.

ಸರ್ವಾಂಗೀಣ ಅಭಿವೃದ್ಧಿ: ತಾಲೂಕಿನ ಮಹತ್ವದ ಯೋಜನೆಗಳಾದ ಮಲ್ಲಾಬಾದ್ ಏತ ನೀರಾವರಿ ಕಾಮಗಾರಿಗೆ ಚಾಲನೆ, ಯಡ್ರಾಮಿ ನೂತನ ತಾಲೂಕು ಕೇಂದ್ರ ಘೋಷಣೆ, ಬಿಎಸ್‌ವೈ ಯೋಜನೆಯಲ್ಲಿ 9 ಸಾವಿರ ಮನೆಗಳ ವಿತರಣೆ, ಕೋನಾ ಹಿಪ್ಪರಗಾ- ಸರಡಗಿ ಬ್ರಿಡ್ಜ್ ಕಂ ಬ್ಯಾರೇಜ್ ಕಾಮಗಾರಿಗೆ 64 ಕೋಟಿ ಬಿಡುಗಡೆ, 50 ಹಳ್ಳಿಗಳನ್ನು ಸುವರ್ಣ ಗ್ರಾಮ ಯೋಜನೆಯಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಜತೆಗೆ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ 25 ಕೋಟಿ ನೀಡಲಾಗಿದೆ ಎಂದು ಹೇಳಿದರು. ಸಭೆಯಲ್ಲಿ ಮುಖಂಡರಾದ ಪಿ.ಎನ್. ಮಾಲಿಪಾಟೀಲ್, ರಮೇಶಬಾಬು ವಕೀಲ, ಎಂ.ಬಿ. ಪಾಟೀಲ್ ಹರವಾಳ, ಧರ್ಮಣ್ಣ ದೊಡ್ಮನಿ, ಬಸವರಾಜ ಕಂದಗಲ, ಬಸವರಾಜ ಸಾಹು ಗೋಗಿ, ಶಿವಶರಣಪ್ಪ ಸಜ್ಜನ್, ಷಣ್ಮುಖಪ್ಪ ಸಾಹು ಗೋಗಿ, ಡಾ. ಶಿವರಾಜ ಪಾಟೀಲ್, ಮರೆಪ್ಪ ಬಡಿಗೇರ, ಕಿಶನರಾವ ಹೆಮನೂರ, ಮಲ್ಲಶೆಟ್ಟೆಪ್ಪಗೌಡ ಹಿರೇಗೌಡ, ಮಹಿಬೂಬ್ ಇನಾಮದಾರ, ವಿಶ್ವನಾಥ ಇಮ್ಮಣ್ಣಿ, ಗುರುಶಾಂತಯ್ಯ ಹಿರೇಮಠ, ದತ್ತು ಪೂಜಾರಿ, ಭೀಮು ಮಡಿವಾಳಕರ್ ಇದ್ದರು.

ಮತಯಾಚಿಸಿದ ಚವ್ಹಾಣ
ಗುಲ್ಬರ್ಗ/ಶಹಾಬಾದ್:
ಗುಲ್ಬರ್ಗ ಗ್ರಾಮೀಣ ಮತಕ್ಷೇತ್ರದ ಕೆಜೆಪಿ ಅಭ್ಯರ್ಥಿ ಮಾಜಿ ಸಚಿವ ಬಾಬುರಾವ ಚವ್ಹಾಣ ಅವರು ಶಹಾಬಾದ್ ನಗರದ ಪ್ರಮುಖ ಬಡಾವಣೆಗಳಲ್ಲಿ ಪಾದಯಾತ್ರೆ ಮೂಲಕ ಮತ ಯಾಚಿಸಿದರು. ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರೊಂದಿಗೆ ಸಭೆ ನಡೆಸಿದ ಚವ್ಹಾಣ ನಂತರ ನಗರದ ಮುಖ್ಯ ರಸ್ತೆ, ಬೆಂಡಿ ಬಜಾರ, ಲಕ್ಷ್ಮೀಗಂಜ್, ರೈಲ್ವೆ ನಿಲ್ದಾಣ ಪ್ರದೇಶ, ಮಜೀದ್ ಚೌಕ್‌ನಲ್ಲಿ ಕಾರ್ಯಕರ್ತರೊಂದಿಗೆ ಮನೆ ಮನೆಗೆ ತೆರಳಿ ಮತ ಯಾಚಿಸಿದರು. ಮುಖಂಡರಾದ ಅಬ್ದುಲ್ ರಬ್ ಬಾರಿ, ಎನ್.ಸಿ. ವಾರದ, ವೀರೇಶ ರಾಮಶೆಟ್ಟಿ, ಜಗನ್ನಾಥ ಸುಬೇದಾರ ಸೇರಿದಂತೆ ಕಾರ್ಯಕರ್ತರು ಇದ್ದರು.

ಕಲಬೆರೆಕೆ ಸೇಂದಿ ಜಪ್ತಿ; 3 ಬಂಧನ
ಚಿಂಚೋಳಿ:
ತಾಲೂಕಿನ ಗಡಿಭಾಗದ ಮಿರಿಯಾಣ ಅಬಕಾರಿ ಚೆಕ್‌ಪೋಸ್ಟ್ ಹತ್ತಿರ ವಾಹನಗಳ ತಪಾಸಣೆ ನಡೆಸಿದಾಗ 102 ಲೀಟರ್ ಕಲಬೆರೆಕೆ ಸೇಂದಿ ಮತ್ತು 3 ವಾಹನ ವಶಪಡಿಸಿಕೊಂಡು 3 ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಚಿಂಚೋಳಿ ಅಬಕಾರಿ ಇನ್ಸ್‌ಪೆಕ್ಟರ್ ಬಾಲಕೃಷ್ಣ ಮುದುಕಣ್ಣ ತಿಳಿಸಿದ್ದಾರೆ. ಕ್ರೂಸರ್ ವಾಹನದಲ್ಲಿ 27 ಲೀಟರ್ ಕಲಬೆರೆಕೆ ಸೇಂದಿ, ಮಹೇಂದ್ರ ಕಮಾಂಡರ್ ಜೀಪ್‌ನಲ್ಲಿ 25 ಲೀಟರ್ ಕಲಬೆರೆಕೆ ಸೇಂದಿ ಮತ್ತು ಬಜಾಜ್ ಟಂಟಂ ಅಟೋದಲ್ಲಿ 50 ಲೀಟರ್ ಕಲಬೆರೆಕೆ ಸೇಂದಿ ವಶಪಡಿಸಿಕೊಂಡು ಮೂರು ವಾಹನಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿತ ಚಾಲಕರಾದ ಬಸವರಾಜ ಶಂಕರ ಬಿರಾದಾರ, ವಿನೋದ ಜೈರಾಮ ರಾಠೋಡ, ನಾಮದೇವ ಪೋಮು ರಾಠೋಡ ಸೇರಿದಂತೆ ಇತರರನ್ನು ಬಂಧಿಸಲಾಗಿದೆ. ಒಟ್ಟು 6.80 ಲಕ್ಷ ಮೌಲ್ಯದಾಗಿದೆ ಎಂದು ತಿಳಿದು ಬಂದಿದೆ. ಅಬಕಾರಿ ಜಂಟಿ ಆಯುಕ್ತ ಎಸ್.ಕೆ. ಕುಮಾರ ಮತ್ತು ಎಫ್.ಎಚ್. ಛಲವಾದಿ ಅವರ ಮಾರ್ಗದರ್ಶನದಂತೆ ದಾಳಿ ಮಾಡಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.