ವೈದ್ಯರ ನೇಮಕಕ್ಕೆ ಕರವೇ ಆಗ್ರಹ: ಪ್ರತಿಭಟನೆ
ಲಿಂಗಸ್ಗೂರು: ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳ ಆಸ್ಪತ್ರೆಗಳಲ್ಲಿ ವೈದ್ಯರನ್ನು ನೇಮಕ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸುವ ಮೂಲಕ ತಹಸೀಲ್ದಾರ್ ಜಿ.ಎಸ್. ಮಹಾಜನ್ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
ರಾಜ್ಯಾದ್ಯಂತ ನಕಲಿ ವೈದ್ಯರ ತಡೆಗೆ ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಆದರೆ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳ ಆಸ್ಪತ್ರೆಗಳಲ್ಲಿ ಕನಿಷ್ಠ ವೈದ್ಯರಿಲ್ಲದೆ ರೋಗಿಗಳು ಪರದಾಡುವಂತಾಗಿದೆ. ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಬೆರಳೆಣಿಕೆ ವೈದ್ಯರು ಸ್ವಯಂ ನಿವೃತ್ತಿ, ದೀರ್ಘಾವಧಿ ರಜೆ ಮೇರೆಗೆ ಸೇವೆಯಿಂದ ದೂರ ಉಳಿದಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಆರ್ಎಂಪಿ, ಬಿಎಎಂಎಸ್, ಬಿಎಚ್ಎಂಎಸ್ ಸೇರಿದಂತೆ ಸಾವಿರಾರು ಜನ ಪದವೀಧರ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಎಷ್ಟರ ಮಟ್ಟಿಗೆ ಅಧಿಕೃತರಿದ್ದಾರೆಂದು ಪರಾಮರ್ಶಿಸಬೇಕಿದೆ. ಹೋಬಳಿ ಮಟ್ಟದಲ್ಲಿ ತ್ವರಿತವಾಗಿ ವೈದ್ಯರನ್ನು ನೇಮಕ ಮಾಡಬೇಕೆಂದು ಆಗ್ರಹಿಸಿದರು.
ಬೇಡಿಕೆಗಳು: ಪ್ರತಿ ಹೋಬಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಇಬ್ಬರು ಕಾಯಂ ವೈದ್ಯರನ್ನು ನೇಮಕ ಮಾಡಬೇಕು. ಉಪಕೇಂದ್ರಗಳಲ್ಲಿ ಖಾಲಿ ಇರುವ ವೈದ್ಯರು, ಸಿಬ್ಬಂದಿ ಹುದ್ದೆ ಭರ್ತಿ ಮಾಡಬೇಕು. ತಾಲೂಕು ಕೇಂದ್ರದಲ್ಲಿ ಖಾಲಿ ಇರುವ ಎಲ್ಲ ತಜ್ಞ ವೈದ್ಯರು ಹಾಗೂ ಕಾರ್ಯನಿರತ ವೈದ್ಯರನ್ನು ಭರ್ತಿ ಮಾಡಬೇಕು. ನಕಲಿ ವೈದ್ಯರ ಮೇಲೆ ಕ್ರಮ ಕೈಗೊಳ್ಳುವ ಬೆನ್ನಲ್ಲೇ ಗ್ರಾಮೀಣ ಪ್ರದೇಶಗಳಿಗೆ ಅಸಲಿ ವೈದ್ಯರನ್ನು ನೇಮಿಸಬೇಕು. ಸಾರ್ವಜನಿಕ ಆಸ್ಪತ್ರೆಯಲ್ಲಿನ ಸಿಟಿ ಸ್ಕ್ಯಾನ್ ಯಂತ್ರ ನಿರ್ವಹಣೆಗೆ ತಜ್ಞರನ್ನು ನೇಮಕ ಮಾಡಬೇಕು.
ಸರ್ಕಾರಿ ವೈದ್ಯರಿಗೆ ಖಾಸಗಿ ಪ್ರಾಕ್ಟಿಸ್ ಮಾಡಲು ಅನುಮತಿ ನೀಡಬಾರದು, ಬಡ ರೋಗಿಗಳಿಂದ ಸಿಬ್ಬಂದಿ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಆಸ್ಪತ್ರೆಗಳ ಶುಚಿತ್ವ ಕಾಪಾಡಲು ಹಾಗೂ ನಿರ್ವಹಣೆಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು. ರೋಗಿಗಳಿಗೆ ಉಚಿತ ಔಷಧ ವಿತರಣೆ ಮಾಡುತ್ತಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಿ ನ್ಯಾಯ ದೊರಕಿಸಿಕೊಡಬೇಕು. ಆಸ್ಪತ್ರೆಗಳಲ್ಲಿ ಖಾಸಗಿ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಕಠಿಣ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಕರವೇ ತಾಲೂಕಾಧ್ಯಕ್ಷ ಜಿಲಾನಿ ಪಾಶಾ, ಮುಖಂಡರಾದ ಶಿವರಾಜ ನಾಯಕ, ಆಂಜನೇಯ ಭಂಡಾರಿ, ಅಜೀಜ್ ಪಾಶಾ, ಚಂದಪ್ಪ ಕಟ್ಟಿಮನಿ, ಚಂದ್ರು ನಾಯಕ, ಜಿ.ಭಗೀರಥ, ಮಹಾಂತೇಶ ಕೋಠಾ, ಶ್ರೀನಿವಾಸ ಆನೆಹೊಸೂರು, ನಾಗರಾಜ ಗುಡದನಾಳ, ಖಾಸಿಂಸಾಬ, ತಿಮ್ಮಾರಡ್ಡಿ, ಅಮರೇಶ ನಾಯಕ ಸೇರಿದಂತೆ ಇತರರು ಪ್ರತಿಭಟನೆಯಲ್ಲಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

