ರಾಯಚೂರು

ಕಾಂಗ್ರೆಸ್ ಮುಸ್ಲಿಂ ಜನಾಂಗದ ಆಸ್ತಿಯೇನಲ್ಲ

Published On :

ಮುದಗಲ್: ಕೇಂದ್ರ ಸರ್ಕಾರ 2005ರಲ್ಲಿ ರಚಿಸಿದ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರಾಜೇಂದ್ರ ಸಾಚಾರ್ ಅವರ ಅಧ್ಯಕ್ಷತೆಯಲ್ಲಿ ರಚಿಸಿದ ವರದಿಯನ್ನು ಅನುಷ್ಠಾನಕ್ಕೆ ತರಬೇಕೆಂದು ಒತ್ತಾಯಿಸಿ ಇಳಕಲ್ ಪಟ್ಟಣದಲ್ಲಿ ಆಗಸ್ಟ್ 16 ರಂದು ಹಮ್ಮಿಕೊಂಡ ಬೃಹತ್ ಪ್ರತಿಭಟನಾ ರ್ಯಾಲಿಯಲ್ಲಿ ಮುದಗಲ್ ಪಟ್ಟಣದ ಮುಸ್ಲಿಂ ಬಾಂಧವರು ಹೆಚ್ಚಿನ ರೀತಿಯಲ್ಲಿ ಭಾಗವಹಿಸಬೆಕೆಂದು ಕರ್ನಾಟಕ ರಾಜ್ಯ ಮುಸ್ಲಿಂ ಮೀಸಲು ಹೋರಾಟ ಸಮೀತಿಯ ರಾಜ್ಯ ಸಂಚಾಲಕ ಉಸ್ಮಾನ್ ಗಣಿ ಹುಮನಾಬಾದ ಸಮುದಾಯದ ಜನಾಂಗದಲ್ಲಿ ಮನವಿ ಮಾಡಿದರು.
ಅಭಿವೃದ್ಧಿಯತ್ತ ಗಮನವಿಲ್ಲ: ಪಟ್ಟಣದ ಈದಗಾ ಮೈದಾನದಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ನಾವು ಸಂಘಟಿತರಾಗಬೇಕಾಗಿದೆ. ಕೇಂದ್ರ ಸರಕಾರ 2005ರಲ್ಲಿ ಸಮಿತಿಯನ್ನು ರಚಿಸಿ ಅದರ ವರದಿಯನ್ನು ಕೂಡ ಸಲ್ಲಿಸಲಾಗಿದ್ದರೂ ಇಲ್ಲಿವರೆಗೆ ಕೇಂದ್ರ ಸರ್ಕಾರ ಅದನ್ನು ಜಾರಿಗೆ ತರುತ್ತಿಲ್ಲ. ಕಾಂಗ್ರೆಸ್ ಸೇರಿದಂತೆ ಯಾವುದೇ ರಾಜಕೀಯ ಪಕ್ಷಗಳು ಮುಸ್ಲಿಂ ಸಮುದಾಯದ ಆಸ್ತಿಯಲ್ಲ. ಆದರೂ ಹೆಚ್ಚಿನ ರೀತಿಯಲ್ಲಿ ಕಾಂಗ್ರೆಸ್‌ಗೆ ನಮ್ಮ ಬೆಂಬಲ ಅನನ್ಯವಾಗಿದೆ. ಅದರೆ ಅದು ನಮ್ಮ ಆಸ್ತಿಯಲ್ಲ. ಕಳೆದ ಎರಡು ಅವಧಿಯಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವಿದ್ದರೂ, ಸಾಚಾರ ವರದಿಯನ್ನು ಜಾರಿಗೆ ತಂದು ಮುಸ್ಲಿಂ ಜನಾಂಗದ ಅಭಿವೃದ್ಧಿಗೆ ಆದ್ಯತೆ ನೀಡುತ್ತಿಲ್ಲ ಎಂದು ಆರೋಪಿಸಿದರು.
ಹೋರಾಟ ಅನಿವಾರ್ಯ: ರಾಹುಲ್‌ಗಾಂಧಿ, ಜಿ. ಪರಮೇಶ್ವರ, ಸಿಎಂ ಸಿದ್ದರಾಮಯ್ಯ ಅವರಿಗೂ ಈ ಕುರಿತಂತೆ ಮನವಿ ಮಾಡಿಕೊಂಡಿದ್ದೇನೆ. ಆದರೆ ಯಾರೂ ನಮ್ಮ ಕೂಗಿಗೆ ಸ್ಪಂದಿಸುತ್ತಿಲ್ಲ. ನಾವೇನಾದರೂ ಪಡೆದುಕೊಳ್ಳಬೇಕಾದರೆ ಹೋರಾಟದ ಮೂಲಕವೇ ಪಡೆದುಕೊಳ್ಳಬೇಕು. ನಾವೂ ಕೂಡ ಸಾಚಾರ ವರದಿಯನುಸಾರ ಮೀಸಲಾತಿ ಪಡೆಯಬೇಕಾದರೆ ಸಂಘಟಿತರಾಗಿ ಹೋರಾಟ ಮಾಡುವುದು ಅನಿವಾರ್ಯ.
ಅದಕ್ಕಾಗಿ ಇಳಕಲ್ ಪಟ್ಟಣದಲ್ಲಿ ಆ. 16ರಂದು ನಡೆಯಲಿರುವ ಪ್ರತಿಭಟನಾ ರ್ಯಾಲಿಗೆ ವಿವಿಧ ಕಡೆಗಳಿಂದ ಹೆಚ್ಚೆಚ್ಚು ಸಂಖ್ಯೆಯಲ್ಲಿ ಸಮುದಾಯದವರು ಬರಬೇಕು. ಮಹಿಳೆಯರು ಬುರಖಾ ಧರಿಸಿ ಬರಬೇಕೆಂದರು. ಸಭೆಯಲ್ಲಿ ಎಪಿಎಂಸಿ ಉಪಾಧ್ಯಕ್ಷ ಎಸ್.ಆರ್. ರಸೂಲ್, ಪಪಂ ಸದಸ್ಯ ಮಾಸುಮ್ ಷರೀಫ್, ಮಹ್ಮದ್ ಸಾಧಿಕಲಿ, ಖಾಜಾಪಾಷಾ ಗಾಡಿವಾನ, ರಜ್ಜಬ, ಮುಖಂಡರಾದ ಮುನ್ವರಖಾನ್, ಅಮೀರಬೇಗ್ ಉಸ್ತಾದ್, ಸೈಯ್ಯದ್ ಸಾಬ್, ಗ್ರಾನೈಟ್ ಉದ್ದಿಮೆದಾರ ದಾವೂದ್, ದಾವೂದ್ ಸಾಬ್ ಕೋರಿ, ಅಹ್ಮದ್ ಹುಸೇನ್, ಜಹೂರಸಾಬ ಸೇಸರಿದಂತೆ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.