ರಾಯಚೂರು

ಕಾಲುವೆಗಳಲ್ಲಿ ಹೂಳು, ರಸ್ತೆಯಲ್ಲಿ ಕೆಸರು!

Published On :

ಕ.ಪ್ರ.ವಾರ್ತೆ  ಲಿಂಗಸ್ಗೂರು  ಆ.20
ಪುರಸಭೆ ನಿರ್ಲಕ್ಷ್ಯದಿಂದ ವಿವಿಧ ವಾರ್ಡುಗಳಲ್ಲಿ ಹೂಳು ತುಂಬಿದ ಕಾಲುವೆಗಳು ಹಾಗೂ ಕೆಸರು ಗದ್ದೆಯಂತಾದ ರಸ್ತೆಗಳಿಂದ ನಾಗರಿಕರು ಪರದಾಡುವ ಪರಿಸ್ಥಿತಿ ಬಂದೊದಗಿದೆ.
ಪಟ್ಟಣದ ಭಾರತೀಯ ವೈದ್ಯಕೀಯ ಸಂಘದ ಕಚೇರಿಯಿಂದ ಬಸ್ ನಿಲ್ದಾಣದವರೆಗೆ ಬೈಪಾಸ್ ರಸ್ತೆಯ ಎರಡೂ ಬದಿ ಒಳಚರಂಡಿ ಹಾಗೂ ಫುಟ್ಪಾತ್ ಕಾಲುವೆಗಳು ಮುಚ್ಚಿಹೋಗಿವೆ. ಅಂಗಡಿಕಾರರಿಗೆ ರಸ್ತೆಯಾಗಿವೆ. ಬಸ್ ನಿಲ್ದಾಣದಿಂದ ಅಂಚೆ ಕಚೇರಿವರೆಗಿನ ಮುಖ್ಯ ರಸ್ತೆಯ ಎರಡೂ ಬದಿಯ ಫುಟ್ಪಾತ್ ಕಾಲುವೆಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ಜನನಿಬಿಡ ಪ್ರದೇಶ ಎಂದು ಹೆಸರು ಪಡೆದ ಸದರಿ ಮುಖ್ಯ ರಸ್ತೆಗಳ ಎರಡೂ ಬದಿಯ ಚರಂಡಿಗಳಲ್ಲಿ ಹೂಳು ತುಂಬಿ ಕಲುಷಿತ ನೀರು ಅಥವಾ ಮಳೆ ನೀರು ರಸ್ತೆ ಮೇಲೆ ಹರಿದು ಸಾರ್ವಜನಿಕರ ಹಾಗೂ ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಇನ್ನು ತಹಸೀಲ್ದಾರ್ ಕಾರ್ಯಾಲಯದಿಂದ ಕಾರಾಗೃಹಕ್ಕೆ ತೆರಳುವ ರಸ್ತೆಯ ಎರಡೂ ಬದಿಯ ಚರಂಡಿಗಳು ಹಾಳಾಗಿವೆ.  ಇತ್ತೀಚಿಗೆ ರಸ್ತೆಗೆ ಅಡ್ಡವಾಗಿ ಚರಂಡಿ ನಿರ್ಮಿಸಲಾಗಿದೆ. ಆದ್ದರೂ ಸರಾಗವಾಗಿ ನೀರು ಚರಂಡಿ ಸೇರದೆ ರಸ್ತೆ ಮೇಲೆ ಹರಿಯುತ್ತಿದೆ. ರಸ್ತೆಯಲ್ಲಿ ಹಾಕಲಾದ ತ್ಯಾಜ್ಯ ವಿಲೇವಾರಿ ಮಾಡಲಾಗಿಲ್ಲ. ಇದರಿಂದ ಈ ಪ್ರದೇಶ ಕೊಳಚೆ ನೀರಿನಿಂದ ತುಂಬಿದೆ. ಹಂದಿಗಳ ತಾಣವಾಗಿ ಮಾರ್ಪಟ್ಟಿದೆ. ಡಾ.ನಡುವಿನಮನಿ ಆಸ್ಪತ್ರೆಯಿಂದ ಖಾದಿ ಭಂಡಾರದವರೆಗಿನ ಚರಂಡಿಗಳಲ್ಲಿ ಹೂಳು ತುಂಬಿದೆ. ರಸ್ತೆಯಲ್ಲಿ ಅಲ್ಲಲ್ಲಿ ಡಾಂಬರ್ ಕಿತ್ತಿಹೋಗಿ ಗುಂಡಿಗಳು ನಿರ್ಮಾಣಗೊಂಡಿದ್ದು, ಮಳೆ ಬಂದರೆ ತಗ್ಗು-ಗುಂಡಿಗಳಲ್ಲಿ ನೀರು ನಿಂತು ವಾಹನ ಸವಾರರು ನೃತ್ಯ ಮಾಡುತ್ತಾ ಸಂಚರಿಸುವಂತಾಗಿದೆ.
ಇನ್ನು ಕೆಲ ವಾರ್ಡುಗಳಲ್ಲಿ ಹಲವು ರಸ್ತೆಗಳ ಬದಿಗಳಲ್ಲಿ ಚರಂಡಿಗಳನ್ನು ನಿರ್ಮಿಸಲಾಗಿಲ್ಲ. ಬಸ್ ನಿಲ್ದಾಣದಿಂದ ರಾಯಚೂರು ಮುಖ್ಯ ರಸ್ತೆಯ ಲಕ್ಷ್ಮೀ ದೇವಸ್ಥಾನದ ಹತ್ತಿರ ಹಳ್ಳದ ಸೇತುವೆವರೆಗೆ ಹಾಗೂ ಕೃಷಿ ಇಲಾಖೆ ಕಚೇರಿಯಿಂದ ಅಯ್ಯಪ್ಪಸ್ವಾಮಿ ದೇವಸ್ಥಾನದವರೆಗೆ ರಸ್ತೆ ನಿರ್ಮಿಸಿಲ್ಲ. ಗಡಿಯಾರ ಚೌಕ್ನಿಂದ, ಹನುಮಾನ್ ಚೌಕ್ ಹಾಗೂ ಸಂತೆ ಬಜಾರವರೆಗೆ ರಸ್ತೆ ಹದಗೆಟ್ಟಿದೆ. ಚರಂಡಿಗಳು ಮುಚ್ಚಿ ಹೋಗಿವೆ. ಸರ್ಕಾರಿ ಆಸ್ಪತ್ರೆಯಿಂದ ಗೌಳಿಪುರದವರೆಗೆ ನಾಲೆಗಳಿಲ್ಲದೆ ರಸ್ತೆ ತುಂಬ ನೀರು ಹರಿದಾಡುತ್ತಿವೆ. ಈ ಬಗ್ಗೆ ಪುರಸಭೆ ಅಧಿಕಾರಿಗಳು ಎಚ್ಚೆತ್ತು ಪುರಸಭೆ ವ್ಯಾಪ್ತಿಯ ವಿವಿಧ ವಾರ್ಡುಗಳಲ್ಲಿ ಪರಿಶೀಲನೆ ನಡೆಸಿ ರಸ್ತೆ ಹಾಗೂ ಚರಂಡಿ ದುರಸ್ತಿಗೆ ಮುಂದಾಗಿ ನಾಗರಿಕರ ಹಾಗೂ ವಾಹನಗಳ ಸಂಚಾರಕ್ಕೆ ಅನುಕೂಲ ಕಲ್ಪಿಸುವುದು ಅಗತ್ಯವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.