ರಾಯಚೂರು

ಕುಡಿವ ನೀರಿನ ತೀವ್ರ ಅಭಾವ: ಆಕ್ರೋಶ

Published On :

ಕನ್ನಡಪ್ರಭ ವಾರ್ತೆ ರಾಯಚೂರು ಏ.29
ನಗರದ ಅನೇಕ ವಾರ್ಡುಗಳಿಗೆ ಸಮರ್ಪಕ ನೀರು ಒದಗಿಸುವಂತೆ ಆಗ್ರಹಿಸಿ ಸೋಮವಾರ ನಗರದಲ್ಲಿ ವಿವಿಧ ಬಡಾವಣೆಗಳ ಸಾವಿರಾರು ಸಂಖ್ಯೆಯ ನಿವಾಸಿಗಳು ಬೃಹತ್ ಪ್ರತಿಭಟನೆ ನಡೆಸಿದರು.
ಈ ವೇಳೆ ಜಿಲ್ಲಾಡಳಿತದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಕಳೆದೊಂದು ತಿಂಗಳಿನಿಂದ ನಗರದಲ್ಲಿ ಸಮರ್ಪಕ ನೀರೊದಗಿಸಲಾಗುತ್ತಿಲ್ಲ. ನಗರಸಭೆಯ ಪೌರಾಯುಕ್ತರು ಹಾಗೂ ಎಂಜಿನಿಯರ್‌ಗಳು ಮತ್ತು ಸಿಬ್ಬಂದಿಯ ಅಸಮರ್ಪಕ ಕಾರ್ಯನಿರ್ವಹಣೆಯಿಂದಾಗಿ ಜನತೆ ನೀರಿಗೆ ಪರದಾಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪರದಾಟ: ಪ್ರಸಕ್ತ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲ ಅಧಿಕಾರಿಗಳು ಚುನಾವಣೆಯ ಕಾರ್ಯದತ್ತಲೇ ಗಮನಹರಿಸಿದ್ದಾರೆ. ಜನತೆ ನಗರದಲ್ಲಿ ಎದುರಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಗಮನಹರಿಸುತ್ತಿಲ್ಲ. ಇದರಿಂದ ನಗರದ 13, 14, 15, 16 ಮತ್ತು 17ನೇ ವಾರ್ಡಿನಲ್ಲಿ ಕಳೆದೊಂದು ತಿಂಗಳಿನಿಂದ ಸಮರ್ಪಕ ನೀರು ದೊರೆಯುತ್ತಿಲ್ಲ. ಇದರಿಂದಾಗಿ ಜನತೆ ಹಗಲು, ರಾತ್ರಿ ನೀರಿಗಾಗಿ ಪರದಾಡುವಂಥ ಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ನಗರದ ಹರಿಜನವಾಡ, ಗಾಜಗಾರಪೇಟೆ, ಮಾಣಿಕಪ್ರಭು ಲೇಔಟ್, ಜವಾಹರನಗರ ಸೇರಿದಂತೆ ಅನೇಕ ಕಾಲನಿಗಳಿಗೆ ನೀರು ಪೂರೈಕೆ ಬಹುತೇಕ ಸ್ಥಗಿತಗೊಂಡಿದೆ. ನಗರಕ್ಕೆ ಪ್ರತಿದಿನ ನೀರೊದಗಿಸಲು ಅವಕಾಶವಿದ್ದರೂ ಅಧಿಕಾರಿಗಳು ಅದರತ್ತ ನಿರ್ಲಕ್ಷ್ಯ ತಾಳಿದ್ದಾರೆ. ಕೈಗಾರಿಕೆಗಳಿಗೆ ಸಮರ್ಪಕವಾಗಿ ದೊರೆಯುವ ನೀರು ಜನರಿಗೇಕೆ ದೊರೆಯುತ್ತಿಲ್ಲ ಎಂದು ಪ್ರಶ್ನಿಸಿದರು. ನಗರಸಭೆಯ ಎಂಜಿನಿಯರ್‌ಗಳು ಪ್ರತಿಷ್ಠಿತ ಹೊಟೇಲ್‌ಗಳು, ಶ್ರೀಮಂತರಿಗೆ ನಿರಂತರ ನೀರೊದಗಿಸುತ್ತಿದ್ದು, ಬಡವರು ಹಾಗೂ ಮಧ್ಯಮ ವರ್ಗದವರು ವಾಸವಾಗಿರುವ ಕಾಲನಿಗಳಿಗೆ ನೀರೊದಗಿಸುತ್ತಿಲ್ಲ ಎಂದು ಆರೋಪಿಸಿದರು.
ಹುಸಿ ನೆಪ: ವಿದ್ಯುತ್ ಕೊರತೆ, ನೀರೆತ್ತುವ ಮೋಟಾರ್ ದುರಸ್ತಿಯಂಥ ಸುಳ್ಳು ನೆಪಮೊಡ್ಡಿ ನೀರಿನ ಒದಗಿಸುವಿಕೆಯಲ್ಲಿ ಅನಗತ್ಯ ಗೊಂದಲ ಉಂಟು ಮಾಡಲಾಗುತ್ತಿದೆ. ಅಧಿಕಾರಿಗಳೇ ಕುಡಿಯುವ ನೀರಿನ ಸಮರ್ಪಕ ಪೂರೈಕೆ ನಿಟ್ಟಿನಲ್ಲಿ ಅಸಡ್ಡೆ ತೋರಿದ್ದಾರೆಂದು ಪ್ರತಿಭಟನಾಕಾರರು ದೂರಿದರು.
ನಗರದ ಜನತೆಗೆ ಸಮರ್ಪಕ ಕುಡಿಯುವ ನೀರೊದಗಿಸುವಲ್ಲಿ ವಿಫಲರಾಗಿರುವ ನಗರಸಭೆಯ ಅಧಿಕಾರಿಗಳನ್ನು ಕೂಡಲೇ ವಜಾಗೊಳಿಸಬೇಕು. ಜನತೆಗೆ ಸಮರ್ಪಕ ನೀರು ಹರಿಸಲು ಸೂಕ್ತಕ್ರಮ ಕೈಗೊಳ್ಳಬೇಕು ಎಂದು ಹೋರಾಟಗಾರರು ಆಗ್ರಹಿಸಿ, ಹೆಚ್ಚುವರಿ ಜಿಲ್ಲಾಧಿಕಾರಿ ತಿಮ್ಮಪ್ಪ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆ ನೇತೃತ್ವವನ್ನು ನಗರಸಭೆಯ ಹಿರಿಯ ಸದಸ್ಯ ಎ. ಮಾರೆಪ್ಪ, ನಗರ ಕುಡಿಯುವ ನೀರು ಹೋರಾಟ ಸಮಿತಿ ಅಧ್ಯಕ್ಷ ಬಾಬರ್, ನಗರಸಭೆ ಸದಸ್ಯ ಪೆಪ್ಸಿ ಗೋವಿಂದ, ಹರೀಶ್ ನಾಡಗೌಡ ಸೇರಿದಂತೆ ವಿವಿಧ ಬಡಾವಣೆಗಳ ಸಾವಿರಕ್ಕೂ ಅಧಿಕ ಸಂಖ್ಯೆಯ ನಿವಾಸಿಗಳು ಹೋರಾಟದಲ್ಲಿ ಪಾಲ್ಗೊಂಡಿದ್ದರು.
ನಿರ್ಬಂಧ: ಪ್ರತಿಭಟನಾ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿ ತಲುಪುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಸೈಯದ್ ಯಾಸೀನ್ ಮತ್ತು ಬಿಜೆಪಿ ಅಭ್ಯರ್ಥಿ ತ್ರಿವಿಕ್ರಮ್ ಜೋಷಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಪ್ರತಿಭಟನಾಕಾರರು, ಕಳೆದ ಅನೇಕ ದಿನಗಳಿಂದ ನಗರದಲ್ಲಿ ಸಮಸ್ಯೆಯಿದ್ದರೂ ಹೋರಾಟ ಮಾಡದ ಅಭ್ಯರ್ಥಿಗಳು, ಈಗ ಮುಂದೆ ಬಂದಿದ್ದು ಸರಿಯಲ್ಲ. ಪ್ರತಿಭಟನೆಯಲ್ಲಿ ಅಭ್ಯರ್ಥಿಗಳು ಯಾವುದೇ ಕಾರಣಕ್ಕೆ ಭಾಗವಹಿಸುವಂತಿಲ್ಲ ಎಂದು ತಾಕೀತು ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.