ಮಧ್ವರ 32 ಅಡಿ ವಿಗ್ರಹ ಪ್ರತಿಷ್ಠಾಪನೆ ಯೋಜನೆ
ಕ.ಪ್ರ.ವಾರ್ತೆ, ರಾಯಚೂರು, ಆ.26
ಉಡುಪಿ ಪಲಿಮಾರು ಮಠವು ಜಗದ್ಗುರು ಮಧ್ವಾಚಾರ್ಯರ ಬೃಹತ್ ವಿಗ್ರಹ ಸ್ಥಾಪನೆ, ಮಹಾಭಾರತದ ಶುದ್ಧಪಾಠಗಳ ಸಂಶೋಧನೆ, ಪ್ರಕಟಣೆಯಂಥ 2 ಮಹತ್ತರ ಯೋಜನೆ ಹಮ್ಮಿಕೊಂಡಿದೆ ಎಂದು ಪಲಿಮಾರುಮಠದ ಮಠಾಧೀಶ ಶ್ರೀವಿದ್ಯಾಧೀಶತೀರ್ಥರು ಹೇಳಿದರು.
ನಗರದ ಜೋಡು ವೀರಾಂಜನೇಯ ದೇವಸ್ಥಾನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉಡುಪಿ ಬಳಿಯ ಕುಂಜಾರುವಿನ ದುರ್ಗಾಬೆಟ್ಟದ ಪರಿಸರದಲ್ಲಿ ಜಗದ್ಗುರು ಶ್ರೀಮಧ್ವಾಚಾರ್ಯರ 32 ಅಡಿ ಎತ್ತರ ವಿಗ್ರಹ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದರು.
1.5ಕೋಟಿ ವೆಚ್ಚ: ವಿಗ್ರಹ ಸ್ಥಾಪನೆಗೆ ಅಗತ್ಯವಾಗಿರುವ ಶಿಲೆ ಈಗಾಗಲೇ ಕುಂಜಾರು ತಲುಪಿದ್ದು, ಸ್ವತಃ ಆಚಾರ್ಯರೇ ತಿಳಿಸಿದಂತೆ ವಿಗ್ರಹವು ಆಚಾರ್ಯರ ಭವ್ಯತೆ ಸಾರುವ 32 ಲಕ್ಷಣಗಳನ್ನು ಒಳಗೊಂಡಿರಲಿದೆ. ಪದ್ಮಪೀಠದ ನಿರ್ಮಾಣ ಕಾರ್ಯ ಜಾರಿಯಲ್ಲಿದೆ. ಶಿಲ್ಪಿಗಳಾದ ಅಶೋಕ್ ಗುಡಿಗಾರ್ ಅವರ ತಂಡ ವಿಗ್ರಹದ ಹೊಣೆ ಹೊತ್ತಿದೆ. ಸುಮಾರು ರು. 1.5ಕೋಟಿ ವೆಚ್ಚದಲ್ಲಿ ವಿಗ್ರಹ ನಿರ್ಮಿಸಲಾಗುತ್ತಿದ್ದು, ಭಕ್ತರು ಈ ವಿಗ್ರಹ ಕಾರ್ಯದಲ್ಲಿ ಆರ್ಥಿಕವಾಗಿ ನೆರವಾಗಬಹುದು ಎಂದು ಹೇಳಿದರು.
ಪಲಿಮಾರು ಮಠದ ಹಿರಿಯ ಗುರುಗಳಾಗಿದ್ದ ಶ್ರೀವಿದ್ಯಾಮಾನ್ಯತೀರ್ಥರು 20ವರ್ಷಗಳ ಹಿಂದೆ ಸ್ಥಾಪಿಸಿದ ತತ್ವಸಂಶೋಧನಾ ಸಂಸತ್ ಸಂಸ್ಥೆಯು ಈಗಾಗಲೇ ಅನೇಕ ಗ್ರಂಥಗಳನ್ನು ಮುದ್ರಿಸಿದೆ. ಸಂಸ್ಥೆಯ ನುರಿತ ವಿದ್ವಾಂಸರ ಪರಿಶ್ರಮದಿಂದಾಗಿ 2 ಸಾವಿರ ಹಸ್ತಪ್ರತಿಗಳನ್ನು ಸಂಗ್ರಹಿಸಿ ಗ್ರಂಥಗಳನ್ನು ಪ್ರಕಟಿಸಿದ್ದರೂ, ಅವುಗಳ ಬಗ್ಗೆ ಸಂಶೋಧನೆ ನಡೆದಿರಲಿಲ್ಲ.
ಕನ್ನಡಾನುವಾದ: ಈ ಹಿನ್ನೆಲೆ ಸಂಶೋಧನೆ ಮತ್ತು ತಾಳೆಗರಿಯಲ್ಲಿರುವ ಶತಶತಮಾನಗಳಷ್ಟು ಹಳೆಯ ಮೂಲಪ್ರತಿಗಳನ್ನು ಸಂಗ್ರಹಿಸಿ ಮುದ್ರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುತ್ತಿದೆ. ಮಹಾಭಾರತದ ಸಂಸ್ಕೃತ ಮೂಲಪಾಠ, 80 ಸಂಪುಟಗಳಲ್ಲಿ ಸಮಗ್ರ ಮಹಾಭಾರತದ ಕನ್ನಡಾನುವಾದ ಒಳಗೊಂಡ ಒಟ್ಟು 100 ಸಂಪುಟಗಳಲ್ಲಿ ಸಂಶೋಧಿಸಲ್ಪಟ್ಟ ಸಮಗ್ರ ಮಹಾಭಾರತವನ್ನು 'ಭಾರತ ದೀಪಿಕಾ' ಹೆಸರಿನಿಂದ ಸಂಸತ್ ವತಿಯಿಂದ ಮುಂದಿನ ದಸರಾ ವೇಳೆಗೆ ಸಮರ್ಪಿಸುವ ಉದ್ದೇಶವಿದೆ ಎಂದರು.
ಹದಿಮೂರನೇ ಶತಮಾನದಲ್ಲಿ ಶ್ರೀಮಧ್ವಾಚಾರ್ಯರು ರಚಿಸಿರುವ ಮಹಾಭಾರತ ತಾತ್ಪರ್ಯ ನಿರ್ಣಯ, ಹದಿನಾರನೇ ಶತಮಾನದ ಶ್ರೀವಾದಿರಾಜತೀರ್ಥರು ಮೂಲಮಹಾಭಾರತಕ್ಕೆ ರಚಿಸಿದ ಲಕ್ಷಾಂತರ ವ್ಯಾಖ್ಯಾನ ಮತ್ತು ಸ್ವತಃ ಅವರು ಕೇರಳದಲ್ಲಿ ಸಂಗ್ರಹಿಸಿ ಶುದ್ಧಪಾಠದ ಪ್ರತಿಗಳು ಮಹಾಭಾರತದ ಕುರಿತ ಸಂಶೋಧನೆಗೆ ಮಾರ್ಗದರ್ಶಕ ಗ್ರಂಥಗಳಾಗಿದ್ದು, ಅವುಗಳ ಆಧಾರದಲ್ಲಿ ಆಮೂಲಾಗ್ರ ಸಂಶೋಧನೆಯನ್ನು ಅನೇಕ ವಿದ್ವಾಂಸರು ನಡೆಸುತ್ತಿದ್ದು, ಆ ವಿದ್ವಾಂಸರ ಸಹಕಾರದಿಂದಲೇ ಮಹಾಭಾರತದ ಪರಿಶುದ್ಧ ಮತ್ತು ಪರಿಪೂರ್ಣ ಪಾಠವನ್ನು ಪ್ರಕಟಿಸುವ ಕಾರ್ಯವನ್ನು ಪಲಿಮಾರು ಮಠ ಕೈಗೆತ್ತಿಕೊಂಡಿದೆ ಎಂದು ತಿಳಿಸಿದರು.
ಸಂಸ್ಕೃತಿ ಜಾಗೃತಿ: ಜಾಗತೀಕರಣ, ಖಾಸಗೀಕರಣದ ಭರದಲ್ಲಿ ಭಾರತೀಯ ಸಂಸ್ಕೃತಿ ನಶಿಸುತ್ತಿದೆ. ಇಂಥ ವಿಷಮಕಾಲದಲ್ಲಿ ಬಡತನ, ನಿರುದ್ಯೋಗದಂಥ ಸಮಸ್ಯೆ ಬೆಳೆಯುತ್ತಿದ್ದು, ಸುಖ ಶಾಂತಿ ಸಮೃದ್ಧಿಯ ಬದುಕಿಗೆ ಸನಾತನ ಮೌಲ್ಯಗಳ ಬಗ್ಗೆ ಗಮನಹರಿಸುವುದು ಅವಶ್ಯಕ ಎಂದರು.
ಈ ಹಿಂದೆ ಅನೇಕ ಮಹಾನ್ ದಾರ್ಶನಿಕರು ವಿವಿಧ ಗ್ರಂಥಗಳ ಮೂಲಕ ಜೀವನ ಮೌಲ್ಯಗಳನ್ನು ಒದಗಿಸಿದ್ದು, ಮುಂದಿನ ಪೀಳಿಗೆಗೆ ಅಂಥ ಗ್ರಂಥಗಳನ್ನು ಕೊಂಡೊಯ್ಯುವ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಈಗಿನ ಪೀಳಿಗೆಯ ಮೇಲೆ ಬಹುದೊಡ್ಡ ಹೊಣೆಯಿದೆ ಎಂದರು.
ವೇಣುಗೋಪಾಲ್ ಇನಾಂದಾರ್, ವಿಷ್ಣುತೀರ್ಥ, ವೆಂಕಟೇಶ ನವಲಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

