ಕ್ರೀಡಾಂಗಣ ಮರುನಿರ್ಮಾಣಕ್ಕೆ 22 ಕೋಟಿ ಪ್ರಸ್ತಾವನೆ
ಕನ್ನಡಪ್ರಭ ವಾರ್ತೆ, ರಾಯಚೂರು, ಆ.29
ನಗರದ ಜಿಲ್ಲಾ ಕ್ರೀಡಾಂಗಣದ ಪುನಾ ನಿರ್ಮಾಣಕ್ಕೆ 22 ಕೋಟಿ ಅಂದಾಜು ವೆಚ್ಚದ ಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ತಿಳಿಸಿದರು.
ನಗರದಲ್ಲಿ ಗುರುವಾರ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ಮತ್ತು ಏಷಿಯಾ ಇಂಟರ್ ನ್ಯಾಷನಲ್ ಸ್ಕೂಲ್ ವತಿಯಿಂದ ಆಯೋಜಿಸಿದ್ದ ಧ್ಯಾನಚಂದ್ ಸ್ಮರಣಾರ್ಥ 8 ಕಿಮೀ ದೂರದ ಕ್ರಾಸ್ ಕಂಟ್ರಿ ಓಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅಗತ್ಯ ಸಿದ್ಧತೆ: ಸರ್ಕಾರದಿಂದ ಅನುದಾನ ಬಿಡುಗಡೆಯಾಗುತ್ತಿದ್ದಂತೆಯೇ ಜಿಲ್ಲಾ ಕ್ರೀಡಾಂಗಣ ನಿರ್ಮಾಣ ಕಾರ್ಯ ಆರಂಭಿಸಲಾಗುತ್ತದೆ. ಸದ್ಯ ಕ್ರೀಡಾಂಗಣವು ಶಿಥಿಲಾವಸ್ಥೆಯಲ್ಲಿದ್ದು, ಕ್ರೀಡಾಂಗಣ ನೆಲಸಮಗೊಳಿಸಿ ನೂತನ ಕ್ರೀಡಾಂಗಣ ನಿರ್ಮಾಣಕ್ಕೆ ಎಲ್ಲ ರೀತಿಯ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಉತ್ತಮ ಆರೋಗ್ಯ ಹೊಂದಲು ಸಾಧ್ಯ. ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಹೆಚ್ಚೆಚ್ಚು ಪಾಲ್ಗೊಳ್ಳುವುದರಿಂದ ಸದೃಢರಾಗಿ ಆರೋಗ್ಯ ಕಾಪಾಡಿಕೊಳ್ಳಲು ನೆರವಾಗುತ್ತದೆ ಎಂದು ಹೇಳಿದರು.
ಕ್ಷೀಣಿಸಿದ ಕ್ರೀಡಾಸಕ್ತಿ: ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮಾಜಿ ಶಾಸಕ ಪಾಪಾರೆಡ್ಡಿ ಮಾತನಾಡಿ, ಜಿಲ್ಲೆಯ ಅನೇಕರು ರಾಜ್ಯಮಟ್ಟದಲ್ಲಿ ಪ್ರತಿಭೆ ಮೆರೆದಿದ್ದಾರೆ. ಆದರೆ ಇಂದಿನ ಯುವಕರಲ್ಲಿ ಕ್ರೀಡೆಯ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೋಭಾವ ಬೆಳೆಸುವ ಅವಶ್ಯಕತೆಯಿದೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಅಸೋಸಿಯೇಷನ್ ಅಧ್ಯಕ್ಷ ಕೆ.ಸತ್ಯನಾರಾಯಣ ವಹಿಸಿದ್ದರು. ವೇದಿಕೆಯಲ್ಲಿ ಅಸೋಸಿಯೇಷನ್ನ ಪ್ರಧಾನ ಕಾರ್ಯದರ್ಶಿ ಕೆ.ತಿಮ್ಮಾರೆಡ್ಡಿ, ತಾಪಂ ಅಧ್ಯಕ್ಷ ಚಂದ್ರಶೇಖರ್ ರೆಡ್ಡಿ, ರಾಜಕುಮಾರ್, ಎಡು ಏಷಿಯಾ ಸಂಸ್ಥೆಯ ಕಾರ್ಯದರ್ಶಿ ಶಿವಶಂಕರ್ ಸಿಂಗ್, ರವೀಂದ್ರ ಜಲ್ದಾರ್ ಸೇರಿ ಅನೇಕರಿದ್ದರು.
ಕ್ರಾಸ್ ಕಂಟ್ರಿ ಓಟದ ವಿಜೇತರು: ಕ್ರಾಸ್ ಕಂಟ್ರಿ ಸ್ಪರ್ಧೆಯಲ್ಲಿ ಒಟ್ಟು 90 ಕ್ರೀಡಾಳುಗಳು ಪಾಲ್ಗೊಂಡಿದ್ದರು. ಲಿಂಗಸ್ಗೂರಿನ ವಿಸಿಬಿ ಕಾಲೇಜಿನ ಬಸವರಾಜ ಅಮೀನಗಡ 8 ಕಿಮೀ ದೂರವನ್ನು 26.03 ನಿಮಿಷಗಳಲ್ಲಿ ಕ್ರಮಿಸಿ ಪ್ರಥಮ ಸ್ಥಾನ ಗಳಿಸಿ 6 ಸಾವಿರ ಬಹುಮಾನ ತಮ್ಮದಾಗಿಸಿಕೊಂಡರು.
ಎಲ್ವಿಡಿ ಕಾಲೇಜಿನ ಮಲ್ಲೇಶ ಮಾಮಿಡದೊಡ್ಡಿ ಅವರು 27.32 ನಿಮಿಷಗಳಲ್ಲಿ ಕ್ರಮಿಸುವ ಮೂಲಕ ಎರಡನೇ ಸ್ಥಾನದಲ್ಲಿ ಬಂದು 4 ಸಾವಿರ ಬಹುಮಾನ ಗಳಿಸಿದರು. ಸಿಂಧನೂರಿನ ಶ್ರೀನಿವಾಸರೆಡ್ಡಿ ಮೂರನೇ ಬಹುಮಾನವಾಗಿ 2 ಸಾವಿರ, ಲಿಂಗಸ್ಗೂರಿನ ಎಚ್.ಎಚ್. ರಾಠೋಡ್ 4ನೇ ಬಹುಮಾನವಾಗಿ 1500 ಪಡೆದರು.
ಎಲ್ವಿಡಿ ಕಾಲೇಜಿನ ಈರಣ್ಣ 5ನೇ ಸ್ಥಾನದ ಬಹುಮಾನವಾಗಿ 1 ಸಾವಿರ ಹಾಗೂ ಮಾನವಿ ತಾಲೂಕಿನ ಪೋತ್ನಾಳದ ಚೌಡಯ್ಯ ನಾಯಕ 6ನೇ ಬಹುಮಾನವಾಗಿ 750 ಪಡೆದರು. ವಿಜೇತರಿಗೆ ಜಿಲ್ಲಾಧಿಕಾರಿ ಎಸ್.ಎನ್.ನಾಗರಾಜು ಬಹುಮಾನ ವಿತರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

