ರಾಯಚೂರು

ಪೊಳ್ಳು ಭರವಸೆ ನೀಡುವ ಪಕ್ಷಗಳನ್ನು ತೊಲಗಿಸಿ

Published On :

ಸಿಂಧನೂರು: ಪೊಳ್ಳು ಆಶ್ವಾಸನೆಗಳನ್ನು ಕೊಡುವ ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಕೆಜೆಪಿ ಮತ್ತು ಬಿಎಸ್‌ಆರ್ ಕಾಂಗ್ರೆಸ್‌ಗಳನ್ನು ತೊಲಗಿಸಿ. ಜೆಡಿಯು ಪಕ್ಷವನ್ನು ಬೆಂಬಲಿಸಿ. ಜೆಡಿಯುನಿಂದ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ ಎಂದು ಬಿಹಾರ ರಾಜ್ಯದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಶಾಮರಜಾಕ್ ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಮಾದರಿ ರಾಜ್ಯವಾಗಲಿ: ಅವರು ನಗರದ ಪಿಡಬ್ಲ್ಯೂಡಿ ಕ್ಯಾಂಪ್ನಲ್ಲಿರುವ ಜೆಡಿಯು ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು. ಹಣ, ಮದ್ಯದಿಂದ ಮಾತ್ರ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ .ಅಭ್ಯರ್ಥಿಯ ಸರಳತೆ, ಜನಪರ ಆಲೋಚನೆ, ಕಳಕಳಿಯ ಮೌಲ್ಯಗಳು ಹೆಚ್ಚಿನ ಮಹತ್ವ ಪಡೆಯುತ್ತವೆ. ರಾಮಕೃಷ್ಣ ಹೆಗಡೆ, ನಜೀರ್ ಸಾಬ, ಜೆ.ಎಚ್. ಪಟೇಲ್‌ರಂಥ ಮಹನೀಯರು ಕರ್ನಾಟಕವನ್ನು ದೇಶದಲ್ಲೇ ಮಾದರಿ ರಾಜ್ಯವನ್ನಾಗಿ ಮಾಡಿದ್ದರು. ಬಿಜೆಪಿ ನೇತೃತ್ವದ ಸರ್ಕಾರದಿಂದ ಕರ್ನಾಟಕಕ್ಕೆ ಕೆಟ್ಟ ಹೆಸರು ಬಂದಿದ್ದು, ಅದನ್ನು ಅಳಿಸಿ ಹಾಕಬೇಕಾದರೆ ಜೆಡಿಯು ಅಧಿಕಾರಕ್ಕೆ ಬರಬೇಕಾದ ಅನಿವಾರ್ಯತೆಯಿದೆ ಎಂದರು.
ವಿವಿಧ ಸೌಲಭ್ಯ: ಬಿಹಾರದಲ್ಲಿ ಅಕ್ರಮ ಹಣದಿಂದ ನಿರ್ಮಿಸಿದ ಮಹಲುಗಳನ್ನು ಸರ್ಕಾರ ಸ್ವಾಧೀನಪಡಿಸಿಕೊಂಡು ಆ ಸ್ಥಳದಲ್ಲಿ ಬಡ ಮಕ್ಕಳಿಗೆ ಶಾಲೆ ಮತ್ತು ಆಸ್ಪತ್ರೆಗಳನು ತೆರೆಯಲಾಗಿದೆ. ಶಿಕ್ಷಣ, ವಿದ್ಯುತ್, ಆರೋಗ್ಯ ಸೇರಿದಂತೆ ನಿರ್ಗತಿಕರಿಗೆ ಆಹಾರ ಧಾನ್ಯಗಳನ್ನು ಉಚಿತವಾಗಿ ಪೂರೈಸಲಾಗುತ್ತಿದೆ. ಲಾಲೂ ಪ್ರಸಾದ್ ಯಾದವ್‌ರ ದುರಾಡಳಿತದಿಂದ ತತ್ತರಿಸಿ ಹೋಗಿದ್ದ ರಾಜ್ಯವನ್ನು ನಿತೀಶ್ ಕುಮಾರ ಪ್ರಗತಿ ರಾಜ್ಯವನ್ನಾಗಿ ಪರಿವರ್ತಿಸಿದ್ದಾರೆ. ಸ್ಥಳೀಯ ಅಭ್ಯರ್ಥಿ ಶಾಂತಗೌಡ ಜಾಗೀರದಾರ ಅವರಿಗೆ ಬೆಂಬಲ ನೀಡುವ ಮೂಲಕ ಜೆಡಿಯು ಬಲಪಡಿಸುವಂತೆ ವಿನಂತಿಸಿದರು.
ಜೆ.ಡಿ.ಯು. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಷ್ಪಕ್ ಅಹ್ಮದ್ ಮಾತನಾಡಿ ಬಿಹಾರದಲ್ಲಿ ನಿತೀಶಕುಮಾರ ಅವರಂತೆ ಕರ್ನಾಟಕದಲ್ಲಿ ಉತ್ತಮ ನಾಯಕರನ್ನು ಅಧಿಕಾರಕ್ಕೆ ತರಬೇಕು ಎಂದು ಕರೆ ನೀಡಿದರು. ಅಭ್ಯರ್ಥಿ ಶಾಂತನಗೌಡ ಜಾಗೀರದಾರ ಸಿಂಧನೂರು ಕ್ಷೇತ್ರದಲ್ಲಿ  ಉತ್ತಮ ಪ್ರತಿಕ್ರಿಯೆ ಇದೆ ಎಂದರು. ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಅಹ್ಮದ್ ಶಾಲಿ  ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.