ತುಂಗಭದ್ರಾ ನೀರಿಗೆ ಕೊಪ್ಪಳ- ರಾಯಚೂರು ತಂಟೆ
ಕನ್ನಡಪ್ರಭ ವಾರ್ತೆ, ಕಾರಟಗಿ, ಆ.5
ತುಂಗಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ಇನ್ನೂ ನೀರು ತಲುಪಿಲ್ಲ. ಹೀಗಾಗಿ, ಕೊನೆ ಮತ್ತು ಕೆಳ ಭಾಗದಲ್ಲಿನ ಗಂಗಾವತಿ ಮತ್ತು ಸಿಂಧನೂರು ತಾಲೂಕಿನ ಹಳ್ಳಿಗಳ ರೈತರ ನಡುವೆ ನೀರಿನ ತಂಟೆ ಶುರುವಾಗಿದೆ.
31ನೇ ವಿತರಣಾ ನಾಲೆಯ 31/6ರ ಸಿಂಧನೂರು ತಾಲೂಕಿನ ಕೊನೆ ಭಾಗದ ರೈತರು ಭಾನುವಾರ ರಾತ್ರಿ ತೂಬು ಧ್ವಂಸ ಮಾಡಿದ್ದರೆ, 31/2, 4,8,9 ಮತ್ತು 10 ಉಪ ಕಾಲುವೆಗಳ ರೈತರು ಸೋಮವಾರ ಮಧ್ಯಾಹ್ನ ಮುಖ್ಯ ನಾಲೆಗೆ ಮುತ್ತಿಗೆ ಹಾಕಿದ್ದರು. ಅಲ್ಲದೆ, ಜಾಕ್ವೆಲ್ಗಳನ್ನು ಎತ್ತರಿಸಿ ನಾಲೆಯ ಸ್ಥಳದಲ್ಲಿಯೇ ಬಿಡಾರ ಹೂಡಿದ್ದಾರೆ.
ಕಳೆದ ವರ್ಷ ಇದೇ ವೇಳೆ 31ನೇ ವಿತರಣಾ ನಾಲೆ ವ್ಯಾಪ್ತಿ 31/6ರ ಸಿಂಧನೂರು ತಾಲೂಕಿನ ಚನ್ನಳ್ಳಿ, ಮಾವಿನಮಡ್ಗು, ಸಿದ್ದಾಂಪುರ, ಗಣೇಶ ಕ್ಯಾಂಪ್ ರೈತರು ಮತ್ತು ಗಂಗಾವತಿ ತಾಲೂಕಿನ ಬೂದಗುಂಪಾ, ಹಾಲಸಮುದ್ರ, ತಿಮ್ಮಾಪುರ ಹಾಗೂ ಉಳೇನೂರು, ಬೆನ್ನೂರು ಗ್ರಾಮಗಳ ರೈತರ ನಡುವೆ ಜಟಾಪಟಿ ನಡೆದಿತ್ತು. ಈಗಲೂ ಅದೇ ಪರಿಸ್ಥಿತಿ ಮುಂದುವರಿದಿದೆ.
ಭಾನುವಾರ ರಾತ್ರಿ ಸಿಂಧನೂರು ಭಾಗದ ರೈತರು ಎರಡು ಜೆಸಿಬಿ ತಂದು 31/6ರಕ್ಕೆ ನೀರು ಪೂರೈಸುವ ತೂಬನ್ನು ಧ್ವಂಸಗೊಳಿಸಿದ್ದಾರೆ. ಇದು ಬೆಳಕಿಗೆ ಬಂದ ನಂತರ ಗಂಗಾವತಿ ಭಾಗದ ಕೊನೆ ಹಳ್ಳಿಗಳ ಸಾವಿರಾರೂ ರೈತರು ಸ್ಥಳಕ್ಕೆ ಧಾವಿಸಿ ಸಿಂಧನೂರು ಭಾಗದ ರೈತರ ಕೃತ್ಯವನ್ನು ತೀವ್ರ ವಿರೋಧಿಸಿದ್ದರು. ಅಲ್ಲದೆ, ತಮ್ಮ ಭಾಗಕ್ಕೆ ನಿಯಮಿತವಾಗಿ ನೀರು ಪೂರೈಸುವಂತೆ ಒತ್ತಾಯಿಸಿದರು.
ನೀರಿಗಾಗಿ ಒತ್ತಾಯ: ಮತ್ತೊಂದೆಡೆ ಇದೇ 31ನೇ ಕಾಲುವೆ ಕೊನೆ ಭಾಗದ ಗಂಗಾವತಿ ತಾಲೂಕಿನ ಬೂದಗುಂಪಾ, ಕಕ್ಕರಗೋಳ, ಹಾಲಸಮುದ್ರ ಭಾಗದ ಕಾಲುವೆ ವ್ಯಾಪ್ತಿ ರೈತರು ಸೋಮವಾರ ಮಧ್ಯಾಹ್ನ ಇಲ್ಲಿನ ನೀರಾವರಿ ಕಚೇರಿಗೆ ಭೇಟಿ ನೀಡಿ ತಮ್ಮ ಭಾಗಕ್ಕೆ ಸಮರ್ಪಕವಾಗಿ ನೀರು ಹರಿಸಬೇಕೆಂದು ಅಧಿಕಾರಿಗಳಿಗೆ ಒತ್ತಾಯಿಸಿದರು.
31/8 ರಿಂದ 11ನೇ ವಿತರಣಾ ನಾಲೆ ವ್ಯಾಪ್ತಿಯ ರೈತರು ತಮಗೆ ನಿಗದಿಪಡಿಸಿದ ನೀರನ್ನು ಒತ್ತಾಯಿಸಿದ್ದಾರೆ. ಕಳೆದ ವರ್ಷ 31ನೇ ವಿತರಣಾ ಕಾಲುವೆ ರಿಪೇರಿ ಕಂಡ ಕಾರಣ ಸರಾಗವಾಗಿ ಹರಿಯುತ್ತಿರುವುದರಿಂದ ಒಂದೇ ದಿನದಲ್ಲಿ ಕೊನೆ ಭಾಗಕ್ಕೂ ನೀರು ತಲುಪುತ್ತಿದೆ. ಆದರೆ, 31/6ನೇ ಭಾಗದ ರೈತರು ತಮಗೆ ಅನ್ಯಾಯವಾಗಿದೆ ಎಂದು ನೀರು ಬಿಡುತ್ತಿಲ್ಲ.
ಪೂರೈಕೆ ಕಡಿತ: 20 ದಿನಗಳಿಂದ ಎಡದಂಡೆ ನಾಲೆಯಲ್ಲಿ ಕನಿಷ್ಠ 3500 ಕ್ಯುಸೆಕ್ ನೀರು ಹರಿಯುತ್ತಿದೆ. 31ನೇ ವಿತರಣಾ ಕಾಲುವೆಯಲ್ಲಿ ಕೇವಲ 250 ಕ್ಯುಸೆಕ್ ನೀರು ಹರಿಯುತ್ತಿದ್ದು, ಕೊನೆ ಭಾಗದವರೆಗೂ ತಲುಪುತ್ತಿಲ್ಲ. ವಿಚಿತ್ರವೆಂದರೆ ಕಳೆದ 3 ದಿನಗಳಿಂದ 31ನೇ ವಿತರಣಾ ನಾಲೆ ಜಾಕ್ವೆಲ್ನ್ನು 3 ಅಡಿ ಇಳಿಸಿದ್ದರಿಂದ ಸುಮಾರು 50 ಕ್ಯುಸೆಕ್ ನೀರು ಕಡಿತವಾಗಿತ್ತು. ಇದರಿಂದಲೇ 31/6 ಮತ್ತು ಕೊನೆ ಭಾಗದ ರೈತರ ನಡುವೆ ನೀರಿಗಾಗಿ ಗಲಾಟೆ ಆರಂಭವಾಗಿದೆ.
ಸೋಮವಾರ ಬೆಳಗ್ಗೆ ಬೂದಗುಂಪಾ ಭಾಗದ ರೈತರು ಮತ್ತು ನೀರು ಬಳಕೆದಾರರ ಸಂಘದ ಮುಖಂಡರು ಹಾಗೂ ನೀರಾವರಿ ಎಂಜಿನಿಯರ್ಗಳು 31/6 ಉಪಕಾಲುವೆಯ ತೂಬು ಸ್ಥಳಕ್ಕೆ ಭೇಟಿ ನೀಡಿದರು. ಇದೇ ವೇಳೆ ಮುಖ್ಯ ಎಂಜಿನಿಯರ್ 31/8ರಿಂದ 10 ಉಪಕಾಲುವೆ ಸ್ಥಳಕ್ಕೂ ಭೇಟಿ ನೀಡಿ ಪರಿಶೀಲಿಸಿದರು. 31/6ರ ತೂಬಿನ ಸ್ಥಳದಲ್ಲಿ ರಾಯಚೂರು ಜಿಲ್ಲಾ ಪೊಲೀಸರ ಎರಡು ತುಕಡಿಗಳು ಬೀಡು ಬಿಟ್ಟಿವೆ.
ಪ್ರಕರಣ ದಾಖಲು: ಈ ನಡುವೆ ಅಚ್ಚುಕಟ್ಟು ಪ್ರದೇಶದ ನಾಲೆ 31/6ರ ತೂಬನ್ನು ಧ್ವಂಶ ಮಾಡಿದ್ದಕ್ಕೆ ಇಲ್ಲಿನ ನೀರಾವರಿ ಅಧಿಕಾರಿ ಚಿಕ್ಕೊಪ್ಪ ಅವರು ಸಿಂಧನೂರು ಪೊಲೀಸರಿಗೆ ದೂರು ನೀಡಿದ್ದಾರೆ.
ಸೋಮವಾರ ಮಧ್ಯಾಹ್ನದ ವೇಳೆಗೆ ತೂಬು ಮುಚ್ಚಿ 31/6 ವ್ಯಾಪ್ತಿಗೆ ನಿಗದಿಯಾಗಿದ್ದ ಪ್ರಮಾಣದಷ್ಟು ನೀರು ಹರಿಸಿದ್ದರಿಂದ ಮುಂದಿನ ವಿತರಣಾ ಕಾಲುವೆಗಳಿಗೆ ಸೋಮವಾರ ಸಂಜೆಯಿಂದ ನಿಧಾನವಾಗಿ ನೀರು ಬರಿಯುತ್ತಿದೆ ಎಂದು ಕೊನೆ ಭಾಗದ ರೈತರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

