ರಾಯಚೂರು

ವಸತಿ ನಿಲಯ ಅವ್ಯವಸ್ಥೆಗೆ ಖಂಡನೆ: ದಸಂಸ ಪ್ರತಿಭಟನೆ

Published On :

ಕ.ಪ್ರ.ವಾರ್ತೆ  ರಾಯಚೂರು  ಆ.24
ವಸತಿ ನಿಲಯಗಳಿಗೆ ಸ್ವಂತ ಕಟ್ಟಡ, ಕಾಯಂ ಸಿಬ್ಬಂದಿ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ವಸತಿ ನಿಲಯಗಳ ವಿದ್ಯಾರ್ಥಿಗಳು ಪ್ರತಿಭಟಿಸಿದರು.
ನಗರದ ಮುಖ್ಯ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿ, ಜಿಲ್ಲೆಯಲ್ಲಿ ದಲಿತ ವಿದ್ಯಾರ್ಥಿಗಳಿಗೆ ಸರ್ಕಾರ ನಿರ್ವಹಿಸುತ್ತಿರುವ ವಿವಿಧ ವಸತಿ ನಿಲಯಗಳು ಅವ್ಯವಸ್ಥೆಯ ಆಗರವಾಗಿವೆ ಎಂದು ಆರೋಪಿಸಿದರು.
ಆಹಾರದ ಪ್ರಮಾಣ ಹೆಚ್ಚಿಸಿ: ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಆಹಾರದ ಪ್ರಮಾಣವನ್ನು ಹೆಚ್ಚಿಸಬೇಕು. ಸದ್ಯ ಪ್ರತಿ ವಿದ್ಯಾರ್ಥಿಗೆ ದಿನಮೊಂದಕ್ಕೆ 4.61 ಕೆಜಿ ಅಕ್ಕಿ, 2.31ಕೆಜಿ ಗೋಧಿಯ ಪದ್ಧತಿ ಕೈಬಿಟ್ಟು ಪ್ರತಿ ವಿದ್ಯಾರ್ಥಿಗೆ 10ಕೆಜಿ ಅಕ್ಕಿ, 5ಕೆಜಿ ಗೋಧಿ ವಿತರಿಸುವ ಕಾರ್ಯ ಸರ್ಕಾರ ಮಾಡುವಂತೆ ಒತ್ತಾಯಿಸಿದರು.
ಅಗತ್ಯ ಬೆಲೆ ಏರಿಕೆ ಆಗುತ್ತಿದ್ದು, ಅದಕ್ಕೆ ಪೂರಕವಾಗಿ ವಿದ್ಯಾರ್ಥಿ ವೇತನ ಹೆಚ್ಚಳ ಕಂಡಿಲ್ಲ. ಸರ್ಕಾರ ಬೆಲೆ ಹೆಚ್ಚಳದ ಪ್ರಮಾಣಕ್ಕೆ ಪೂರಕವಾಗಿ ವಿದ್ಯಾರ್ಥಿ ವೇತನ ಹೆಚ್ಚಿಸಬೇಕು. ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಪ್ರತ್ಯೇಕವಾಗಿ ಆರಂಭಿಸಬೇಕೆಂದು ಆಗ್ರಹಿಸಿದರು.
ಸ್ವಂತ ಕಟ್ಟಡ ಒದಗಿಸಿ: ಜಿಲ್ಲೆಯಲ್ಲಿ ವಸತಿ ನಿಲಯಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅದರಿಂದ ಮೂಲಸೌಲಭ್ಯಗಳ ಕೊರತೆಯಾಗುತ್ತಿದೆ. ಅನೇಕ ಕಡೆ ಬಾಡಿಗೆ ಕಟ್ಟಡಗಳು ಚಿಕ್ಕದಾಗಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅದು ಮಾರಕವಾಗಿದೆ. ಕಾರಣ ಕೂಡಲೇ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ನಿಲಯಗಳಿಗೆ ಸ್ವಂತ ಕಟ್ಟಡಗಳನ್ನು ಒದಗಿಸಬೇಕೆಂದು ಒತ್ತಾಯಿಸಿದರು.
ವಸತಿ ನಿಲಯಗಳು, ವಸತಿ ಶಾಲೆಗಳು ದಲಿತರ, ಅಲ್ಪಸಂಖ್ಯಾತರ ಹಾಗೂ ಹಿಂದುಳಿದ ವರ್ಗಗಳ ಆರ್ಥಿಕ ಪ್ರಗತಿಗೆ ದಾರಿಯಾಗುತ್ತಿವೆ. ಆದರೆ ವಸತಿ ನಿಲಯ ಮತ್ತು ಶಾಲೆಗಳಲ್ಲಿ ಸೌಲಭ್ಯಗಳ ಕೊರತೆಯಿಂದಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದರು.
ಸ್ಥಿತಿಗತಿ ಪರಿಶೀಲಿಸಿ: ರಾಜ್ಯ ಸರ್ಕಾರ ಕೇವಲ ವಸತಿ ನಿಲಯಗಳನ್ನು ಆರಂಭಿಸಿದರೆ ಸಾಲದು. ಅದರ ಜತೆಗೆ ಅವುಗಳ ಸ್ಥಿತಿಗತಿ ನಿರಂತರ ಪರಿಶೀಲಿಸಬೇಕು. ವಸತಿ ನಿಲಯಗಳಲ್ಲಿ ವಾಸವಾಗಿರುವ ವಿದ್ಯಾರ್ಥಿಗಳಿಗೆ ದೊರೆಯುತ್ತಿರುವ ಶಿಕ್ಷಣದ ಗುಣಮಟ್ಟ, ಆಹಾರಧಾನ್ಯದ ಕಡೆಯೂ ಗಮನಹರಿಸಬೇಕಿದೆ ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರ ವಸತಿ ನಿಲಯಗಳಿಗೆ ಸ್ವಂತ ಕಟ್ಟಡ ಒದಗಿಸಬೇಕು. ವಿದ್ಯಾರ್ಥಿ ವೇತನ ಹೆಚ್ಚಿಸಬೇಕು. ಆಹಾರಧಾನ್ಯ ಪ್ರಮಾಣ ಹೆಚ್ಚಳ ಮಾಡಬೇಕು. ವಿದ್ಯಾರ್ಥಿ ನಿಲಯಗಳಿಗೆ ಕಾಯಂ ಸಿಬ್ಬಂದಿ ನೇಮಿಸಬೇಕೆಂದು ಒತ್ತಾಯಿಸಿ ಈ ಬಗ್ಗೆ ನಿರ್ಲಕ್ಷ್ಯ ತೋರಿದಲ್ಲಿ ಉಗ್ರ ಹೋರಾಟಕ್ಕಿಳಿಯುವುದಾಗಿ ಎಚ್ಚರಿಸಿದರು.
ದಸಂಸ ರವೀಂದ್ರನಾಥ ಪಟ್ಟಿ, ಎಂ.ಆರ್. ಭೇರಿ, ಈರಣ್ಣ, ಮೇಲಪ್ಪ ಭಾವಿಮನಿ, ಮಹ್ಮದ್ ಅಲಿ, ಚಿಟ್ಟಿಬಾಬು, ಹುಲಿಗೆಪ್ಪ ಕೆಸರಟ್ಟಿ, ಪ್ರವೀಣಬಾಬು, ಎನ್.ಕೆ. ನೆಲಹಾಳ ಸೇರಿ ವಸತಿ ನಿಲಯಗಳ ವಿದ್ಯಾರ್ಥಿಗಳು ನೂರಾರು ಸಂಖ್ಯೆಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.