ರಸ್ತೆ ತೆರವು ಕಾರ್ಯ ಅಪೂರ್ಣ: ಕರವೇ ಪ್ರತಿಭಟನೆ
ಕ.ಪ್ರ.ವಾರ್ತೆ ರಾಯಚೂರು ಆ.20
ರಸ್ತೆ ಅಗಲೀಕರಣದಲ್ಲಿ ಕಟ್ಟಡಗಳ ತೆರವು ಅಪೂರ್ಣ ಮತ್ತು ನಿಧಾನಗತಿಯ ಅಭಿವೃದ್ಧಿ ಕಾಮಗಾರಿಯನ್ನು ಖಂಡಿಸಿ ನಗರದಲ್ಲಿ ಮಂಗಳವಾರ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಪ್ರಮುಖ ರಸ್ತೆಯ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಈ ಕುರಿತು ಮನವಿ ಸಲ್ಲಿಸಿ, ನಗರದ ಚಂದ್ರಮೌಳೇಶ್ವರ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ 2010ರಲ್ಲಿ ರಸ್ತೆಯ ಎರಡೂ ಬದಿಗೆ ರಸ್ತೆ ಅಗಲೀಕರಣ ಕಾರ್ಯ ಕೈಗೊಳ್ಳಲಾಗಿದೆ. ಎರಡೂ ಬದಿಯಲ್ಲಿ 80 ಅಡಿ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ರಸ್ತೆ ಅಗಲೀಕರಣ ಸಂದರ್ಭ ಕಟ್ಟಡಗಳ ತೆರವು ಕಾರ್ಯ ಅಪೂರ್ಣಗೊಳಿಸಲಾಗಿದೆ. 3 ವರ್ಷ ಗತಿಸಿದರೂ ಅನೇಕ ಕಟ್ಟಡಗಳು ರಸ್ತೆಯ ಅಭಿವೃದ್ಧಿಗೆ ಇನ್ನೂ ತೆರವುಗೊಂಡಿಲ್ಲ ಎಂದು ಆರೋಪಿಸಿದರು.
ಅನೇಕ ಕಟ್ಟಡಗಳು ಯಥಾಸ್ಥಿತಿಯಲ್ಲಿದ್ದು, ಅವುಗಳನ್ನು ತೆರವುಗೊಳಿಸದೇ ಅಪೂರ್ಣ ರಸ್ತೆ ನಿರ್ಮಾಣದಿಂದ ಜನತೆಗೆಲ ಯಾವುದೇ ರೀತಿಯ ಪ್ರಯೋಜನವಾಗದು. ಆದರೆ, ಜಿಲ್ಲಾಡಳಿತ ಮಾತ್ರ ರಸ್ತೆ ಅಗಲೀಕರಣ ಕಾರ್ಯದಲ್ಲಿ ತೊಡಕಾಗಿರುವ ಅಕ್ರಮ ಕಟ್ಟಡಗಳ ತೆರವಿನತ್ತ ನಿರ್ಲಕ್ಷ್ಯ ತಾಳಿದೆ ಎಂದು ದೂರಿದರು.
ಅಕ್ರಮ ಕಟ್ಟಡಗಳ ತೆರವಿಗೆ ಸಂಬಂಧಿಸಿ ಲೋಕೋಪಯೋಗಿ ಇಲಾಖೆಯು ಅಕ್ರಮ ಕಟ್ಟಡಗಳ ತೆರವಿಗೆ ನ್ಯಾಯಾಲಯದಲ್ಲಿರುವ ಕೆಲ ಪ್ರಕರಣಗಳೇ ಕಾರಣ. ಅನೇಕ ಅಕ್ರಮ ಕಟ್ಟಡಗಳ ಮಾಲೀಕರು ತಡೆಯಾಜ್ಞೆ ಹೊಂದಿದ್ದು ಆ ಹಿನ್ನೆಲೆಯಲ್ಲಿ ಕಟ್ಟಡ ತೆರವು ನನೆಗುದಿಗೆ ಬಿದ್ದಿದೆ ಎಂದು ತಿಳಿಸಿದ್ದಾರೆ.
ನಗರದಲ್ಲಿ ರಸ್ತೆ ಅಭಿವೃದ್ಧಿ ಕಾರ್ಯವು ನಗರಸಭೆ, ಜಿಲ್ಲಾಡಳಿತ ಮತ್ತು ಲೋಕೋಪಯೋಗಿ ಇಲಾಖೆ ನೇತೃತ್ವದಲ್ಲಿ ನಡೆಯುತ್ತಿದ್ದು, ಈ ಮೂರು ಇಲಾಖೆಗಳ ಅಧಿಕಾರಿಗಳು ರಸ್ತೆ ಅಭಿವೃದ್ಧಿಯ ವಿಚಾರದಲ್ಲಿ ನಿರಾಸಕ್ತಿ ತೋರುತ್ತಿದ್ದಾರೆಂದು ಆರೋಪಿಸಿದರು.
ಸಿಟಿ ಟಾಕೀಸ್ ರಸ್ತೆಯಲ್ಲಿ ಅಕ್ರಮ ಕಟ್ಟಡಗಳಿದ್ದು, ಅವುಗಳಿಂದಾಗಿಯೂ ಆ ರಸ್ತೆಯಲ್ಲಿ ಸಂಚಾರ ಅಪಾಯಕಾರಿಯಾಗಿದೆ. ಸಿಟಿ ಟಾಕೀಸ್ ರಸ್ತೆಯಲ್ಲಿ ಈಗಲೂ ಅನೇಕ ಕಟ್ಟಡಗಳು ರಸ್ತೆಗೆ ಹೊಂದಿಕೊಂಡಂತಿದ್ದು, ವಿದ್ಯುತ್ ಕಂಬಗಳನ್ನೂ ಸ್ಥಳಾಂತರಿಸಿಲ್ಲ. ಅವ್ಯವಸ್ಥೆಯ ಮಧ್ಯೆಯೇ ರಸ್ತೆ ನಿರ್ಮಿಸಿದ್ದರಿಂದ ಆ ರಸ್ತೆಯೂ ತೀರಾ ಹದಗೆಟ್ಟಿದ್ದು ತಗ್ಗುಗಳಾಗಿವೆ ಎಂದು ಆರೋಪಿಸಿದರು.
ಸಿಟಿ ಟಾಕೀಸ್ ರಸ್ತೆಯಲ್ಲಿ ಚರಂಡಿ ನೀರು ರಸ್ತೆಗೆ ಹರಿಯುತ್ತಿದೆ. ಕಳೆದ ನಾಲ್ಕೈದು ತಿಂಗಳಿನಿಂದ ಇಂಥದೇ ಪರಿಸ್ಥಿತಿ ಯಿದ್ದರೂ ಜಿಲ್ಲಾಡಳಿತ ಅಸಡ್ಡೆ ಮುಂದುವರಿಸಿದೆ. ಈ ಹಿನ್ನೆಲೆಯಲ್ಲಿ ರಸ್ತೆ ಹಾಳಾಗುತ್ತಿದೆ. ನಗರದ ಎಸ್ಪಿ ಕಚೇರಿಯಿಂದ ಆರ್ಟಿಒ ವೃತ್ತದವರೆಗೆ ನಿರ್ಮಿಸಿರುವ ಚತುಷ್ಪಥ ರಸ್ತೆಯಲ್ಲಿಯೂ ಅಲ್ಲಲ್ಲಿ ರಸ್ತೆ ಆಕ್ರಮಿಸಿರುವ ಕಟ್ಟಡಗಳ ತೆರವು ಕಾರ್ಯ ಸಮರ್ಪಕವಾಗಿಲ್ಲ. ಅದರಿಂದ ರಸ್ತೆಯ ಅಭಿವೃದ್ಧಿಯ ಉದ್ದೇಶಕ್ಕೆ ಪೆಟ್ಟು ಬಿದ್ದಿದೆ ಎಂದು ದೂರಿದರು.
ಚತುಷ್ಪಥ ರಸ್ತೆಯಲ್ಲಿ ಈಗಾಗಲೇ ತಗ್ಗುಗಳು ಉಂಟಾಗಿದ್ದು, ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಅನೇಕ ಸಂದರ್ಭ ಅಪಘಾತಕ್ಕೆ ಸಿಲುಕಿದ್ದಾರೆ. ಈಚೆಗೆ ನಿರ್ಮಿಸಿದ ರಸ್ತೆಯಲ್ಲಿ ತಗ್ಗುಗಳಾಗಿರುವುದು ಕಾಮಗಾರಿ ಕಳಪೆಯಾಗಿದೆ ಎಂಬುದನ್ನು ಸಾಬೀತು ಮಾಡಿದೆ. ಕಾರಣ ಕೂಡಲೇ ಜಿಲ್ಲಾಡಳಿತ ಈ ಎಲ್ಲ ಅಂಶಗಳನ್ನು ಗಮನದಲ್ಲಿರಿಸಿಕೊಂಡು ರಸ್ತೆ ಅಗಲೀಕರಣ ಮತ್ತು ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಮುಂದಾಗುವಂತೆ ಒತ್ತಾಯಿಸಿದರು.
ಈ ಸಂದರ್ಭ ಸಂಘಟನೆ ಜಿಲ್ಲಾಧ್ಯಕ್ಷ ಅಶೋಕ ಕುಮಾರ್ ಜೈನ್, ಖಲೀಲ್ ಪಾಷಾ, ಮಾನಸಿಂಗ್ ಠಾಕೂರ್, ರಘುವೀರ ನಾಯಕ, ಮುಮ್ತಾಜುದ್ದೀನ್, ಮಲ್ಲಿಕಾರ್ಜುನ, ಬಸವರಾಜ ಸ್ವಾಮಿ ಸೇರಿ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

