ರಾಯಚೂರು

ವಿಶ್ವ ಮಟ್ಟದ ಜವಳಿ ಪಾರ್ಕ್ ಸ್ಥಾಪನೆಗೆ ಚಿಂತನೆ

Published On :

ಜವಳಿ ಖಾತೆ ಸಚಿವ ಬಾಬುರಾವ್ ಚಿಂಚನಸೂರ ಹೇಳಿಕೆ ೤ ಯಾದಗಿರಿಯಲ್ಲಿ 10 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಾಣ
ಕನ್ನಡಪ್ರಭ ವಾರ್ತೆ ಲಿಂಗಸ್ಗೂರು  ಆ.11
ಹಿಂದುಳಿದ ಹೈ. ಕ ಭಾಗದ ಯಾದಗಿರಿಯಲ್ಲಿ ರು. 10 ಸಾವಿರ ಕೋಟಿ ವೆಚ್ಚದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಜವಳಿ ಪಾಕ್ ಸ್ಥಾಪಿಸಲು ಉದ್ದೇಶಿಸಲಾಗಿದೆ. ಪಾರ್ಕ್ ಸ್ಥಾಪನೆಯಿಂದ 12-15 ಸಾವಿರ ಜನರಿಗೆ ಉದ್ಯೋಗ ದೊರಕಲಿದೆ ಎಂದು ಒಳನಾಡು ಬಂದರು ಮತ್ತು ಜವಳಿ ಖಾತೆ ಸಚಿವ ಬಾಬುರಾವ್ ಚಿಂಚನಸೂರ ಹೇಳಿದರು.
3300 ಎಕರೆ: ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ವಿಶ್ವದಲ್ಲಿ ಪ್ರಥಮ ಚೀನಾ ದೇಶ ಬಿಟ್ಟರೆ ರಾಜ್ಯದ ಯಾದಗಿರಿ ಎರಡನೇ ಅತಿ ದೊಡ್ಡ ಜವಳಿ ಪಾರ್ಕ್ ಎಂಬ ಹೆಗ್ಗಳಿಕೆ ಪಡೆಯಲಿದೆ. ಪಾರ್ಕ್ ಸ್ಥಾಪನೆಗೆ ಈಗಾಗಲೇ ಒಂದು ಸಾವಿರ ಎಕರೆ ಭೂಮಿ ಮೀಸಲಿರಿಸಲಾಗಿದೆ. ಇದರ ಜೊತೆಗೆ 39 ಅಂತಾರಾಷ್ಟ್ರೀಯ ಕಾರ್ಖಾನೆಗಳು ಸ್ಥಾಪಿಸಲು ಉದ್ಯಮಿಗಳು ಮುಂದೆ ಬಂದಿದ್ದು, ಒಟ್ಟು 3300 ಎಕರೆ ಭೂಮಿ ನೀಡುವ ಉದ್ದೇಶ ಹೊಂದಲಾಗಿದೆ. ಹಾಂಕಾಂಗ್, ಬ್ಯಾಂಕಾಕ್ ಸೇರಿದಂತೆ ವಿವಿಧ ದೇಶಗಳು ಅಭಿವೃದ್ಧಿಗೆ ಕಾರ್ಯಗಳಿಗೆ ಒಪ್ಪಂದ ಮಾಡಿಕೊಳ್ಳಲು ಮುಂದೆ ಬಂದಿವೆ ಎಂದರು.
ಸಕಾರಾತ್ಮಕ ಸ್ಪಂದನೆ: ರಾಜ್ಯದಲ್ಲಿ ಸುಮಾರು 50 ಲಕ್ಷ ಕೋಲಿ ಜನಾಂಗವಿದ್ದು, ಕೋಲಿ ಸಮಾಜ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ಅತ್ಯಂತ ಹಿಂದುಳಿದಿದ್ದಾರೆ. ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಹಾಗೂ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಕೋಲಿ ಸಮಾಜವನ್ನು ಎಸ್‌ಟಿ ಜಾತಿಗೆ ಸೇರ್ಪಡೆಗೊಳಿಸಲು ವಿನಂತಿ ಮಾಡಿಕೊಂಡಿದ್ದು, ಇದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದನೆ ನೀಡಿದ್ದಾರೆ. ಕೋಲಿ ಸಮಾಜವನ್ನು ಎಸ್.ಟಿ. ಜಾತಿಗೆ ಸೇರ್ಪಡೆ ಮಾಡುವ ಒಂದು ಅಂಶದ ಕಾರ್ಯಕ್ರಮಕ್ಕೆ ತಾವು ಬದ್ಧರಿರುವುದಾಗಿ ಭರವಸೆ ನೀಡಿದರು.
ಉತ್ತಮ ಆಡಳಿತ: ಏಷ್ಯ ಖಂಡದಲ್ಲಿ ಹೆಸರಾದ ರಾಯಚೂರಿನ ಹತ್ತಿ ಮಾರುಕಟ್ಟೆ ಅಭಿವೃದ್ಧಿಯಲ್ಲಿ ಹಿಂದುಳಿದಿದ್ದು, ಇದರ ಅಭಿವೃದ್ಧಿಗೆ ಪ್ರಸ್ತಾವನೆ ಸಲ್ಲಿಸಿದರೆ ಸಂಬಂಧಪಟ್ಟ ಇಲಾಖೆಯೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೂರು ತಿಂಗಳಲ್ಲಿ ಉತ್ತಮ ಆಡಳಿತ ನಡೆಸುತ್ತಿದ್ದು, ಅನ್ನಭಾಗ್ಯ, ಕ್ಷೀರಭಾಗ್ಯ ಯೋಜನೆ ಜಾರಿಗೆ ತರಲಾಗಿದೆ. ಅಲ್ಲದೆ ರೈತರ, ನೇಕಾರರ ಸಾಲ ಮನ್ನಾ ಮಾಡುವ ಮೂಲಕ ಬಡವರ ಪರ ಮುಖ್ಯಮಂತ್ರಿ ಎಂದು ತೋರಿಸಿಕೊಟ್ಟಿದ್ದಾರೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೂಪನಗೌಡ ಕರಡಕಲ್, ತಾಪಂ ಸದಸ್ಯರಾದ ರುದ್ರಗೌಡ, ಬಸನಗೌಡ, ಮುಖಂಡರಾದ ಬಸವಂತರಾಯ ಕುರಿ, ಗುಂಡಪ್ಪ ನಾಯಕ, ಸೋಮಶೇಖರ ಐದನಾಳ, ಚೆನ್ನಾರಡ್ಡಿ ಬಿರಾದಾರ, ಎಂಡಿ.ರಫೀ, ಸಂಗಣ್ಣ ದೇಸಾಯಿ, ಪೋಷಣ್ಣ ನಾಯಕ, ಪರಶುರಾಮ ನಗನೂರ ಇನ್ನಿತರರು ಇದ್ದರು.

ಉಣ್ಣೆ ಉದ್ಯಮ ಪುನಶ್ಚೇತನಕ್ಕೆ 27 ಕೋಟಿ ಮೀಸಲು: ಚಿಂಚನಸೂರ್
ಸಿಂಧನೂರು: ರಾಜ್ಯದಲ್ಲಿ ಜವಳಿ ಉದ್ಯಮ ಪುನಶ್ಚೇತನಗೊಳಿಸುವ ಹಿನ್ನೆಲೆಯಲ್ಲಿ ಯಾದಗಿರಿ ಜಿಲ್ಲೆಗೆ 10 ಸಾವಿರ ಕೋಟಿ ರುಪಾಯಿ ವೆಚ್ಚದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಜವಳಿ ಪಾರ್ಕ್ ಪ್ರಾರಂಭಿಸಲು ಸಂಕಲ್ಪ ಮಾಡಿಕೊಂಡಿರುವುದಾಗಿ ಜವಳಿ ಹಾಗೂ ಬಂದರು ಖಾತೆ ಸಚಿವ ಬಾಬುರಾವ್ ಚಿಂಚನಸೂರ್ ಹೇಳಿದರು.
ಅವರು ಬೆಂಗಳೂರಿಗೆ ಹೋಗುವ ಮಾರ್ಗ ಮಧ್ಯದಲ್ಲಿ ಸಿಂಧನೂರಿನಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದರು. ಉಣ್ಣೆ ಉದ್ಯಮ ಪುನಶ್ಚೇತನಕ್ಕೆ 27 ಕೋಟಿ ಕಾಯ್ದಿರಿಸಲಾಗಿದೆ. ಚಳ್ಳಿಕೆರೆಯಲ್ಲಿ ಉಣ್ಣೆ ಕೈಗಾರಿಕೆಯನ್ನು ಸ್ಥ್ಥಾಪಿಸಲಾಗುವುದು. ಸಣ್ಣಪುಟ್ಟ ಉಣ್ಣೆ ನೇಕಾರಿಕೆಯನ್ನು ಅವಲಂಬಿಸಿರುವ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲಾಗುವದು.
ವಿದೇಶಿಯರ ಭೇಟಿ: ಬ್ಯಾಂಕಾಕ್, ಹಾಂಗ್‌ಕಾಂಗ್ ಮತ್ತಿತರ ವಿದೇಶಿ ಉದ್ಯಮಿಗಳು ಭೇಟಿ ನೀಡಲಿದ್ದಾರೆ. ಅವರಿಗೆ ಮೂಲಭೂತ ಸೌಕರ್ಯ ಒದಗಿಸಲು ರೈಲ್ವೆ ಇಲಾಖೆ ಸಣ್ಣ ಪುಟ್ಟ ತಾಂತ್ರಿಕ ತೊಂದರೆ ಸರ್ಕಾರ ನಿವಾರಿಸಿದೆ. ಮಲ್ಲಿಕಾರ್ಜುನ ಖರ್ಗೆ ಅವರೇ ಸಚಿವರಾಗಿರುವುದರಿಂದ ಸುಲಭವಾಗಿ ರೈಲ್ವೆ ಇಲಾಖೆಯಿಂದ ಅನುಕೂಲವಾಗಲಿದೆ ಎಂದರು.
ಖರ್ಗೆ ಗುಣಗಾನ: ಮಲ್ಲಿಕಾರ್ಜುನ ಖರ್ಗೆಯವರ ಸತತ ಪ್ರಯತ್ನ ಮತ್ತು ಇಚ್ಛಾಶಕ್ತಿಯಿಂದ ಹೈದ್ರಾಬಾದ್ - ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಸಿಕ್ಕಿದೆ. ಅವರು ಲೋಕಸಭಾ ಸದಸ್ಯರಾಗದಿದ್ದರೆ ಈ ಕಾರ್ಯ ಕೈಗೂಡುವುದು ಸಾಧ್ಯವಾಗುತ್ತಿರಲಿಲ್ಲ ಎಂದು ಚಿಂಚನಸೂರ್ ಅವರು ಖರ್ಗೆ ಗುಣಗಾನ ಮಾಡಿದರು. 6 ಜಿಲ್ಲೆಗಳ ಜನರೂ ಖರ್ಗೆಯವರಿಗೆ ಋಣಿಯಾಗಿರಬೇಕಾಗಿದೆಯೆಂದರು.
1.50ಗೆ ಅಕ್ಕಿ ಮಾರಿದರೆ ಜೈಲು: ಸರ್ಕಾರದ ಮಹಾತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ತೊಡಕಾಗಿ ಬಡವರಿಂದ ಕಿಲೋಗೆ 1.50 ಪಡೆಯುವ ನ್ಯಾಯಬೆಲೆ ಅಂಗಡಿ ಸಂಚಾಲಕರನ್ನು ಜೈಲಿಗೆ ಕಳಿಸಲಾಗುವುದೆಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.
ಶಾಸಕ ಹಂಪನಗೌಡ ಬಾದರ್ಲಿ, ಎಂ. ಕಾಳಿಂಗಪ್ಪ ವಕೀಲರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಂಪನಗೌಡ ಬಾದರ್ಲಿ, ಎಂ. ಅಮರೇಗೌಡ, ದೊಡ್ಡಬಸನಗೌಡ ಬಾದರ್ಲಿ, ಎಸ್. ಶರಣೇಗೌಡ, ಬಸಪ್ಪ ಕಲ್ಲೂರ, ನಾಗರಾಜ, ಶರಣಬಸವ, ವೀರಭದ್ರಪ್ಪ ವಕೀಲರು, ಬಸಪ್ಪ ಕಲ್ಲೂರು, ವೀರೇಶ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.