ಜೆಡಿಎಸ್ ಅಭ್ಯರ್ಥಿ ಗುತ್ತೇದಾರ ಪ್ರಚಾರ
ಕನ್ನಡಪ್ರಭ ವಾರ್ತೆ, ಆಳಂದ, ಏ.28
ಚುನಾವಣಾ ಪ್ರಚಾರದ ವೇಳೆಯಲ್ಲಿ ಕೆಜೆಪಿ ಅಭ್ಯರ್ಥಿ ಬಿ.ಆರ್. ಪಾಟೀಲ್ ಮತದಾರರಿಗೆ ಸುಳ್ಳು ಭರವಸೆ ಹಾಗೂ ವ್ಯಕ್ತಿಗತ ಆರೋಪಗಳು ಮಾಡುತ್ತಿರುವುದು ಪ್ರಜಾಸತ್ತಾತ್ಮಕ ಕ್ರಮವಲ್ಲ ಎಂದು ಜೆಡಿಎಸ್ ಅಭ್ಯರ್ಥಿ ಸುಭಾಷ ಗುತ್ತೇದಾರ ವಾಗ್ದಾಳಿ ನಡೆಸಿದರು.
ತಾಲೂಕಿನ ನೆಲ್ಲೂರ ಗ್ರಾಮದಲ್ಲಿ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ನನ್ನ ಮೇಲೆ ಅಕ್ರಮ ಸಾರಾಯಿ, ಗುಂಡಾಗೀರಿ ಕುರಿತು ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ. ಇದಕ್ಕೆ ಮತದಾರರು ತೀರ್ಮಾನ ಮಾಡಿ ಯಾರು ಅಭಿವೃದ್ಧಿ ಮಾಡಿದ್ದಾರೆ ಎಂಬುದನ್ನು ಚುನಾವಣೆಯಲ್ಲಿ ನಿರ್ಧರಿಸಬೇಕೆಂದು ಮನವಿ ಮಾಡಿದರು.
ಜೆಡಿಎಸ್ ಬಿಟ್ಟರೆ ಇತರ ಪ್ರಾದೇಶಿಕ ಪಕ್ಷಗಳಿಗೆ ರಾಜ್ಯದಲ್ಲಿ ನೆಲೆಯಿಲ್ಲ. ಬಿಎಸ್ವೈ ಪಕ್ಷವೇ ಭ್ರಷ್ಟರದಾಗಿದ್ದು, ಅಭಿವೃದ್ಧಿ ಮಾಡಲು ಹೇಗೆ ಸಾದ್ಯ ಎಂದು ಪ್ರಶ್ನಿಸಿದ ಅವರು, ಇನ್ನು ಹೆಚ್ಚಿನ ಅಭಿವೃದ್ಧಿಗಾಗಿ ಮತ ಹಾಕಿ ನಮ್ಮನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಪಕ್ಷಾಧ್ಯಕ್ಷ ಚಂದ್ರಶೇಖರ ಪಾಟೀಲ್ ಹಳ್ಳಿಸಲಗರ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಾರು ಅಭಿವೃದ್ಧಿ ಮಾಡಿದ್ದಾರೆ ಎಂಬುದನ್ನು ಅವಲೋಕಿಸಿ ಮತದಾರರು ಜೆಡಿಎಸ್ಗೆ ಬೆಂಬಲಿಸಬೇಕೆಂದು ಕೋರಿದರು.
ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಹಣಮಂತ ಕಾಬಡೆ, ಪಕ್ಷದ ಮುಖಂಡರಾದ ಪರಮೇಶ್ವರ ಖ್ಯಾಮದಿ, ವೀರಣ್ಣ ಹತ್ತರಕಿ, ರಾಜಶೇಖರ ಮಲಶೆಟ್ಟಿ, ನಿವೃತ್ತ ಸೈನಿಕ ಶಿವಶರಣಪ್ಪ ಬಿರಾದಾರ, ಶಿವರಾಜ ಪಾಟೀಲ್, ಮಾಧವರಾವ ಬಿರಾದಾರ, ದಸ್ತಯ್ಯ ಗುತ್ತೇದಾರ, ಅಂಬಾರಾಯ ಬಿರಾದಾರ, ಲಕ್ಷ್ಮೀ ಗುತ್ತೇದಾರ ಸೇರಿದಂತೆ ಅನೇಕ ಗಣ್ಯರು, ಕಾರ್ಯಕರ್ತರು ಭಾಗವಹಿಸಿದ್ದರು.
ಪ್ರಿಯಾಂಕ್ಗೆ ಕಾರ್ಯಕರ್ತರ ಕೊರತೆ: ವಾಲ್ಮೀಕಿ
ಗುಲ್ಬರ್ಗ/ಶಹಾಬಾದ್: ರಾಜ್ಯದಲ್ಲಿ 5 ವರ್ಷ ಅಧಿಕಾರಿ ನಡೆಸಿರುವ ಸರ್ಕಾರದ ಸಾಧನೆ, ಗ್ರಾಮಗಳ ಅಭಿವೃದ್ಧಿ ಕಂಡ ಯುವಕರು, ಗ್ರಾಮಗಳ ಮುಖಂಡರು ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಅವರಿಗೆ ಕಾರ್ಯಕರ್ತರ ಕೊರತೆ ಎದುರಾಗಿದೆ ಎಂದು ಶಾಸಕ ವಾಲ್ಮೀಕಿ ನಾಯಕ ಹೇಳಿದರು. ಹಲಕರ್ಟಿ ಗ್ರಾಮದಲ್ಲಿ ಇತ್ತೀಚೆಗೆ ಪಕ್ಷದ ಕಾರ್ಯಕರ್ತರ ಸಭೆ ನಡೆಸಿ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಕಾಂಗ್ರೆಸ್ ಘಟಾನುಘಟಿಗಳು ಈ ಕ್ಷೇತ್ರದಿಂದ ಆರಿಸಿದರೂ ಯಾವುದೇ ಅಭಿವೃದ್ಧಿ ಕಾರ್ಯ ಮಾಡದೆ ಕೇವಲ ತಮ್ಮ ಮನೆಗಳ ಅಭಿವೃದ್ಧಿ ಮಾಡಿಕೊಂಡಿದ್ದಾರೆಂದು ವ್ಯಂಗವಾಡಿದರು. ಈ ವೇಳೆ ಯಾಗಾಪುರ, ಬೇಳಗೇರಾ, ಹಲಕರ್ಟಿ ಗ್ರಾಮಗಳು ಕಾಂಗ್ರೆಸ್ನ 100ಕ್ಕೂ ಹೆಚ್ಚು ಕಾರ್ಯಕರ್ತರು ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆಯಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

