ರಾಯಚೂರು

ಪಾಕ್ ದಾಳಿ, ಕಾಂಗ್ರೆಸ್ ಮೃದುಧೋರಣೆ ಕಾರಣ: ಆರೋಪ

Published On :

ರಾಯಚೂರು: ಕೇಂದ್ರದ ಕಾಂಗ್ರೆಸ್ ಸರ್ಕಾರ ಪಾಕಿಸ್ತಾನದ ದುಷ್ಕೃತ್ಯಗಳಿಗೆ ಸಂಬಂಧಿಸಿ ತೋರಿದ ಮೃದುಧೋರಣೆಯಿಂದಾಗಿಯೇ ಗಡಿಯಲ್ಲಿ ಐವರು ಭಾರತೀಯ ಯೋಧರನ್ನು ಪಾಕಿಸ್ತಾನದ ಸೇನೆ ಹತ್ಯೆಗೈದಿದೆ ಎಂದು ಹಿಂದೂ ಜನಜಾಗೃತಿ ಸಮಿತಿ ಆರೋಪಿಸಿದೆ.
ಈ ಬಗ್ಗೆ ಪ್ರಕಟಣೆ ನೀಡಿರುವ ಸಮಿತಿಯ ರಾಜ್ಯ ವಕ್ತಾರ ಮೋಹನ್ ಗೌಡ, ಪಾಕಿಸ್ತಾನದ ವಿರುದ್ಧ ಕಠಿಣ ನಿಲುವು ತಾಳದ ಕೇಂದ್ರದ ಕಾಂಗ್ರೆಸ್ ಸರ್ಕಾರದ ವರ್ತನೆಯಿಂದಲೇ ಭಾರತೀಯ ಯೋಧರು ಪ್ರಾಣ ಕಳೆದುಕೊಳ್ಳುವಂತಾಗಿದೆ. ದೇಶದ ರಕ್ಷಣಾ ಮಂತ್ರಿ ಎ.ಕೆ. ಆಂಟನಿ ಅವರು ಪಾಕ್ ಬಗ್ಗೆ ಮೆದು ಧೋರಣೆಯ ಹೇಳಿಕೆ ನೀಡಿದ್ದಾರೆ. ಅಷ್ಟೇ ಅಲ್ಲ ತಕ್ಕ ಪ್ರತ್ಯುತ್ತರ ನೀಡಲು ಹಿಂದೇಟು ಹಾಕುತ್ತಿರುವುದರಿಂದಲೇ ದೇಶದ ಯೋಧರು ಬಲಿಯಾಗುವಂತಾಗಿದೆ ಎಂದು ಆರೋಪಿಸಿದ್ದಾರೆ. ಪಾಕಿಸ್ತಾನ ನಿರಂತರವಾಗಿ ದೇಶದ ಸೈನಿಕರ ಮೇಲೆ ದಾಳಿ ಮಾಡುತ್ತಿದ್ದರೂ ಕೇಂದ್ರ ಸರ್ಕಾರ  ಪ್ರತಿದಾಳಿ ಮಾಡುವ ಮೂಲಕ ಪಾಕಿಸ್ತಾನಕ್ಕೆ ಪಾಠ ಕಲಿಸುವ ಕಾರ್ಯ ಮಾಡುತ್ತಿಲ್ಲ ಎಂದು ದೂರಿದ್ದಾರೆ.  ಪಾಕಿಸ್ತಾನದ ರಾಯಭಾರಿ ಕಚೇರಿಯನ್ನು ಕೂಡಲೇ ಮುಚ್ಚಬೇಕು. ಪಾಕ್ ಜತೆ ಯಾವುದೇ ರೀತಿಯ ಮಾತುಕತೆಗೆ ಮುಂದಾಗಬಾರದೆಂದು ಆಗ್ರಹಿಸಿದ್ದಾರೆ.
ಸೈನಿಕರ ಹತ್ಯೆ ಖಂಡಿಸಿ ಎಬಿವಿಪಿ ಪ್ರತಿಭಟನೆ
ಲಿಂಗಸ್ಗೂರು: ದೇಶದ ಐವರು ಸೈನಿಕರನ್ನು ಹತ್ಯೆ ಮಾಡಿದ ಪಾಕ್ ಸೈನಿಕರ ಕೃತ್ಯ ಖಂಡಿಸಿ ಎಬಿವಿಪಿ ಕಾರ್ಯಕರ್ತರು ಬುಧವಾರ ಪ್ರತಿಭಟನಾ ಮೆರವಣಿಗೆ ನಡೆಸುವ ಮೂಲಕ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ದೇಶದ ಗಡಿಭಾಗದಲ್ಲಿ ನಮ್ಮ ಸೈನಿಕರಿಗೆ ಮೇಲಿಂದ ಮೇಲೆ ತೊಂದರೆ ಉಂಟಾಗುತ್ತಿರುವುದು ಕೇಂದ್ರ ಸರ್ಕಾರದ ಅಸಮರ್ಥತೆ ಕಾರಣ. ಪಾಕ್ ಮತ್ತು ಚೀನಾ ದೇಶಗಳು ನಮ್ಮ ಗಡಿ ರೇಖೆ ನಿಯಮ ಉಲ್ಲಂಘಿಸುತ್ತಿವೆ. ಭಾರತೀಯ ಸೈನಿಕರ ಮೇಲೆ ಗುಂಡಿನ ದಾಳಿ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಎಬಿವಿಪಿ ಜಿಲ್ಲಾ ಸಂಚಾಲಕ ಜೆ. ಶರಣಯ್ಯ, ಕಾರ್ಯಕರ್ತರಾದ ಅಮರೇಶ ರಾಠೋಡ, ಚೇತನ್, ಆಂಜನೇಯ, ಸೋಮನಾಥ, ಗೋಪಾಲ  ಇದ್ದರು.
ವಿದ್ಯಾರ್ಥಿಗಳಿಂದ ಪ್ರತಿಭಟನಾ ಮೆರವಣಿಗೆ
ಸಿಂಧನೂರು: ದೇಶದ ಗಡಿಭಾಗದಲ್ಲಿ ಪಾಕಿಸ್ತಾನ ಸೈನಿಕರು ಭಾರತೀಯ ಸೈನಿಕರನ್ನು ಹತ್ಯೆಗೈದಿರುವ ಕೃತ್ಯ ಖಂಡಿಸಿ ಎಬಿವಿಪಿ ಮತ್ತು ವೀರಸಾವರ್ಕರ್ ಸಂಘದ ನೇತೃತ್ವದಲ್ಲಿ ವಿವಿಧ ಶಾಲಾ- ಕಾಲೇಜಿನ ವಿದ್ಯಾರ್ಥಿಗಳು ಗುರುವಾರ ಮೆರವಣಿಗೆ ನಡೆಸಿದರು.
ನಗರದ ಸರ್ಕಾರಿ ಪದವಿ ಕಾಲೇಜಿನಿಂದ ಪ್ರಾರಂಭವಾದ ಮೆರವಣಿಗೆ ಕುಷ್ಟಗಿ ರಸ್ತೆ, ಬಸ್ ನಿಲ್ದಾಣ ರಸ್ತೆ ಮತ್ತು ಗಾಂಧಿ ವೃತ್ತದ ಮೂಲಕ ತಹಸೀಲ್ದಾರ್ ಕಚೇರಿಗೆ ತೆರಳಿದ ವಿದ್ಯಾರ್ಥಿಗಳು ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ ಪತ್ರ ಸಲ್ಲಿಸಿದರು.
 ಆರೋಪಿಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು, ಭಾರತೀಯ ಯೋಧರಿಗೆ ಸೂಕ್ತ ಬೆಂಬಲ ನೀಡಬೇಕೆಂದು ಒತ್ತಾಯಿಸಿದರು.
ಮೆರವಣಿಗೆಯಲ್ಲಿ ಎಬಿವಿಪಿ ಜಿಲ್ಲಾ ಸಂಘಟನಾಕಾರ ಶರಣು, ಮಹಾಂತೇಶ, ಮಂಜುನಾಥ ಮತ್ತಿತರರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.