ರಾಯಚೂರು

ಅಯೋಧ್ಯೆ: ಕೋಸಿ ಪರಿಕ್ರಮ ಯಾತ್ರೆಗೆ ತಡೆ- ವಿಹಿಂಪ ಧರಣಿ

Published On :

ರಾಯಚೂರು: ಅಯೋಧ್ಯೆಯಲ್ಲಿ ಕೋಸಿ ಪರಿಕ್ರಮ ಯಾತ್ರೆಗೆ ಅವಕಾಶ ನೀಡದೇ ವಿಶ್ವಹಿಂದೂ ಪರಿಷತ್ ಮುಖಂಡರನ್ನು ಬಂಧಿಸಿದ ಉತ್ತರ ಪ್ರದೇಶ ಸರ್ಕಾರದ ಕ್ರಮ ಖಂಡಿಸಿ ನಗರದಲ್ಲಿ ಸೋಮವಾರ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಧರಣಿ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿ, ರಾಮಮಂದಿರ ನಿರ್ಮಾಣ ಹಿನ್ನೆಲೆ ಆಯೋಜಿಸಿದ್ದ ಕೋಸಿ ಪರಿಕ್ರಮ ಯಾತ್ರೆಯನ್ನು ಹತ್ತಿಕ್ಕುವ ಉದ್ದೇಶದಿಂದ ಉತ್ತರಪ್ರದೇಶ ಸರ್ಕಾರ ಪ್ರಮುಖರನ್ನು ಬಂಧಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಅಯೋಧ್ಯೆಯಲ್ಲಿ 200ಜನ ಸಂತರು, ಸಾಧುಗಳು ಪಾದಯಾತ್ರೆ ಕೈಗೊಳ್ಳುವುದರಿಂದ ಶಾಂತಿಗೆ ಧಕ್ಕೆಯುಂಟಾಗುತ್ತದೆ ಎಂಬ ಉತ್ತರ ಪ್ರದೇಶ ಸರ್ಕಾರದ ವಾದ ಸರಿಯಲ್ಲ. ಸಂತರ ಪ್ರವಚನ, ಧಾರ್ಮಿಕ ಸಂದೇಶ ಸಾರುವಿಕೆಯಿಂದ ಸೌಹಾರ್ದಕ್ಕೆ ತೊಂದರೆಯಾಗುತ್ತದೆ ಎಂಬ ಸರ್ಕಾರದ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಟೀಕಿಸಿದರು.
ಹಿಂದೂಗಳ ಭಾವನೆಗೆ ಧಕ್ಕೆ ತರುವ ರೀತಿಯಲ್ಲಿ ನೂರಾರು ಸಂಖ್ಯೆಯ ಪೊಲೀಸರನ್ನು ನಿಯೋಜಿಸುವ ಕಾರ್ಯ ಅಲ್ಲಿನ ಸರ್ಕಾರ ಮಾಡಿದೆ. ಕೇವಲ ಕೆಲವೇ ಕೆಲ ಪೊಲೀಸರ ಅವಶ್ಯಕತೆಯಿದ್ದ ಸ್ಥಳದಲ್ಲಿ ಭಾರೀ ಸಂಖ್ಯೆಯ ಪೊಲೀಸರನ್ನು ನಿಯೋಜಿಸಿರುವ ಕ್ರಮ ಧಾರ್ಮಿಕ ಭಾವನೆಗೆ ಅಡ್ಡಿಯುಂಟು ಮಾಡುವಂಥದ್ದಾಗಿದೆ ಎಂದು ದೂರಿದರು.
ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ಕೋಸಿಪರಿಕ್ರಮ ಯಾತ್ರೆಗೆ ಅವಕಾಶ ನೀಡಬೇಕು. ಬಂಧಿತ ವಿಶ್ವಹಿಂದೂ ಪರಿಷತ್ ನಾಯಕ ಬಿಡುಗಡೆಗೆ ಆದೇಶ ನೀಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವಿಹಿಂಪ ಸಂಘಟನೆಯ ಜಿಲ್ಲಾ ಕಾರ್ಯಾಧ್ಯಕ್ಷ ಎಚ್.ಆರ್. ಬಲ್ಲಾಳ್, ಪ್ರಮೋದ್ ಮಾದಿನೂರು, ಸದಾನಂದಪ್ರಭು, ಸುಧೀರ್ ದೇಶಪಾಂಡೆ, ಬಾಳಪ್ಪ ಹಾಗೂ ಬಿಜೆಪಿ ಮುಖಂಡರಾದ ಬಸನಗೌಡ ಬ್ಯಾಗವಾಟ್, ತ್ರಿವಿಕ್ರಮ್ ಜೋಷಿ, ಆರ್. ತಿಮ್ಮಯ್ಯ, ರಮಾನಂದ ಯಾದವ್, ರಾಜಕುಮಾರ್, ಗಿರೀಶ್ ಕನಕವೀಡು ಸೇರಿ ಅನೇಕರಿದ್ದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.